ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರ ರಾಜಕೀಯ ನಡೆ

Last Updated 23 ಜನವರಿ 2011, 19:30 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ  ಕ್ರಿಮಿನಲ್ ಮೊಕದ್ದಮೆ ಹೂಡಲು ಇಬ್ಬರು ವಕೀಲರಿಗೆ ಅನುಮತಿ ನೀಡಿದ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರ ಕ್ರಮ ಸಂವಿಧಾನಾತ್ಮಕವಾಗಿ ಸರಿಯಾದ ನಡೆ ಅನ್ನಿಸಿದರೂ ಅದಕ್ಕೆ ರಾಜಕೀಯದ ಬಣ್ಣಬಂದಿದೆ.

ರಾಜ್ಯಪಾಲರು ಸಂವಿಧಾನದ (ರಾಜ್ಯದಲ್ಲಿ) ಮುಖ್ಯಸ್ಥರು. ಅವರು ತಮ್ಮ ಕರ್ತವ್ಯ ನಿರ್ವಹಿಸುವುದಕ್ಕಿಂತ ಹೆಚ್ಚಾಗಿ ರಾಜಕೀಯ ಧುರೀಣರಂತೆ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಇಳಿದ ವರ್ತನೆಯನ್ನು ಪಕ್ಷಪಾತದ ನಡವಳಿಕೆ ಎಂದೇ ಅರ್ಥೈಸಬೇಕಾಗುತ್ತದೆ. ಸಂವಿಧಾನದ ಮುಖ್ಯಸ್ಥರಾಗಿ ರಾಜ್ಯಪಾಲರು ಅತ್ಯಂತ ಘನತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜನ ಬಯಸುತ್ತಾರೆ. ಆದರೆ ಅವರು ಅವಕಾಶ ಸಿಕ್ಕಿದಾಗಲೆಲ್ಲ ಸಾರ್ವಜನಿಕ ವೇದಿಕೆಗಳಲ್ಲಿ ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಕಟುವಾದ ಟೀಕೆಗಳನ್ನು ಮಾಡಿದರು. ರಾಜ್ಯಪಾಲರನ್ನು ಕಾಂಗ್ರೆಸ್ ಪಕ್ಷದ ಏಜೆಂಟ್ ಹಾಗೂ ಯುಪಿಎ ಸರ್ಕಾರದ ವಕ್ತಾರ ಎಂದು ಬಿಜೆಪಿ ನಾಯಕರು ಟೀಕಿಸುವುದರಲ್ಲಿ ಅರ್ಥವಿದೆ ಎಂಬಂತೆ ನಡೆದುಕೊಂಡರು. ಈ ಬೆಳವಣಿಗೆಗಳು ಅತ್ಯಂತ ದುರದೃಷ್ಟಕರ.

ಮುಖ್ಯಮಂತ್ರಿ ಅಥವಾ ಸರ್ಕಾರದ ಇತರ ಮಂತ್ರಿಗಳ ಮೇಲೆ ಯಾರೇ ಭ್ರಷ್ಟಾಚಾರದ ದೂರು ಸಲ್ಲಿಸಿದರೂ, ದಾಖಲೆ ಹಾಗೂ ಪುರಾವೆಗಳನ್ನು ಪರಿಶೀಲಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕೇ ಹೊರತು ಅದಕ್ಕೆ ಮೊದಲೇ ಸಂಘರ್ಷಕ್ಕೆ ಇಳಿದವರಂತೆ ಬಹಿರಂಗವಾಗಿ ಆರೋಪಗಳ ಬಗ್ಗೆ ವ್ಯಾಖ್ಯಾನ ಮಾಡುವುದು ಅಪೇಕ್ಷಣೀಯವಲ್ಲ. ರಾಜ್ಯಪಾಲರು ಮಾಧ್ಯಮಗಳು ಹಾಗೂ ಕಾಂಗ್ರೆಸ್, ಜೆಡಿಎಸ್ ಮುಖಂಡರ ಭೇಟಿಗೆ ತೋರಿದ ಆತುರ ಇತ್ಯಾದಿಗಳನ್ನೆಲ್ಲ ಗಮನಿಸಿದರೆ ಅವರು ತಮ್ಮ ಹುದ್ದೆಯ ಘನತೆಯನ್ನು ಮರೆತು ವರ್ತಿಸಿದರು ಎಂದೇ ಹೇಳಬೇಕಾಗುತ್ತದೆ. ಇಂತಹ ರಾಜ್ಯಪಾಲರು ಬೇಕೆ? ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಯವರು ಆಲೋಚಿಸಬೇಕು.
 
ಮುಖ್ಯಮಂತ್ರಿ ಹಾಗೂ ಇತರ ಕೆಲವು ಮಂತ್ರಿಗಳ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ಭೂ ಡಿನೋಟಿಫೈ ಇತ್ಯಾದಿ ಆರೋಪಗಳ ಬಗ್ಗೆ ಲೋಕಾಯುಕ್ತರು ಮತ್ತು ನ್ಯಾಯಮೂರ್ತಿ ಪದ್ಮರಾಜ ಆಯೋಗ ವಿಚಾರಣೆ ನಡೆಸುತ್ತಿವೆ. ಮುಖ್ಯಮಂತ್ರಿ ಅವರ  ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ಎಲ್ಲಾ ಆರೋಪಗಳ ಬಗ್ಗೆ ಮೂರು ನ್ಯಾಯ ವೇದಿಕೆಗಳಲ್ಲಿ ವಿಚಾರಣೆ ನಡೆಯುವುದು ಎಷ್ಟರಮಟ್ಟಿಗೆ ಸರಿಯಾದೀತು.

ಮುಖ್ಯಮಂತ್ರಿ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಆರೋಪಗಳು ಅತ್ಯಂತ ಗಂಭೀರ ಸ್ವರೂಪದವು. ಅವನ್ನು ರಾಜಕೀಯ ಷಡ್ಯಂತ್ರದ ಭಾಗ, ಅದರಲ್ಲಿ ಹುರುಳಿಲ್ಲ ಎಂದು ಹೇಳಿ ತಳ್ಳಿ ಹಾಕಲಾಗದು. ಆರೋಪಗಳನ್ನು ನ್ಯಾಯಾಲಯದಲ್ಲಿ ಎದುರಿಸಬೇಕೇ ಹೊರತು ಬಂದ್ ಇತ್ಯಾದಿ ಪ್ರತಿಭಟನೆಗಳ ಮೂಲಕ ಅಲ್ಲ. ಬಂದ್ ಮಾಡುವುದು ಪ್ರತಿಭಟನೆಯ ಅತ್ಯಂತ ಹಳೆಯ ವಿಧಾನ. ಆಡಳಿತ ಪಕ್ಷವೇ ಬಂದ್‌ಗೆ ಕರೆ ಕೊಡುವುದು ಅತ್ಯಂತ ಖಂಡನೀಯ. ಬಂದ್‌ಗೆ ಕರೆ ಕೊಡುವುದು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ರಾಜ್ಯಪಾಲರ ನಿರ್ಧಾರದ ವಿರುದ್ಧ ಶನಿವಾರ ನಡೆದ ರಾಜ್ಯವ್ಯಾಪಿ ಬಂದ್‌ನಿಂದ ಸಾರ್ವಜನಿಕರಿಗೆ ಅಪಾರ ತೊಂದರೆಯಾಯಿತು.ಬಂದ್‌ಅನ್ನು ಮುಖ್ಯಮಂತ್ರಿ ಸಮರ್ಥಿಸಿಕೊಂಡಿದ್ದಾರೆ. ಬಂದ್ ಮಾಡುವವರಿಗೆ ಪರೋಕ್ಷವಾಗಿ ಉತ್ತೇಜನ ನೀಡಿ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ನೋಡುತ್ತ ಕೈಕಟ್ಟಿ ಕುಳಿತುಕೊಂಡ ರಾಜ್ಯ ಸರ್ಕಾರವನ್ನು ಜನರು ಕ್ಷಮಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT