ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಮೀನು ದೋಚಿದ ಗೋವಾ

Last Updated 11 ಡಿಸೆಂಬರ್ 2012, 12:45 IST
ಅಕ್ಷರ ಗಾತ್ರ

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ರಾಜ್ಯದ ಮಂಗಳೂರು ಹಾಗೂ ಮಲ್ಪೆ ಮೀನುಗಾರಿಕೆ ಬಂದರಿಗೆ ಸೇರಿದ ಐದು ಆಳ ಸಮುದ್ರ ಮೀನುಗಾರಿಕೆ ಟ್ರಾಲರ್ ದೋಣಿಗಳನ್ನು ಗೋವಾ ರಾಜ್ಯದ ಪಣಜಿ ಮೀನುಗಾರರು ವಶಕ್ಕೆ ಪಡೆದುಕೊಂಡು, ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳನ್ನು ದೋಚಿರುವ ಘಟನೆ ಸೋಮವಾರ ನಡೆದಿದೆ.

ದೊಣ್ಣೆ, ಬಡಿಗೆ ಹಿಡಿದುಕೊಂಡು ಬಂದ ಪಣಜಿಯ ಮೀನುಗಾರರರು,  ಮಂಗಳೂರಿನ 'ಸಾಗರ ಕುಸುಮಾ', 'ಸಿದ್ಧಿವಿನಾಯಕ',  `ಮತ್ಸ್ಯಶ್ರಿ', `ಓಂ ಭಗವತಿ', ಹಾಗೂ ಮಲ್ಪೆಯ 'ಓಶಿಯನ್ ಕಿಂಗ್', ಮತ್ತು ಶಿವಛಾಯಾ' ಟ್ರಾಲರ್ ದೋಣಿಗಳನ್ನು ಪಣಜಿ ಬಂದರಿಗೆ ಕೊಂಡೊಯ್ದರು.

`ಸ್ಥಳೀಯ ಮೀನುಗಾರರು ದೊಣ್ಣೆ, ಬಡಿಗೆಗಳನ್ನು ಹಿಡಿದುಕೊಂಡು ಏಕಾಏಕಿ ದೋಣಿಗಳನ್ನು ಏರಿ, ನೀವು ಹೆದರಬೇಡಿ, ನಾವು ಹಲ್ಲೆ ನಡೆಸುವುದಿಲ್ಲ. ಇಲ್ಲಿ ಸ್ಪೀಡ್ ಎಂಜಿನ್ ಬಳಸಿ ಮೀನುಗಾರಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ನಿಮ್ಮ ದೋಣಿಗಳ ಮಾಲೀಕರನ್ನು ಕರೆಯಿಸಿ ಮಾತುಕತೆ ನಡೆಸಿದ ಬಳಿಕ ನಿಮ್ಮನ್ನು ಕಳುಹಿಸುತ್ತೇವೆ ಎಂದಿದ್ದರು. ಆದರೆ ಗೋವಾದ ಮೀನುಗಾರರು ನಮ್ಮ ದೋಣಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳನ್ನು ದೋಚುತ್ತಿದ್ದಾರೆ' ಎಂದು ಟ್ರಾಲರ್ ದೋಣಿಯ ಮೀನುಗಾರರು 'ಪ್ರಜಾವಾಣಿ'ಗೆ ತಿಳಿಸಿದರು.

ಈ ಘಟನೆಯಿಂದ ಐದು ದೋಣಿಯಲ್ಲಿರುವ ಸುಮಾರು 50 ಮೀನುಗಾರರು  ಆತಂಕಗೊಂಡಿದ್ದಾರೆ. ಗೋವಾದ ಕರಾವಳಿ ಕಾವಲು ಪಡೆಯ ಪೊಲೀಸರು ಮೀನುಗಾರರ ನೆರವಿಗೆ ಬಾರದೇ ಇರುವುದು ಮೀನುಗಾರರ ಆತಂಕ ಇನ್ನಷ್ಟು ಹೆಚ್ಚಿಸಿದೆ.

`ರಸ್ತೆ ಅಭಿವೃದ್ಧಿಗೆ 12.5 ಕೋಟಿ'
ಕಾರವಾರ: ಕೋಡಿಬಾಗ-ಕಾರವಾರ ಮುಖ್ಯ ರಸ್ತೆಯನ್ನು ರೂ 12.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಸ್ನೋಟಿಕರ್ ಹೇಳಿದರು.

ನಗರದ ಕೋಡಿಬಾಗದಲ್ಲಿ ಕೆಎಫ್‌ಡಿಸಿ ಅನುದಾನದಡಿ ನಿರ್ಮಿಸಿರುವ ಮೀನು ಮಾರುಕಟ್ಟೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರಸಭೆಗೆ ರೂ. 30 ಕೋಟಿ ಅಭಿವೃದ್ಧಿ ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ. ಇದರಲ್ಲಿ ಹೆಚ್ಚಿನ ಅನುದಾನವನ್ನು ರಸ್ತೆಗಳ ಅಭಿವೃದ್ಧಿಗೆ ಬಳಸಲು ಸೂಚಿಸಲಾಗಿದೆ ಎಂದರು.

ಅಂಕೋಲಾ ಹಾಗೂ ಕಾರವಾರ ತಾಲ್ಲೂಕುಗಳಲ್ಲಿ ರೂ. 90 ಕೋಟಿ ರೂಪಾಯಿ ವೆಚ್ಚದಲ್ಲಿ ಜಟ್ಟಿ ಕಾಮಗಾರಿಗಳು ಪ್ರಗತಿಯಲ್ಲಿವೆ. ತಾಲ್ಲೂಕಿನ ಮಾಜಾಳಿ ಹಾಗೂ ಅಂಕೋಲಾ ತಾಲ್ಲೂಕಿನ ಕೇಣಿ ಸೇರಿದಂತೆ ಅವಶ್ಯಕತೆ ಇರುವ ಕಡೆಗಳಲ್ಲಿ ಮೀನುಗಾರಿಕೆ ಜಟ್ಟಿಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಲು ಇದೇ 26ರಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕಾರವಾರಕ್ಕೆ ಆಗಮಿಸಲಿದ್ದಾರೆ. ಗೋವಾ ರಾಜ್ಯಕ್ಕೆ ಮರಳು ಸಾಗಣೆ ಮಾಡುವ ಕುರಿತಂತೆ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ ಎಂದರು.

ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ, ಉಪಾಧ್ಯಕ್ಷ ನಯನಾ ಮಾಳಸೇಕರ್, ಸದಸ್ಯರಾದ ರಂಜು ಮಾಸೇಲಕರ, ಮಹೇಶ ತಾಮಸೆ, ಡಿಗಂಬರ ಹಳದನಕರ, ಉ.ಕ. ಜಿಲ್ಲಾ ಮೀನುಗಾರರ ಸಹಕಾರಿ ಮಾರುಕಟ್ಟೆ ಅಧ್ಯಕ್ಷ ಗಣಪತಿ ಮಾಂಗ್ರೆ ಹಾಜರಿದ್ದರು.

ಕೆಎಫ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಮಡ್ಡಿಕೇರಿ ಪ್ರಾಸ್ತಾವಿಕ ಮಾತನಾಡಿದರು. ನಗರಸಭೆ ಆಯುಕ್ತ ಉದಯಕುಮಾರ ಶೆಟ್ಟಿ ಸ್ವಾಗತಿಸಿದರು.

ಯಕ್ಷಗಾನ ಪ್ರದರ್ಶನ
ಸಿದ್ದಾಪುರ: ತಾಲ್ಲೂಕಿನ ಕೋಡಿಗದ್ದೆ- ದೊಡ್ಮನೆಯ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ ಮತ್ತು ಅತಿಥಿ ಕಲಾವಿದರ ಆಶ್ರಯದಲ್ಲಿ ಬೋಳಸುತ್ತಿನ ಗಣೇಶ ಭಾಗವತರ ಸ್ಮರಣಾರ್ಥ `ಕಂಸ ದಿಗ್ವಿಜಯ ಮತ್ತು ಕಂಸ ವಧೆ' ಎಂಬ ಯಕ್ಷಗಾನ ಪ್ರದರ್ಶನವನ್ನು ಬೋಳಸುತ್ತಿನಲ್ಲಿ ಈಚೆಗೆ ಏರ್ಪಡಿಸಲಾಗಿತ್ತು.

ಯಕ್ಷಗಾನದ ಹಿಮ್ಮೇಳದಲ್ಲಿ ಎನ್.ಜಿ. ಹೆಗಡೆ ಬೋಳಸುತ್ತು (ಭಾಗವತರು), ಶ್ರೀಪತಿ ಹೆಗಡೆ ಕಂಚಿಮನೆ (ಮೃದಂಗ), ಗಂಗಾಧರ ಹೆಗಡೆ ಕಂಚಿಮನೆ (ಚಂಡೆ), ಮುಮ್ಮೇಳದಲ್ಲಿ ಪಾತ್ರಧಾರಿಗಳಾಗಿ ಗಂಗಾಧರ ಹೆಗಡೆ ಕಟ್ಟಿನಹಕ್ಲು (ಬಾಲಕಂಸ), ಮಹಾಬಲೇಶ್ವರ ಭಟ್ಟ ಇಟಗಿ (ಅಸ್ತಿ ಮತ್ತು ಕೃಷ್ಣ), ಈಶ್ವರ ಅಬ್ಬಿಗದ್ದೆ (ನಾರದ), ವೆಂಕಟ್ರಮಣ ಹೆಗಡೆ ಮಾದ್ನಕಳ್ಳು (ಹಾಸ್ಯಪಾತ್ರ), ಕೇಶವ ಹೆಗಡೆ ಭಾಗವಹಿಸ್ದ್ದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT