ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲೂ `ಮುತ್ತು ಕೃಷಿ'

ಬೆಂಗಳೂರು ಕೃಷಿ ವಿವಿ- ಇಂದಿನಿಂದ ತರಬೇತಿ
Last Updated 14 ಏಪ್ರಿಲ್ 2013, 19:41 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು `ಸಿಹಿ ನೀರಿನಲ್ಲಿ ಮುತ್ತು ಕೃಷಿ' ನಡೆಸಲು ರೈತರನ್ನು ಪ್ರೇರೇಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ರೈತರಿಗೆ ಈ ಕೃಷಿಯ ಬಗ್ಗೆ ಸರಣಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅಗತ್ಯ ಪ್ರೋತ್ಸಾಹ ನೀಡಲು ಯೋಜಿಸಿದೆ.

ಮುತ್ತು ಕೃಷಿ ಎಂದ ಕೂಡಲೇ ನೆನಪಾಗುವುದು ಚೀನಾ ಹಾಗೂ ಜಪಾನ್. ಈ ಎರಡು ದೇಶಗಳು `ಮುತ್ತು ಕೃಷಿ'ಯಲ್ಲಿ ಏಕಸ್ವಾಮ್ಯ ಹೊಂದಿವೆ. ಈಚಿನ ವರ್ಷಗಳಲ್ಲಿ ಹೈದರಾಬಾದ್ ಸೇರಿದಂತೆ ಇತರ ಭಾಗಗಳಲ್ಲಿ ಮುತ್ತು ಕೃಷಿಯ ಬಗ್ಗೆ ರೈತರು ಆಸಕ್ತಿ ತೋರಲಾರಂಭಿಸಿದ್ದಾರೆ. ಆದರೆ, ರಾಜ್ಯದಲ್ಲಿ ಈವರೆಗೆ ವ್ಯವಸ್ಥಿತವಾಗಿ ಮುತ್ತು ಕೃಷಿ ನಡೆಸಿದವರ ಸಂಖ್ಯೆ ತೀರಾ ಕಡಿಮೆ. ಈ ಬಗ್ಗೆ ರೈತರಲ್ಲಿ ಜಾಗೃತಿಯೂ ಕಡಿಮೆ. ಈ ಹಿನ್ನೆಲೆಯಲ್ಲಿ ವಿವಿಯ ಒಳಾಂಗಣ ಮೀನುಗಾರಿಕೆ ಘಟಕವು ಕೃಷಿಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.

ತರಬೇತಿ: ಇಂದಿನಿಂದ (ಏಪ್ರಿಲ್ 15) 19ರ ವರೆಗೆ ಐದು ದಿನಗಳ ಕಾಲ ರೈತರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9.30ರಿಂದ ಸಂಜೆ 4.30ರ ವರೆಗೆ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಸಂಶೋಧನಾ ಕೇಂದ್ರದ ಒಳಾಂಗಣ ಮೀನುಗಾರಿಕೆಯ ತರಬೇತಿ ಸಭಾಂಗಣದಲ್ಲಿ ತರಬೇತಿ ನಡೆಯಲಿದೆ. ಈವರೆಗೆ 100ಕ್ಕೂ ಅಧಿಕ ರೈತರು ಅರ್ಜಿ ಸಲ್ಲಿಸಿದ್ದು, ಈ ಪೈಕಿ 30-35 ರೈತರನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು.

`ಈಗ ಆರಂಭಿಕ ಹಂತದಲ್ಲಿ ಸೀಮಿತ ಸಂಖ್ಯೆಯ ರೈತರಿಗೆ ತರಬೇತಿ ನೀಡಲಾಗುವುದು. 6 ತಿಂಗಳೊಳಗೆ ಇನ್ನೆರಡು ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ. ತರಬೇತಿಗೆ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ನಿಗಮವು (ಎನ್‌ಎಫ್‌ಡಿಸಿ) ಅಗತ್ಯ ಹಣಕಾಸಿನ ನೆರವು ನೀಡಲಿದೆ. ರೈತರು ಹೆಚ್ಚಿನ ಆಸಕ್ತಿ ತೋರಿದರೆ ಅಗತ್ಯ ಸಹಕಾರ ನೀಡಲು ವಿಶ್ವವಿದ್ಯಾಲಯ ಸಿದ್ಧವಿದೆ' ಎಂದು ಮೀನುಗಾರಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಿ.ವಿ.ಕೃಷ್ಣಮೂರ್ತಿ `ಪ್ರಜಾವಾಣಿ' ತಿಳಿಸಿದರು.

ಕೃಷಿ ಹೇಗೆ: `ಸಮುದ್ರದಲ್ಲಿ ನೈಸರ್ಗಿಕವಾಗಿ ಕಪ್ಪೆಚಿಪ್ಪಿನಲ್ಲಿ ಮುತ್ತು ಸೃಷ್ಟಿಯಾಗುತ್ತದೆ. ಜನರು ಒಂದು ಮುತ್ತು ಪಡೆಯಲು ಸಾವಿರಾರು ಕಪ್ಪೆಚಿಪ್ಪುಗಳನ್ನು ಸಾಯಿಸಬೇಕಿತ್ತು. ಈಗ ಆ ರೀತಿ ಮಾಡುವ ಅಗತ್ಯ ಇಲ್ಲ. ಕಪ್ಪೆಚಿಪ್ಪಿನಲ್ಲಿ ಮುತ್ತು ಅಭಿವೃದ್ಧಿಯಾಗಲು 7-8 ತಿಂಗಳ ಕಾಲಾವಕಾಶ ಬೇಕಿದೆ' ಎಂದು ಅವರು ಮಾಹಿತಿ ನೀಡಿದರು.
`ಕಪ್ಪೆಚಿಪ್ಪು ನದಿ, ಕೆರೆ, ಕಾಲುವೆಗಳಲ್ಲಿ ದೊರಕುತ್ತದೆ. ನೀರು ನಿಲ್ಲುವ ಒಂದು ಗುಂಟೆ ಜಾಗದಲ್ಲಿ 10,000 ಕಪ್ಪೆಚಿಪ್ಪುಗಳನ್ನು ಬಿಡಬಹುದು. ಅದರೊಳಗೆ ಇಮೇಜ್ ಹಾಕಿ ನೀರಿನೊಳಗೆ ಬಿಡಲಾಗುತ್ತದೆ. ನೀರಿನ ಗುಣಮಟ್ಟ ನಿರ್ವಹಣೆ ಅತೀ ಮುಖ್ಯ' ಎಂದು ಅವರು ಕಿವಿಮಾತು ಹೇಳಿದರು.

`ಮೂರು ದಿನಕ್ಕೊಮ್ಮೆ ನೀರಿಗೆ ಸೆಗಣಿ, ಕಡ್ಲೆಕಾಯಿ ಹಿಂಡಿ ಹಾಕಬೇಕು. ನೀರಿನ ಗುಣಮಟ್ಟ ಹಾಳಾಗದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕೆ ಹೆಚ್ಚು ಕೂಲಿಯಾಳುಗಳ ಅಗತ್ಯ ಇಲ್ಲ. ಒಂದು ಗುಂಟೆಯಲ್ಲಿ ಕೃಷಿ ಮಾಡಲು ದಿನಕ್ಕೆ ಒಂದು ಗಂಟೆ ಮೀಸಲಿಟ್ಟರೆ ಸಾಕು' ಎಂದು ಅವರು ಮಾಹಿತಿ ನೀಡಿದರು. `ಭಾರತದಲ್ಲಿ ಮುತ್ತಿಗೆ ಭಾರಿ ಬೇಡಿಕೆ ಇದೆ. ರೈತರು ಮಾರಾಟದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಈವರೆಗೆ ರಾಜ್ಯದಲ್ಲಿ ಸುವ್ಯವಸ್ಥಿತ ಮಾರುಕಟ್ಟೆ ಇಲ್ಲ. ಕೃಷಿ ಅಭಿವೃದ್ಧಿಯಾದಂತೆ ಮಾರುಕಟ್ಟೆಯೂ ಸೃಷ್ಟಿಯಾಗಲಿದೆ. ಈಗ ಸರ್ಕಾರ ಈ ಕೃಷಿಗೆ ಯಾವುದೇ ಸಬ್ಸಿಡಿ, ಸಹಾಯಧನ ನೀಡುತ್ತಿಲ್ಲ' ಎಂದರು.

ಹೆಚ್ಚಿನ ಮಾಹಿತಿಗೆ: ಡಾ.ಬಿ.ವಿ.ಕೃಷ್ಣಮೂರ್ತಿ, ಸಹಾಯಕ ಪ್ರಾಧ್ಯಾಪಕ, ಒಳಾಂಗಣ ಮೀನುಗಾರಿಕೆ ಘಟಕ, ಮುಖ್ಯ ಸಂಶೋಧನಾ ಕೇಂದ್ರ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು-560024, ದೂರವಾಣಿ-9448377863, 080-23515644. ರೈತರು ಸ್ಥಳೀಯ ಸಹಾಯಕ ಮೀನುಗಾರಿಕಾ ನಿರ್ದೇಶಕರಿಂದಲೂ ಮಾಹಿತಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT