ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಬರಿದಾಗುತ್ತಿರುವ ಶ್ರೀಗಂಧ

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಕನ್ನಡ ನಾಡು, ಚಿನ್ನದ ನಾಡು- ಗಂಧದ ಬೀಡು ಎಂಬ ಹೆಗ್ಗಳಿಕೆ ಪಡೆದಿರುವ ಕರ್ನಾಟಕದಲ್ಲಿ ಈಗ ಚಿನ್ನವೂ ಇಲ್ಲ. ಶ್ರೆಗಂಧವೂ ಇಲ್ಲ!! ಬೆಲೆಬಾಳುವ ಗಂಧದ ಮರಗಳೆಲ್ಲವೂ ಖಾಲಿಯಾಗಿದೆ! ಅಷ್ಟೇ ಏಕೆ, ಬೀಟೆಯೂ ಇಲ್ಲ. ತೇಗ ಅಲ್ಲೊಂದು ಸ್ವಲ್ಪ- ಇಲ್ಲೊಂದು ಸ್ವಲ್ಪ ಉಳಿದುಕೊಂಡಿದೆ!!!

ಇದು ರಾಜ್ಯದ ಅರಣ್ಯ ಸಚಿವ ವಿಜಯ ಶಂಕರ್ ಅವರೇ ಖುದ್ದು ಹೇಳಿದ ಮಾತು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಉತ್ತರ  ಪ್ರದೇಶಕ್ಕೆ ಹೋಗುವ ದಾರಿಯಲ್ಲಿ ದೆಹಲಿಗೆ ಬಂದಿದ್ದ ಅರಣ್ಯ ಸಚಿವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಔಷಧ ಗುಣಗಳಿರುವ ಎಷ್ಟೋ ಸಸ್ಯಗಳು ಕಣ್ಮರೆ ಆಗುತ್ತಿವೆ. ಸಾಂಪ್ರಾದಾಯಿಕ ಗಿಡ- ಮರಗಳು ಕಡಿಮೆ ಆಗುತ್ತಿವೆ. ಬೆಟ್ಟ- ಗುಡ್ಡ, ನದಿ ಮೂಲಗಳು ಕಳೆದುಹೋಗುತ್ತಿವೆ. ಇವೆಲ್ಲವುಗಳನ್ನು ಉಳಿಸಿಕೊಳ್ಳದಿದ್ದರೆ ನಮಗೆ ಗಂಡಾಂತರ ಕಟ್ಟಿಟ್ಟ ಬುತ್ತಿ. ಇದರಿಂದಾಗಿ ಸರ್ಕಾರ `ಮನೆಗೊಂದು ಮರ- ಮಗುಗೊಂದು ಮರ~ ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತರುತ್ತಿದೆ ಎಂದು ವಿವರಿಸಿದರು.

ಐದರಿಂದ ಪಿಯುವರೆಗಿನ ಮಕ್ಕಳಿಗೆ ಪರಿಸರ ಕುರಿತು ಕಾಳಜಿ ಹುಟ್ಟಿಸುವ ಯೋಜನೆ ಇದು. ಮಕ್ಕಳು ಇಷ್ಟಪಡುವ ಸಸಿ ಕೊಟ್ಟು ಬೆಳೆಸಲು ಪ್ರೋತ್ಸಾಹ ಮಾಡಲಾಗುವುದು. ಸಸಿ ಜೋಪಾನ ಮಾಡುವ ಸಂಬಂಧ ಅವರಿಂದ ಪ್ರಮಾಣ ಮಾಡಿಸಲಾಗುವುದು. ಹಾಗೇ ಸಸಿ ಕೇಳಿಕೊಂಡು ಅರಣ್ಯ ಕಚೇರಿಗೆ ಬರುವ ಜನರಿಗೆ ಅವರು ಕೇಳುವ ಒಂದು ಸಸಿಯನ್ನು ಉಚಿತವಾಗಿ ಪೂರೈಸಲಾಗುವುದು ಎಂದರು.

ಅರಣ್ಯೇತರ ಭೂಮಿಯಲ್ಲಿ ಗಂಧ, ಮಾವು, ಬೇವು, ಹುಣಸೆ, ಹೊಂಗೆ, ಬೆಟ್ಟದ ನಲ್ಲಿಕಾಯಿ ಸೇರಿದಂತೆ ಯಾವುದೇ ಮರ ಬೆಳೆಸುವ ರೈತರಿಗೆ ಉಚಿತವಾಗಿ ಸಸಿ ವಿತರಣೆ ಮಾಡಲಾಗುವುದು. ಪ್ರತಿ ಸಸಿಗೆ ಪ್ರೋತ್ಸಾಹ ಧನವಾಗಿ ಮೊದಲ ಮೂರು ವರ್ಷ ರೂ. 10, 15 ಮತ್ತು 20 ವಿತರಣೆ ಮಾಡಲಾಗುವುದು. ಇದರಿಂದ ಪ್ರತಿ ಹೆಕ್ಟೇರ್‌ಗೆ ರೈತರಿಗೆ 15ರಿಂದ 19 ಸಾವಿರ ರೂಪಾಯಿ ಪ್ರೋತ್ಸಾಹ ಧನ ಸಿಗಲಿದೆ ಎಂದು ಹೇಳಿದರು.

ಕೃಷಿ ಭೂಮಿಯಲ್ಲಿ ಬೆಳೆದ ಎಲ್ಲ ಮರಗಳ ಮೇಲಿನ ಹಕ್ಕನ್ನು ರೈತರಿಗೆ ನೀಡಲಾಗುವುದು. ಗಂಧದ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಒಪ್ಪಿಗೆ ಕಡ್ಡಾಯ. ಆದರೆ, ಗಂಧದ ಮರಗಳನ್ನು ಸರ್ಕಾರವೇ ಮಾರುಕಟ್ಟೆ ದರದಲ್ಲಿ ಖರೀದಿಸಲಿದೆ. ಈ ಉದ್ದೇಶಕ್ಕೆ ಮರಗಳ  ಕಾಯ್ದೆಗೆ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಮಂಡಿಸಲಾಗುವುದು ಎಂದು ನುಡಿದರು.

ಯಾತ್ರಿಗಳು ಬರುವ ಕಡೆಗಳಲ್ಲಿ ದೇವವನ ಬೆಳೆಸಲಾಗುವುದು. ಅಪರೂಪದ ಸಸಿಗಳನ್ನು ನೆಡಲಾಗುವುದು. ಯೋಜನೆಯನ್ನು ಚಾಮುಂಡಿ ಬೆಟ್ಟದಿಂದ ಆರಂಭಿಸಲಾಗುವುದು. ಆಸಕ್ತರಿಗೆ ಉಚಿತ ಸಸಿಗಳನ್ನು ವಿತರಣೆ ಮಾಡುವ ಉದ್ದೇಶದಿಂದ ಜಿಲ್ಲೆಗೊಂದು ನರ್ಸರಿ ಕೇಂದ್ರ ಸ್ಥಾಪಿಸಲಾಗುವುದು. ವಿಭಾಗ ಮಟ್ಟದಲ್ಲೂ ನರ್ಸರಿ ಕೇಂದ್ರ ತೆರೆಯಲಾಗುವುದು.

ಧಾರ್ಮಿಕ ಕೇಂದ್ರಗಳಲ್ಲೂ ನರ್ಸರಿ ಕೇಂದ್ರ ಮಾಡಿ ಭಕ್ತರಿಗೆ ಸಸಿಗಳನ್ನು ಕೊಟ್ಟು ಕಳುಹಿಸಲಾಗುವುದು. ಗದಗ ಬಳಿಯ ಕಪ್ಪದ ಗುಡ್ಡ ಮತ್ತು ಚಿತ್ರದುರ್ಗದ ಸಿದ್ದರ ಬೆಟ್ಟದಲ್ಲಿ ಔಷಧ ವನ ಬೆಳೆಸಲಾಗುವುದು ಎಂದು ಸ್ಪಷ್ಟಪಡಿಸಿದರು. ಅಲ್ಲದೆ. ಪ್ರತಿ ನಗರಗಳಲ್ಲೂ `ಟ್ರೀ ಪಾರ್ಕ್~ ಮಾಡಲಾಗುವುದು.

ಹಕ್ಕಿ- ಪಕ್ಷಿಗಳಿಗೆ ಆಶ್ರಯ, ಆಹಾರ ಕೊಡದ, ಪರಿಸರಕ್ಕೆ ಪೂರಕವಲ್ಲದ ನೀಲಗಿರಿಯನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಕರಾವಳಿ ಪ್ರದೇಶದಲ್ಲಿ ಮಾತ್ರ ಕಡಲ ಕೊರೆತ ತಪ್ಪಿಸಲು ತಜ್ಞರ ಸಲಹೆಯಂತೆ ಅಕೇಷಿಯಾ ಬೆಳೆಸಲಾಗುತ್ತಿದೆ. ನೀಲಗಿರಿಗೆ ಇನ್ನು ಅವಕಾಶ ಇಲ್ಲ.  ನೀಲಗಿರಿ ಬೆಳೆಸಿರುವ ಸರ್ಕಾರಿ ಭೂಮಿಯನ್ನು ಅರಣ್ಯ ಅಭಿವೃದ್ಧಿ ನಿಗಮದಿಂದ ಹಿಂದಕ್ಕೆ ಪಡೆಯಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ದಶಕದ ಹಿಂದೆ ಅರಣ್ಯ ಅಭಿವೃದ್ಧಿಗೆ ಜಪಾನಿನಿಂದ ಬಂದಿದ್ದ 600 ಕೋಟಿ ಹಣವನ್ನು ಸರಿಯಾಗಿ ಬಳಕೆ ಮಾಡಿಲ್ಲ. ನೀಲಗಿರಿ ಬೆಳೆಗೆ ಈ ಹಣವನ್ನು ಖರ್ಚು ಮಾಡಿ ಪೋಲು ಮಾಡಲಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳಲ್ಲಿ ಕೆಲವರು ನಿವೃತ್ತಿ ಹೊಂದಿದ್ದಾರೆ. ಇನ್ನೂ ಕೆಲವರು ಅನಾರೋಗ್ಯ ಪೀಡಿತರಾಗಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅರಣ್ಯ ಇಲಾಖೆಗೆ ಕೊಡುತ್ತಿರುವ ಅನುದಾನವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡುತ್ತಿದೆ. ಇದುವರೆಗೆ 130- 140ಕೋಟಿ ಮಾತ್ರ ಬರುತಿತ್ತು. ಇದು 300 ಕೋಟಿಗೆ ಮುಟ್ಟಿದೆ. ಇದಲ್ಲದೆ, ದೇವ ವನಕ್ಕೆ 23 ಕೋಟಿ, ಸಾಲು ಮರಕ್ಕೆ 13ಕೋಟಿ ನೀಡಿದೆ ಎಂದು ವಿಜಯ ಶಂಕರ್ ವಿವರಿಸಿದರು.

ಭೂಮಿ ಕೊಡುವುದಿಲ್ಲ
ಬಳ್ಳಾರಿ ಬಳಿ ಕರಡಿ ಧಾಮಕ್ಕೆ ಹೊಂದಿಕೊಂಡಂತೆ ಭೂಮಿ ಖರೀದಿಸಲು ಮುಂದೆ ಬಂದಿರುವ ಖಾಸಗಿ ಉದ್ಯಮ ಸಂಸ್ಥೆಗೆ ಒಂದಿಂಚು ಭೂಮಿ ಕೊಡುವುದಿಲ್ಲ ಎಂದು ಅರಣ್ಯ ಸಚಿವ ವಿಜಯ ಶಂಕರ್ ಸ್ಪಷ್ಟಪಡಿಸಿದರು.

ಈ ಸಂಬಂಧ ಇದೇ 6ರಂದು ತೀರ್ಮಾನ ಮಾಡಲಾಗುವುದು. ಇದರ ಜತೆಗೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸಣ್ಣ ಜಲ ವಿದ್ಯುತ್  ಯೋಜನೆಗೂ ಆಸ್ಪದ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT