ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಕೆಲವೆಡೆ ಮುಂಗಾರು ಚುರುಕು

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೊಡಗು, ಧಾರವಾಡ, ಕಾರವಾರ, ಬೆಳಗಾವಿ, ಬಾಗಲಕೋಟೆ, ಗದಗ ಹಾಗೂ ಇನ್ನಿತರ ಕೆಲವು ಜಿಲ್ಲೆಗಳಲ್ಲಿ ಮುಂಗಾರು ಬಿರುಸಾಗಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದರೂ ಮಳೆ ಸುರಿದಿರುವುದು ಜನತೆಗೆ ಸ್ವಲ್ಪ ಸಮಾಧಾನ ತಂದಿದೆ.

ಕೊಡಗು ಜಿಲ್ಲೆಯಲ್ಲಿ  ಕಳೆದ ವಾರ ಕ್ಷೀಣಗೊಂಡಿದ್ದ ಮುಂಗಾರು ಈಗ ಚುರುಕು ಪಡೆದಿರುವಂತೆ ಕಂಡು ಬರುತ್ತಿದೆ. ಸೋಮವಾರ ಸಂಜೆ ಆರಂಭವಾಗಿರುವ ಮಳೆ ಮಂಗಳವಾರ ದಿನವಿಡೀ ಸುರಿಯಿತು. ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ವಿರಾಜಪೇಟೆ ಕಸಬಾ, ಪೊನ್ಮಂಪೇಟೆ, ಅಮ್ಮತಿ ಸೇರಿದಂತೆ ಉಳಿದೆಡೆ ಉತ್ತಮ ಮಳೆಯಾಗಿದೆ.

ಜಿಲ್ಲೆಯಲ್ಲಿನ ನದಿ ಕರೆ ಹಳ್ಳಕೊಳ್ಳಗಳು ಭರ್ತಿಯಾಗುತ್ತಿವೆ. ಯಾವುದೇ ಮಳೆಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.  ಜಿಲ್ಲೆಯ ಮಂಗಳವಾರದ ಸರಾಸರಿ ಮಳೆ 14.75 ಮಿ.ಮೀ. ದಾಖಲಾಗಿದೆ.

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಈಗ ನೀರಿನ ಮಟ್ಟ 2,822.12 ಅಡಿ ಇದೆ. ಒಳ ಹರಿವು 768 ಕ್ಯೂಸೆಕ್.

ಕರಾವಳಿಯಲ್ಲಿ ಮಂಗಳವಾರ ಬಿಟ್ಟು ಬಿಟ್ಟು ಮಳೆ ಬಿದ್ದಿತು. ಮಂಗಳೂರಿನಲ್ಲಿ ಮಧ್ಯಾಹ್ನದ ಬಳಿಕ ಮಳೆಯ ಬಿರುಸು ಕಡಿಮೆಯಾಗಿ ಮೋಡದ ವಾತಾವರಣವಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ 82.8 ಮಿ.ಮೀ., ಮಂಗಳೂರು ತಾಲ್ಲೂಕಿನಲ್ಲಿ 77 ಮಿ.ಮೀ., ಬಂಟ್ವಾಳ ತಾಲ್ಲೂಕಿನಲ್ಲಿ 55.8 ಮಿ.ಮೀ. ಮಳೆಯಾಗಿದೆ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆಯ ಭರಾಟೆ ಕಡಿಮೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಸುರಿಯಿತು. ಧಾರವಾಡ, ಕಾರವಾರ, ಬೆಳಗಾವಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಲ್ಲಿ `ಪುನರ್ವಸು~ ಮಳೆಯಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಮಂಗಳವಾರ ಮಧ್ಯಾಹ್ನ ಅರ್ಧ ಗಂಟೆಗೂ ಅಧಿಕ ಹೊತ್ತು ಮಳೆ ಸುರಿಯಿತು. ಕಾರವಾರದಲ್ಲೂ ಧಾರಾಕಾರ ಮಳೆ ಸುರಿದಿದೆ. ಕುಮಟಾ ಮತ್ತು ಭಟ್ಕಳದಲ್ಲೂ ಮಳೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ, ಬೆಳಗಾವಿ ಹಾಗೂ ಗದಗ ಜಿಲ್ಲೆಗಳ ವಿವಿಧ ತಾಲ್ಲೂಕುಗಳಲ್ಲಿ ಸೋನೆ ಸುರಿದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT