ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ರೈತರಿಗೆ ಇಸ್ರೇಲ್‌ ತಾಂತ್ರಿಕ ನೆರವು

Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ಜೆರುಸಲೇಂ: ಕರ್ನಾಟಕದಲ್ಲಿ ಹಣ್ಣು- ಮತ್ತು ತರಕಾರಿ  ಬೆಳೆಗಾರರಿಗೆ ಅತ್ಯಾಧುನಿಕ ತಾಂತ್ರಿಕ ನೆರವು ನೀಡಲು ಇಸ್ರೇಲ್ ಮುಂದಾಗಿದೆ. ಅಲ್ಲದೆ ರಾಜ್ಯದ ನಾಲ್ಕು ಕಡೆ ಹಣ್ಣು, ತರಕಾರಿ, ಮಾವು ಬೆಳೆಗೆ ಅಗತ್ಯವಾದ ತಂತ್ರಜ್ಞಾನ ಹಾಗೂ ಕೊಳಚೆ ನೀರು ಸಂಸ್ಕರಣಾ ಪ್ರಕ್ರಿಯೆ ಕುರಿತು ತರಬೇತಿ ಕೊಡಲಿದೆ.
ಈ ಯೋಜನೆಗಳನ್ನು ಇಸ್ರೇಲ್‌ನ ಅಂತರ­ರಾಷ್ಟ್ರೀಯ ಅಭಿವೃದ್ಧಿ ಸಹಕಾರ ಇಲಾಖೆ (ಮಶಾವ್) ಹಾಗೂ ಅಂತರರಾಷ್ಟೀಯ ಕೃಷಿ ಅಭಿವೃದ್ಧಿ ಮತ್ತು ಸಹಕಾರ ಕೇಂದ್ರ (ಸಿನಾಡ್ಕೊ) ನಿರ್ವಹಿಸಲಿವೆ.

ಇಲ್ಲಿಗೆ ಭೇಟಿ ನೀಡಿರುವ ಭಾರತೀಯ ಪತ್ರಕರ್ತರ ನಿಯೋಗದ ಜತೆ ಮಾತನಾಡಿದ ‘ಮಶಾವ್’ ರಾಯಭಾರಿ ಜಿಯೊರಾ ಬೆಚರ್, ‘ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ಜಗತ್ತಿನ ಗಮನ ಸೆಳೆಯುವಂಥ ಸಾಧನೆ ಮಾಡಿದೆ. ಆದರೆ ಇದಷ್ಟೇ ನಮ್ಮ ಉದ್ದೇಶವಲ್ಲ. ನಮ್ಮಲ್ಲಿನ ತಂತ್ರಜ್ಞಾನವನ್ನು ಬೇರೆ ದೇಶಗಳಿಗೂ ಕೊಡಬೇಕು ಎಂಬುದು ನಮ್ಮ ಆಸೆ. ಅದರಲ್ಲೂ ಕೃಷಿ ಪ್ರಧಾನ ದೇಶವಾದ ಭಾರತದ ಜತೆ ನಮ್ಮ ತಂತ್ರಜ್ಞಾನ ಹಂಚಿಕೊಳ್ಳಲು ಉತ್ಸುಕವಾಗಿದ್ದೇವೆ’ ಎಂದು ಹೇಳಿದರು.
ಭಾರತ–ಇಸ್ರೇಲ್ ಮಧ್ಯೆ ೨೦೦೮ರಲ್ಲಿ ಒಪ್ಪಂದವಾ­ಗಿದ್ದು, ಇದರ ಅನುಸಾರ ಭಾರತದ ವಿವಿಧೆಡೆ ಕೌಶಲ ಕೇಂದ್ರಗಳನ್ನು ಆರಂಭಿಸಲಾಗು­ತ್ತದೆ. ಇದರ ನಿರ್ವಹಣೆಯನ್ನು ‘ಮಶಾವ್’ ವಹಿಸಿ­ಕೊಳ್ಳ­ಲಿದ್ದು, ತಂತ್ರಜ್ಞಾನ ಸಂಬಂಧಿ ಕೆಲಸಗಳನ್ನು ‘ಸಿನಾಡ್ಕೊ’ ನಿರ್ವಹಿಸಲಿದೆ.

ಇಸ್ರೇಲ್‌ನಲ್ಲಿ ಕೈಗೊಳ್ಳಲಾದ ಸಂಶೋಧನೆಯ ಲಾಭ ಇತರ ದೇಶ­ಗಳ ಅಗತ್ಯ ಜನರಿಗೂ ತಲುಪಿಸುವುದು ‘ಮಶಾವ್’ನ ಉದ್ದೇಶವಾ­ಗಿದೆ. ಹರಿಯಾಣದಲ್ಲಿ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದ್ದು, ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಕೃಷಿಗೆ ಸಂಬಂಧಿ ೨೭ ಯೋಜನೆಗಳನ್ನು ವಿಸ್ತರಿಸಲು ಅದು ನಿರ್ಧರಿಸಿದೆ ಎಂದರು.

ಆಯಾ ಪ್ರದೇಶದಲ್ಲಿ ರೈತರು ಬೆಳೆಯುವ ಹಾಗೂ ಅಲ್ಲಿನ ವಾತಾ­ವ­ರಣಕ್ಕೆ ಹೊಂದಿಕೆಯಾಗುವ ಬೆಳೆಯನ್ನೇ ಆಯ್ದುಕೊಂಡಿರು­ವುದು ಯೋಜನೆಯ ವೈಶಿಷ್ಟ್ಯ. ಅಲ್ಲಿ ರೈತರ ಗುಂಪುಗಳನ್ನು ರಚಿಸಿ, ಅವರಿಗೆ ತಾಂತ್ರಿಕ ತರಬೇತಿ ನೀಡಲಾಗುತ್ತದೆ. ಇಸ್ರೇಲ್‌ನ ತಂತ್ರಜ್ಞರು ನಿಯಮಿ­ತವಾಗಿ ಭೇಟಿ ನೀಡಲಿದ್ದಾರೆ. ‘ಇಲ್ಲಿ ರೈತರು ಸಮಸ್ಯೆಗೆ ಖುದ್ದಾಗಿ ತಾವೇ ಪರಿಹಾರ ಕಂಡುಕೊಂಡಿದ್ದರೂ ಅದನ್ನು  ಬೇರೆಡೆ ಅಳವಡಿಸಿ­ಕೊ­ಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು. ಒಟ್ಟಿನಲ್ಲಿ ಇದೊಂದು ರೈತ–ರೈತರ ಮಧ್ಯೆ ನಡೆಯುವ ಅನುಭವ ಹಂಚಿಕೆ’  ಎಂದು ‘ಸಿನಾಡ್ಕೊ’ ಯೋಜನಾ ನಿರ್ದೇಶಕ ಡೇನಿಯಲ್ ವಾರ್ನರ್ ತಿಳಿಸಿದರು.

ಇಸ್ರೇಲ್‌ನ ಇಲಾಖೆಗಳ ಮೂಲಕ ನಡೆಯುವ ಈ ಯೋಜನೆಗೆ ಕೇಂದ್ರ ಸರ್ಕಾರ ಶೇ ೮೦ ಹಾಗೂ ರಾಜ್ಯ ಸರ್ಕಾರ ಶೇ ೨೦ರಷ್ಟು ಅನು­ದಾನ ನೀಡಲಿವೆ. ತಂತ್ರಜ್ಞಾನ ಮಾತ್ರ ಇಸ್ರೇಲ್‌ನದು ಎಂಬುದನ್ನು ಬಿಟ್ಟರೆ ಉಳಿದೆಲ್ಲ ಆಡಳಿತಾತ್ಮಕ ಉಸ್ತುವಾರಿ ಭಾರತದ್ದೇ ಆಗಿರುತ್ತದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕೆ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಂಡಳಿ ಹಾಗೂ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಗಳು ಯೋಜನೆಯನ್ನು ಅನುಷ್ಠಾನ ಮಾಡಲಿವೆ.

ಎಲ್ಲಿ ಯಾವ ಬೆಳೆ
ಇಸ್ರೇಲ್ ತಂತ್ರಜ್ಞಾನದೊಂದಿಗೆ ಭಾರತದಲ್ಲಿ ಕೈಗೊಳ್ಳುವ ಯೋಜನೆಗಳು

*ಕರ್ನಾಟಕ– ತರಕಾರಿ, ಹಣ್ಣು, ಮಾವು, ಕೊಳಚೆ ನೀರು ಸಂಸ್ಕರಣೆ
*ತಮಿಳುನಾಡು– ಪುಷ್ಪೋದ್ಯಮ, ಕೊಳಚೆ ನೀರು ಸಂಸ್ಕರಣೆ, ತರಕಾರಿ
*ಹರಿಯಾಣ– ತರಕಾರಿ, ಹಣ್ಣು, ಡೇರಿ; ರಾಜಸ್ತಾನ- ಖರ್ಜೂರ, ದಾಳಿಂಬೆ, ಮೂಸಂಬಿ
*ಗುಜರಾತ್–ತೋಟಗಾರಿಕೆ
*ಪಂಜಾಬ್–ತೋಟಗಾರಿಕೆ, ಕೊಳಚೆ ನೀರು ಮತ್ತು ಉಪ್ಪು ನೀರು ಸಂಸ್ಕರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT