ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 138 ಕೆರೆ ಅಭಿವೃದ್ಧಿ: ಆಚಾರ್ಯ

Last Updated 3 ಅಕ್ಟೋಬರ್ 2011, 10:00 IST
ಅಕ್ಷರ ಗಾತ್ರ

ಬ್ರಹ್ಮಾವರ: `ಕೆರೆಗಳ ಪುನರುಜ್ಜೀವನ ಯೋಜನೆಯಡಿ 138 ಪುರಾತನ ಕೆರೆಗಳನ್ನು ರೂ 1ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಸಲುವಾಗಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ತಲಾ ರೂ 5 ಕೋಟಿ ಮೀಸಲಿಡಲಾಗಿದೆ~ ಎಂದು ಉನ್ನತ ಶಿಕ್ಷಣ, ಧಾರ್ಮಿಕ ದತ್ತಿ ಮತ್ತು ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿದರು.

ಕೆರೆಗಳ ಪುನರುಜ್ಜೀವನ ಯೋಜನೆಯಡಿಯಲ್ಲಿ ಅಭಿವೃದ್ಧಿಗೊಂಡಿರುವ ಕರ್ಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

`ಸಣ್ಣ ನೀರಾವರಿ, ತೋಟಗಾರಿಕೆ ಮತ್ತು ಕೃಷಿಯೇತರ ಚಟುವಟಿಕೆಗೆ 18 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಹೊಸ ಯೋಜನೆ ಅಡಿ ಪುನರುಜ್ಜೀವನಗೊಂಡ ರಾಜ್ಯದ ಪ್ರಥಮ ಕೆರೆ ಇದಾಗಿದೆ~ ಎಂದರು.

ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ 37ಸಾವಿರ ದೇವಸ್ಥಾನಗಳಿದ್ದು, ಅಲ್ಲಿನ ಪೂಜಾ ಕಾರ್ಯಗಳಿಗೆ ನೀಡುವ ತಸ್ತಿಕನ್ನು 4 ರೂಪಾಯಿಯಿಂದ 12 ಸಾವಿರಕ್ಕೆ ಏರಿಸಲಾಗಿದೆ. ಕಳೆದ ಬಾರಿ ನಿರೀಕ್ಷೆಗಿಂತ 3 ಸಾವಿರ ಕೋಟಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದ್ದು, ಈ ಹಣದಲ್ಲಿ ದೇವಸ್ಥಾನಗಳ ಅಭಿವೃದ್ಧಿಗೆ ರೂ 180 ಕೋಟಿ ಅನುದಾನ ನೀಡಲಾಗಿದೆ. ಕರ್ಜೆ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರದಿಂದ ರೂ. 25ಲಕ್ಷ ನೀಡುತ್ತೇನೆ~ ಎಂದು ಅವರು ತಿಳಿಸಿದರು.

ಶಾಸಕ ಕೆ.ರಘುಪತಿ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎ.ಪ್ರಭಾಕರ ಶರ್ಮ, ತಾ.ಪಂ.ಸದಸ್ಯೆ ಜ್ಯೋತಿ ಎಸ್ ಪೂಜಾರಿ, ಕರ್ಜೆ ಗ್ರಾ.ಪಂ.ಅಧ್ಯಕ್ಷ ಟಿ.ಸುರೇಶ್ ಶೆಟ್ಟಿ, ಉಪಾಧ್ಯಕ್ಷೆ ಸುಧಾ ಎಸ್ ಭಟ್, ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿ.ಪಂ. ಕಾರ್ಯಪಾಲಕ ಎಂಜಿನಿಯರ್ ವಿ.ಶ್ರೀಧರ್‌ಮೂರ್ತಿ, ಉದ್ಯಮಿ ಬಿ.ಎನ್.ಶಂಕರ ಪೂಜಾರಿ, ದೇವಸ್ಥಾನದ ಆಡಳಿತ ಮೊಕ್ತೇಸರ ಭೋಜರಾಜ ಶೆಟ್ಟಿ, ತಂತ್ರಿ ಸಗ್ರಿ ವೇದವ್ಯಾಸ ಐತಾಳ, ಪೇತ್ರಿ ಉದ್ಯಮಿ ಧನಂಜಯ ಅಮೀನ್, ಗುತ್ತಿಗೆದಾರ ಜೀವನ್ ಶೆಟ್ಟಿ ಬೈಕಾಡಿ, ಸುಧಾಕರ ಶೆಟ್ಟಿ, ರೋಹಿತ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT