ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಜನಪದ ಸಂಸ್ಕೃತಿ ಅನಾವರಣ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ:  ಇಲ್ಲಿ ಗುರುವಾರ ಸಡಗರದಿಂದ ಆಚರಣೆಗೊಂಡ 63ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ, ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಪ್ರತಿನಿಧಿಸಿದ 13 ಸ್ತಬ್ಧಚಿತ್ರಗಳ ಪೈಕಿ ಕರ್ನಾಟಕದ `ಭೂತಾರಾಧನೆ~ಯೂ ಒಂದಾಗಿತ್ತು.

ರಾಜ್ಯದ ಕರಾವಳಿ ಭಾಗದ ಆಚರಣೆಯಾದ `ಭೂತಾರಾಧನೆ~ಯನ್ನು ಬಿಂಬಿಸುವ ಈ ಸ್ತಬ್ಧಚಿತ್ರವನ್ನು ರೂಪಿಸಲು ಹಿಡಿದ ಸಮಯ ಬರೋಬ್ಬರಿ 60ರಿಂದ 65 ದಿನಗಳು. ಈ ಪೈಕಿ ಮೊದಲ 30 ದಿನ ಬೆಂಗಳೂರಿನಲ್ಲಿ ಕೆಲಸ ಮಾಡಿ, ನಂತರದ 35 ದಿನ ಗಣರಾಜ್ಯೋತ್ಸವ ಪಥಸಂಚಲನ ನಡೆಯುವ ಇಲ್ಲಿನ ರಂಗಶಾಲಾ ಮೈದಾನದಲ್ಲಿ ಅಂತಿಮ ರೂಪ ನೀಡಲಾಯಿತು.

30 ಲಕ್ಷ ರೂಪಾಯಿ ವೆಚ್ಚದ ಈ ಸ್ತಬ್ಧಚಿತ್ರ ರೂಪಿಸಲು ಕಲಾವಿದರಾದ ಶಶಿಧರ ಅಡಪ, ಶ್ರೀನಿವಾಸ ಜಿ. ಕಪ್ಪಣ್ಣ, ರವಿ ಸಿರಿವರ ಮತ್ತಿತರರನ್ನು ಒಳಗೊಂಡ ಸುಮಾರು 45 ಜನರ ತಂಡವೇ ದುಡಿದಿದೆ.

ಸ್ಥಾನಕ್ಕಾಗಿ ಪೈಪೋಟಿ: ರಾಷ್ಟ್ರದ ರಾಜಧಾನಿಯಲ್ಲಿ ನಡೆಯುವ ಪ್ರತಿಷ್ಠಿತ ಗಣರಾಜ್ಯೋತ್ಸವ ಪಥಸಂಚಲನಕ್ಕೆ 28 ರಾಜ್ಯಗಳ ಪೈಕಿ 13 ರಾಜ್ಯಗಳ ಸ್ತಬ್ಧಚಿತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಜಮ್ಮು ಕಾಶ್ಮೀರ ಹಾಗೂ ಈಶಾನ್ಯ ಭಾಗದ ಮೂರು ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಪ್ರತಿ ವರ್ಷವೂ ಅವಕಾಶ ಮೀಸಲಿರುತ್ತದೆ. ಉಳಿದಂತೆ 9 ಸ್ಥಾನಗಳಿಗಾಗಿ ಇತರ ರಾಜ್ಯಗಳು ಪೈಪೋಟಿ ನಡೆಸಬೇಕು.

ಸೇನಾ ಇಲಾಖೆ ನೇಮಿಸಿದ ಸಮಿತಿಯು ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡುತ್ತದೆ. ಸಂಗೀತ, ನೃತ್ಯ ಸಂಯೋಜನೆ, ಚರಿತ್ರೆ ಸೇರಿದಂತೆ ಹಲವು ಕ್ಷೇತ್ರಗಳ ತಜ್ಞರು ಈ ಸಮಿತಿಯಲ್ಲಿ ಇರುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ರಾಜ್ಯಗಳು ಮೊದಲ ಹಂತದಲ್ಲಿ ಕೆಲವು ಪರಿಕಲ್ಪನೆಗಳನ್ನು ಸಿದ್ಧಪಡಿಸಿ ಸಮಿತಿಗೆ ಕಳುಹಿಸಿಕೊಡುತ್ತವೆ. ರಾಜ್ಯದಿಂದ ಈ ಬಾರಿ ಹಂಪಿ, ರಂಗನತಿಟ್ಟು, ಗೋಲಗುಂಬಜ್ ಮತ್ತು ಭೂತಾರಾಧನೆ ಪರಿಕಲ್ಪನೆಗಳನ್ನು ಕಳುಹಿಸಲಾಗಿತ್ತು. ಆದರೆ ಅವುಗಳಲ್ಲಿ ಅಂತಿಮವಾಗಿ ಸಮಿತಿಯ ಮೆಚ್ಚುಗೆಗೆ ಪಾತ್ರವಾದದ್ದು `ಭೂತಾರಾಧನೆ~.

ರಾಜ್ಯದ ಸಾಧನೆ: ಇದೂ ಸೇರಿದಂತೆ ರಾಜ್ಯವು ಸತತ ಮೂರನೇ ಬಾರಿಗೆ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಕಳೆದ ವರ್ಷ ಪ್ರದರ್ಶನಗೊಂಡ `ಬಿದರಿ ಕಲೆ~ ಎರಡನೇ ಬಹುಮಾನಕ್ಕೆ ಪಾತ್ರವಾಗಿತ್ತು. ಆ ಮುನ್ನ 2010ರಲ್ಲಿ `ಪಟ್ಟದಕಲ್ಲು~ ಸ್ತಬ್ಧಚಿತ್ರ `ಉತ್ತಮ ಪ್ರತಿಕೃತಿ~ ಪುರಸ್ಕಾರ ಪಡೆದಿತ್ತು. ಅದಕ್ಕೆ ಮುನ್ನ 2006ರಲ್ಲಿ `ಮಹಾಮಸ್ತಕಾಭಿಷೇಕ~ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ ಸಂದಿತ್ತು.

ಈ ಬಾರಿಯ ಬಹುಮಾನಗಳು ಇದೇ 30ರಂದು ಘೋಷಣೆಯಾಗಲಿದ್ದು, ಆಯ್ಕೆಯಾದ ತಂಡಗಳನ್ನು ಆಹ್ವಾನಿಸಿ ಸದಸ್ಯರಿಗೆ ಚಹಾಕೂಟ ಏರ್ಪಡಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT