ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಸ್ಪರ್ಧಿಗಳಿಗೆ ಪ್ರೋತ್ಸಾಹ ಧನ

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲಂಡನ್ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿರುವ ಕರ್ನಾಟಕದ ಒಂಬತ್ತು ಜನ ಸ್ಪರ್ಧಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಶುಕ್ರವಾರ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.

ಹೈಜಂಪ್ ಸ್ಪರ್ಧಿ ಸಹನಾ ಕುಮಾರಿ, ಈಜು ಪಟು ಎ.ಪಿ. ಗಗನ್ ಉಳ್ಳಾಲ್‌ಮಠ್, ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಪವರ್‌ಲಿಫ್ಟರ್ ಫರ್ಮಾನ್ ಬಾಷಾ, ಹೈಜಂಪ್ ಸ್ಪರ್ಧಿ ಎಚ್.ಎನ್. ಗಿರೀಶ್ ಅವರಿಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಲಾ ಐದು ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಿ ಗೌರವಿಸಿದರು.

ಟೆನಿಸ್ ಆಟಗಾರರಾದ ರೋಹನ್ ಬೋಪಣ್ಣ, ಮಹೇಶ್ ಭೂಪತಿ ಮತ್ತು ಅಶ್ವಿನಿ ಪೊನ್ನಪ್ಪ ಅವರ ಪರವಾಗಿ ಪೋಷಕರು ಪ್ರೋತ್ಸಾಹ ಧನ ಸ್ವೀಕರಿಸಿದರು. ಗಗನ್ ಅವರ ಕೋಚ್ ಎಸ್. ಪ್ರದೀಪ್ ಕುಮಾರ್ ಅವರಿಗೂ ಒಂದು ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಯಿತು. ಪ್ಯಾರಾಲಿಂಪಿಕ್ಸ್‌ನ ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಶರತ್ ಗಾಯಕ್‌ವಾಡ್ ಬದಲು ಅವರ ತಂದೆ ಮಹಾದೇವರಾವ್ ಗಾಯಕ್‌ವಾಡ್ ಅವರು ಚೆಕ್ ಪಡೆದರು.

ಹಾರೈಕೆ: `ನಾವು ನೀಡುವ ಪ್ರೋತ್ಸಾಹ ಧನ ಮುಖ್ಯವಲ್ಲ. ನೀವು ಪಡುವ ಪರಿಶ್ರಮ, ನಿಮ್ಮ ಸಾಧನೆ ಮುಖ್ಯ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಬನ್ನಿ~ ಎಂದು  ಮುಖ್ಯಮಂತ್ರಿ ಅವರು ಕ್ರೀಡಾಪಟುಗಳಿಗೆ ಹಾರೈಸಿದರು.

ಒಂದು ವಾರದಲ್ಲಿ ಉಳಿದ ಹಣ: ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದ ಸಾಧಕರಿಗೆ ಹಣ ಕೊಡಬೇಕಿರುವ ವಿಷಯ ನನಗೆ ತಿಳಿದಿದೆ. ಒಂದು ವಾರದಲ್ಲಿ ಕಾರ್ಯಕ್ರಮ ಆಯೋಜಿಸಿ ಅವರಿಗೆ ಹಣ ನೀಡಲಾಗುವುದು~ ಎಂದು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಚಿವ ಅಪ್ಪಚ್ಚು ರಂಜನ್ ಭರವಸೆ ನೀಡಿದರು.

ಮನವಿ: `2010ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳಿಗೆ ಬಹುಮಾನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಇವತ್ತಿಗೂ ಹಣ ನೀಡಿಲ್ಲ. ಈ ಬಗ್ಗೆಯೂ ಗಮನ ಹರಿಸಬೇಕು~ ಎಂದು ಫರ್ಮಾನ್ ಸಚಿವರಲ್ಲಿ ಮನವಿ ಮಾಡಿದರು.

ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್. ಪೆರುಮಾಳ್, ನಿರ್ದೇಶಕ ಎಂ.ಕೆ. ಬಲದೇವ ಕೃಷ್ಣ, ಜಂಟಿ ಕಾರ್ಯದರ್ಶಿ ವೈ.ಆರ್. ಕಾಂತರಾಜೇಂದ್ರ, ಉಪ ನಿರ್ದೇಶಕ ಜೆ.ಎಂ. ಅಪ್ಪಚ್ಚು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT