ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಕ್ರಿಕೆಟಿಗರಿಗೆ ಬಹುಮಾನ ಪ್ರದಾನ

Last Updated 10 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಋತುವಿನ ರಣಜಿ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್‌ಮನ್ ಸಿ.ಎಂ. ಗೌತಮ್ ಹಾಗೂ ತಂಡದಲ್ಲಿದ್ದ ಎಸ್.ಕೆ. ಮೊಯಿನುದ್ದೀನ್ ಸೇರಿದಂತೆ ವಿವಿಧ ವಲಯಗಳ ಹಾಗೂ ಬೇರೆ ಬೇರೆ ವಯೋಮಾನದ ಕ್ರಿಕೆಟ್ ಆಟಗಾರರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವತಿಯಿಂದ ಬಹುಮಾನ ಪ್ರದಾನ ಮಾಡಲಾಯಿತು.

ಕೆಎಸ್‌ಸಿಎಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ 14 ಹಾಗೂ 16 ವರ್ಷದೊಳಗಿನ ವಿವಿಧ ಟೂರ್ನಿಗಳ ಚಾಂಪಿಯನ್, ರನ್ನರ್ ಅಪ್ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು. ಬಿ.ಟಿ. ರಾಮಯ್ಯ ಶೀಲ್ಡ್‌ಗಾಗಿ ನಡೆದ ಕೆಎಸ್‌ಸಿಎ ಅಂತರ ಶಾಲಾ (14 ವರ್ಷದೊಳಗಿನವರು) ಟೂರ್ನಿಯಲ್ಲಿ ಎಲ್. ಅಪ್ಪಣ್ಣ, 16 ವರ್ಷದೊಳಗಿನವರ ವಿಭಾಗದಲ್ಲಿ ಎಂ. ಹುಸೇನ್ ಅತ್ಯುತ್ತಮ ಬ್ಯಾಟ್ಸ್‌ಮನ್ ಬಹುಮಾನ ಪಡೆದರು.

ವಲ್ಟರ್ಸ್‌ ಕ್ರಿಕೆಟ್ ಕ್ಲಬ್ ಪ್ರತಿನಿಧಿಸುವ ಸಯ್ಯದ್ ಮೊಯಿನುದ್ದೀನ್ ಕೆಎಸ್‌ಸಿಎ ಗುಂಪು-1ರ `ಸರ್ ಮಿರ್ಜಾ ಇಸ್ಮಾಯಿಲ್ ಶೀಲ್ಡ್' ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಅತ್ಯುತ್ತಮ ಬೌಲರ್ ಪ್ರಶಸ್ತಿ ಪಡೆದರೆ, ಜವಾನ್ಸ್ ಕ್ರಿಕೆಟ್ ಕ್ಲಬ್‌ನ ಸಿ.ಎಂ. ಗೌತಮ್ ಅತ್ಯುತ್ತಮ ಬ್ಯಾಟ್ಸ್‌ಮನ್ ಗೌರವ ತಮ್ಮದಾಗಿಸಿಕೊಂಡರು.

`ದಕ್ಷಿಣ ಆಫ್ರಿಕಾ ಎದುರು ಟೂರ್ನಿಯನ್ನಾಡಲು ಪ್ರಕಟಿಸಲಾಗಿರುವ ಭಾರತ `ಎ' ತಂಡದಲ್ಲಿ ಸ್ಥಾನ ಲಭಿಸಬಹುದು ಎನ್ನುವ ನಿರೀಕ್ಷೆಯಿತ್ತು.ಆದರೆ, ಸ್ಥಾನ ಲಭಿಸದೇ ಇರುವುದು ಬೇಸರ ಮೂಡಿಸಿದೆ' ಎಂದು ಪ್ರಶಸ್ತಿ ಸ್ವೀಕರಿಸಿದ ನಂತರ ಗೌತಮ್ `ಪ್ರಜಾವಾಣಿ' ಎದುರು ಹೇಳಿದರು.

16 ವರ್ಷದೊಳಗಿನವರ ವಿಭಾಗದಲ್ಲಿ ಜಿ. ಪ್ರತ್ಯುಷಾ, ಜಿ. ದಿವ್ಯಾ (19 ವರ್ಷದೊಳಗಿನವರ ವಿಭಾಗ) ಮತ್ತು ಕರ್ನಾಟಕ ಸೀನಿಯರ್ ತಂಡವನ್ನು ಪ್ರತಿನಿಧಿಸುವ ಕರುಣಾ ಜೈನ್ ಅವರಿಗೂ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ನೀಡಲಾಯಿತು. ಮಾಜಿ ಕ್ರಿಕೆಟಿಗರಾದ ಜಿ.ಆರ್. ವಿಶ್ವನಾಥ್, ವೆಂಕಟೇಶ್ ಪ್ರಸಾದ್, ವಿಜಯ್ ಭಾರದ್ವಾಜ್, ಸಯ್ಯದ್ ಕಿರ್ಮಾನಿ, ಜೆ. ಅಭಿರಾಮ್, ಸುಧಾಕರ್‌ರಾವ್ ಹಾಗೂ ಕೆಎಸ್‌ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT