ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ನಿಲುವಿಗೆ `ಸುಪ್ರೀಂ' ಸಹಮತ

ಕಾವೇರಿ: ತಮಿಳುನಾಡು ಬೇಡಿಕೆಗೆ ನಕಾರ
Last Updated 29 ಜನವರಿ 2013, 20:02 IST
ಅಕ್ಷರ ಗಾತ್ರ

ನವದೆಹಲಿ: ಸಾಂಬಾ ಬೆಳೆ ರಕ್ಷಣೆಗಾಗಿ ಹೆಚ್ಚುವರಿ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಬೇಕು ಎಂಬ ತಮಿಳುನಾಡು ಬೇಡಿಕೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಳ್ಳಿ ಹಾಕಿದೆ. ಇದರಿಂದ ಸದ್ಯಕ್ಕೆ ಕರ್ನಾಟಕ ನಿಟ್ಟುಸಿರು ಬಿಡುವಂತಾಗಿದೆ.

`ಈಗ ಲಭ್ಯವಿರುವ ನೀರು ರಾಜ್ಯದ ಕುಡಿಯುವ ನೀರಿನ ಅಗತ್ಯ ಪೂರೈಸಲು ಬೇಕು. ಆದ್ದರಿಂದ ಈ ಹಂತದಲ್ಲಿ ನೀರು ಬಿಡುವುದು ಕಷ್ಟ' ಎಂದು ಕರ್ನಾಟಕದ ಪರ ವಕೀಲ ಎಫ್.ಎಸ್. ನಾರಿಮನ್ ಅವರು ನ್ಯಾಯಮೂರ್ತಿ ಆರ್.ಎಂ. ಲೋಧಾ ಮತ್ತು ಜೆ. ಚಲಮೇಶ್ವರ ಅವರ ಪೀಠದ ಮುಂದೆ ವಾದಿಸಿದರು.  

`ತಮಿಳುನಾಡಿನ ನೀರಾವರಿಗೂ ತೊಂದರೆಯಾಗಿದೆ ಎಂಬುದನ್ನು ನಾವು ಅಲ್ಲಗಳೆಯುತ್ತಿಲ್ಲ. ಆದರೆ ನಮಗೂ ಕಷ್ಟ ಇದೆ. ನಮಗೂ ಅವರಿಗೂ ಈ ವಿಷಯದಲ್ಲಿ ವ್ಯತ್ಯಾಸವಿದೆ. ನಾನು ಇಲ್ಲಿ ಉಲ್ಲೇಖಿಸುತ್ತಿರುವುದು ಕರ್ನಾಟಕದ ಕುಡಿವ ನೀರಿನ ಅಗತ್ಯಗಳಿಗೆ ಕಡಿಮೆ ಬೀಳುವ ನೀರಿನ ಪ್ರಮಾಣದ ಬಗ್ಗೆ' ಎಂದು ಅವರು ಪೀಠದ ಗಮನಕ್ಕೆ ತಂದರು.

`ಕಾವೇರಿ ನದಿಯಿಂದ ಮತ್ತಷ್ಟು ನೀರು ಬಿಡುವಂತೆ ಕರ್ನಾಟಕ್ಕೆ ಆದೇಶ ನೀಡಲು ನಿರಾಕರಿಸಿರುವ ಕಾವೇರಿ ಉಸ್ತುವಾರಿ ಸಮಿತಿ ನಿರ್ಧಾರವನ್ನು ತಮಿಳುನಾಡು ಏಕಾಏಕಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವಂತಿಲ್ಲ. ಅದು ಮೊದಲು ಪ್ರಧಾನಿ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರದ ಮುಂದೆ ಹೋಗಬೇಕು. ಆ ನಂತರವೇ ಸುಪ್ರೀಂ ಕೋರ್ಟ್‌ಗೆ ಬರಬಹುದು' ಎಂಬ  ಕರ್ನಾಟಕದ ನಿಲುವಿಗೆ ನ್ಯಾಯಮೂರ್ತಿಗಳು ಸಹಮತ ವ್ಯಕ್ತಪಡಿಸಿದರು.

`ಉಸ್ತುವಾರಿ ಸಮಿತಿ ಆದೇಶವನ್ನು ತಾರ್ಕಿಕವಾಗಿ ಒಪ್ಪಿಕೊಳ್ಳುತ್ತೇವೆ. ಅದರ ಬಗ್ಗೆ ಆಕ್ಷೇಪ ಇದ್ದರೆ ಪ್ರಧಾನಿ ಅಧ್ಯಕ್ಷತೆಯ ಪ್ರಾಧಿಕಾರದ ಗಮನಕ್ಕೆ ತನ್ನಿ.  ಅಲ್ಲಿ ಒಂದು ವೇಳೆ ನಿಮಗೆ ನ್ಯಾಯ ದೊರಕಿಲ್ಲವೆಂಬ ಭಾವನೆ ಮೂಡಿದಲ್ಲಿ ಈ ನ್ಯಾಯಾಲಯಕ್ಕೆ ಬನ್ನಿ' ಎಂದು ಪೀಠ ತಮಿಳುನಾಡಿಗೆ ಸೂಚಿಸಿತು.

ಸಾಂಬಾ ಬೆಳೆ ರಕ್ಷಣೆಗಾಗಿ ತಕ್ಷಣ 12 ಟಿಎಂಸಿ ಅಡಿ ನೀರನ್ನು ಬಿಡಲು ಕರ್ನಾಟಕಕ್ಕೆ ಆದೇಶಿಸಬೇಕು ಎಂದು ತಮಿಳುನಾಡು ಅರ್ಜಿ ಸಲ್ಲಿಸಿತ್ತು. `ಕರ್ನಾಟಕಕ್ಕೆ ತುರ್ತಾಗಿ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ' ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.

`ನೀರು ಹಂಚಿಕೆಗಾಗಿ ಕೆಲವು ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಇದನ್ನು ನೀವು ಏಕೆ ಪಾಲಿಸುತ್ತಿಲ್ಲ' ಎಂದು ತಮಿಳುನಾಡು ಪರ ವಕೀಲ ಸಿ.ಎಸ್.ವೈದ್ಯನಾಥನ್ ಅವರನ್ನು ನ್ಯಾಯಪೀಠ ಪ್ರಶ್ನಿಸಿತು. ಈ ಹಂತದಲ್ಲಿ ವೈದ್ಯನಾಥನ್ ಅವರು ವಿವರಣೆ ನೀಡಲು ಪ್ರಯತ್ನಿಸಿದರಾದರೂ, ಪೀಠ ಅದನ್ನು ಒಪ್ಪಿಕೊಳ್ಳಲಿಲ್ಲ.

`ಉಸ್ತುವಾರಿ ಸಮಿತಿಯು ತಜ್ಞರ ಸಲಹೆ ಪಡೆದೇ ನಿರ್ದೇಶನ ನೀಡಿದೆ. ಹೀಗಿರುವಾಗ ಕರ್ನಾಟಕ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲಬೇಕೇ' ಎಂದು ನಾರಿಮನ್ ಪ್ರಶ್ನಿಸಿದರು.

ಈ ಹಂತದಲ್ಲಿ ನಾರಿಮನ್ ಅವರ ವಾದವನ್ನು ಒಪ್ಪಿಕೊಂಡ ನ್ಯಾಯಪೀಠವು, `ನಿಮ್ಮ ಜಲಾಶಯಗಳಲ್ಲಿ 16 ಟಿಎಂಸಿ ನೀರಿದೆ. ಉಸ್ತುವಾರಿ ಸಮಿತಿ ಲೆಕ್ಕಾಚಾರದ ಪ್ರಕಾರ ನಿಮ್ಮ ಕುಡಿವ ನೀರಿನ ಅಗತ್ಯ 16 ಟಿಎಂಸಿಗಿಂತಲೂ ಹೆಚ್ಚು' ಎಂದು ಹೇಳಿತು.

`ಉಸ್ತುವಾರಿ ಸಮಿತಿಯು ನೀರು ಹಂಚಿಕೆಯಲ್ಲಿ ಕಾವೇರಿ ನ್ಯಾಯಮಂಡಳಿಯ ಆದೇಶವನ್ನೂ ನಿರ್ಲಕ್ಷ್ಯಿಸಿದೆ' ಎಂಬ ವೈದ್ಯನಾಥನ್ ವಾದವನ್ನು ನಾರಿಮನ್ ವಿರೋಧಿಸಿದರು. `ಕುಡಿವ ನೀರಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿ ತನ್ನ ಮಧ್ಯಂತರ ಆದೇಶದಲ್ಲಿ 1992ರ ಜನಸಂಖ್ಯೆ ಆಧರಿಸಿ ನೀರು ಹಂಚಿಕೆಗೆ ಆದೇಶಿಸಿತ್ತು. ಆದರೆ, 1992 ಹಾಗೂ 2013ರ ಜನಸಂಖ್ಯೆಯಲ್ಲಿ ಭಾರಿ ವ್ಯತ್ಯಾಸವಾಗಿರುವುದರಿಂದ ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು' ಎಂದು ನಾರಿಮನ್ ಪ್ರತಿಪಾದಿಸಿದರು.

`ಪ್ರಸ್ತುತ ಒಂದು ವರ್ಷಕ್ಕೆ ಬೆಂಗಳೂರು ನಗರಕ್ಕೆ 28.29 ಟಿಎಂಸಿ ಅಡಿ, 48 ಪಟ್ಟಣಗಳು ಮತ್ತು ಗ್ರಾಮಾಂತರ ಪ್ರದೇಶಕ್ಕೆ 34.29 ಟಿಎಂಸಿ ಅಡಿ ನೀರು ಅಗತ್ಯವಾಗಿದೆ.  ಈ ಪೈಕಿ ಫೆಬ್ರುವರಿಯಿಂದ ಮೇ ವರೆಗೆ ಕ್ರಮವಾಗಿ 9.67 ಮತ್ತು 11.67 ಟಿಎಂಸಿ ಅಡಿ ನೀರು ಬೇಕು' ಎಂದು ನಾರಿಮನ್ ಅವರು ಅಂಕಿ ಅಂಶಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು.

`ಕರ್ನಾಟಕದ ಕುಡಿವ ನೀರಿನ ಅಗತ್ಯ 17.22 ಟಿಎಂಸಿ ಅಡಿ ಮಾತ್ರ ಎಂಬ ನ್ಯಾಯಮಂಡಳಿ ಆದೇಶ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗ್ದ್ದಿದು, ವಿಚಾರಣೆಗೆ ಬಾಕಿ ಇದೆ' ಎಂದು ಅವರು ಹೇಳಿದರು.

ತಮಿಳುನಾಡು ಅರ್ಜಿ ಬಗ್ಗೆ ಮೂರು ದಿನಗಳ ಒಳಗೆ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಕರ್ನಾಟಕಕ್ಕೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆಬ್ರುವರಿ 4ಕ್ಕೆ ಮುಂದೂಡಿತು.

ಬೆಂಗಳೂರಿಗೆ ಬೇಕು 24 ಟಿಎಂಸಿ
ಪ್ರಸ್ತುತ ಬೆಂಗಳೂರು ನಗರದ 89.99 ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು ಪೂರೈಸಲು 18 ರಿಂದ 24 ಟಿಎಂಸಿ ಅಡಿಯಷ್ಟು ಕಾವೇರಿ ನೀರಿನ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್‌ಗೆ ಮಂಗಳವಾರ ರಾಜ್ಯ ಪ್ರಮಾಣ ಪತ್ರ ಸಲ್ಲಿಸಿ ತಿಳಿಸಿದೆ.

2001ರ ಜನಗಣತಿ ಪ್ರಕಾರ ಬೆಂಗಳೂರಿನಲ್ಲಿ 57.01 ಲಕ್ಷದಷ್ಟಿದ್ದ ಜನಸಂಖ್ಯೆ 2011ರ ಹೊತ್ತಿಗೆ 84.99 ಲಕ್ಷ ಏರಿತು. ಸಂಖ್ಯೆಗೆ ಅನುಗುಣವಾಗಿ ನೀರಿನ ಬೇಡಿಕೆಯಲ್ಲೂ ಏರಿಕೆಯಾಗಿದೆ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ. ಬೆಂಗಳೂರು ನಗರದಲ್ಲಿ ಪ್ರತಿ ವ್ಯಕ್ತಿಗೆ ನಿತ್ಯ ಸರಾಸರಿ 150 ರಿಂದ 200 ಲೀಟರ್ ನೀರಿನ ಅಗತ್ಯವಿದೆ. ಈ ಪ್ರಮಾಣದಂತೆ ಮುಂದಿನ ನಾಲ್ಕು ತಿಂಗಳಿಗಾಗಿ 6 ರಿಂದ 8 ಟಿಎಂಸಿ ಅಡಿ ನೀರು ಬೇಕಾಗುತ್ತದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT