ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರ ಮೇಲೆ ಸಂಪುಟಾಸ್ತ್ರ: ಅನುಮತಿ ಬೇಡ ಎಂದು ಸಿಎಂ ಪತ್ರ

Last Updated 19 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭೂ ಹಗರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಆರ್.ಅಶೋಕ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡುವಂತೆ ‘ಜಸ್ಟೀಸ್ ಲಾಯರ್ಸ್‌ ಫೋರಂ’ ಮಾಡಿರುವ ಮನವಿಯನ್ನು ತಿರಸ್ಕರಿಸುವಂತೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಸರ್ಕಾರ ಮನವಿ ಮಾಡಿದೆ.

ಬುಧವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಂಪುಟ ಸಭೆಯ ನಿರ್ಣಯದ ಜೊತೆಗೆ ಯಡಿಯೂರಪ್ಪ ಅವರು ಬರೆದಿರುವ ಪತ್ರವನ್ನು ಭಾರದ್ವಾಜ್ ಅವರಿಗೆ ಕಳುಹಿಸಿಕೊಡಲಾಗಿದೆ. ಇದರಿಂದಾಗಿ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಮತ್ತಷ್ಟು ಬಿಗಡಾಯಿಸುವ ಲಕ್ಷಣಗಳು ಕಂಡುಬರುತ್ತಿವೆ.

ರಾಜ್ಯಪಾಲ ಭಾರದ್ವಾಜ್ ಈ ತಿಂಗಳ 3ರಂದು ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಬರೆದಿರುವ ಪತ್ರದ ಪ್ರಕಾರ ಗುರುವಾರದ ಒಳಗೆ 93 ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಕೊಡಬೇಕಾಗಿದೆ. ಈ ವಿಷಯವು ಗಂಭೀರ ಸ್ವರೂಪ ಪಡೆಯುತ್ತಿರುವ ಸೂಚನೆ ಸಿಕ್ಕಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಗಂಡಾಂತರದಿಂದ ಪಾರಾಗಲು ಇರುವ ಅವಕಾಶಗಳು ಹಾಗೂ ಹೋರಾಟದ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಸಂಪುಟ ಸಹೋದ್ಯೋಗಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

‘ಭೂ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಲೋಕಾಯುಕ್ತರು ಮತ್ತು ನ್ಯಾಯಮೂರ್ತಿ ಪದ್ಮರಾಜ ಆಯೋಗವು ತನಿಖೆ ನಡೆಸುತ್ತಿದ್ದು, ಒಂದೇ ವಿಷಯದ ಬಗ್ಗೆ ಎರಡು ಸಂಸ್ಥೆಗಳಿಂದ ತನಿಖೆ ನಡೆಸುವ ವಿಷಯ ಸದ್ಯ ಹೈಕೋರ್ಟ್‌ನಲ್ಲಿದೆ. ಹೀಗಿರುವಾಗ ಲಾಯರ್ಸ್‌ ಫೋರಂಗೆ ಅನುಮತಿ ನೀಡುವುದು ಸೂಕ್ತ ಅಲ್ಲ. ಅವರ ಅರ್ಜಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುವುದನ್ನು ಕೈಬಿಡುವಂತೆ ನಿರ್ಣಯದ ಮೂಲಕ ಮನವಿ ಮಾಡಿದ್ದೇವೆ’ ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಳೆದ ತಿಂಗಳ 31ರಂದು ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಸ್ವತಃ ಭಾರದ್ವಾಜ್ ಅವರೇ ಗಣರಾಜ್ಯೋತ್ಸವದ ನಂತರ ಅನುಮತಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದರ ನಂತರ ಕಾಂಗ್ರೆಸ್ ಮತ್ತು ಜೆಡಿ(ಎಸ್) ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿದಾಗಲೂ ಅವರಿಗೆ ಇದೇ ರೀತಿಯ ಭರವಸೆ ನೀಡಿದ್ದಾರೆ. ಇದೇ 27ರಂದು ದೂರು ದಾಖಲಿಸಲು ಅನುಮತಿ ನೀಡಲಾಗುತ್ತದೆ ಎಂಬ ಖಚಿತ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು ರಾಜ್ಯಪಾಲರು ನಮ್ಮ ಮನವಿಗೆ ಸ್ಪಂದಿಸುವ ವಿಶ್ವಾಸವಿದೆ’ ಎಂದರು.

‘ಯಾವುದೇ ಒಂದು ದೂರು ಬಂದ ನಂತರ ಆ ದೂರಿನ ಬಗ್ಗೆ ವಿಚಾರಣೆ ಪೂರ್ಣಗೊಂಡು, ವಿಚಾರಣೆ ಮಾಡುವ ಸಂಸ್ಥೆಗೆ ಅರ್ಜಿದಾರರು ಮಾಡಿದ ಆರೋಪಗಳಲ್ಲಿ ನಿಖರವಾದ ಸತ್ಯಾಂಶ ಇದೆ ಎಂದು ಸಾಕ್ಷ್ಯಾಧಾರ ಸಮೇತ ದೃಢವಾದ ನಂತರ ಅಪರಾಧ ದಂಡ ಸಂಹಿತೆ 197ನೇ ಕಲಂನಡಿ ಅಥವಾ ಭ್ರಷ್ಟಾಚಾರ ತಡೆ ಕಾನೂನಿನ 19ನೇ ಕಲಂನಡಿ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಬಹುದಾಗಿದೆ-

ಆದರೆ ಸದ್ಯ ಈ ಪ್ರಕರಣದಲ್ಲಿ ಯಾವುದೇ ತನಿಖಾ ಸಂಸ್ಥೆಯಾಗಲಿ ಅಥವಾ ಯಾವುದೇ ವಿಚಾರಣಾ ಆಯೋಗವಾಗಲಿ ಮುಖ್ಯಮಂತ್ರಿ ಅಥವಾ ಗೃಹ ಸಚಿವರು ತಪ್ಪಿತಸ್ಥರು ಎಂದು ಬೊಟ್ಟು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಲು ಅನುಮತಿ ನೀಡುವ ಅಧಿಕಾರ ನಿಮ್ಮ (ರಾಜ್ಯಪಾಲರ) ವ್ಯಾಪ್ತಿಗೆ ಬರುವುದಿಲ್ಲ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಮುಖ್ಯಮಂತ್ರಿ ಮತ್ತು ಸರ್ಕಾರದ ವಿರುದ್ಧ ಕೆಲವು ಆಪಾದನೆಗಳನ್ನು ಮಾಡಲಾಗಿದ್ದು, ಅವುಗಳನ್ನು ಲೋಕಾಯುಕ್ತರಿಗೆ ಸಲ್ಲಿಸಲಾಗಿದೆ. ಲೋಕಾಯುಕ್ತರು ಈ ವಿಷಯದಲ್ಲಿ ಈಗಾಗಲೇ ತನಿಖೆಯಲ್ಲಿ ತೊಡಗಿದ್ದಾರೆ. ಇದಲ್ಲದೆ ಸಚಿವ ಸಂಪುಟದ ತೀರ್ಮಾನದಂತೆ ನ್ಯಾಯಾಂಗ ಆಯೋಗವನ್ನು ರಚಿಸಿ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ ಅವರನ್ನು ಅದರ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

ಆಯೋಗವು 1995ರಿಂದ 2010ರವರೆಗಿನ ಭೂ ಸ್ವಾಧೀನ, ಡಿನೋಟಿಫಿಕೇಷನ್ ಪ್ರಕರಣಗಳು ಸೇರಿದಂತೆ ಎಲ್ಲ ಭೂ ಹಂಚಿಕೆ ಪ್ರಕರಣಗಳ ವಿಚಾರಣೆ ನಡೆಸಲಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಆಯೋಗವು ಕೋರಿದೆ. ಆದ್ದರಿಂದ ಇಡೀ ವಿಷಯ ಸಬ್‌ಜುಡೀಸ್  ಆಗುತ್ತದೆ

ಈ ಹಿನ್ನೆಲೆಯಲ್ಲಿ ಕಾನೂನುಕ್ರಮ ಕೈಗೊಳ್ಳುವುದಕ್ಕೆ ಅನುಮತಿ ನೀಡಲು ಬಯಸಿರುವುದು ನ್ಯಾಯಸಮ್ಮತವಲ್ಲ, ನಿಷ್ಪಕ್ಷಪಾತ ಮತ್ತು ನಂಬಿಕೆಗೆ ಅರ್ಹವಾದ ಕ್ರಮವೂ ಅಲ್ಲ. ಅನುಮತಿ ನೀಡಲು ತಾವು ಬಯಸುವುದು ಕೂಡ ಸಮರ್ಥನೀಯವಲ್ಲದ ಕ್ರಮವಾಗುತ್ತದೆ. ಆದ್ದರಿಂದ ಮುಖ್ಯಮಂತ್ರಿ, ಗೃಹ ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಬೇಕು ಎಂದು ಲಾಯರ್ಸ್‌ ಫೋರಂ ಮಾಡಿರುವ ಮನವಿಯನ್ನು ಕೂಡಲೇ ಕೈಬಿಡಬೇಕು ಎಂದು ಪತ್ರದಲ್ಲಿ  ಕೋರಲಾಗಿದೆ.

ಉಗ್ರ ಹೋರಾಟಕ್ಕೆ ಬಿಜೆಪಿ ಅಣಿ
ರಾಜ್ಯಪಾಲರ ಮೇಲೆ ಒತ್ತಡ ಹೇರುವ ದೃಷ್ಟಿಯಿಂದ ಇದೇ 25ರಂದು ರಾಜಭವನದ ಮುಂದೆ ಪ್ರತಿಭಟನೆ ನಡೆಸಲು ಹಾಗೂ 27ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲು ನಿರ್ಧರಿಸಲಾಗಿದೆ ಬಿಜೆಪಿ ಮೂಲಗಳು ತಿಳಿಸಿವೆ.

ರಾಜ್ಯಪಾಲರ ವಿರುದ್ಧ ಒತ್ತಡ ಹೇರುವ ತಂತ್ರಗಳ ಬಗ್ಗೆ ತುರ್ತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ಮೊದಲ ಹಂತವಾಗಿ ಇದೇ 24ರಂದು ರಾಜ್ಯದ ಬಿಜೆಪಿ ಸಂಸದರು ಮತ್ತು ಹಿರಿಯ ಮುಖಂಡರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ರಾಜ್ಯಪಾಲರ ವಿರುದ್ಧ ದೂರು ಸಲ್ಲಿಸಲಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಆರ್.ಅಶೋಕ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಿದರೆ ರಾಜ್ಯದ ಎಲ್ಲೆಡೆ ಚಳವಳಿ, ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದ್ದು, ರಾಜ್ಯಪಾಲರು ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ಕಾದು ನೋಡಿ ಹೋರಾಟವನ್ನು ತೀವ್ರಗೊಳಿಸಲಾಗುತ್ತದೆ ಎನ್ನಲಾಗಿದೆ. ಜ.25ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಇದಾದ ನಂತರ ಶಾಸಕರು ರಾಜಭವನದ ಮುಂದೆ ಪ್ರತಿಭಟನೆ ನಡೆಸುವರು. 26 ಇಲ್ಲವೇ 27ರಂದು ದೂರು ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಒಂದು ವೇಳೆ ಅನುಮತಿ ನೀಡಿದರೆ 27ರಂದು ಬಂದ್‌ಗೆ ಕರೆ ನೀಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದೆ ಇರಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಸಲಹೆ ಮೇರೆಗೆ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ ಎಂದು ಸಂಪುಟದಲ್ಲಿ ನಿರ್ಣಯ ಕೈಗೊಳ್ಳುವ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ. ಆದರೆ ಸಂಪುಟದ ಮನವಿಗೆ ಸ್ಪಂದಿಸದೆ ಅನುಮತಿ ನೀಡಿದರೆ ಉಗ್ರ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ.

ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಂತಿದೆ. ಆದರೆ ಒಂದು ವೇಳೆ ರಾಜ್ಯಪಾಲರು ದೂರು ದಾಖಲಿಸಲು ಅನುಮತಿ ನೀಡಿದರೆ ಆಗ ತಕ್ಕ ಬೆಲೆ ತೆರಲು ಸಿದ್ದರಾಗಬೇಕು ಎಂಬ ಇಂಗಿತವನ್ನೂ ಸಹ ಹೈಕಮಾಂಡ್ ವ್ಯಕ್ತಪಡಿಸಿದೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಿ ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT