ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಅಶ್ವಿನಿ ಅಕ್ಕುಂಜಿಗೆ ಸ್ಥಾನ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಭಾರತದ 15 ಮಂದಿ
Last Updated 20 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಅಥ್ಲೀಟ್ ಕರ್ನಾಟಕದ ಅಶ್ವಿನಿ ಅಕ್ಕುಂಜಿ ಮುಂದಿನ ತಿಂಗಳು ಮಾಸ್ಕೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ಅಥ್ಲೆಟಿಕ್ಸ್ ಫೆಡರೇಷನ್ ಶನಿವಾರ ಪ್ರಕಟಿಸಿದ ಮಹಿಳೆಯರ 4x400 ಮೀ. ರಿಲೇ ತಂಡದಲ್ಲಿ ಅಶ್ವಿನಿ ನಿರೀಕ್ಷೆಯಂತೆಯೇ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಪಟಿಯಾಲದಲ್ಲಿ ಶುಕ್ರವಾರ ನಡೆದಿದ್ದ ಟ್ರಯಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು ತಂಡದಲ್ಲಿ ಸ್ಥಾನವನ್ನು ಹೆಚ್ಚುಕಡಿಮೆ ಖಚಿತಪಡಿಸಿಕೊಂಡಿದ್ದರು.

2010ರ ಏಷ್ಯನ್ ಕ್ರೀಡಾ ಕೂಟ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಬಂಗಾರ ಜಯಿಸಿದ್ದ ಅಶ್ವಿನಿ ಆ ನಂತರ ಉದ್ದೀಪನಾ ಮದ್ದು ಸೇವಿಸಿರುವ ವಿವಾದಕ್ಕೆ ಸಿಲುಕಿದ್ದರು. ಮಾತ್ರವಲ್ಲ, ಎರಡು ವರ್ಷಗಳ ಅಮಾನತು ಶಿಕ್ಷೆ ಅನುಭವಿಸಿದ್ದಾರೆ. ಇದೇ ಜುಲೈ 3ರಂದು ಅವರ ಅಮಾನತು ಅವಧಿ ಮುಗಿದಿದೆ.

ಎಂ.ಆರ್.ಪೂವಮ್ಮ, ಅನು ಮರಿಯಮ್ ಜೋಸ್, ಟಿಂಟು ಲುಕಾ, ನಿರ್ಮಲಾ ಮತ್ತು ಅನಿಲ್ಡಾ ಥಾಮಸ್ ಅವರು ಭಾರತ ರಿಲೆ ತಂಡದಲ್ಲಿ ರುವ  ಇತರ ಸದಸ್ಯರು. ಪೂವಮ್ಮ, ಅನು, ಟಿಂಟು ಮತ್ತು ನಿರ್ಮಲಾ ಈ ತಿಂಗಳ ಮೊದಲ ವಾರ ಪುಣೆಯಲ್ಲಿ ನಡೆದ ಏಷ್ಯಾ ಅಥ್ಲೆಟಿಕ್ಸ್‌ನ ರಿಲೆ ಓಟದಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿದ್ದರು.

ಆಯ್ಕೆ ಸಮಿತಿಯು ಇದೇ ವೇಳೆ ಆರು ಮಂದಿ ನಡಿಗೆ ಸ್ಪರ್ಧಿಗಳ ಹೆಸರನ್ನೂ ಪ್ರಕಟಿಸಿತು. ಕೆ.ಟಿ. ಇರ್ಫಾನ್, ಗುರ್ಮೀತ್ ಸಿಂಗ್ ಮತ್ತು ಚಂದನ್ ಸಿಂಗ್ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸುವರು. ಇವರೆಲ್ಲರೂ `ಎ' ಸ್ಟ್ಯಾಂಡರ್ಡ್ ಅರ್ಹತೆ ಮೂಲಕ ವಿಶ್ವಚಾಂಪಿಯನ್‌ಷಿಪ್‌ಗೆ ಅವಕಾಶ ಗಿಟ್ಟಿಸಿದ್ದರು. ಕುಶ್‌ಬೀರ್ ಕೌರ್ ಮಹಿಳೆಯರ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವರು.

ಬಸಂತ್ ಬಹಾದೂರ್ ರಾಣಾ ಮತ್ತು ಸಂದೀಪ್ ಕುಮಾರ್ ಪುರುಷರ 50 ಕಿ. ಮೀ. ನಡಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು. ವಿಕಾಸ್ ಗೌಡ (ಪುರುಷರ ಡಿಸ್ಕಸ್ ಥ್ರೋ), ಸುಧಾ ಸಿಂಗ್ (ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್) ಮತ್ತು ರೆಂಜಿತ್ ಮಹೇಶ್ವರಿ (ಪುರುಷರ ಟ್ರಿಪಲ್ ಜಂಪ್) ಅವರೂ 15 ಸದಸ್ಯರ ಭಾರತ ತಂಡಲ್ಲಿದ್ದಾರೆ.

ವಿಕಾಸ್ ಅವರನ್ನು ಹೊರತುಪಡಿಸಿ ಭಾರತ ತಂಡದ ಇತರ ಸದಸ್ಯರು ಆಗಸ್ಟ್ 6 ರಂದು ಮಾಸ್ಕೊಗೆ ತೆರಳಲಿದ್ದಾರೆ. ವಿಕಾಸ್ ಮಾಸ್ಕೊದಲ್ಲಿ ತಂಡವನ್ನು ಸೇರಿಕೊಳ್ಳುವರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಆ. 10 ರಿಂದ 18ರ ವರೆಗೆ ನಡೆಯಲಿದೆ.

`ಪುಣೆಯಲ್ಲಿ ನಡೆದ ಏಷ್ಯಾ ಅಥ್ಲೆಟಿಕ್ಸ್‌ನ 4x400 ಮೀ. ರಿಲೆನಲ್ಲಿ ಚಿನ್ನ ಜಯಿಸಿದ್ದ ಭಾರತದ ಮಹಿಳಾ ತಂಡ ಮಾಸ್ಕೊದಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಲಂಡನ್ ಒಲಿಂಪಿಕ್ಸ್‌ನಲ್ಲಿ 10ನೇ ಸ್ಥಾನ ಪಡೆದಿದ್ದ ಕೆ.ಟಿ. ಇರ್ಫಾನ್ ಅವರಿಂದಲೂ ಸುಧಾರಿತ ಪ್ರದರ್ಶನ ನಿರೀಕ್ಷಿಸುತ್ತೇವೆ' ಎಂದು ಎಎಫ್‌ಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT