ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಮಮತಾ ಕಟಾಕ್ಷ

Last Updated 25 ಫೆಬ್ರುವರಿ 2011, 18:20 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ರೈಲ್ವೆ ಬಜೆಟ್ ಕನ್ನಡಿಗರನ್ನು ಕಡೆಗಣಿಸಿಲ್ಲ. ಸಚಿವೆ ಮಮತಾ ಬ್ಯಾನರ್ಜಿ ರಾಜ್ಯಕ್ಕೆ ಹಾಲು- ಜೇನಿನ ಹೊಳೆ ಹರಿಸದಿದ್ದರೂ, ಅನ್ಯಾಯ ಮಾಡಿಲ್ಲ. ಕೆಲವು ಹೊಸ ರೈಲುಗಳು ಮತ್ತು ಮಾರ್ಗಗಳ ಮೂಲಕ ಎಲ್ಲರನ್ನೂ ಸಂತೃಪ್ತಿಪಡಿಸಲು ಪ್ರಯತ್ನಿಸಿದ್ದಾರೆ. ‘ಮಮತಾ ಕೃಪಾ ಕಟಾಕ್ಷ’ದ ನಡುವೆಯೂ ಹೈದರಾಬಾದ್- ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಸಣ್ಣ ಅಪಸ್ವರ ಕೇಳಿಬಂದಿದೆ.

ಕೋಲಾರಕ್ಕೆ ರೈಲ್ವೆ ಕೋಚ್ ತಯಾರಿಕಾ ಘಟಕ, ಎರಡು ಬದಿ ಎಂಜಿನ್ ಇರುವ ಉಪನಗರ ರೈಲುಗಳು, ಹುಬ್ಬಳ್ಳಿ- ಧಾರವಾಡದಲ್ಲಿ ಪಾಲಿಟೆಕ್ನಿಕ್ ಕಾಲೇಜ್ ಸ್ಥಾಪನೆ ಮುಂತಾದ ಉಡುಗೊರೆಯನ್ನು ರೈಲ್ವೆ ಸಚಿವರು ರಾಜ್ಯಕ್ಕೆ  ನೀಡಿದ್ದಾರೆ.ಬಹು ವರ್ಷಗಳ ಬೇಡಿಕೆಯಾಗಿರುವ ತುಮಕೂರು-ದಾವಣಗೆರೆ, ಶಿವಮೊಗ್ಗ- ಹರಿಹರ ಹಾಗೂ ವೈಟ್‌ಫೀಲ್ಡ್ ಕೋಲಾರ ಮಾರ್ಗಕ್ಕೆ ಹಸಿರು ನಿಶಾನೆ ತೋರಲಾಗಿದೆ.

ಗದಗ- ವಾಡಿ, ಮಾರಿಕುಪ್ಪಂ- ಕುಪ್ಪಂ, ಚಿಕ್ಕಬಳ್ಳಾಪುರ- ಶ್ರೀಸತ್ಯಸಾಯಿ ಪ್ರಶಾಂತಿ ನಿಲಯಂ ಯೋಜನೆಗಳನ್ನು 12ನೇ ಯೋಜನೆಯಲ್ಲಿ ಕೈಗೊಳ್ಳಲು   ತೀರ್ಮಾನಿಸಲಾಗಿದೆ.

ತೋರಣಗಲ್-ರಂಜಿತ್‌ಪುರ,   ಶಿವನಿ-ಹೊಸದುರ್ಗ ನಡುವೆ ಜೋಡಿ ಮಾರ್ಗ ನಿರ್ಮಾಣ, ದ್ರೋಣಾಚಲಂ-ಬಳ್ಳಾರಿ, ಕೊಪ್ಪಳ-ಸಿಂಗನೂರು, ನಂಜನಗೂಡು-ನೀಲಾಂಬರ್ ರಸ್ತೆ, ತಲಚೇರಿ- ಮೈಸೂರು ನಡುವೆ ಹೊಸ ಮಾರ್ಗ, ಹುಬ್ಬಳ್ಳಿ- ಬೆಂಗಳೂರು, ಬೀರೂರು- ಶಿವಮೊಗ್ಗ ನಡುವೆ (ಜೋಡಿ ಮಾರ್ಗ) ಯೋಜನೆಗಳಿಗೆ ಸಮೀಕ್ಷೆನಡೆಯಲಿದೆ.|

ಕೋಲಾರದಲ್ಲಿ ವ್ಯಾಗನ್ ಘಟಕ, ಹುಬ್ಬಳ್ಳಿ- ಬೆಂಗಳೂರು, ಯಶವಂತಪುರಗಳಲ್ಲಿ ಯಾಂತ್ರೀಕೃತ ಲಾಂಡ್ರಿಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ. ನೈರುತ್ಯ ರೈಲ್ವೆ ವಲಯದಲ್ಲಿ ಅಪಘಾತ ತಡೆ ಉಪಕರಣ ಅಳವಡಿಸಲಾಗುತ್ತಿದೆ ಎಂದು ರೈಲ್ವೆ ಸಚಿವರು ಪ್ರಕಟಿಸಿದರು.

ರಾಜ್ಯಕ್ಕೆ ಈ ಸಲ ಒಂದೂ ‘ತುರಂತ್ ಎಕ್ಸ್‌ಪ್ರೆಸ್’ ರೈಲು ಕೊಡುವ ಔದಾರ್ಯವನ್ನು ರೈಲ್ವೆ ಮಂತ್ರಿ ತೋರಿಲ್ಲ.
ಒಟ್ಟು 26 ಹೊಸ ರೈಲುಗಳನ್ನು ಪಟ್ಟಿ ಮಾಡಲಾಗಿದ್ದರೂ ಕೆಲವು ನೆಪಮಾತ್ರಕ್ಕೆ ರಾಜ್ಯದಲ್ಲಿ ಹಾದು ಹೋಗಲಿದ್ದು, ಹೆಚ್ಚು ಪ್ರಯೋಜನ ಆಗುವುದಿಲ್ಲ. ಹೋದ ಬಜೆಟ್‌ನಲ್ಲಿ ಐದು ಎಕ್ಸ್‌ಪ್ರೆಸ್ ರೈಲುಗಳನ್ನು ನೀಡಿದ್ದರೆ ಈ ವರ್ಷ ಎಂಟು ರೈಲುಗಳನ್ನು ಪರಿಚಯಿಸಲಾಗುತ್ತಿದೆ.

ಚೆನ್ನೈ-ಶಿರಡಿ ಎಕ್ಸ್‌ಪ್ರೆಸ್ ಬೆಂಗಳೂರು ಮೂಲಕ, ಹೌರಾ-ಮೈಸೂರು ಎಕ್ಸ್‌ಪ್ರೆಸ್, ಮೈಸೂರು- ಚೆನ್ನೈ ಎಕ್ಸ್‌ಪ್ರೆಸ್, ಅಹಮದಾಬಾದ್- ಯಶವಂತಪುರ ಎಕ್ಸ್‌ಪ್ರೆಸ್, ಗೊರಖ್‌ಪುರ್- ಯಶವಂತ ಪುರ ಎಕ್ಸ್‌ಪ್ರೆಸ್, ಎರ್ನಾಕುಲಂ-ಬೆಂಗಳೂರು ಎಕ್ಸ್‌ಪ್ರೆಸ್ (ಎಲ್ಲ ವಾರಕೊಮ್ಮೆ), ಯಶವಂತಪುರ- ಮೈಸೂರು ಎಕ್ಸ್‌ಪ್ರೆಸ್, ಮಂಗಳೂರು- ಪಾಲ್ಘಾಟ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ಪ್ರತಿನಿತ್ಯ) ರೈಲುಗಳು ಇನ್ನು ಮುಂದೆ ಓಡಾಡಲಿವೆ.

ಹೌರಾ-ಮಂಗಳೂರು ನಡುವೆ ‘ವಿವೇಕ್ ಎಕ್ಸ್‌ಪ್ರೆಸ್’, ಮೈಸೂರು-ಬೆಂಗಳೂರು ಮಧ್ಯೆ ‘ರಾಜ ರಾಣಿ ಎಕ್ಸ್‌ಪ್ರೆಸ್, ಬೆಂಗಳೂರು-ಮೈಸೂರು-ಹಾಸನ-ಬೇಲೂರು-ಹಳೇಬೀಡು, ಶ್ರವಣ ಬೆಳಗೊಳ, ಹುಬ್ಬಳ್ಳಿ- ಗದಗ- ಹಂಪಿ- ವಿಜಾಪುರ ಮತ್ತು ಬೆಂಗಳೂರು ನಡುವೆ ‘ಜನ್ಮಭೂಮಿ ಗೌರವ್’ ರೈಲು ಸಂಚರಿಸಲಿವೆ.

ಈಚೆಗೆ ಆರಂಭವಾಗಿರುವ ಯಶವಂತಪುರ- ಹೌರಾ ಎಕ್ಸ್‌ಪ್ರೆಸ್ ನಾಲ್ಕು ದಿನಕ್ಕೆ ಬದಲು ಐದು ದಿನ ಓಡಾಡಲಿದೆ. ಬೆಂಗಳೂರು- ಹುಬ್ಬಳ್ಳಿ ಜನಶತಾಬ್ದಿ, ಮುಂಬೈಸಿಎಸ್‌ಟಿ- ಮಂಗಳೂರು ಎಕ್ಸ್‌ಪ್ರೆಸ್ ರೈಲುಗಳು ಪ್ರತಿದಿನವೂ ಓಡಾಡಲಿದೆ.

ಸೊಲ್ಲಾಪುರ- ಗದಗ ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿವರೆಗೆ, ಮೈಸೂರು- ಶಿವಮೊಗ್ಗ ರೈಲು ತಾಳಗುಪ್ಪವರೆಗೆ, ಯಶವಂತಪುರ- ಮಂಗಳೂರು ಎಕ್ಸ್‌ಪ್ರೆಸ್ ಕಾರವಾರವರೆಗೆ ಹೈದರಾಬಾದ್- ವಾಡಿ ಎಕ್ಸ್‌ಪ್ರೆಸ್ ಗುಲ್ಬರ್ಗಾವರೆಗೆ ಹುಬ್ಬಳ್ಳಿ- ವಿಜಾಪುರ ಪ್ಯಾಸೆಂಜರ್ ರೈಲು ಸೊಲ್ಲಾಪುರದವರೆಗೆ ವಿಸ್ತರಿಸಲಾಗಿದೆ.

ಎರಡು ಬದಿ ಎಂಜಿನ್ ಇರುವ ‘ಡೀಸೆಲ್ ಎಂಜಿನ್ ಮಲ್ಟಿಪಲ್ ಯೂನಿಟ್’ (ಡೆಮು ರೈಲುಗಳನ್ನು ಬೆಂಗಳೂರು ಕಂಟೋನ್‌ಮೆಂಟ್- ಬಂಗಾರಪೇಟೆ, ಧರ್ಮಪುರಿ- ಬೆಂಗಳೂರು, ಮಾರಿಕುಪ್ಪಂ- ಬಂಗಾರಪೇಟೆ, ಕಾಚಿಗುಡ- ರಾಯಚೂರು, ರಾಯಚೂರು- ಗಡವಾಲ್, ಕೋಲಾರ ಬೆಂಗಳೂರು ಮಧ್ಯೆ, ಹಾಗೇ ಎಲಕ್ಟ್ರಿಕ್ ಎಂಜಿನ್ ಇರುವ ರೈಲುಗಳು ಬಂಗಾರಪೇಟೆ- ಕುಪ್ಪಂ ಉಪ ನಗರದ ನಡುವೆ ಸಂಚರಿಸಲಿವೆ. ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ ಶಿಡ್ಲಘಟ್ಟ, ಹುಬ್ಬಳ್ಳಿ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಪ್ರಯಾಣಿಕರಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ಬೆಂಗಳೂರು ನಿಲ್ದಾಣದಲ್ಲಿ ಟ್ರಾಲಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬೆಂಗಳೂರು- ಚೆನ್ನೈ ನಡುವೆ ‘ಗೋಲ್ಡನ್ ರೈಲ್ ಕಾರಿಡಾರ್’ ಕಾರ್ಯಸಾಧುವೇ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಮಮತಾ ಪ್ರಕಟಿಸಿದರು.

ಕಳೆದ ವರ್ಷ ಪ್ರಧಾನ ಮಂತ್ರಿ ರೈಲು ವಿಕಾಸ ಯೋಜನೆಯ ಅಡಿ ಕೈಗೊಳ್ಳಲಾಗಿರುವ ಮಾರ್ಗಗಳಲ್ಲಿ ನೇತ್ರಾವತಿ- ಕಂಕನಾಡಿ, ಮೈಸೂರು- ನಾಗನಹಳ್ಳಿ, ದೇವನೂು-ಬಳ್ಳೇಕೆರೆ ಮುಗದ್- ಕುಂಬಾರ ಗಣವಿ, ರಾಮನಗರ- ಶೆಟ್ಟಿಹಳ್ಳಿ, ಗುಂತಕಲ್- ರಾಯಚೂರು ಜೋಡಿ ಮಾರ್ಗ ಹೆಚ್ಚು ಕಡಿಮೆ ಮುಗಿದಿವೆ. ರಾಯಚೂರು-ಪಾಂಡುರಂಗಸ್ವಾಮಿ, ಕಣಿವೆಹಳ್ಳಿ- ಚಿಕ್ಕಮಗಳೂರು, ಹುಮ್ನಾಬಾದ್- ಹಳ್ಳಿಖೇಡ್, ಸಕರಾಯಪಟ್ಟಣ- ಕಣಿವೆಹಳ್ಳಿ ಮಾರ್ಗದ ಕಾರ್ಯ ಪ್ರಗತಿಯಲ್ಲಿದೆ. ಕೋಲಾರ- ಚಿಂತಾಮಣಿ ನಡುವಿನ ಮಾರ್ಗ ಪರಿವರ್ತನೆ ಕೈಗೊಳ್ಳಲಾಗುತ್ತಿದೆ. ಬಳ್ಳೇಕೆರೆ- ಬೀರೂರು ಮತ್ತು ಮದ್ದೂರು ಹನಕೆರೆ ಜೋಡಿ ಮಾರ್ಗ ಕಾರ್ಯ ಈ ವರ್ಷ ಪೂರ್ಣಗೊಳ್ಳಲಿದೆ ಎಂದು ಮಮತಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT