ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಗಳ ಪುನರ್‌ರಚನಾ ಆಯೋಗದ ಮಹತ್ವ

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಭಾರತದಲ್ಲಿ ಇರುವುದಕ್ಕಿಂತ ಅರ್ಧದಷ್ಟು ಕಡಿಮೆ ಜನಸಂಖ್ಯೆ ಇದೆ. ಹೀಗಿದ್ದೂ ಅದರಲ್ಲಿ ಭಾರತದಲ್ಲಿ ಇರುವ ರಾಜ್ಯಗಳ ಸಂಖ್ಯೆಯ ಎರಡು ಪಟ್ಟು ರಾಜ್ಯಗಳಿವೆ. ಅದರ ಇತಿಹಾಸದಲ್ಲಿ ಆ ರಾಷ್ಟ್ರದ ನಕ್ಷೆಯನ್ನು ಅನೇಕ ಸಲ ಮತ್ತೆ ಮತ್ತೆ ಪುನರ್‌ರಚಿಸಲಾಗಿದೆ. ಉದಾಹರಣೆಗೆ 1800 ಜನವರಿ 1ರಂದು ಅಮೆರಿಕದಲ್ಲಿದ್ದದ್ದು ಕೇವಲ 16 ರಾಜ್ಯಗಳು; ಐವತ್ತು ವರ್ಷಗಳ ನಂತರ ಈ ಸಂಖ್ಯೆ ಮೂವತ್ತಕ್ಕೇರಿತ್ತು. 19ನೇ ಶತಮಾನದ ಕೊನೆಯಲ್ಲಿ  ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 45 ರಾಜ್ಯಗಳಿದ್ದವು.

1907 ರಲ್ಲಿ ಓಕ್ಲಹೋಮ ಸೇರ್ಪಡೆಯಾಯಿತು. ಆರಿರೆನಾ ಹಾಗೂ ನ್ಯೂ ಮೆಕ್ಸಿಕೊಗಳು 1912ರಲ್ಲಿ ಸೇರಿಕೊಂಡವು. ಹವಾಯಿ ದ್ವೀಪಗಳು ಹಾಗೂ ಅಲಾಸ್ಕ 1959ರಷ್ಟು ಇತ್ತೀಚೆಗಷ್ಟೇ ಸೇರ್ಪಡೆಗೊಂಡವು. ಇದ್ದ ಪ್ರದೇಶಗಳಿಂದಲೇ ಈ ಕೆಲವು ರಾಜ್ಯಗಳು ರೂಪು ತಳೆದರೆ ಮತ್ತೆ ಬಹುತೇಕ ರಾಜ್ಯಗಳು ಅಮೆರಿಕನ್ ವಸಾಹತು ತಮ್ಮ ವ್ಯಾಪ್ತಿ ಹಾಗೂ ಪ್ರಭಾವಗಳನ್ನು ಖಂಡದ ಪಶ್ಚಿಮ ಹಾಗೂ ದಕ್ಷಿಣಕ್ಕೆ ವಿಸ್ತರಿಸಿದಂತೆ ಸೇರ್ಪಡೆಗೊಂಡವು. ಆದರೆ ಬ್ರಿಟಿಷರು ಬಿಟ್ಟುಹೋದ ಭೂ ಪ್ರದೇಶದಲ್ಲೇ ಭಾರತ ಗಣರಾಜ್ಯ ಸ್ಥಾಪನೆಯಾಯಿತು. 1948ರಲ್ಲಿ ರಾಜಸಂಸ್ಥಾನಗಳ ಸೇರ್ಪಡೆಗಳ ನಂತರ ಯಾವುದೇ ಹೊಸ ಭೂ ಪ್ರದೇಶವನ್ನು ಭಾರತೀಯ ಒಕ್ಕೂಟ ಸ್ವಾಧೀನಪಡಿಸಿಕೊಂಡಿಲ್ಲ. ಹೀಗಿದ್ದೂ ಅಮೆರಿಕದ ಉದಾಹರಣೆ ಪೂರ್ಣ ಅಪ್ರಸ್ತುತವಾಗದು. ಯಾಕೆಂದರೆ, ದೊಡ್ಡ ರಾಷ್ಟ್ರಗಳು ದೀರ್ಘ ಕಾಲಾವಧಿಯಲ್ಲಿ ರೂಪು ತಳೆಯುತ್ತವೆ ಎಂಬುದನ್ನು ಇದು ತೋರಿಸುತ್ತವೆ. ಬಹುಶಃ ರಾಷ್ಟ್ರದ ಸಂಸ್ಥಾಪನೆಯಾದ ಒಂದು ಅಥವಾ ಅದಕ್ಕೂ ಹೆಚ್ಚಿನ ಶತಮಾನಗಳ ನಂತರವಷ್ಟೇ ಅದರ ರಾಜಕೀಯ ಭೌಗೋಳಿಕತೆ ಸ್ಥಿರ ಸಮತೋಲನದಲ್ಲಿ ನೆಲೆ ನಿಲ್ಲುತ್ತದೆ. ಅದರ ಆಂತರಿಕ ವಿಭಜನೆಗಳು, ಉಪ ವಿಭಜನೆಗಳು ಅಂತಿಮವಾಗಿ ಗಟ್ಟಿಯಾಗಿ ಸ್ಥಾಪಿತಗೊಳ್ಳುತ್ತವೆ.

1947ರಲ್ಲಿ ಭಾರತ ಸ್ವತಂತ್ರವಾದಾಗ, ಅದು ಬ್ರಿಟಿಷ್ ಆಡಳಿತದ ಪ್ರಾದೇಶಿಕ ವಿಭಾಗಗಳ ವಾರಸುದಾರಿಕೆಯನ್ನು ಪಡೆದುಕೊಂಡಿತ್ತು.ಇವೆಲ್ಲಾ ಆಕಸ್ಮಿಕವಾಗಿ ಸೃಷ್ಟಿಯಾದಂತಹವುಗಳು. ಅವಕ್ಕೆ ಯಾವುದೇ ಚಾರಿತ್ರಿಕ  ಅಥವಾ ಸಾಮಾಜಿಕ ತರ್ಕ ಇರಲಿಲ್ಲ. ಒಮ್ಮೆಲೆ, ಭಾಷಾವಾರು ಸಮುದಾಯಗಳನ್ನಾಧರಿಸಿದ ರಾಜ್ಯಗಳ ಸೃಷ್ಟಿಗೆ ಗಲಾಟೆ ಆರಂಭವಾಯಿತು. ಮದ್ರಾಸ್ ಪ್ರೆಸಿಡೆನ್ಸಿಯ ತೆಲುಗು ಭಾಷಿಕರಿಗೆ ಆಂಧ್ರಪ್ರದೇಶ ಬೇಕಿತ್ತು. ಬಾಂಬೆ ಪ್ರೆಸಿಡೆನ್ಸಿಯ ಮರಾಠಿ ಮಾತನಾಡುವವರು ಮಹಾರಾಷ್ಟ್ರಕ್ಕೆ ಒತ್ತಾಯಿಸಿದರು. ಇದೇ ರೀತಿ ತಮ್ಮದೇ ಹಿತಾಸಕ್ತಿಗಳನ್ನೊಳಗೊಂಡ ರಾಜ್ಯಗಳಿಗಾಗಿ ಪಂಜಾಬಿ, ಮಲಯಾಳಂ ಹಾಗೂ ಕನ್ನಡ ಮಾತನಾಡುವ ಜನರೂ ಪ್ರಚಾರಾಂದೋಲನಗಳನ್ನಾರಂಭಿಸಿದರು.

ಜವಾಹರಲಾಲ್ ನೆಹರೂ ಹಾಗೂ ವಲ್ಲಭಬಾಯಿ ಪಟೇಲ್ ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ನಾಯಕತ್ವ, ಆರಂಭದಲ್ಲಿ ಭಾಷಾವಾರು ರಾಜ್ಯಗಳಿಗೆ ವಿರೋಧವಾಗಿತ್ತು. ಧರ್ಮದ ಆಧಾರದ ಮೇಲೆ ಭಾರತದ ವಿಭಜನೆಯನ್ನು ಆಗಷ್ಟೇ ಕಂಡಿದ್ದ ಹಿನ್ನೆಲೆಯಲ್ಲಿ ಭಾಷೆ ಆಧಾರದ ಮೇಲೆ ಮತ್ತಷ್ಟು ವಿಭಜನೆಯ ಭೀತಿ ಅವರಲ್ಲಿತ್ತು. ಆದರೆ ಬೇಡಿಕೆ ಎಷ್ಟೊಂದು ದೊಡ್ಡದಾಗಿ ಬೆಳೆಯಿತೆಂದರೆ ಕಡೆಗೆ ರಾಜ್ಯಗಳ ಪುನರ್ ರಚನಾ ಆಯೋಗವನ್ನು (ಎಸ್‌ಆರ್‌ಸಿ) ಸರ್ಕಾರ ರಚಿಸಿತು. ಈ ಆಯೋಗಕ್ಕೆ ಮೂವರು ಸದಸ್ಯರಿದ್ದರು: ನ್ಯಾಯಮೂರ್ತಿ ಎಸ್ ಫಾಜಿ ಆಲಿ (ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು); ಇತಿಹಾಸಕಾರ, ಕೆ. ಎಂ. ಪಣಿಕ್ಕರ್; ಹಾಗೂ ಸಾಮಾಜಿಕ ಕಾರ್ಯಕರ್ತ, ಎಚ್. ಎನ್. ಕುಂಜ್ರು.

ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷಾ ಸಮುದಾಯಗಳು ತಮ್ಮದೇ ರಾಜ್ಯಗಳನ್ನು ಹೊಂದಬೇಕು ಎಂದು 1955ರಲ್ಲಿ ಪ್ರಕಟವಾದ ಎಸ್‌ಆರ್‌ಸಿ ವರದಿ ಶಿಫಾರಸು ಮಾಡಿತು. ಮುಂಬೈನ ಫಾರ್ಸಿ ಹಾಗೂ ಗುಜರಾತಿ ಬಂಡವಾಳಶಾಹಿಗಳು, ಪರಿಣಾಮಗಳ ಬಗ್ಗೆ ಭೀತಿಗೊಂಡಿದ್ದರಿಂದಾಗಿ ಮರಾಠಿ ಭಾಷಿಕರಿಗೆ ಸಮಗ್ರ ರಾಜ್ಯ ನೀಡಲಿಲ್ಲ. ಹೀಗಿದ್ದೂ ಸಂಯುಕ್ತ ಮಹಾರಾಷ್ಟ್ರ ಬೇಡಿಕೆ ಮತ್ತೆ ತಲೆ ಎತ್ತಿತು. ಅದು ಎಷ್ಟೊಂದು ವ್ಯಾಪಕ ಜನ ಬೆಂಬಲ ಗಳಿಸಿಕೊಂಡಿತೆಂದರೆ 1960ರಲ್ಲಿ ಗುಜರಾತ್ ಹಾಗೂ ಮಹಾರಾಷ್ಟ್ರಗಳೆಂಬ ಎರಡು ಪ್ರತ್ಯೇಕ ರಾಜ್ಯಗಳನ್ನು ರಚಿಸಿ ಬಾಂಬೆಯನ್ನು ಮಹಾರಾಷ್ಟ್ರಕ್ಕೆ ನೀಡಲಾಯಿತು.

ಪಂಜಾಬಿ ಭಾಷಿಕರ ಬೇಡಿಕೆಗೂ ಎಸ್‌ಆರ್‌ಸಿ ಒಪ್ಪಿಕೊಂಡಿರಲಿಲ್ಲ. ಏಕೆಂದರೆ ಅದರ ನೇತೃತ್ವ ವಹಿಸಿದ್ದವರು ಸಿಖ್ಖರು. ಅದು ಸ್ವತಂತ್ರ ಸಿಖ್ ರಾಷ್ಟ್ರ ಬೇಡಿಕೆಗೆ ಪ್ರೇರಣೆ ಆಗಬಹುದು ಎಂದು ಕಾಂಗ್ರೆಸ್ ನಾಯಕತ್ವ ಹೆದರಿತ್ತು. ಆದರೆ ಪಾಕಿಸ್ತಾನದ ಜೊತೆ 1965ರ ಯುದ್ಧದಲ್ಲಿ ಭಾರತಕ್ಕಾಗಿ ಸಿಖ್ಖರು ಎಷ್ಟೊಂದು ವೀರಾವೇಶದಿಂದ ಹೋರಾಡಿದ್ದರೆಂದರೆ ‘ಪಂಜಾಬಿ ಸುಬಾ’ಗಾಗಿ ಇದ್ದಂತಹ ದೀರ್ಘಕಾಲೀನ ಬೇಡಿಕೆಗೆ ಕಡೆಗೂ ಒಪ್ಪಿಕೊಳ್ಳಲಾಗಿತ್ತು. ಹರಿಯಾಣ ಹಾಗೂ ಹಿಮಾಚಲ ಪ್ರದೇಶ ಎಂಬ ಹೊಸ ರಾಜ್ಯಗಳನ್ನು ರಚಿಸಲು ಸಿಖ್ಖರಲ್ಲದ ಜನರು ಹೆಚ್ಚಾಗಿ ಇದ್ದಂತಹ ಪ್ರದೇಶಗಳನ್ನು ಪ್ರತ್ಯೇಕಗೊಳಿಸಲಾಯಿತು.

ಈ ಬಗ್ಗೆ ಹಿನ್ನೋಟ ಹಾಯಿಸಿದರೆ, ನೆಹರೂ ಹಾಗೂ ಪಟೇಲರ ಭೀತಿ ಹುರುಳಿಲ್ಲದ್ದಾಗಿತ್ತು ಎನಿಸುತ್ತದೆ. ಒಂದು ನಿರ್ದಿಷ್ಟ ದಶಕದಲ್ಲಿ (1980ರ ದಶಕ) ಪಂಜಾಬ್‌ಅನ್ನು ಹೊರತುಪಡಿಸಿದಲ್ಲಿ ಭಾಷೆ ಆಧರಿಸಿದ ಹೊಸ ರಾಜ್ಯಗಳು ರಾಷ್ಟ್ರೀಯ ಏಕತೆಗೆ ಬೆದರಿಕೆ ಆಗಿಲ್ಲ.ಬದಲಿಗೆ, ಈ ಏಕತೆಯನ್ನು ಅವರು ಹೆಚ್ಚು ಬಲಪಡಿಸಿದ್ದಾರೆ. ಆದರೆ ಪಾಕಿಸ್ತಾನ ಎರಡಾಗಿ ಹೋಳಾಯಿತು. ಏಕೆಂದರೆ, ಪಶ್ಚಿಮದ ಪಂಜಾಬಿ ಹಾಗೂ ಉರ್ದು ಭಾಷಿಕರು ಪೂರ್ವದ ಬಂಗಾಳಿ ಭಾಷಿಕರನ್ನು ದಮನಿಸಿದರು. ಶ್ರೀಲಂಕಾವಂತೂ 30 ವರ್ಷಗಳ ಕಾಲ ಅಂತರ್ ಯುದ್ಧದಲ್ಲಿ ನರಳಿತು. ಏಕೆಂದರೆ, ಬಹುಸಂಖ್ಯಾತ ಸಿಂಹಳೀಯರು ಅಲ್ಪಸಂಖ್ಯಾತ ತಮಿಳರನ್ನು ಎರಡನೇ ದರ್ಜೆ ಪ್ರಜೆಗಳಾಗಿಸಲು ಪ್ರಯತ್ನಿಸಿದರು.  ನಿರ್ದಿಷ್ಟವಾಗಿ ನಿಗದಿಪಡಿಸಲಾದ ಭೂಪ್ರದೇಶಗಳು ಹಾಗೂ ಸ್ವಾಯತ್ತ ಪ್ರಾದೇಶಿಕ ಸರ್ಕಾರಗಳನ್ನು ಸೃಷ್ಟಿಸುವ ಮೂಲಕ ಭಾರತ ಗಣರಾಜ್ಯ ತನ್ನ ಪ್ರಮುಖ ಭಾಷಾ ಸಮುದಾಯಗಳಿಗೆ ತಮ್ಮನ್ನು ತಾವು ಪೋಷಿಸಿಕೊಳ್ಳಲು ಹಾಗೂ ಬೆಳೆಯಲು ಅದರದೇ ಸ್ವಂತ ನೆಲೆಗಳನ್ನು ಒದಗಿಸಿತು.

1950 ಹಾಗೂ 1960ರ ದಶಕದ ಸವಾಲುಗಳ ಹಿನ್ನೆಲೆಯಲ್ಲಿ ಭಾಷಾ ರಾಜ್ಯಗಳ ಸೃಷ್ಟಿ ಪರಿಣಾಮಕಾರಿ ಪರಿಹಾರವಾಗಿತ್ತು.ಆದರೆ ಅದೇ ಕಾಯಂ ಪರಿಹಾರವೆ? ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಹಾಗೂ ಒಳ್ಳೆಯ ಆಡಳಿತದ ಹೊಸ ಸವಾಲುಗಳಿಂದಾಗಿ ಭಾರತ ಗಣರಾಜ್ಯದ ನಕ್ಷೆಯನ್ನು ಈಗ ಮತ್ತೆ ಪುನರ್‌ರಚನೆ ಮಾಡುವ ಅವಶ್ಯಕತೆ ಇದೆಯೆ? ತೆಲಂಗಾಣ ರಾಜ್ಯ, ವಿದರ್ಭ ರಾಜ್ಯ, ಗೂರ್ಖಾಲ್ಯಾಂಡ್ ರಾಜ್ಯ, ಬುಂದೇಲ್‌ಖಂಡ್ ರಾಜ್ಯ ಹಾಗೂ ಇನ್ನೂ ಮುಂತಾದವುಗಳಿಗಾಗಿ ನಡೆಯುತ್ತಿರುವ ಚಳವಳಿಗಳು ಎತ್ತಿರುವ ಪ್ರಶ್ನೆ ಇದು. ತಾವು ನೆಲೆ ಕಂಡುಕೊಂಡಿರುವ ಈಗಿರುವಂತಹ ದೊಡ್ಡ ರಾಜ್ಯಗಳಲ್ಲಿ ತಮ್ಮ ಜೀವಿತದ ಅಗತ್ಯಗಳು ಹಾಗೂ ಸಾಂಸ್ಕೃತಿಕ ಆಶಯಗಳಿಗೆ ಘನತೆಯುಕ್ತ ಅಭಿವ್ಯಕ್ತಿ ನಿರಾಕರಿಸಲಾಗಿದೆ; ಇಂತಹ ಜನರ ಪ್ರತಿನಿಧಿಗಳಾಗಿ ಈ ಬೇಡಿಕೆಗಳನ್ನು ಮಂಡಿಸಲಾಗುತ್ತಿದೆ ಎಂದು ಈ ಚಳವಳಿಕಾರರು ಹೇಳುತ್ತಾರೆ.

2004ರ ಸಾರ್ವತ್ರಿಕ ಚುನಾವಣೆಗಳಿಗೆ ಮೊದಲು, ಅಧಿಕಾರದ ಗದ್ದುಗೆಯಲ್ಲಿ ಇರದಿದ್ದ ಕಾಂಗ್ರೆಸ್ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಜೊತೆ ಮೈತ್ರಿ ಮಾಡಿಕೊಂಡಿತು. ಆಗ ಅದು ಒಂದು ನಿರ್ದಿಷ್ಟ ಪ್ರಮಾಣ ಮತ್ತೊಂದು ಸಾಮಾನ್ಯವಾದಂತಹ ಪ್ರಮಾಣ ಮಾಡಿತು. ಮೊದಲನೆಯದು ತೆಲಂಗಾಣ ರಾಜ್ಯ ಸೃಷ್ಟಿಗೆ ಬೆಂಬಲ; ಮತ್ತೊಂದು ಹೊಸ ರಾಜ್ಯಗಳ ಪುನರ್‌ರಚನಾ ಆಯೋಗದ ರಚನೆ. ಆ ನಂತರ ಕಾಂಗ್ರೆಸ್ ಅನಿರೀಕ್ಷಿತವಾಗಿ ಅಧಿಕಾರ ಗದ್ದುಗೆಗೇರಿದ ನಂತರ  ಈ ಎರಡೂ ವಚನಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಮೊದಲನೆಯದನ್ನು ಮಾಡಲಾಗಲಿಲ್ಲ. ಏಕೆಂದರೆ ಅದಕ್ಕೆ ಪ್ರಬಲರಾದ ಆಂಧ್ರ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ವಿರೋಧವಿತ್ತು. ಎರಡನೆಯದೂ ಆಗಲಿಲ್ಲ. ಏಕೆಂದರೆ, ಅದಕ್ಕೆ ಹೊಸ ಸರ್ಕಾರದ ಅಸ್ತಿತ್ವಕ್ಕೆ ಮುಖ್ಯವಾಗಿದ್ದ ಬೆಂಬಲ ನೀಡಿದ್ದ ಕಮ್ಯುನಿಸ್ಟ್ ಪಕ್ಷಗಳ ವಿರೋಧವಿತ್ತು. ಜೊತೆಗೆ ಗೂರ್ಖಾಲ್ಯಾಂಡ್ ರಾಜ್ಯದ ಚಳವಳಿಗೆ ಉತ್ತೇಜನ ನೀಡಲು ಬಂಗಾಳಿ ಕಾಮ್ರೇಡ್‌ಗಳು ಬಯಸದೆ ಇದ್ದದ್ದರಿಂದ ಅವರು ಹೊಸ ಎಸ್‌ಆರ್‌ಸಿಗೆ ತಡೆ ಒಡ್ಡುವ ವಿಟೋ ಕೂಡ ಚಲಾಯಿಸಿದ್ದರು.

2004ರಲ್ಲಿ ಮಾಡಿದ್ದ ಭರವಸೆಗಳನ್ನು ಕೈಬಿಡುವುದು ಕಾಂಗ್ರೆಸ್‌ಗೆ ಅನಿವಾರ್ಯವಾಯಿತು. ಐದು ವರ್ಷಗಳ ನಂತರ ಎಡಪಕ್ಷಗಳ ಬೆಂಬಲ ಅಗತ್ಯ ಇಲ್ಲದ ರೀತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಮೂವರು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ವಿಶ್ವಾಸಾರ್ಹ ಸದಸ್ಯರನ್ನೊಳಗೊಂಡಂತಹ ಹೊಸ ಎಸ್‌ಆರ್‌ಸಿ ರಚನೆಗೆ ಅದು ಸಕಾಲವಾಗಿತ್ತು. ಅದನ್ನು ಮಾಡುವಲ್ಲಿ ಅದು ವಿಫಲವಾಗಿದೆ ಎಂಬಂತಹದ್ದು ಅದರ ನಿರಾಸಕ್ತಿ, ಜಡತ್ವ, ಆಲಸಿತನ ಅಥವಾ ಅದರದೇ ನಿರಾತಂಕದ ಫಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಯಥಾಸ್ಥಿತಿವಾದ. ಇದರ ಪರಿಣಾಮ ತೆಲಂಗಾಣ ಚಳವಳಿ ಮತ್ತೆ ತಲೆ ಎತ್ತುವಂತಾಗಿದೆ. ಒಂದಷ್ಟು ಕಾಲ ಹಾಗೇ ಮುಂದುವರಿಸಿಕೊಂಡು ಹೋಗಲು ಕೇಂದ್ರ ಸರ್ಕಾರ ನ್ಯಾಯಮೂರ್ತಿ ಶ್ರೀಕೃಷ್ಣ ನೇತೃತ್ವದ ಆಯೋಗ ರಚಿಸಿತು. ಇತ್ತೀಚೆಗೆ  ಮಂಡಿಸಲಾದ ಈ ವರದಿ ಒಗ್ಗಟ್ಟಾದ ಆಂಧ್ರವನ್ನು ಹಾಗೇ ಉಳಿಸಿಕೊಳ್ಳುವುದರ ಪರ ಇದೆ. ಇದು ಹೊಸ ಹಾಗೂ ದುಬಾರಿಯಾದ ಮುಷ್ಕರಗಳು, ಬಂದ್‌ಗಳು, ಉಪವಾಸ ಹಾಗೂ ಹರತಾಳಗಳ ಅಲೆಗಳಿಗೆ ಕಾರಣವಾಗುವುದಂತೂ ನಿಜ.

ಸಣ್ಣ ರಾಜ್ಯಗಳು ಒಳ್ಳೆಯ (ಅಥವಾ ಕನಿಷ್ಠ ಕಡಿಮೆ ದಿಗಿಲು ಹುಟ್ಟಿಸುವ) ಆಡಳಿತಕ್ಕೆ  ಅನುಕೂಲಕರವಾಗುವುದಂತೂ ಸತ್ಯ ಎಂಬುದನ್ನು ಕಳೆದ ಹಲವು ದಶಕಗಳ ಅನುಭವ ಸೂಚಿಸುತ್ತವೆ.  ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ಈಗ ಚಿಕ್ಕದಾಗಿರುವ ಸಿಖ್ ಪ್ರಾಬಲ್ಯ ಇರುವ ಪಂಜಾಬ್‌ಗಳಾಗಿ ಏಕೀಕೃತ ಪಂಜಾಬ್ ರಾಜ್ಯ ವಿಭಜನೆಯಾದ ನಂತರ  ಸ್ಥಿರ ಆರ್ಥಿಕ ಬೆಳವಣಿಗೆಗಳನ್ನು ಕಂಡಿವೆ.ಈ ಹಿಂದೆ ಉತ್ತರ ಪ್ರದೇಶ ಹಾಗೂ ಅಸ್ಸಾಂನ ಭಾಗವಾಗಿದ್ದು ಆ ದೊಡ್ಡ ರಾಜ್ಯಗಳನ್ನು ತೊರೆದ ನಂತರ ಉತ್ತರಖಂಡ ಹಾಗೂ ಮೇಘಾಲಯಗಳ ಗುಡ್ಡಗಾಡು ರಾಜ್ಯಗಳು ಹೆಚ್ಚು ಉತ್ತಮವಾಗಿವೆ. ತಮ್ಮೆಲ್ಲಾ ಕಷ್ಟಗಳಿಂದಾಗಿ ಛತ್ತೀಸ್‌ಗಡದ ಜನರು ತಾವು ಮಧ್ಯಪ್ರದೇಶದ ಭಾಗವಾಗಿದ್ದಾಗಿನ ಆ ದಿನಗಳನ್ನು ಕುರಿತು ಹಂಬಲಿಸುತ್ತಾರೆಂದೇನೂ ನನಗನಿಸುವುದಿಲ್ಲ. ಹಾಗೆಯೇ ಬಿಹಾರದಿಂದ ಪ್ರತ್ಯೇಕಗೊಂಡ ನಂತರ ಜಾರ್ಖಂಡ್ ಗಣನೀಯವಾಗಿ ಲಾಭ ಪಡೆದುಕೊಂಡಿದೆ ಎಂದೇನೂ ಅನಿಸುವುದಿಲ್ಲ. ಆದರೆ  ಮಾವೊವಾದ, ಗಣಿ ಮಾಫಿಯಾ, ರಾಜಕೀಯ ಭ್ರಷ್ಟಾಚಾರ ಇತ್ಯಾದಿ ಮುಖ್ಯ ಸಮಸ್ಯೆಗಳು -  ಅದರ ರಾಜ್ಯ ಸೃಷ್ಟಿಗೆ ಕಾರಣವಾಗಿವೆ.

 ತೆಲಂಗಾಣ, ವಿದರ್ಭ, ಗೂರ್ಖಾಲ್ಯಾಂಡ್ ಮುಂತಾದ ಹೊಸ ರಾಜ್ಯಗಳ ಬೇಡಿಕೆಗಳ ಕುರಿತಂತೆ  ಪ್ರತಿಯೊಂದನ್ನೂ ಅದರ ಅರ್ಹತೆಗಳ ಆಧಾರದ ಮೇಲೆ ನಾನು ಇಲ್ಲಿ ಹೇಳುತ್ತಿರುವಂತಹ ಆಯೋಗ, ತಾರ್ಕಿಕತೆ ಹಾಗೂ ಭಾವನಾತ್ಮಕತೆಗಳ ನೆಲೆಯಲ್ಲಿ  ಪರಿಗಣಿಸುವುದಾಗಬೇಕು. ಸಾಂಸ್ಕೃತಿಕ, ಪರಿಸರ ಅಥವಾ ಚಾರಿತ್ರಿಕ  ಸುಸಂಬದ್ಧತೆ ಇರುವ ಪ್ರದೇಶಗಳು ಹಾಗೂ ದೊಡ್ಡ ಘಟಕವೊಂದರ ಭಾಗವಾಗಿದ್ದರಿಂದಾಗಿ ತೀವ್ರತರ ತೊಂದರೆಗೊಳಗಾಗಿರುವ ಪ್ರದೇಶಗಳಿಗೆ ರಾಜ್ಯ ಸ್ಥಾನಮಾನ ನೀಡಬಹುದು.ಅವು ಜನರ ಸಾಮಾಜಿಕ ಹಾಗೂ ಆರ್ಥಿಕ ಅಗತ್ಯಗಳಿಗೆ ಹೆಚ್ಚು ಅರ್ಥಪೂರ್ಣವಾಗಿ ಸ್ಪಂದಿಸಬಲ್ಲವು ಎಂಬುದನ್ನು ಮೇಲೆ ಹೇಳಿದ ಯಶಸ್ವಿ ಸಣ್ಣ ರಾಜ್ಯಗಳ ಮಾದರಿಗಳು ಸೂಚಿಸುತ್ತವೆ.

ರಾಜಕೀಯ ಪ್ರಯೋಗವಾಗಿ, ಭಾರತದ ಗಣರಾಜ್ಯ ಇನ್ನೂಯೌವನಾವಸ್ಥೆಯಲ್ಲಿದ್ದು ಸಮಸ್ಥಿತಿಯನ್ನಿನ್ನೂ ಕಂಡುಕೊಳ್ಳುತ್ತಾ ಇದೆ.ಭವಿಷ್ಯದ ಭಾರತದ ಬಗ್ಗೆ ಕಾಳಜಿ ವಹಿಸುವ ಹಾಗೂ ಭಾರತೀಯ ಪ್ರಯೋಗದ ಸ್ವರೂಪವನ್ನೂ  ಅರ್ಥ ಮಾಡಿಕೊಳ್ಳುವ  ಸರ್ಕಾರ ಈಗ ಹೊಸ ರಾಜ್ಯಗಳ ಪುನರ್‌ರಚನಾ ಆಯೋಗವನ್ನು ರಚಿಸಬೇಕು. ಆ ಸರ್ಕಾರ.. ಅಲ್ಲ, ಭ್ರಷ್ಟಾಚಾರ ಹಗರಣಗಳ ಸುಳಿಗಳಲ್ಲಿ ಹಾನಿಗೊಂಡಿರುವ ಹಾಗೂ ಮಹತ್ವದ ಗಳಿಗೆಗಳಲ್ಲಿ ಅತಿ ಎಚ್ಚರ ವಹಿಸುವ ಪ್ರಧಾನಿ ನೇತೃತ್ವ ಇರುವ ಈ ಸರ್ಕಾರ  ಅದನ್ನು ಮಾಡುವುದಿಲ್ಲ.  ಅಶಾಂತಿ, ಗೊಂದಲ ತೆಲಂಗಾಣದಲ್ಲಿ ಹಾಗೂ ಅದರಾಚೆಗೂ ವ್ಯಾಪಿಸಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT