ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಇಂದಿನಿಂದ ಸಫಾರಿ ರದ್ದು

Last Updated 24 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹುಲಿ ಅಭಯಾರಣ್ಯದ ಹೃದಯ ಭಾಗದಲ್ಲಿ (ಕೋರ್ ಏರಿಯಾ) ಪ್ರವಾಸೋದ್ಯಮವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬುಧವಾರದಿಂದಲೇ ರಾಜ್ಯದ ಹುಲಿ ಅಭಯಾರಣ್ಯಗಳಲ್ಲಿ ಸಫಾರಿ ಇರುವುದಿಲ್ಲ.

ನ್ಯಾಯಾಲಯದ ಆದೇಶ ಸರ್ಕಾರಕ್ಕೆ ಮಂಗಳವಾರವೇ ತಲುಪಿದ್ದು, ಈ ಆದೇಶದ ಅನ್ವಯ ಸಫಾರಿ ನಿಷೇಧವನ್ನು ಜಾರಿಗೆ ತರುವಂತೆ ರಾಜ್ಯದ ಹುಲಿ ಅಭಯಾರಣ್ಯಗಳ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ದೀಪಕ್ ಶರ್ಮ `ಪ್ರಜಾವಾಣಿ~ಗೆ ತಿಳಿಸಿದರು.

ಶರ್ಮ ಅವರ ಸೂಚನೆ ಮೇರೆಗೆ ರಾಜ್ಯದ ಪ್ರಮುಖ ಹುಲಿ ಅಭಯಾರಣ್ಯ ಹಾಗೂ ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ಬಂಡೀಪುರ, ನಾಗರಹೊಳೆ, ಭದ್ರಾ, ಅಣಶಿ- ದಾಂಡೇಲಿ ಮತ್ತು ಬಿಳಿಗಿರಿರಂಗನ ದೇವಸ್ಥಾನದಲ್ಲಿ (ಬಿಆರ್‌ಟಿ) ಪ್ರವಾಸಿಗರನ್ನು ಹೊತ್ತ ಜೀಪ್‌ಗಳ ಓಡಾಟ ಸಂಪೂರ್ಣವಾಗಿ ನಿಲ್ಲಲಿದೆ.

ಇದರಿಂದಾಗಿ ಬಂಡೀಪುರ, ನಾಗರಹೊಳೆಯ ಕಬಿನಿ ಹಿನ್ನೀರು, ದಾಂಡೇಲಿ ಮತ್ತು ಬಿಳಿಗಿರಿರಂಗನ ಬೆಟ್ಟದಲ್ಲಿ ಪರಿಸರಸ್ನೇಹಿ ರೆಸಾರ್ಟ್ ನಡೆಸುತ್ತಿರುವ ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ (ಜೆಎಲ್‌ಆರ್) ಸಹ ಸಫಾರಿ ನಿಲ್ಲಿಸಲಿದೆ.

 
ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನುರ್ ರೆಡ್ಡಿ ಅವರು ಪಿಸಿಸಿಎಫ್ (ವನ್ಯಜೀವಿ) ಅವರ ಆದೇಶ ಮೇಲೆ ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಬುಧವಾರದಿಂದಲೇ ಈ ಆದೇಶ ಜಾರಿಯಾಗಲಿದೆ ಎಂದರು.

ಪಿಸಿಸಿಎಫ್ (ವನ್ಯಜೀವಿ) ಅವರ ಆದೇಶದ ಮೇರೆಗೆ ಅರಣ್ಯ ಇಲಾಖೆ ಹಾಗೂ ಜೆಎಲ್‌ಆರ್ ನಡೆಸುತ್ತಿರುವ ಜೀಪ್ ಸಫಾರಿಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆ ಎಂದು ಬಂಡೀಪುರ ಮತ್ತು ನಾಗರಹೊಳೆಯ ಅರಣ್ಯಾಧಿಕಾರಿ ಕುಮಾರ್ ಪುಷ್ಕರ್ ಅವರು ಸ್ಪಷ್ಟಪಡಿಸಿದರು.

ಹುಲಿ ಅಭಯಾರಣ್ಯ ಎಂದು ಅಧಿಸೂಚನೆ ಹೊರಡಿಸಿರುವ ಸಂಪೂರ್ಣ ಕಾಡನ್ನೇ, ಹೃದಯ ಭಾಗ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ. ಹುಲಿ ಅಭಯಾರಣ್ಯದ ನಿಯಮಾವಳಿಗಳ ಪ್ರಕಾರ, ಹೃದಯ ಭಾಗಕ್ಕೆ ರಕ್ಷಣೆ ನೀಡುವ ರೀತಿಯಲ್ಲಿರುವ ಸುತ್ತಮುತ್ತಲ ಪ್ರದೇಶವನ್ನು `ಬಫರ್ ಜೋನ್~ (ಹೊರ ಭಾಗ) ಎಂದು ಕರೆಯಲಾಗುತ್ತಿದೆ. ರಾಜ್ಯದಲ್ಲಿ ಬಂಡೀಪುರ, ಭದ್ರಾ ಹಾಗೂ ಅಣಶಿ- ದಾಂಡೇಲಿ ಕಾಡಿನಲ್ಲಿ ಹೃದಯ ಭಾಗ ಮತ್ತು ಹೊರ ಭಾಗವನ್ನು ಗುರುತಿಸಲಾಗಿದೆ.

`ಹೊರ ಭಾಗವನ್ನು ಗುರುತಿಸಲು ಸ್ಥಳೀಯ ಜಿಲ್ಲಾ ಪಂಚಾಯ್ತಿಗಳು ಅನುಮತಿ ನೀಡಬೇಕಾಗುತ್ತದೆ. ಆದರೆ, ನಾಗರಹೊಳೆಯಲ್ಲಿ ಹೊರ ಭಾಗ ಗುರುತಿಸಲು ಕೊಡಗು ಜಿಲ್ಲಾ ಪಂಚಾಯ್ತಿ ಅನುಮತಿ ನೀಡಿಲ್ಲ. ಇದರಿಂದಾಗಿ ಈ ಕಾರ್ಯ ಅಂತಿಮವಾಗಿಲ್ಲ~ ಎಂದು ದೀಪಕ್ ಶರ್ಮ ತಿಳಿಸಿದರು.

ಇದರ ಜೊತೆಯಲ್ಲಿ ಇತ್ತೀಚೆಗೆ ಹುಲಿ ಅಭಯಾರಣ್ಯದ ಮಾನ್ಯತೆ ಪಡೆದಿರುವ ಬಿಆರ್‌ಟಿ ಅರಣ್ಯದಲ್ಲಿ `ಹೃದಯ ಭಾಗ~ ಮತ್ತು `ಹೊರ ವಲಯ~ ಗುರುತಿಸುವ ಕೆಲಸ ಆರಂಭವಾಗಬೇಕಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT