ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯವನ್ನಾಳಲು ಅಧಿಕಾರ ಇಲ್ಲ

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಬೀದಿ ನಾಯಿಗಳ ಹಾವಳಿ ವಿಚಾರ ವಿಧಾನ ಪರಿಷತ್ತಿನಲ್ಲಿ ಗುರುವಾರ ಪ್ರತಿಧ್ವನಿಸಿತು. `ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ರಾಜ್ಯವನ್ನಾಳಲು ಅಧಿಕಾರ ಇಲ್ಲ~ ಎಂದು ಜೆಡಿಎಸ್ ಸದಸ್ಯ ಎಂ.ಸಿ. ನಾಣಯ್ಯ ತರಾಟೆಗೆ ತೆಗೆದುಕೊಂಡರು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನೀಡಿದ ಉತ್ತರ ನಾಣಯ್ಯ ಅವರನ್ನು ಕೆರಳಿಸಿತು.`ಪ್ರಾಣಿ ದಯಾ ಸಂಘವೊಂದು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬಾಕಿ ಇರುವುದರಿಂದ ನಾಯಿಗಳನ್ನು ಕೊಲ್ಲಲು ಸಾಧ್ಯವಿಲ್ಲ.
 
ಆದರೆ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಮುಂದುವರಿದಿದೆ. ಪ್ರತಿ ತಿಂಗಳು 6500ರಿಂದ 7000 ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. 2010-11ನೇ ಸಾಲಿನಲ್ಲಿ 69,141 ಹಾಗೂ 2011-12ನೇ ಸಾಲಿನಲ್ಲಿ 93,447 ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ~ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

`ಬೆಂಗಳೂರಿನ ಪ್ರತಿ ಉದ್ಯಾನದಲ್ಲಿ ಇಂದು 50ರಿಂದ 100 ಬೀದಿನಾಯಿಗಳು ಕಾಣಸಿಗುತ್ತವೆ. ಮಕ್ಕಳು- ವಯಸ್ಕರು ಓಡಾಡುವಂತಿಲ್ಲ. ವಿಧಾನಸೌಧ ಸುತ್ತಮುತ್ತ ಕೂಡ ಬೀದಿ ನಾಯಿಗಳನ್ನು ನಿಯಂತ್ರಿಸಲು ಪಾಲಿಕೆ ಹಾಗೂ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ~ ಎಂದು ನಾಣಯ್ಯ ತರಾಟೆಗೆ ತೆಗೆದುಕೊಂಡರು.

`ಒಂದು ನಾಯಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಸ್ವಯಂಸೇವಾ ಸಂಸ್ಥೆಗಳು ಒಂದು ಸಾವಿರ ರೂಪಾಯಿ ಪಡೆಯುತ್ತಿವೆ. ನಿಜವಾಗಿಯೂ ಅಷ್ಟು ಹಣ ಬೇಕಾಗುತ್ತದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ. ಅದೂ ಶಸ್ತ್ರಚಿಕಿತ್ಸೆಗೊಳಪಡಿಸಿದ ನಂತರ ನಾಯಿಗಳನ್ನು ಹಿಡಿದ ಜಾಗಕ್ಕೆ ವಾಪಸು ಬಿಟ್ಟರೆ ಹೇಗೆ ಹಾವಳಿ ನಿಯಂತ್ರಿಸಲು ಸಾಧ್ಯ~ ಎಂದು ಅವರು ಪ್ರಶ್ನಿಸಿದರು.

`ಹುಚ್ಚು-ನಾಯಿ, ರೋಗ ಅಂಟಿರುವ ನಾಯಿಗಳನ್ನು ಕೊಲ್ಲಲೇಬೇಕು ಎಂದು ನ್ಯಾಯಾಲಯಕ್ಕೆ ಸರ್ಕಾರ ಹೇಳಲಿ. ಅಂತಹ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು~ ಎಂದು ನಾಣಯ್ಯ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT