ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲೇ ಕನ್ನಡಕ್ಕೆ ಹೀನಾಯ ಸ್ಥಿತಿ

Last Updated 14 ಸೆಪ್ಟೆಂಬರ್ 2011, 19:50 IST
ಅಕ್ಷರ ಗಾತ್ರ

ಬೆಂಗಳೂರು:  `ರಾಜ್ಯದ ಎಲ್ಲೆಡೆ ಕನ್ನಡ ಹೀನಾಯ ಸ್ಥಿತಿಯಲ್ಲಿದೆ. ಹಾಗಾಗಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಿಂದ ರಾಜ್ಯದಾದ್ಯಂತ ಕನ್ನಡ ಚಳವಳಿ ಆರಂಭವಾಗಬೇಕು~ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಕರೆ ನೀಡಿದರು.

ಕನ್ನಡ ಚಳವಳಿಗಾಗಿ ಬೂಟ್ಸ್ ಏಟು ಬಿದ್ದ ದಿನವನ್ನೇ ಜನ್ಮದಿನಾಚರಣೆಯಾಗಿ ಆಚರಿಸುವ ಅವರಿಗೆ ನಗರದ ಪುರಭವನದಲ್ಲಿ ಅಭಿಮಾನಿಗಳು ಬುಧವಾರ ಸನ್ಮಾನಿಸಿದ ಬಳಿಕ ಮಾತನಾಡಿದರು.

`ಬೆಂಗಳೂರಿನಲ್ಲಿ ಕನ್ನಡ ಅಧೋಗತಿಗೆ ಇಳಿದಿದೆ. ಗಡಿ ಭಾಗಗಳಲ್ಲೂ ಕನ್ನಡವೇ ಇಲ್ಲ.  ಹಾಗಾಗಿ ನವೆಂಬರ್‌ನಿಂದ ಉಗ್ರ ಚಳವಳಿ ನಡೆಯಬೇಕು. ಎಲ್ಲ ಕನ್ನಡ ಪರ ಸಂಘಟನೆಗಳು ಒಂದಾಗಿ ಹೋರಾಟಕ್ಕಿಳಿಯಬೇಕು~ ಎಂದರು.

`ಸರ್ಕಾರ ಗಡಿನಾಡ ಪ್ರದೇಶಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿ 10,000 ಕೋಟಿ ರೂಪಾಯಿ ಅನುದಾನ ನೀಡಬೇಕು. ಹೊರನಾಡ ಕನ್ನಡಿಗರ ಅಭಿವೃದ್ಧಿಗೆ ಪ್ರತಿ ವರ್ಷ ರೂ 500 ಕೋಟಿ ಬಿಡುಗಡೆ ಮಾಡಬೇಕು. ಬಿಬಿಎಂಪಿಯು ಮೈಸೂರು ಬ್ಯಾಂಕ್ ವೃತ್ತದಲ್ಲಿ ಅಮೋಘವರ್ಷ ನೃಪತುಂಗನ ಪ್ರತಿಮೆ ನಿರ್ಮಿಸಬೇಕು~ ಎಂದು ಆಗ್ರಹಿಸಿದರು.

`ಇನ್ನೂ 30 ವರ್ಷ ಚಳವಳಿಯಲ್ಲೇ ಮುಂದುವರೆಯುತ್ತೇನೆ. ಮುಂದಿನ ಬಾರಿ ಚಾಮರಾಜನಗರದಿಂದ ಶಾಸಕನಾಗಿ ಆಯ್ಕೆಯಾಗುತ್ತೇನೆ ಎಂಬ ವಿಶ್ವಾಸವಿದೆ~ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್, `ಕನ್ನಡ ನಾಡು, ನುಡಿ, ಗಡಿಗೆ ಚ್ಯುತಿ ಉಂಟಾದಾಗ ಹೋರಾಟಕ್ಕಿಳಿಯುವ ವಾಟಾಳ್ ನಾಗರಾಜ್ ಅವರು ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಹೋರಾಟಗಾರರ ಸಂಖ್ಯೆ ಹೆಚ್ಚಾಗಬೇಕು. ಅವರ ಸೇವೆ ನಾಡಿಗೆ ಅಗತ್ಯವಾಗಿದೆ~ ಎಂದು ಹೇಳಿದರು.

ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ, `ಕನ್ನಡಿಗರನ್ನು ಎಚ್ಚರಿಸುವ, ಕನ್ನಡ ಪರ ಕಾರ್ಯಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರುವುದನ್ನು ವಾಟಾಳ್ ಮುಂದುವರಿಸಬೇಕು~ ಎಂದರು.

ಚಿತ್ರ ನಿರ್ಮಾಪಕ ಬಸಂತಕುಮಾರ್ ಪಾಟೀಲ ಮಾತನಾಡಿ, `ಕನ್ನಡಕ್ಕಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ವಾಟಾಳ್ ನಾಗರಾಜ್ ಅವರ ಪ್ರತಿಮೆಯನ್ನು ನಗರದ ಪ್ರಮುಖ ಸ್ಥಳದಲ್ಲಿ ನಿರ್ಮಿಸಬೇಕು. ವರ್ಷದೊಳಗೆ ಈ ಕಾರ್ಯ ನೆರವೇರಬೇಕು. ಇದಕ್ಕೆ ಅಗತ್ಯ ಸಹಕಾರ ನೀಡಲಾಗುವುದು~ ಎಂದರು.
ಇದೇ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಅವರಿಗೆ ಬೂಟಿನ ಪ್ರತಿಕೃತಿಯಿರುವ ಸ್ಮರಣಫಲಕ ನೀಡಿ ಸನ್ಮಾನಿಸಲಾಯಿತು.

ಕಾಂಗ್ರೆಸ್ ಮುಖಂಡ ಡಾ.ಪುಟ್ಟದಾಸ್, ಚಿತ್ರ ಸಾಹಿತಿ ಸಿ.ವಿ. ಶಿವಶಂಕರ್, ಚಿತ್ರ ನಿರ್ಮಾಪಕ ಅಂಕಲಗಿ, ಕನ್ನಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್. ಕುಮಾರ್, ಕನ್ನಡ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಕೆ.ಪ್ರಭಾಕರರೆಡ್ಡಿ, ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎನ್. ಮೂರ್ತಿ, ವಾಟಾಳ್ ನಾಗರಾಜ್ ಅವರ ಪುತ್ರಿ ಅನುಪಮಾ ಇತರರು ಉಪಸ್ಥಿತರಿದ್ದರು.

ಪಟೇಲ್ ಆಶೀರ್ವದಿಸಿದರು!
ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, `ನಿನ್ನೆ ಜೆ.ಎಚ್. ಪಟೇಲ್ ಸಿಕ್ಕಿದ್ದರು. ನನಗೆ ಆಶೀರ್ವಾದ ಮಾಡಿದರು~ ಎಂದಾಗ ಸಭಿಕರು ಕೆಲಕಾಲ ಗಲಿಬಿಲಿಗೊಂಡರು.
ಬಳಿಕ ಮಾತು ಮುಂದುವರಿಸಿದ ಅವರು, `ಜೆ.ಎಚ್. ಪಟೇಲ್, ನಂಜೇಗೌಡರು, ಬೈರೇಗೌಡರು, ನಾಗೇಗೌಡರು ಸಿಕ್ಕಿದ್ದರು. `ಏನಪ್ಪ ನಿನಗೆ ಸನ್ಮಾನವಂತೆ, ಒಳ್ಳೆಯದಾಗಲಿ~ ಎಂದರು.
 
ನಾವು ಯಮ ಧರ್ಮರಾಯನ ಕೋಣೆಯ ಪಕ್ಕದ ಗೆಸ್ಟ್‌ಹೌಸ್‌ನಲ್ಲಿದ್ದೇವೆ. ನಿನಗಿನ್ನೂ 35- 40 ವರ್ಷ ಇದೆ. ಆರಾಮವಾಗಿರು ಎಂದು ಕನಸಿನಲ್ಲಿ ಆಶೀರ್ವದಿಸಿದರು~ ಎಂದಾಗ ಸಭಿಕರು ನಗೆಗಡಲಲ್ಲಿ ತೇಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT