ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರ ನಿರ್ಧಾರಕ್ಕೆ ಅನಂತಮೂರ್ತಿ ಕೆಂಡ

Last Updated 5 ಫೆಬ್ರುವರಿ 2011, 17:50 IST
ಅಕ್ಷರ ಗಾತ್ರ

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ (ಬೆಂಗಳೂರು): ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿಯವರಿಗೆ ಗೌರವ ಡಾಕ್ಟರೇಟ್ ನೀಡುವ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸ್ತಾವವನ್ನು ತಿರಸ್ಕರಿಸಿದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್‌ರ ನಿರ್ಧಾರದ ವಿರುದ್ಧ ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಕೆಂಡ ಕಾರಿದ್ದಾರೆ. ಸಾಹಿತ್ಯ ಸಮೇಳನದ ಕಾವ್ಯ ವಾಚನ-ಗಾಯನ ಗೋಷ್ಠಿಯ ಅಧ್ಯಕ್ಷ ಭಾಷಣದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ’ರಾಜ್ಯಪಾಲರು ಮಾಡಿದ ದೊಡ್ಡ ತಪ್ಪು ಇದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನಾರೋಗ್ಯದ ಕಾರಣ ತಡವಾಗಿ ಆಗಮಿಸಿ, ಆರಂಭದಲ್ಲೇ ಅಧ್ಯಕ್ಷ ಭಾಷಣ ಮುಗಿಸಿ ಅವರು ಮನೆಗೆ ತೆರಳಿದರು. ಅದಕ್ಕೂ ಮುನ್ನ ಕ್ಷಿಪ್ರ ಭಾಷಣ ಮಾಡಿ, ’ನಾನು ಆಡುವ ಮಾತು ಈ ಗೋಷ್ಠಿಯಲ್ಲಿ ಅಪ್ರಸ್ತುತ ಎನ್ನಿಸಬಹುದು. ಆದರೆ ಇದನ್ನು ಹೇಳಲೆಂದೇ ಅನಾರೋಗ್ಯವಿದ್ದರೂ ಇಲ್ಲಿಗೆ ಬಂದೆ. ರಾಜ್ಯಪಾಲರು ದೊಡ್ಡ ತಪ್ಪು ಮಾಡಿದ್ದಾರೆ. ಕನ್ನಡ ಪರಂಪರೆಯಲ್ಲಿ ದೊಡ್ಡ ಪಂಡಿತರಾದ ಚಿದಾನಂದಮೂರ್ತಿಯವರಿಗೆ ಅವಮಾನ ಮಾಡಿದ್ದಾರೆ. ಇದು ಕೂಡದು’ ಎಂದರು.

‘ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದರೆ ಜಗಳ ಮಾಡೋಣ. ಚಿದಾನಂದಮೂರ್ತಿಯವರ ಜತೆ ನಾನೂ ಜಗಳ ಮಾಡಿದ್ದೇನೆ. ಆದರೆ ರಾಜ್ಯಪಾಲರು ಅವರ ಗೌರವವನ್ನು ಕಡಿಮೆ ಮಾಡಿದ್ದಾರೆ’ ಎಂದು ಅನಂತಮೂರ್ತಿ ಟೀಕಿಸಿದರು. ಅವರ ಮಾತುಗಳಿಗೆ ಸಭಿಕರು ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಅನುಮೋದಿಸಿದರು.

 ಅದಕ್ಕೂ ಮುನ್ನ ಹಾಡುವ ಕವಿತೆಗಳ ಬಗ್ಗೆ ಲಹರಿ ಹರಿಸಿದ ಅನಂತಮೂರ್ತಿ, ‘ಸಂಗೀತದ ಮೋಹವನ್ನು ಕವಿತೆಗೆ ಹಚ್ಚಬೇಡಿ’ ಎಂಬ ರಾಮಚಂದ್ರ ಶರ್ಮರ ಮಾತುಗಳನ್ನು ನೆನಪಿಸಿಕೊಂಡರು. ‘ಪದ್ಯ ಇರುವುದು ಓದಲಲ್ಲ; ಆಡಲು ಇರುವುದು. ಪುಣ್ಯವಶಾತ್ ಕೆಲವು ಕವಿತೆಗಳು ಹಾಡಲೂ ಇವೆ. ಆದರೆ ಕವಿತೆಯನ್ನು ಹಾಡುವಾಗ ಭಾಷೆಯ ಶಕ್ತಿ ಮಾಯವಾಗುವ ಬಗ್ಗೆ ಎಚ್ಚರ ವಹಿಸಬೇಕು’ ಎಂದು ನುಡಿದರು.

‘ಕವಿತೆಯನ್ನು ಓದುವಾಗಲೂ ಭಾಷೆ ಆಭಾಸವಾಗುವುದಿದೆ. ಈ ನಿಟ್ಟಿನಲ್ಲಿ ಕೆ.ಎಸ್.ನರಸಿಂಹಸ್ವಾಮಿ, ಬೇಂದ್ರೆ ಮುಂತಾದವರ ಓದಿನ ಕ್ರಮ ಅನುಸರಣೀಯ. ಕಾಳಿಂಗರಾಯರಂತಹ ಗಾಯಕರ ಪರಂಪರೆ ಈಗಲೂ ಮುಂದುವರಿದಿದ್ದು, ಕನ್ನಡ ಭಾಷೆ ಉಳಿಸಲು ಸಹಾಯವಾಗಿದೆ’ ಎಂದು ಅವರು ಹೇಳಿದರು.

ಮರುಳಯ್ಯ ಆಶಯ: ಕಾವ್ಯ ವಾಚನ- ಗಾಯನ ಗೋಷ್ಠಿಯ ಆಶಯ ಭಾಷಣ ಮಾಡಿದ ಹಿರಿಯ ಸಾಹಿತಿ ಡಾ.ಸಾ.ಶಿ.ಮರುಳಯ್ಯ, ಕಾವ್ಯಕ್ಷೇತ್ರದಲ್ಲಾದ ಬದಲಾವಣೆಗಳನ್ನು ಗುರುತಿಸಿದರು.  ‘ಕಾವ್ಯ ವರದಿಯಲ್ಲ; ತ್ರಿಕಾಲಕ್ಕೂ ಸಾಕ್ಷಿ. ಇಲ್ಲಿ ಬದಲಾವಣೆ ಅನಿವಾರ್ಯ. ಕನ್ನಡದ ಕಾವ್ಯ ನಿಂತ ನೀರಿನ ಕೊಚ್ಚೆಯಾಗದೆ, ಹರಿವ ನೀರಿನ ತೀರ್ಥದಂತಾಗಿದೆ. ಭಾವದ ಕಾವು ಮತ್ತು ನಾದದ ಮೋದದಿಂದ ಭಾವಗೀತೆ ಶ್ರೀಮಂತವಾಗಿದೆ’ ಎಂದು ಅವರು ಗುರುತಿಸಿದರು.

ಕನ್ನಡದ ಸಾಹಿತ್ಯ ಸಂಗೀತ ಸಮೀಕರಣವನ್ನು ಪ್ರಸ್ತಾಪಿಸಿದ ಅವರು, ’ಕವಿತೆಗಳನ್ನು ಸಂಗೀತಕ್ಕೆ ಅಳವಡಿಸಿದ ಕಾಳಿಂಗರಾಯರು, ಮೈಸೂರು ಅನಂತಸ್ವಾಮಿ ಮುಂತಾದವರು ಈ ಪರಂಪರೆಯನ್ನು ಶ್ರೀಮಂತಗೊಳಿಸಿದರು. ಬೇಂದ್ರೆಯವರ ‘ನಾದಲೀಲೆ’ ಇಲ್ಲಿ ಸ್ಮರಣಾರ್ಹ. ನವ್ಯದ ಕಾಲದಲ್ಲಿ ಅಡಿಗರ ಪ್ರತಿಭಟನೆಯೂ ನಡೆಯಿತು. ಒಂದು ಹಂತದಲ್ಲಿ ಸಾಹಿತ್ಯಕ ಟೀಕೆಗೆ ಒಳಗಾದ ಭಾವಗೀತೆಗಳು ಬಳಿಕ ಫೀನಿಕ್ಸ್‌ನಂತೆ ಮೇಲೆದ್ದು ಬಂದು ಮತ್ತೆ ಜನಪ್ರಿಯವಾಗಿವೆ. ಕನ್ನಡದಲ್ಲಿ ಭಾವ, ಭಾಷೆ, ನಾದದ ಹೊಳೆ ಹರಿದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಯಾವ ಅಕ್ಷರವನ್ನೂ ಬಿಡಬಾರದು...
ಬೆಂಗಳೂರು: ‘ಕನ್ನಡ ವರ್ಣಮಾಲೆಯಲ್ಲಿ ಯಾವ ಅಕ್ಷರಗಳನ್ನು ಬಿಡಬಾರದು. ಸ್ವರಗಳು ಭಾಷೆಗೆ ಶಕ್ತಿ ಕೊಡುತ್ತವೆ. ಸ್ವರಗಳನ್ನು ಬಿಟ್ಟರೆ ಭಾಷೆ ಕುಲಗೆಟ್ಟು ಹೋಗುತ್ತದೆ’ ಎಂದು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜಿ.ವೆಂಕಟಸುಬ್ಬಯ್ಯ ಎಚ್ಚರಿಕೆ ನೀಡಿದರು.

‘ಸಮ್ಮೇಳನಾಧ್ಯಕ್ಷರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡದ್ದು ಒಳ್ಳೆಯ ಪೊನೆಟಿಕ್ಸ್. ಸ್ವರ ಬಿಟ್ಟರೆ ಕಾಗುಣಿತವೂ ಕೆಡುತ್ತದೆ’ ಎಂದರು.

‘ಉದಾಹರಣೆಗೆ ಋ ಸ್ವರ ಬಿಟ್ಟರೆ ಕನ್ನಡದಲ್ಲಿರುವ ಅನೇಕ ಸಂಸ್ಕೃತ ಶಬ್ಧಗಳನ್ನು ಕೊಂದು ಬಿಡಬೇಕಾಗುತ್ತದೆ. ಅಮೃತ ಎಂಬ ಶಬ್ಧವನ್ನು ಅಮ್ರುತ ಎಂದು ಬರೆಯಬೇಕಾಗುತ್ತದೆ. ಎರಡೂ ಶಬ್ಧಗಳ ಉಚ್ಚಾರದಲ್ಲಿ ವ್ಯತ್ಯಾಸವಾಗುತ್ತದೆ. ಎಲ್ಲ ಭಾಷೆಗಳಲ್ಲೂ ಆಯಾ ಭಾಷೆಯದ್ದೇ ವಿಶಿಷ್ಟ ಉಚ್ಚಾರಣೆ ಇರುತ್ತದೆ. ಅದಕ್ಕೆ ಅನುಕೂಲ ಮಾಡಿಕೊಡುವ ಅಕ್ಷರಗಳನ್ನು ರೂಪಿಸಿಕೊಳ್ಳಲಾಗಿರುತ್ತದೆ. ಇದನ್ನು ಮರೆಯಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT