ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಜನತೆಗೆ ಅಪಮಾನ

Last Updated 20 ಫೆಬ್ರುವರಿ 2012, 19:35 IST
ಅಕ್ಷರ ಗಾತ್ರ

ಶಿಸ್ತಿನ ಪಕ್ಷವೆಂದು ಬಿಂಬಿಸಿಕೊಳ್ಳುತ್ತಿರುವ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಅಶಿಸ್ತಿನ ವರ್ತನೆ ಮೇರೆ ಮೀರುತ್ತಿದೆ. ಇದರ ಪರಿಣಾಮ ಕರ್ನಾಟಕದ ಜನತೆಯ ಮೇಲೆ ಆಗುತ್ತಿದೆ.
 
ನಾಲ್ಕು ವರ್ಷಗಳ ಹಿಂದೆ ರಾಜ್ಯದ ಅಧಿಕಾರ ಸೂತ್ರ ಹಿಡಿದ ಬಿಜೆಪಿ ಅಭಿವೃದ್ಧಿಯ ಜಪ ಮಾಡುತ್ತ ನಡೆಸಿದ್ದು ರಾಜ್ಯದ ನೈಸರ್ಗಿಕ ಸಂಪತ್ತಿನ ವ್ಯವಸ್ಥಿತ ಲೂಟಿ. ರಾಜ್ಯದ ಜನತೆ ಪ್ರೀತಿಯಿಂದ ನೀಡಿದ ರಾಜಕೀಯ ಅಧಿಕಾರ ಬಳಕೆಯಾಗಿದ್ದು ವೈಯಕ್ತಿಕ ಆಸ್ತಿ ಗಳಿಕೆಗೆ. ಹಣ ಮತ್ತು ಆಸ್ತಿಯನ್ನು ಮಾಡಿಕೊಳ್ಳುವುದಕ್ಕೆ ಕಾನೂನನ್ನು ಮನಬಂದಂತೆ ತಿರುಚಿಕೊಂಡ ಪ್ರಕರಣಗಳು ನ್ಯಾಯಾಲಯಗಳ ವೆುಟ್ಟಿಲು ಏರಿವೆ.
 
ಭ್ರಷ್ಟಾಚಾರ, ಅತ್ಯಾಚಾರದಂಥ ಹಗರಣಗಳಲ್ಲಿ ಸಿಲುಕಿಕೊಂಡ ಕೆಲವು ಸಚಿವರು ರಾಜೀನಾಮೆ ನೀಡಿದರೆ, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ ಸಚಿವರೊಬ್ಬರು ಇನ್ನೂ ಜೈಲಿನಲ್ಲಿದ್ದಾರೆ.

ಬಿಜೆಪಿ, ತಾನು ಪ್ರತಿಪಾದಿಸುತ್ತಿದ್ದ ಆದರ್ಶಗಳನ್ನು ಅನುಷ್ಠಾನಗೊಳ್ಳುತ್ತದೆ; ಸ್ವಚ್ಛ, ಪರಿಶುದ್ಧ ಆಡಳಿತ ನೀಡುದೆ ಎಂಬ ಜನತೆಯ ನಿರೀಕ್ಷೆ ಮರೀಚಿಕೆಯಾಗಿದೆ. ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಭ್ರಷ್ಟಾಚಾರದ ಆರೋಪ ಇದ್ದ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಿದ ಬಿಜೆಪಿ ವರಿಷ್ಠ ಮಂಡಲಿ, ಆ ಕಾರಣಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ವರ್ಚಸ್ಸನ್ನು ರಕ್ಷಿಸಿಕೊಳ್ಳುವ ಪ್ರಯತ್ನ ನಡೆಸಿತಾದರೂ, ಅದರಿಂದ ರಾಜ್ಯದ ಆಡಳಿತ ನಿಷ್ಕ್ರಿಯವಾಗುವ ಹಂತಕ್ಕೆ ಬಂದಿರುವುದನ್ನು ನಿರ್ಲಕ್ಷಿಸಿದೆ. ಯಡಿಯೂರಪ್ಪ ಅವರ ಸ್ಥಾನಕ್ಕೆ ಬಂದಿರುವ ಡಿ.ವಿ. ಸದಾನಂದಗೌಡರು ಆಡಳಿತಾತ್ಮಕವಾಗಿ ದಿಟ್ಟ ನಿರ್ಧಾರ ಕೈಗೊಳ್ಳುವುದಕ್ಕೂ ಆಗದ ಸ್ಥಿತಿ ಮುಂದುವರಿದಿದೆ.

ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಿದ ಬಿಜೆಪಿ ವರಿಷ್ಠರಿಗೆ, ರಾಜ್ಯದಲ್ಲಿ ಭ್ರಷ್ಟಾಚಾರ ತನಿಖೆಗೆ ರೂಪುಗೊಂಡ ಲೋಕಾಯುಕ್ತ ವ್ಯವಸ್ಥೆ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಕ್ಷದ ಪ್ರಭಾವಿಗಳಿಂದಲೇ ದುರ್ಬಲಗೊಳ್ಳುತ್ತಿರುವುದನ್ನು ತಡೆಯಲು ಆಗಿಲ್ಲ.
 
ಸಚಿವರು ವಾರದಲ್ಲಿ ಐದು ದಿನ ಆಡಳಿತ ಕಚೇರಿಗೆ ಹಾಜರಾಗಿ ಕಡತಗಳನ್ನು ನೋಡಬೇಕೆಂಬ ಸದಾನಂದಗೌಡರ ಆಣತಿಗೆ ಬೆಲೆ ಸಿಕ್ಕಿಲ್ಲ. ತಮ್ಮ ಆಣತಿ ನಿರ್ಲಕ್ಷಿದ್ದಕ್ಕೆ ಅವರನ್ನು ಪ್ರಶ್ನಿಸಲೂ ಅವರಿಗೆ ಆಗುತ್ತಿಲ್ಲ.
 
ಪೂರ್ಣ ಪ್ರಮಾಣದ ಸಂಪುಟ ರಚನೆಗೆ ವರಿಷ್ಠ ಮಂಡಲಿ ಅನುಮತಿ ಕೊಡದಿರುವ ಕಾರಣ ಹೆಚ್ಚಿನ ಖಾತೆಗಳ ಒತ್ತಡವೂ ಮುಖ್ಯಮಂತ್ರಿಯನ್ನು ಬಾಧಿಸುತ್ತಿದೆ. ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳೆಲ್ಲ ತಮ್ಮ ಬಳಿಯೇ ಇರುವುದರಿಂದ ಯಾವುದಕ್ಕೂ ನ್ಯಾಯ ಒದಗಿಸಲಾಗದಂಥ ಸ್ಥಿತಿ ಅವರದಾಗಿದೆ.
 
ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಲೋಕಾಯುಕ್ತ ವರದಿಯೇ ನೆನೆಗುದಿಯಲ್ಲಿರುವಂತೆ ಸನ್ನಿವೇಶ ಸೃಷ್ಟಿಸಿರುವ ಹುಮ್ಮಸ್ಸಿನಲ್ಲಿರುವ ಯಡಿಯೂರಪ್ಪ, ಅಧಿಕಾರ ಮರಳಿ ಪಡೆಯಲು ನಿತ್ಯವೂ ನಡೆಸುತ್ತಿರುವ ಕಸರತ್ತನ್ನು ಎದುರಿಸುವುದರಲ್ಲಿಯೇ ಅವರ ಶ್ರಮವೆಲ್ಲ ಬಳಕೆಯಾಗುತ್ತಿದೆ.

ವ್ಯಕ್ತಿಪ್ರತಿಷ್ಠೆಯ ಎದುರು ಪಕ್ಷದ ನೀತಿ ಸಿದ್ಧಾಂತಗಳು ಶರಣಾಗುವಂಥ ಪರಿಸ್ಥಿತಿಯನ್ನು ಉಳಿಸಿರುವುದು ಪಕ್ಷವನ್ನು ಅದರ ಶಿಸ್ತು ಮತ್ತು ನೈತಿಕತೆಯನ್ನು ನೋಡಿ ಅಧಿಕಾರಕ್ಕೆ ತಂದ ರಾಜ್ಯದ ಜನತೆಗೆ ಅಪಮಾನ. ಇದನ್ನು ಬಿಜೆಪಿ ವರಿಷ್ಠ ಮಂಡಲಿ ಅರ್ಥ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT