ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಾದ್ಯಂತ ಭಿಕ್ಷುಕರ ಸರ್ವೆ ಕಾರ್ಯ

Last Updated 21 ಸೆಪ್ಟೆಂಬರ್ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: `ಭಿಕ್ಷುಕರ ಒಟ್ಟು ಸಂಖ್ಯೆಯನ್ನು ಗುರುತಿಸಲು ಮುಂದಿನ ಆರು ತಿಂಗಳಲ್ಲಿ ರಾಜ್ಯದಾದ್ಯಂತ ಸರ್ವೆ ಮಾಡಲಾಗುವುದು~ ಎಂದು ಕೇಂದ್ರ ಪರಿಹಾರ ಸಮಿತಿ (ಸಿಆರ್‌ಸಿ) ಅಧ್ಯಕ್ಷ ಕೆ.ಎ.ರಾಮಲಿಂಗಪ್ಪ ತಿಳಿಸಿದರು.

ನಗರದ ಸುಮನಹಳ್ಳಿಯಲ್ಲಿರುವ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯದಾದ್ಯಂತ ಈಗಾಗಲೇ ಇರುವ 14 ಭಿಕ್ಷುಕರ ಪುನರ್ವಸತಿ ಕೇಂದ್ರಗಳ ಜೊತೆಗೆ, ಇನ್ನೂ 14 ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಅವರ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಿಕ್ಷುಕರ ಸರ್ವೆ ಕಾರ್ಯ ನಡೆಸಲಾಗುವುದು~ ಎಂದು ಹೇಳಿದರು.

ಸಿಬ್ಬಂದಿ ನೇಮಕಾತಿ: ಒಟ್ಟು 14 ಕೇಂದ್ರಗಳಲ್ಲಿ 230 ಹುದ್ದೆಗಳಿದ್ದು, ಅವುಗಳಲ್ಲಿ 103 ಹುದ್ದೆಗಳನ್ನು ಈಗಾಗಲೇ ಕಾಯಂ ಸ್ವರೂಪದಲ್ಲಿ ನೇಮಕಾತಿ ಮಾಡಲಾಗಿದೆ. ಉಳಿದ 127 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುವುದು.

ಈ ಕುರಿತಂತೆ ಈಗಾಗಲೇ ಆಯಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಪ್ರಕ್ರಿಯೆ 15 ದಿನಗಳಲ್ಲಿ ಮುಗಿಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಡಾ.ಆರ್. ಎನ್. ರಾಜಾ ನಾಯ್ಕ ತಿಳಿಸಿದರು.

ಮೂರು ಕಡೆ ಸರ್ವೆ: ಇದೇ ಪ್ರಥಮ ಬಾರಿಗೆ ಸಮಿತಿಯು ಹಂಪಿ ಕನ್ನಡ ವಿ.ವಿ.ಯ ಅಭಿವೃದ್ಧಿ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜನಾರ್ದನ ಅವರಿಗೆ ಕೋರಿತ್ತು. ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಕಮಲಾಪುರ, ಹಂಪಿಯಲ್ಲಿ ಸರ್ವೆ ಮಾಡಿ ವರದಿ ನೀಡಿದ್ದು, ಅದರ ಕೆಲ ಕೌತುಕ ವಿವರಗಳನ್ನು ಜನಾರ್ದನ ನೀಡಿದರು. ಈ ಮೂರು ಪ್ರದೇಶಗಳಲ್ಲಿ ಒಟ್ಟು 296 ಭಿಕ್ಷುಕರ ಸರ್ವೆ ಮಾಡಲಾಯಿತು.

ಅದರಲ್ಲಿ ಹಿಂದುಗಳು ಶೇ 88.9, ಮುಸ್ಲಿಮರು ಶೇ 10.1, ಕ್ರಿಶ್ಚಿಯನ್ನರು ಶೇ 0.3; ಭಿಕ್ಷುಕರ ಪ್ರಮಾಣ ಶೇ 52.7 ಇದ್ದರೆ ಭಿಕ್ಷುಕಿಯರು ಶೇ 46.6; ಪರಿಶಿಷ್ಟ ಜಾತಿಯವರು ಶೇ 35.8, ಪರಿಶಿಷ್ಟ ಪಂಗಡ ಶೇ19.9; ಅವಿವಾಹಿತ ಭಿಕ್ಷುಕರು ಶೇ 31.8, ವಿವಾಹಿತರು ಶೇ 58, ವಿಧವೆ/ವಿದುರರು ಶೇ 7.1; ಅನಕ್ಷರಸ್ಥರು ಶೇ 89.9, ಅಕ್ಷರಸ್ಥರು 10.1.

ಭಿಕ್ಷಾಟನೆ ಲಾಭದಾಯಕ ಎಂಬುದನ್ನು ಮನಗಂಡ ಕೆಲವರು, ಭಿಕ್ಷೆ ಬೇಡುವುದು ಬಿಡುತ್ತೀರಾ ಎಂಬ ಪ್ರಶ್ನೆಗೆ `ಉಹೂಂ...~ ಎಂದಿದ್ದಾರೆ. ಅವರ ಸಂಖ್ಯೆ  ಶೇ 57.

40 ಕೋಟಿ ಬಾಕಿ ಉಳಿಸಿಕೊಂಡ ಬಿಬಿಎಂಪಿ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ನಾಗರಿಕರು ಮನೆ ಕಟ್ಟುವಾಗ ತೆರಿಗೆಯನ್ನು ಪಡೆಯುತ್ತದೆ. ಅದರಲ್ಲಿ ಭಿಕ್ಷುಕರ ಪುನರ್ವಸತಿಗಾಗಿಯೂ ಶೇ 3ರಷ್ಟು ತೆರಿಗೆ ಸಂಗ್ರಹ ಮಾಡುತ್ತದೆ. ಆದರೆ ಹೀಗೆ ಸಂಗ್ರಹಿಸಿದ ಮೊತ್ತವನ್ನು ಬಿಬಿಎಂಪಿ ತನ್ನ ಬಳಿಯೇ ಉಳಿಸಿಕೊಂಡಿದೆ! ಈ ಮಾಹಿತಿ ನೀಡಿದವರು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ರಾಮಲಿಂಗಪ್ಪ.

ಭಿಕ್ಷುಕರ ಕಲ್ಯಾಣಕ್ಕೆ ಕೂಡಲೇ ಸ್ಪಂದಿಸಬೇಕಿದ್ದ ಪಾಲಿಕೆ ಸಂಗ್ರಹವಾದ ತೆರಿಗೆಯನ್ನು ಇನ್ನೂ ತನ್ನ ಬಳಿಯೇ ಇಟ್ಟುಕೊಂಡಿರುವ ಕ್ರಮವನ್ನು ಅವರು ಸೂಕ್ಷ್ಮವಾಗಿಯೇ ಟೀಕಿಸಿದರು. ಜೊತೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರೂ 2.5 ಕೋಟಿ ಮತ್ತು ಬೆಳಗಾವಿ ಮಹಾನಗರ ಪಾಲಿಕೆ 2 ಕೋಟಿ ರೂಪಾಯಿ ತೆರಿಗೆ ಹಣವನ್ನು ತಮ್ಮ ಬಳಿಯೇ ಉಳಿಸಿಕೊಂಡಿವೆ!
 

ಮಗಳ ಮನೆಗೆ ಹೊರಟಾತ ಭಿಕ್ಷುಕರ ಕೇಂದ್ರಕ್ಕೆ...
ಭಿಕ್ಷುಕರ ಕೇಂದ್ರದಲ್ಲಿ ಭಿಕ್ಷುಕರ ಕೊರತೆಯಿದೆಯೇ? ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರ ಪ್ರಕಾರ ಇದು ಗಂಜಿ ಕೇಂದ್ರವಲ್ಲ. ಭಿಕ್ಷುಕರೆಲ್ಲ ಇಲ್ಲಿ ಕಾಯಂ ಆಗಿ ಉಳಿದುಕೊಳ್ಳಲಾಗುವುದಿಲ್ಲ. ಆದರೆ ಮಗಳ ಮನೆಗೆ ಹೊರಟವರನ್ನು ಭಿಕ್ಷುಕರೆಂದು ಕರೆತಂದು ಕೇಂದ್ರದಲ್ಲಿ ಕೂಡಿ ಹಾಕಲಾಗಿದೆ!

ಭಿಕ್ಷುಕರೆಂದು ಶಂಕಿಸಿ ಕರೆತಂದ ವ್ಯಕ್ತಿಯೊಬ್ಬರನ್ನು ಮಾಧ್ಯಮದವರು ಮಾತನಾಡಿಸಿದಾಗ, ಮಗಳ ಮನೆಗೆಂದು ಆನೇಕಲ್‌ಗೆ ಹೊರಟಿದ್ದೆ. ಭಿಕ್ಷುಕನೆಂದು ತಿಳಿದು ನನ್ನನ್ನು ಇಲ್ಲಿಗೆ ಕರೆತಂದಿದ್ದಾರೆ ಎಂದು ಹೇಳಿದರು. ಮನೆಗೆ ಹೋಗುತ್ತೀರಾ ಎಂದಾಗ, ಕಳುಹಿಸಿದರೆ ಹೋಗುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಈ ಬಗ್ಗೆ ಮೇಲ್ವಿಚಾರಕರನ್ನು ವಿಚಾರಿಸಿದರೆ, `ಮೂರು ತಿಂಗಳ ನಿಗಾ ಅವಧಿ ಇದೆ. ಈಗಾಗಲೇ ಅವರ ವಿಳಾಸಕ್ಕೆ ಪತ್ರ ಬರೆದಿದ್ದೇವೆ. ಮನೆಯವರು ಬಂದರೆ ಕಳುಹಿಸಲಾಗುವುದು~ ಎಂದರು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT