ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ಪ್ರಶಸ್ತಿಗಾಗಿ ಪಟ್ಟಿ ಸಿದ್ಧ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲ ಜಿಲ್ಲೆ ಮತ್ತು ಪ್ರಕಾರಗಳಿಗೆ ಪ್ರಾತಿನಿಧ್ಯ, ಆಯ್ಕೆಯಾಗುವ ವ್ಯಕ್ತಿ ಕನಿಷ್ಠ 50 ವರ್ಷದವರಾಗಿರಬೇಕು ಎಂಬ ಷರತ್ತುಗಳನ್ನು ಹಾಕಿಕೊಂಡು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಆಯ್ಕೆ ಸಮಿತಿ ಬುಧವಾರ ಇಲ್ಲಿ ಸಿದ್ಧಪಡಿಸಿತು.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಎಷ್ಟೇ ಒತ್ತಡ ಬಂದರೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಂಖ್ಯೆ 50 ದಾಟುವಂತಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ಆಯ್ಕೆ ಸಮಿತಿ 104 ಮಂದಿ ಅರ್ಹರ ಪಟ್ಟಿಯನ್ನು ಸಿದ್ಧಪಡಿಸಿ, ಅದರಲ್ಲಿ 50 ಮಂದಿಯನ್ನು ಅಂತಿಮವಾಗಿ ಆಯ್ಕೆ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರಿಗೆ ನೀಡಿದೆ. ಒಂದೆರಡು ದಿನದಲ್ಲಿ ಈ ಇಬ್ಬರೂ 50 ಮಂದಿಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಿದ್ದಾರೆ.

ಆಯ್ಕೆ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆಯೂ ಗಮನಹರಿಸಲಿದ್ದಾರೆ. ಎಲ್ಲ ಜಿಲ್ಲೆ, ಎಲ್ಲ ಜಾತಿ ಮತ್ತು ಎಲ್ಲ ಪ್ರಕಾರಗಳನ್ನು ಗಮನದಲ್ಲಿ ಇಟ್ಟುಕೊಂಡೇ ಪಟ್ಟಿಯನ್ನು ಸಿದ್ಧಪಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಕ್ರೀಡೆ, ಅಂಗವಿಕಲರ ಸಾಧನೆಯನ್ನು ಹೊರತುಪಡಿಸಿ, ಉಳಿದಂತೆ ಬೇರೆ ಯಾವ ಕ್ಷೇತ್ರಗಳ ಸಾಧಕರೂ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬಾರದು ಎಂದೂ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ವರ್ಷ ಕೂಡ ಪ್ರಶಸ್ತಿ ಪುರಸ್ಕೃತರಿಗೆ ಒಂದು ಲಕ್ಷ ರೂಪಾಯಿ ನಗದು ಮತ್ತು 20 ಗ್ರಾಂ ಚಿನ್ನದ ಪದಕ ನೀಡಲು ನಿರ್ಧರಿಸಿದ್ದು, ಮುಂದಿನ ವರ್ಷದಿಂದ ನಗದು ಹಣ ಕಡಿಮೆ ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು ಎನ್ನಲಾಗಿದೆ. ಆದರೆ, ಈ ಕುರಿತು ಒಮ್ಮತ ಮೂಡಲಿಲ್ಲ ಎಂದು ಗೊತ್ತಾಗಿದೆ.

ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ, ಶೋಭಾ ಕರಂದ್ಲಾಜೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, ಪುಸಕ್ತ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಸೇರಿದಂತೆ ಇತರ ಅಕಾಡೆಮಿಗಳ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಸೇರಿದಂತೆ ಇತರರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT