ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರಾಜ್ಯದಲ್ಲಿ ಜ್ಞಾನ ಕಣಜವೇ ನಿರ್ಮಾಣವಾಗಿದೆ'

Last Updated 21 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಕರ್ನಾಟಕವನ್ನು ಒಂದು ಸುರಕ್ಷಿತ ಮತ್ತು ಶಾಂತಿಯುತ ರಾಜ್ಯವನ್ನಾಗಿ ಭಾರತ ನಕ್ಷೆಯಲ್ಲಿ ಗುರುತಿಸುವಂತೆ ಮಾಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಕಳೆದ 1,188 ದಿನಗಳಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ'

`ನಾವು ಮಾಡಿರುವ ಹಲವು ಶಿಫಾರಸುಗಳನ್ನು ರಾಜ್ಯ ಸರ್ಕಾರ ಈಗಾಗಲೇ ಅನುಷ್ಠಾನಕ್ಕೆ ತಂದಿದೆ. ಫೆಬ್ರುವರಿ ಅಂತ್ಯದೊಳಗೆ ಉಳಿದವುಗಳು ಕಾರ್ಯರೂಪಕ್ಕೆ ಬರಲಿವೆ. ರಾಜ್ಯದಲ್ಲಿ ಜ್ಞಾನದ ಸೃಷ್ಟಿ ಮತ್ತು ಪ್ರಸರಣಕ್ಕೆ ಒಂದು ಸಮರ್ಪಕ ವ್ಯವಸ್ಥೆ ರೂಪಿಸಿದ ಸಂತೃಪ್ತಿ ಮನಸ್ಸನ್ನು ತುಂಬಿದೆ'

-ಸೋಮವಾರವಷ್ಟೇ ಬರ್ಖಾಸ್ತುಗೊಂಡ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿದ್ದ ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರ ಸ್ಪಷ್ಟವಾದ ಅಭಿಪ್ರಾಯ ಇದು. ಆಯೋಗದ ಅಂತಿಮ ವರದಿಯನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಸಲ್ಲಿಸಲು ಹೋಗುವ ಮುನ್ನ ಈ ಬಾಹ್ಯಾಕಾಶ ವಿಜ್ಞಾನಿ `ಪ್ರಜಾವಾಣಿ'ಗೆ ವಿಶೇಷ ಸಂದರ್ಶನ ನೀಡಿದರು.

ನಾಲ್ಕು ವರ್ಷಗಳ ಆಯೋಗದ ಕಾರ್ಯವೈಖರಿ, ರಾಜ್ಯ ಜ್ಞಾನದ ಕ್ಷಿತಿಜದಲ್ಲಿ ಉಂಟಾದ ಬದಲಾವಣೆ, ಅಂದುಕೊಂಡ ಗುರಿ ಸಾಧನೆ ಮತ್ತು ಅದರ ಸಾರ್ಥಕತೆ ಮೇಲೆ ಒಂದು ಪಕ್ಷಿನೋಟ ಬೀರಿದರು. ಅಧ್ಯಕ್ಷರಾಗಿ ತಾವು ಪಡೆದ ಅನುಭವವನ್ನೂ ಹಂಚಿಕೊಂಡರು.

ಸಂದರ್ಶನದ ಆಯ್ದಭಾಗ ಇಲ್ಲಿದೆ:
ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾದವರು ತಾವು. ಜ್ಞಾನವನ್ನು ಹೇಗೆ ವ್ಯಾಖ್ಯಾನಿಸುವಿರಿ?
ಸತ್ಯದ ಮೂರ್ತರೂಪವೇ ಜ್ಞಾನ. ಸಮಾಜದ ಅಭಿವೃದ್ಧಿಗೆ ಜ್ಞಾನವೇ ಪ್ರಮುಖ ಆಧಾರ. ಇದರ ಪ್ರಯೋಜನ ಸಾಮರ್ಥ್ಯ, ಉತ್ಪಾದನೆ, ಆಡಳಿತ ಮತ್ತು ಅಭಿವೃದ್ಧಿಗೆ ತಟ್ಟಬೇಕು. ಜ್ಞಾನ ಸೃಷ್ಟಿ ಪ್ರಸರಣ ಮತ್ತು ಅನ್ವಯಿಕ ನೆಲೆಯಲ್ಲಿ ರಾಜ್ಯ ಶ್ರೀಮಂತ ಪರಂಪರೆ ಹೊಂದಿದೆ. 43 ವಿಶ್ವವಿದ್ಯಾಲಯಗಳು (ಸರ್ಕಾರಿ ಮತ್ತು ಖಾಸಗಿ ಸೇರಿ) ಇಲ್ಲಿವೆ. ಆಯಾ ಕ್ಷೇತ್ರದ ಸ್ಥಳೀಯ ಸಾಮರ್ಥ್ಯ ಶೋಧಿಸಿ ಅದಕ್ಕೆ ಜ್ಞಾನದ ಲೇಪ ನೀಡಬೇಕಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಆಯೋಗ ಸಾಧಿಸಿದ್ದೇನು?
ನಮ್ಮ ಆಯೋಗ ಇತರ ಎಲ್ಲವುಗಳಿಗಿಂತ ಭಿನ್ನವಾಗಿತ್ತು. ಉಳಿದವುಗಳು ಅವಧಿ ಪೂರೈಸಿದ ಮೇಲೆ ವರದಿ ನೀಡಿದರೆ, ನಾವು ಆರಂಭಿಕ ಹಂತದಿಂದಲೇ ಸರ್ಕಾರದ ಜೊತೆ ಸಮಾಲೋಚನೆ ಮಾಡುತ್ತಾ ಹೋದೆವು. ಆ ಕ್ಷಣದಲ್ಲಿ ಹೊಳೆದ ಹೊಳಹುಗಳನ್ನು ಅದರ ಮುಂದಿಟ್ಟೆವು. ಜ್ಞಾನಕೇಂದ್ರಿತ ಖಾಸಗಿ ಸಂಸ್ಥೆ, ಆ ಜ್ಞಾನದ ಅಪೇಕ್ಷೆಯಲ್ಲಿದ್ದ ಸರ್ಕಾರ ಇವುಗಳ ಮಧ್ಯೆ ಸಂಪರ್ಕ ಸೇತುವಾಗಿ ನಾವು ಕಾರ್ಯ ನಿರ್ವಹಿಸಿದೆವು. ಆದ್ದರಿಂದಲೇ ಅಂತಿಮ ವರದಿ ಕೊಡುವ ಮುನ್ನ ನಮ್ಮ ಹಲವು ಶಿಫಾರಸುಗಳು ಅನುಷ್ಠಾನಕ್ಕೆ ಬಂದವು. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರಾಜ್ಯಕ್ಕೆ `2020ರ ಮುನ್ನೋಟ' ಕೊಟ್ಟಿದ್ದಾರೆ. ನಮ್ಮ ಶಿಫಾರಸುಗಳು ಅವರ ಕನಸಿಗೆ ಪೂರಕವಾಗಿವೆ.

ನಮ್ಮ ಶೋಧಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವಲ್ಲಿ ಸಹಕಾರಿಯಾಗಿವೆ. ವಿಶ್ವವಿದ್ಯಾಲಯಗಳಿಗೆ ಏಕರೂಪದ ಪರೀಕ್ಷಾ ವೇಳಾಪಟ್ಟಿ ಬರುವಲ್ಲಿ ನಮ್ಮ ಆಯೋಗದ ಶ್ರಮವಿದೆ. ಮೊದಲು ವಿದ್ಯಾರ್ಥಿಗಳು ಎದುರಿಸುತ್ತಿದ್ದ ಸಮಸ್ಯೆ ನಿವಾರಣೆ ಆಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಶಾಲೆಯಿಂದ ದೂರ ಉಳಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆಗಳನ್ನು ಈಗಷ್ಟೇ ಪಟ್ಟಿಮಾಡಿ ಕೊಟ್ಟಿದ್ದೇವೆ. ರಾಜ್ಯದಲ್ಲಿ ಯುವ ನೀತಿ ಜಾರಿಗೆ ಬಂದಿದ್ದೂ ಜ್ಞಾನ ಆಯೋಗದ ಶಿಫಾರಸಿನಿಂದ. ನಾಲ್ಕು ವರ್ಷಗಳ ಅವಧಿಯಲ್ಲಿ ಕಲೆಹಾಕಿದ ಮಾಹಿತಿ ಕಣಜವೇ ಆಯೋಗದ ಬಳಿ ಇದೆ. ಅದೀಗ ಸಾರ್ವಜನಿಕ ಆಸ್ತಿಯಾಗಿದೆ.

ಕಣಜ: ಮಾಹಿತಿ ಕೋಶ, ಅರಿವು: ಮುಕ್ತ ಗ್ರಂಥಾಲಯ, ಸಹಯೋಗ: ಕೌಶಲದ ಸಹಯೋಗ, ಸ್ವಾಸ್ಥ್ಯ: ರೋಗ ಪ್ರತಿಬಂಧಕ ಆರೋಗ್ಯ, ದ್ರವ್ಯಕೋಶ: ಪ್ರಾದೇಶಿಕ ಔಷಧ ಕೋಶ ನಮ್ಮ ಹೆಜ್ಜೆ ಗುರುತುಗಳಾಗಿವೆ.

ಮಾಹಿತಿ ಹೇಗೆ ಕಲೆ ಹಾಕಿದಿರಿ? ಅಲ್ಲಿ ನಿಮಗೆ ಸಿಕ್ಕ ಅನುಭವ ಎಂತಹದ್ದು?
ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಕೈಗಾರಿಕೆ ರಾಜ್ಯದ ಅಭಿವೃದ್ಧಿಗೆ ಕಾರಣವಾಗುವ ನಾಲ್ಕು ಪ್ರಮುಖ ಆದ್ಯತಾ ವಲಯಗಳು. ನಮ್ಮ ಜ್ಞಾನದ ಬೇಟೆಗೆ ನಾವು ಇದೇ ಕ್ಷೇತ್ರಗಳನ್ನು ಆಯ್ದುಕೊಂಡೆವು. ಆಯಾ ವಿಭಾಗಗಳಲ್ಲಿ ಕಾರ್ಯ ತಂಡ ಕಟ್ಟಿದೆವು. ಗುರಿ ಸಾಧಕ ಗುಂಪು ಸಿದ್ಧಪಡಿಸಿದೆವು. ಸಂಶೋಧಕರ ಪಡೆಯೂ ಬೆನ್ನಿಗಿದ್ದಿತು. ಸಾಂಪ್ರದಾಯಿಕ ಜ್ಞಾನದ ಹುಟ್ಟಿಗೆ ಕೈಹಾಕಿದೆವು. ಅದರ ತಳಹದಿ ಮೇಲೆ ಆಧುನಿಕ ಜ್ಞಾನ ಸೌಧ ಕಟ್ಟುವುದು ಹೇಗೆ ಎಂಬುದನ್ನು ಕುಳಿತು ಚರ್ಚಿಸಿದೆವು. ಪ್ರತಿ ಕ್ಷೇತ್ರದ ಸಮಗ್ರ ಆಯಾಮಗಳ ಕಡೆಗೆ ಲಕ್ಷ್ಯ ವಹಿಸಿದ್ದೆವು. ಕನ್ನಡ ನಾಡು ಜ್ಞಾನದ ಗಣಿಯಾಗಿದ್ದು, ಎಲ್ಲೆಡೆಯಿಂದ ಅದರ ಪ್ರವಾಹವೇ ಹರಿದುಬಂತು.

ಚುಕ್ಕಾಣಿ ಹಿಡಿಯುವಾಗಲೇ ನಮ್ಮ ಕಾರ್ಯವೈಖರಿ ಇತರ ಆಯೋಗಗಳಂತೆ ಇರಬಾರದು ಎನ್ನುವ ಸಂಕಲ್ಪ ಮಾಡಿದ್ದೆವು. ಆದ್ದರಿಂದಲೇ `ಸಂಶೋಧನೆ, ಶಿಫಾರಸು, ಅನುಷ್ಠಾನ, ಸುಸ್ಥಿರ ಪ್ರಗತಿ' ಎಂಬ ಮಂತ್ರಕ್ಕೆ ಬದ್ಧರಾಗಿ ನಿಂತೆವು. ಅದರ ಫಲ ಈಗ ರಾಜ್ಯದ ಜನರ ಮುಂದಿದೆ.

ಈ ಯಾತ್ರೆಯಲ್ಲಿ ನನಗೆ ನೂರಾರು ತಜ್ಞರನ್ನು ಕಾಣುವ ಅವಕಾಶ ಸಿಕ್ಕಿತು. ಸಾಂಪ್ರದಾಯಿಕ ಜ್ಞಾನವುಳ್ಳ ರೈತರು, ನಾಟಿ ವೈದ್ಯರು, ಗ್ರಾಮೀಣ ಸಂಸ್ಕೃತಿಯಲ್ಲಿ ಆಳವಾದ ಜ್ಞಾನವುಳ್ಳ ಹಿರಿಯರು ಎಲ್ಲರನ್ನೂ ಭೇಟಿ ಮಾಡಿದೆ. ಬಾಹ್ಯಾಕಾಶದ ಜಗತ್ತಿನಲ್ಲಿದ್ದ ನನಗೆ, ಇಂತಹ ಮಣ್ಣಿನ ಸಂಸ್ಕೃತಿ ಪರಿಚಯಿಸಿಕೊಳ್ಳುವ ಅವಕಾಶ ಹಿಂದೆಂದೂ ಸಿಕ್ಕಿರಲಿಲ್ಲ. ಮೂವರೂ ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಗತ್ಯ ಸಹಕಾರ ನೀಡಿದರು. ಸರ್ಕಾರ ಮಟ್ಟದಲ್ಲಿ 32 ಸಭೆಗಳು ನಡೆದಿವೆ. ಈ ಆಯೋಗವನ್ನು ಸರ್ಕಾರ ಎಷ್ಟೊಂದು ಗಂಭೀರವಾಗಿ ತೆಗೆದುಕೊಂಡಿತ್ತು ಎನ್ನುವುದಕ್ಕೆ ಈ ಸಭೆಗಳೇ ಸಾಕ್ಷಿ.

ಕೃಷಿ ಕ್ಷೇತ್ರದ ಪ್ರಸ್ತಾಪ ಎತ್ತಿದ್ದೀರಿ. ಅದರ ಪ್ರಗತಿಗೆ ಯಾವ ಶಿಫಾರಸು ಮಾಡಿದ್ದೀರಿ?
ಕೃಷಿ ವಲಯ ಇತರ ಕ್ಷೇತ್ರಗಳಂತಲ್ಲ. ಇಲ್ಲಿ ಹಲವು ಸಂಗತಿಗಳು ತಳಕು ಹಾಕಿಕೊಂಡಿವೆ. ಮಳೆ ಸರಿಯಾಗಿ ಬೀಳುವುದಿಲ್ಲ. ನೀರಾವರಿ ಸೌಕರ್ಯವೂ ಎಲ್ಲೆಡೆ ಇಲ್ಲ. ಒಂದೊಂದು ಜಿಲ್ಲೆಯಲ್ಲೂ ಬಳಕೆಯಲ್ಲಿರುವ ಕೃಷಿ ವಿಧಾನಗಳು ವಿಭಿನ್ನ. ಅವರಿಗೆ ಆಧುನಿಕ ತಂತ್ರಜ್ಞಾನ ಹೇಳಿಕೊಡಬೇಕು. ಅದಕ್ಕಾಗಿ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳನ್ನು ಪ್ರಯೋಗ ಶಾಲೆಗಳಾಗಿ ಬಳಸಿಕೊಳ್ಳಬೇಕು. ಅನಕ್ಷರಸ್ಥರೇ ಹೆಚ್ಚಾಗಿರುವ ರೈತರಿಗೆ ಜ್ಞಾನ ಎಂಬುದು ಜರಡಿಯಿಂದ ಬಿದ್ದ ನೀರಿನಂತೆ ಸಮಾನವಾಗಿ ಹರಿಯಬೇಕು. ರೈತರಿಗೆ ಸರಿಯಾದ ಜ್ಞಾನ ಕೊಟ್ಟರೆ ಫಲವತ್ತಾದ ಮಣ್ಣಿನಲ್ಲಿ ಬೀಜ ಬಿತ್ತಿದಂತೆ. ಅದು ಹುಸಿ ಹೋಗುವುದಿಲ್ಲ.

ಕೃಷಿಯಲ್ಲಿ ತೊಡಗುವ ರೈತ ಯವಕರಿಗೆ ಪ್ರೋತ್ಸಾಹ ಧನ ನೀಡಬೇಕು. ಕೃಷಿ ಉತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆ ಒದಗಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಕೃಷಿಗೆ ಸಂಬಂಧಿಸಿದ ಮತ್ತಷ್ಟು ಕೋರ್ಸ್ ಆರಂಭಿಸಬೇಕು ಎನ್ನುವವು ಪ್ರಮುಖ ಶಿಫಾರಸುಗಳಾಗಿವೆ.

ಮೂಲ ವಿಜ್ಞಾನ ಹಿಂದೆ ಬಿದ್ದಿದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲ?
ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಉತ್ತುಂಗದಲ್ಲಿ ಇದ್ದಾಗ ಅಂತಹ ಸ್ಥಿತಿ ಇತ್ತು. ಈಗ ಸನ್ನಿವೇಶ ಹಾಗಿಲ್ಲ. ಮೂಲ ವಿಜ್ಞಾನದ ಕಡೆಗೆ ವಿದ್ಯಾರ್ಥಿಗಳಲ್ಲಿ ಒಲವು ಉಂಟಾಗುತ್ತಿದೆ. ಸಿಎನ್‌ಆರ್ ರಾವ್ ನೇತೃತ್ವದ ವಿಜ್ಞಾನ ಮತ್ತು ತಂತ್ರಜ್ಞಾನ ಪಡೆ ಆ ಕ್ಷೇತ್ರದತ್ತ ಗಮನಹರಿಸಿದೆ. ಮೂಲ ವಿಜ್ಞಾನದಲ್ಲಿ ತೊಡಗುವವರಿಗೆ ಶಿಷ್ಯ ವೇತನವನ್ನೂ ಕೊಡುತ್ತಿದೆ. ವಿಶ್ವವಿದ್ಯಾಲಯಗಳು ಪಠ್ಯಪುಸ್ತಕದ ಗಿಳಿಪಾಠ ಒಪ್ಪಿಸುವುದಕ್ಕಿಂತ ಪ್ರಾಯೋಗಿಕ ಪಾಠಕ್ಕೆ ಒತ್ತು ನೀಡಬೇಕು. ಎಲ್ಲ ಬಗೆ ಶಿಕ್ಷಣಕ್ಕೂ ಈ ಮಾತು ಅನ್ವಯಿಸುತ್ತದೆ.

ಮುಂದಿನ ಹಾದಿ?
ಅದು ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು. ಬೇಕಾದ ಮೂಲ ಸೌಕರ್ಯವನ್ನೆಲ್ಲ ನಾವು ಕಲ್ಪಿಸಿದ್ದೇವೆ. ಕೊಟ್ಟ ಪ್ರತಿ ಪೈಸೆಗೂ ನ್ಯಾಯ ಒದಗಿಸಿದ್ದೇವೆ. ಜ್ಞಾನದ ಸಮರ್ಪಕ ಬಳಕೆ ಮಾಡಿಕೊಂಡು ಪ್ರತಿ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಬೇಕು ಎನ್ನುವ ಅಪೇಕ್ಷೆ ಮಾತ್ರ ನಮ್ಮದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT