ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ನೈರುತ್ಯ ಮುಂಗಾರು ಪ್ರವೇಶ

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಕ್ಕೆ ನೈರುತ್ಯ ಮುಂಗಾರು ಕಾಲಿಟ್ಟಿದ್ದು ಹಲವೆಡೆ ಬುಧವಾರ ರಾತ್ರಿ ಮತ್ತು ಗುರುವಾರ ಮಳೆಯಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ಒಂದು ಸೇತುವೆ ಕೊಚ್ಚಿ ಹೋಗಿದೆ.

ರಾಯಚೂರು ತಾಲ್ಲೂಕಿನ ತಲಮಾರಿ ಗ್ರಾಮದ ನೆರೆ ಸಂತ್ರಸ್ತರಿಗೆ ಸರ್ಕಾರ ಹಾಕಿಕೊಟ್ಟಿದ್ದ 72 ಟಿನ್ ಶೆಡ್‌ಗಳು  ಬುಧವಾರ ರಾತ್ರಿ ಮಳೆ ಗಾಳಿಗೆ ಹಾರಿಹೋಗಿವೆ. ಸಿಂಧನೂರು ತಾಲ್ಲೂಕಿನ ಗುಡಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಹಳ್ಳದ ನೀರಿಗೆ ಕೊಚ್ಚಿ ಹೋಗಿದೆ. ಇಡಪನೂರು ಗ್ರಾಮದಲ್ಲಿ ಸಿಡಿಲಿಗೆ ಒಬ್ಬ ಮಹಿಳೆ ಗಾಯಗೊಂಡಿದ್ದಾಳೆ.

ಕೊಚ್ಚಿಹೋದ ಸೇತುವೆ: ಕೊರಟಗೆರೆ ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಸಿದ್ದರಬೆಟ್ಟದ ಬಳಿಯ ಮಲ್ಲೇಕಾವು ಮತ್ತು ಗೌರಿಕಲ್ಲು ಗ್ರಾಮದ ರಸ್ತೆಯ ದೊಡ್ಡ ಸೇತುವೆ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿದೆ. ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಭತ್ತ, ರಾಗಿ, ಟೊಮೆಟೊ ಬೆಳೆ ಕೊಚ್ಚಿ ಹೋಗಿ ಬೆಳೆ ನಷ್ಟ ಉಂಟಾಗಿದೆ.

ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳೂ ಸಹ ಉರುಳಿ ಬಿದ್ದು ಆ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.  ಕೆಲವೆಡೆ ತೆಂಗು, ಬಾಳೆ, ಅಡಿಕೆ ಮರಗಳು ನೆಲಕ್ಕೊರಗಿವೆ.ತಾಲ್ಲೂಕಿನ ಎಲ್ಲಡೆ ಉತ್ತಮವಾಗಿ ಮಳೆಯಾಗಿದ್ದು  ಕೆಲವೆಡೆ ಸಣ್ಣಪುಟ್ಟ ಕೆರೆ, ಕುಂಟೆಗಳು  ತುಂಬಿವೆ. ಕೊರಟಗೆರೆಯಲ್ಲಿ 121 ಮಿ.ಮೀ, ತುಂಬಾಡಿಯಲ್ಲಿ 125 ಮಿ.ಮೀ. ಮಳೆಯಾಗಿದೆ.

ಕುರಿಗಳ ಸಾವು: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಅಮ್ಮನಹಟ್ಟಿ ಗ್ರಾಮದಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು 16 ಕುರಿಗಳು ಸತ್ತಿವೆ.ಶಿವಮೊಗ್ಗ ನಗರ ಆಸುಪಾಸು, ಭದ್ರಾವತಿ, ಶಿಕಾರಿಪುರ ಹಾಗೂ ಸೊರಬದಲ್ಲಿ ಗುರುವಾರ ಎರಡು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.

ದಾವಣಗೆರೆ ಜಿಲ್ಲೆಯಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 14.5 ಮಿ.ಮೀ. ಮಳೆ ದಾಖಲಾಗಿದೆ.

ಕರಾವಳಿಯಲ್ಲಿ ಮಳೆ: ನಿರೀಕ್ಷೆಯಂತೆಯೇ ಮುಂಗಾರು ಮಳೆ ಕರಾವಳಿ ಪ್ರವೇಶಿಸಿದ್ದು, ಗುರುವಾರ ನಸುಕಿನಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗಿದೆ. ಉಪ್ಪಿನಂಗಡಿಯಲ್ಲಿ ಅತ್ಯಧಿಕ ಅಂದರೆ 4.2 ಸೆಂ.ಮೀ. ಮಳೆಯಾಗಿದೆ.

ಸಮುದ್ರದಲ್ಲಿ ಗಾಳಿ: ಇನ್ನೊಂದೆಡೆ ಮೀನುಗಾರಿಕೆಗೆ ತೆರಳಿದ್ದ ದೋಣಿಗಳಲ್ಲಿ ಶೇ 80ರಷ್ಟು ದೋಣಿಗಳು ವಾಪಸಾಗಿವೆ. 1,300 ಟ್ರಾಲ್‌ಬೋಟ್, 75 ಪರ್ಸಿನ್ ದೋಣಿ, 250 ಗಿಲ್‌ನೆಟ್ ದೋಣಿಗಳು ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದವು.

ಉಡುಪಿ ಜಿಲ್ಲೆಯಲ್ಲೂ ಮಳೆಗಾಲ ಆರಂಭ ಎನ್ನುವಂತೆ ಗುರುವಾರ ಬೆಳಿಗ್ಗೆ ಮೋಡಗಳು ದಟ್ಟೈಸಿ ಸ್ವಲ್ಪ ಮಳೆ ಸುರಿಸಿ ಬಂದಷ್ಟೇ ವೇಗದಲ್ಲಿ ಮರೆಯಾದವು.ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬೆಳಿಗ್ಗೆ ತುಂತುರು ಮಳೆಯಾಗಿದೆ.

ಕೊಡಗಿನಲ್ಲೂ ಮಳೆ: ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸಿದ್ದು ಜಿಲ್ಲೆಯಾದ್ಯಂತ ಸರಾಸರಿ 12.84 ಮಿ.ಮೀ ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 18.95 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ 16.03 ಮಿ.ಮೀ ಹಾಗೂ ಸೋಮವಾರ ಪೇಟೆ ತಾಲ್ಲೂಕಿನಲ್ಲಿ 3.55 ಮಿ.ಮೀ ಮಳೆಯಾಗಿದೆ.

ಶಾಲೆ ಜಲಾವೃತ: ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಗುರುವಾರ ಭಾರಿ ಮಳೆಯಾಗಿ, ಶಾಲೆ ಮತ್ತು ಪಶುಚಿಕಿತ್ಸಾಲಯಗಳು ಜಲಾವೃತವಾಗಿದ್ದವು.ಹಾವೇರಿ ಜಿಲ್ಲೆಯಾದ್ಯಂತ ಗುರುವಾರ ಮಳೆ ಸುರಿದಿದೆ.ಹಾವೇರಿ, ಹಿರೇಕೆರೂರು, ರಾಣಿಬೆನ್ನೂರು ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲಿನ ಕೆಲವು ತಾಲ್ಲೂಕುಗಳಲ್ಲಿ ಗುರುವಾರ ಭಾರಿ ಮಳೆಯಾಗಿದೆ. ಶಿರಸಿ ತಾಲೂಕಿನಲ್ಲಿ 3 ತಾಸಿಗೂ ಹೆಚ್ಚು ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT