ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಯಲ್ಲಿ ಗದ್ದಲ: ಕಲಾಪ ಮುಂದೂಡಿಕೆ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್):  ಯುಪಿಎಗೆ ಬಾಹ್ಯ ಬೆಂಬಲ ನೀಡುತ್ತಿರುವ ಬಿಎಸ್‌ಪಿ ಹಾಗೂ ಎಸ್‌ಪಿ ಬುಧವಾರ ನಿರಂತರವಾಗಿ ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿದ್ದಕ್ಕೆ ಸಿಟ್ಟಿಗೆದ್ದ ಬಿಜೆಪಿ ಮುಖಂಡರು `ಸರ್ಕಾರಕ್ಕೆ ಸದನವನ್ನು ನಡೆಸಲು ಇಷ್ಟವಿದೆಯೋ ಇಲ್ಲವೋ ಎನ್ನುವುದನ್ನು  ಸ್ಪಷ್ಟಪಡಿಸಬೇಕು' ಎಂದು ಆಗ್ರಹಿಸಿದರು.

ಸರ್ಕಾರಿ ಉದ್ಯೋಗ ಬಡ್ತಿಯಲ್ಲಿ ಪರಿಶಿಷ್ಟ ಜಾತಿ/ಪಂಗಡಕ್ಕೆ ಮೀಸಲಾತಿ ನೀಡುವ ಕುರಿತು ಭಾರಿ ಕೋಲಾಹಲ ನಡೆಯುತ್ತಿದ್ದಾಗಲೇ ಉಪಸಭಾಪತಿ ಪಿ.ಜೆ. ಕುರಿಯನ್ ಮಧ್ಯಾಹ್ನಕ್ಕೆ ಕಲಾಪವನ್ನು ಮುಂದೂಡಿದರು.

ಅಂಬೇಡ್ಕರ್ ಸ್ಮಾರಕಕ್ಕೆ ಆಗ್ರಹ: ಮುಂಬೈನಲ್ಲಿ ಅಂಬೇಡ್ಕರ್ ಸ್ಮಾರಕ ನಿರ್ಮಿಸುವಂತೆ ಬಿಜೆಪಿ ಸದಸ್ಯರು ಶೂನ್ಯ ವೇಳೆಯಲ್ಲಿ ಆಗ್ರಹಿಸಿದರು.
`ಇಂದಿನ ಕಲಾಪ ಪಟ್ಟಿಯಲ್ಲಿ ಈ ಸಂಬಂಧ ಸರ್ಕಾರದ ಹೇಳಿಕೆಯನ್ನು ಚರ್ಚೆಗೆ ಸೇರಿಸಲಾಗಿದೆ. ಮಧ್ಯಾಹ್ನ ಘೋಷಣೆ ಮಾಡಲಾಗುತ್ತದೆ' ಎಂದು ಸಭಾಪತಿ ಹಮೀದ್ ಅನ್ಸಾರಿ ಹೇಳಿದರೂ ಪಟ್ಟು ಬಿಡದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಶೂನ್ಯವೇಳೆ ರದ್ದುಮಾಡುವಂತೆ ಒತ್ತಾಯಿಸಿದರು.

ಮಧ್ಯಾಹ್ನ ಮತ್ತೆ ಕಲಾಪ ಆರಂಭವಾದಾಗ ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವ ರಾಜೀವ್ ಶುಕ್ಲಾ ಘೋಷಣೆ ಮಾಡಿದರು. ಆಗ ಮಾಯಾವತಿ ಅವರು ಸ್ಮಾರಕ ಯೋಜನೆಯ ವಿವರ ನೀಡುವಂತೆ ಮತ್ತೆ ಪಟ್ಟು ಹಿಡಿದರು. ಜವಳಿ ಖಾತೆ ಸಚಿವ ಆನಂದ್ ಶರ್ಮ ಅವರು ವಿವರ ನೀಡುವರೆಂದು ಭರವಸೆ ನೀಡಿದರೂ ಎಸ್‌ಪಿ ಸದಸ್ಯರು ಗದ್ದಲ ಮುಂದುವರಿಸಿದರು. ಸಭಾಧ್ಯಕ್ಷರ ಪೀಠದತ್ತ ನುಗ್ಗಿ ಬಡ್ತಿ ಮೀಸಲಾತಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾಯಾವತಿ ಸೇರಿದಂತೆ ಬಿಎಸ್‌ಪಿ ಸದಸ್ಯರು ಏನು ಮಾತನಾಡದೇ ಸುಮ್ಮನೆ ಕುಳಿತಿದ್ದರು. ಜೆ.ಡಿ.ಸೀಲಂ ಹಾಗೂ ಪ್ರವೀಣ್ ರಾಷ್ಟ್ರಪಾಲ್ ಸೇರಿದಂತೆ ಕಾಂಗ್ರೆಸ್‌ನ ಕೆಲವು ಸದಸ್ಯರು ಎಸ್‌ಪಿ ಸದಸ್ಯರ ಮೇಲೆ ಹರಿಹಾಯ್ದರು.

`ನರೇಶ್ ಅಗರವಾಲ್ ನೇತೃತ್ವದಲ್ಲಿ ಎಸ್‌ಪಿ ಸದಸ್ಯರು ಸಭಾಧ್ಯಕ್ಷರ ಪೀಠದತ್ತ ನುಗ್ಗಿ  ` ಬಡ್ತಿ ಮೀಸಲಾತಿ ಬೇಡ' ಎಂದು ಕೂಗಿದರು. ಆಗ ಕೆಲವು ಕಾಂಗ್ರೆಸ್ ಸದಸ್ಯರು `ಮೀಸಲಾತಿ ಬೇಕು' ಎಂದರು.

ಗದ್ದಲದ ನಡುವೆಯೇ ಕಲಾಪವನ್ನು ಒಂದು ದಿನ ಮುಂದೂಡಲಾಯಿತು.

`ಉದ್ದೇಶಪೂರ್ವಕ ಭಂಗ'
`ಎಫ್‌ಡಿಐ ವಿಷಯದಲ್ಲಿ ಬಹುಮತ ಇಲ್ಲ ಎನ್ನುವ ಕಾರಣಕ್ಕೆ ಸರ್ಕಾರ ಹಾಗೂ ಅದರ ಮಿತ್ರಪಕ್ಷಗಳು ರಾಜ್ಯಸಭೆಯಲ್ಲಿ ಉದ್ದೇಶಪೂರ್ವಕವಾಗಿ ಗದ್ದಲ ಎಬ್ಬಿಸುತ್ತಿವೆ' ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.

ಅಧಿವೇಶನ ಆರಂಭವಾದ ಮೊದಲ ದಿನವೇ ಸರ್ಕಾರವು ಕಲಾಪವನ್ನು ಗಂಭೀರವಾಗಿ ಪರಿಗಣಿಸಿಲ್ಲ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
`ಗುರುವಾರ ಎಫ್‌ಡಿಐ ವಿಷಯದ ಮೇಲಿನ ಚರ್ಚೆಗೆ ಆಡಳಿತ ಪಕ್ಷ ಹಾಗೂ ಅದರ ಮಿತ್ರಪಕ್ಷಗಳು ಅವಕಾಶ ಮಾಡಿಕೊಡುವುದು ಅನುಮಾನ' ಎಂದೂ ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT