ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ನೂತನ ಅಧ್ಯಕ್ಷರಾಗಿ ಪಾರ್ವತಮ್ಮ

Last Updated 12 ಸೆಪ್ಟೆಂಬರ್ 2013, 6:22 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನಗರಸಭೆಯ ನೂತನ ಅಧ್ಯಕ್ಷರಾಗಿ ಪಾರ್ವತಮ್ಮ ಹಲ್ಡಲ್ಡರ ಹಾಗೂ ಉಪಾಧ್ಯಕ್ಷರಾಗಿ ಶಿವಪ್ಪ ಮಣೆಗಾರ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ  ಹಿಂದುಳಿದ ‘ಅ’ ವರ್ಗಕ್ಕೆ ಮೀಸಲಾಗಿತ್ತು.

31 ಸದಸ್ಯ ಬಲದ ನಗರಸಭೆ ಪಾರ್ವತಮ್ಮ ಹಲ್ಡಲ್ಡರ ಮತ್ತು ಶಿವಪ್ಪ ಮಣೆಗಾರ ಅವರು ಅಧ್ಯಕ್ಷ –ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನ 13 ಸದಸ್ಯರು, ಬಿಜೆಪಿಯ 3 ಸದಸ್ಯರು ಮತ್ತು ಪಕ್ಷೇತರ 6ಸದಸ್ಯರು ಚುನಾವಣೆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೆಜೆಪಿಯ 9 ಸದಸ್ಯರು ಚುನಾವಣೆ ಕಣದಿಂದ ದೂರ ಉಳಿದಿದ್ದರು.

ಚುನಾವಣಾಧಿಕಾರಿಯಾಗಿ ಉಪ ವಿಭಾಗಾಧಿಕಾರಿಗಳಾದ ಮಹ್ಮದ್‌ ಜುಬೇರ ಎನ್‌. ಅವರು ಕಾರ್ಯ ನಿರ್ವಹಿಸಿದರು.
ನಗರಸಭೆ ನೂತನ ಉಪಾಧ್ಯಕ್ಷ ಶಿವಪ್ಪ ಮಣೇಗಾರ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ನಗರದ ಸೌಂದರ್ಯ ಮತ್ತು ಅಭಿವೃದ್ದಿಗೆ ಪಕ್ಷ ಭೇದ ಮರೆತು ಎಲ್ಲ ಸದಸ್ಯರ ಸಹಕಾರ ಪಡೆದು ಕಾರ್ಯೋನ್ಮುಖರಾಗುತ್ತೇವೆ ಎಂದರು.

ನೂತನ ಅಧ್ಯಕ್ಷ– ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಕೆ.ಬಿ.ಕೋಳಿವಾಡ, ನಗರಸಭೆಯ 31 ಸದಸ್ಯರ ಪ್ರತ್ಯಕ್ಷ ಮತ್ತು ಪರೋಕ್ಷ ಸಹಕಾರದಿಂದ ಅಧ್ಯಕ್ಷ –ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ನಗರದ ಪೂರ್ವ ಹಾಗೂ ಪಶ್ಚಿಮ ಬಡಾವಣೆಗಳಲ್ಲಿ ನೂರಾರು ವರ್ಷಗಳಿಂದ ವಾಸವಾಗಿದ್ದು ನಿವೇಶನ ಹೊಂದಿದವರಿಗೆ ಯಾವುದೇ ತೊಂದರೆಯಾಗದಂತೆ ಹಣ ತುಂಬಿಸಿಕೊಳ್ಳಬೇಕೆಂಬ ಸರ್ಕಾರದ ನಿಯಮದ ಪ್ರಕಾರ ಕಡಿಮೆ ಹಣ ಪಡೆದು ಅಥವಾ ಸರ್ಕಾರ ಅನುಮತಿ ನೀಡಿದರೆ ಪುಕ್ಕಟೆಯಾಗಿ ನಿವೇಶನ ನೀಡಬೇಕೆಂದು ಸಲಹೆ ನೀಡಿದರು.

ಕುಡಿಯುವ ನೀರಿನ ಎರಡು ಮೂರು ನಲ್ಲಿ ಹಾಕಿಸಿಕೊಂಡರೂ ಕುಡಿಯಲು ಬಳಸಿದರೆ ಅದನ್ನು ಗೃಹ ಬಳಕೆಗಾಗಿ ಎಂದು ಪರಿಗಣಿಸಬೇಕು. ಹೆಚ್ಚಿನ ದರ ನಿಗದಿ ಮಾಡಬಾರದು, ಹೊಟೆಲ್‌ ಅಥವಾ ಮನೆ ಕಟ್ಟಿಸಲು ಬೇರೆ ಉದ್ದೇಶಕ್ಕೆ ಉಪಯೋಗಿಸಿದರೆ ಮಾತ್ರ ಹೆಚ್ಚಿನ ದರ ತುಂಬಿಸಿಕೊಳ್ಳಬೇಕು ಎಂದರು.

ನಗರದ ದೊಡ್ಡ ಕೆರೆ ಅಭಿವೃದ್ಧಿಗೆ ಈಗಾಗಲೇ 20 ಕೋಟಿ ರೂ ಅನುದಾನ ಕಾಯ್ದಿರಿಸಿದ್ದು, ಕೇಂದ್ರ ಸರ್ಕಾರದ ಮಂಜೂರಾತಿಗಾಗಿ ಕಾಯುತ್ತಿದ್ದೇವೆ, ನಗರೋತ್ಥಾನ ಯೋಜನೆಗೆ 12 ಕೋಟಿ ರೂ ಹಣ ಬಿಡುಗಡೆಯಾಗಿದ್ದು 24 ಗಂಟೆ ಕುಡಿಯುವ ನೀರಿನ 24/7 ಯೋಜನೆ ಮಂಜೂರಾಗಿದೆ, ಕೊಳಚೆ ನಿರ್ಮೂಲನೆಗಾಗಿ ಒಂದು ಕೋಟಿ ರೂ ಇದ್ದು ವಾರ್ಡ್‌ ನಂ.19 ಮತ್ತು 21ಕ್ಕೆ ಬಳಸಲಾಗುವುದು ಎಂದು ಕೋಳಿವಾಡರು ತಿಳಿಸಿದರು.

ನಗರಸಭೆ ಸದಸ್ಯರಾದ ಬಿಜೆಪಿಯ ಪ್ರಭು ಕರ್ಜಿಗಿಮಠ, ಶಿವರಾಜ ಬ್ಯಾಡಗಿ, ಶಾರದಾ ಜಂಬಿಗಿ ಮತ್ತು ಪಕ್ಷೇತರ ಅಭ್ಯರ್ಥಿಗಳಾದ ಫಾತಿಮಾಬಿ ಶೇಖ್‌, ಮೊಮಿನ್‌ ಹರಪನಹಳ್ಳಿ, ನೂರುಲ್ಲಾ ಖಾನ್‌ ಹಾಗೂ ಕಾಂಗ್ರೆಸ್‌ನ ವೀರಣ್ಣ ಮಾಕನೂರು, ಆಶಾ ಗುಂಡೇರ, ಆಯೂಬ್‌, ಖಾದರ್‌ ಪಠಾಣ, ರಾಘವೇಂದ್ರ ಚಿನ್ನಿಕಟ್ಟಿ, ನಾಗರಾಜ ಕಲಾಲ, ಬಾಷಾ ಕಾಟೇನಹಳ್ಳಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT