ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ವೇಳೆ ತಪಾಸಣೆಯಲ್ಲಿ ಬೆಳಕಿಗೆ ಬಂದ ವಿದ್ಯಮಾನ : ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ......

Last Updated 2 ಮಾರ್ಚ್ 2011, 20:05 IST
ಅಕ್ಷರ ಗಾತ್ರ

ಬೆಂಗಳೂರು: ಡಾಂಬರು ಹಾಕಿದ 24 ಗಂಟೆಯೊಳಗೆ ರಸ್ತೆ ಅಗೆತ. ಪರವಾನಗಿ ಇಲ್ಲದೇ ರಸ್ತೆ ಅಗೆತ. ಪಾದಚಾರಿ ಮಾರ್ಗದಲ್ಲೇ ಕಟ್ಟಡ ನಿರ್ಮಾಣ ಸಾಮಗ್ರಿ. ವಿರೂಪಗೊಂಡ ಪಾದಚಾರಿ ಮಾರ್ಗ. ಗುಂಡಿಮಯ ರಸ್ತೆ. ಅವಧಿಗೂ ಮುನ್ನವೇ ಡಾಂಬರು ಲೇಪನ!...ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರು ನಗರದಲ್ಲಿ ಮಂಗಳವಾರ ರಾತ್ರಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮೇಲ್ಕಂಡ ಅಂಶಗಳು ಕಂಡು ಬಂದವು. ಇದರ ಬಗ್ಗೆ ಕಿಡಿಕಾರಿದ ಆಯುಕ್ತರು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಮಂಗಳವಾರ ರಾತ್ರಿ 10.30ಕ್ಕೆ ಪರಿಶೀಲನಾ ಕಾರ್ಯ ಆರಂಭವಾಯಿತು. ಕಾವೇರಿ ಜಂಕ್ಷನ್- ಭಾಷ್ಯಂ ವೃತ್ತದ ನಡುವಿನ ರಸ್ತೆಯ ಪಾದಚಾರಿ ಮಾರ್ಗದ ಹಲವೆಡೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಶೇಖರಿಸಲಾಗಿತ್ತು. ಭಾರಿ ಗಾತ್ರದ ಉಕ್ಕಿನ ಸರಳುಗಳು ಇದ್ದವು.ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ‘ಕಟ್ಟಡ ನಿರ್ಮಾಣ ಸಾಮಗ್ರಿಯನ್ನು ಪಾದಚಾರಿ ಮಾರ್ಗದಲ್ಲಿ ಶೇಖರಿಸಿಡಲು ಪಾಲಿಕೆಗೆ ಶುಲ್ಕ (ಗ್ರೌಂಡ್ ರೆಂಟ್) ಪಾವತಿಸಬೇಕಾಗುತ್ತದೆ.

ಆದರೆ ನಿರ್ಮಾಣ ಕಾರ್ಯ ಒಂದು ಹಂತ ತಲುಪಿದ ಬಳಿಕ ಆ ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲಿಡುವಂತಿಲ್ಲ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾದಚಾರಿಗಳು ಪರದಾಡುವಂತಾಗಿದೆ. ಸಂಬಂಧಪಟ್ಟವರಿಂದ ಕೂಡಲೇ ದಂಡ ಶುಲ್ಕ ಸಂಗ್ರಹಿಸಬೇಕು. ಇಲ್ಲವೇ ಸಾಮಗ್ರಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ಬಳಿಕ ಅವರು ನಗರ ರೈಲು ನಿಲ್ದಾಣ ಪ್ರದೇಶಕ್ಕೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಕೆಲವರು ಅಕ್ರಮವಾಗಿ ರಸ್ತೆ ಅಗೆಯುತ್ತಿದ್ದುದು ಕಂಡುಬಂತು. ವಾಟಾಳ್ ನಾಗರಾಜ್ ರಸ್ತೆಯಲ್ಲಿ ಓಕಳಿಪುರದ ಬಳಿ ಸೋಮವಾರವಷ್ಟೇ ಡಾಂಬರು ಹಾಕಲಾಗಿದ್ದ ರಸ್ತೆಯನ್ನು ಕಾರ್ಮಿಕರು ಅಗೆಯುತ್ತಿದ್ದರು. ಪರವಾನಗಿ ಪತ್ರ ಪಡೆಯದೆ ರಸ್ತೆ ಅಗೆಯುತ್ತಿದ್ದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಆಯುಕ್ತರು, ಸಾಮಗ್ರಿಗಳನ್ನು ವಶಪಡಿಸಿಕೊಂಡು ದುಬಾರಿ ದಂಡ ವಿಧಿಸುವಂತೆ ಸೂಚಿಸಿದರು.

 

25 ಲಕ್ಷ ದಂಡ ಹಾಕಿ: ‘ಸೋಮವಾರವಷ್ಟೇ ಡಾಂಬರು ಹಾಕಿರುವ ರಸ್ತೆಯಲ್ಲಿ ಸ್ಪೈಸ್ ಕಂಪೆನಿಯ ಪರವಾಗಿ ಗುತ್ತಿಗೆದಾರರು ಪರವಾನಗಿ ಪಡೆಯದೆ ರಸ್ತೆ ಅಗೆಯುತ್ತಿರುವುದು ಖಂಡನೀಯ. ಇದರ ಬಗ್ಗೆ ಸಂಬಂಧಪಟ್ಟ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ 25 ಲಕ್ಷ ರೂಪಾಯಿ ದಂಡ ವಿಧಿಸುವಂತೆ ಸೂಚಿಸಲಾಗಿದೆ’ ಎಂದರು. ಇದೇ ರಸ್ತೆಯಲ್ಲಿ ಮುಂದುವರಿದಂತೆ ಅಲ್ಲಿಯೂ ಡಾಂಬರು ಹಾಕುವ ಕಾರ್ಯ ಪ್ರಗತಿಯಲ್ಲಿತ್ತು. ಆದರೆ ಕೇವಲ ಒಂದೂವರೆ ವರ್ಷದ ಹಿಂದೆಯಷ್ಟೇ ಡಾಂಬರು ಹಾಕಲಾಗಿದ್ದ ರಸ್ತೆಗೆ ಮತ್ತೆ ಡಾಂಬರು ಹಾಕುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಸ್ತೆ ವಿವರ ದಾಖಲಿಸಿ: ‘ಒಂದು ರಸ್ತೆಗೆ ಡಾಂಬರು ಹಾಕಿದ ಬಳಿಕ ಮೂರು ವರ್ಷಗಳವರೆಗೆ ಮತ್ತೆ ಡಾಂಬರು ಹಾಕುವಂತಿಲ್ಲ. ಹಾಗಿದ್ದರೂ ಒಂದೂವರೆ ವರ್ಷದಲ್ಲೇ ಡಾಂಬರು ಹಾಕುತ್ತಿರುವುದು ಸರಿಯಲ್ಲ. ರಸ್ತೆಗಳ ನಿರ್ವಹಣೆಗೆ ಸಂಬಂಧಪಟ್ಟಂತೆ ಪ್ರತ್ಯೇಕ ದಾಖಲೆಗಳನ್ನು ಸಿದ್ಧಪಡಿಸಬೇಕು. ರಸ್ತೆಯ ಇತಿಹಾಸ ದಾಖಲಿಸುವ ಕೆಲಸ ಆಗಬೇಕು. ಆಗ ಕಾಮಗಾರಿಗಳು ಪುನರಾವರ್ತನೆಯಾಗುವುದಿಲ್ಲ’ ಎಂದರು.

 

ರಾಜಾಜಿನಗರ ಪೊಲೀಸ್ ಠಾಣೆಯ ಸಮೀಪದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಕಾರ್ಮಿಕರು ರಸ್ತೆ ಅಗೆಯುತ್ತಿದ್ದರು. ಎಂ.ಟಿ.ಎಸ್ ಕಂಪೆನಿ ಪರ ಗುತ್ತಿಗೆದಾರರು ನಾಲ್ಕು ಅಡಿ ಆಳ, ಅಗಲದ ಗುಂಡಿ ತೋಡಿದ್ದರು. ಕೂಡಲೇ ಕ್ಯಾಂಟರ್ ವಾಹನವನ್ನು ವಶಪಡಿಸಿಕೊಂಡು ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶೀಘ್ರದಲ್ಲಿ ದುರಸ್ತಿ: ಮೈಸೂರು ರಸ್ತೆಯಿಂದ ವರ್ತುಲ ರಸ್ತೆಗೆ ಬೆಂಗಳೂರು ವಿ.ವಿ ಜ್ಞಾನಭಾರತಿ ಆವರಣದ ಮೂಲಕ ಹಾದು ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದನ್ನು ವೀಕ್ಷಿಸಿದ ಆಯುಕ್ತರು ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು.


‘ಜ್ಞಾನಭಾರತಿ ಆವರಣದಲ್ಲಿನ ರಸ್ತೆಯು ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಆದರೆ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತದೆ. ಹಾಗಾಗಿ ತಕ್ಷಣವೇ ಅಭಿವೃದ್ಧಿಪಡಿಸುವಂತೆ ಸೂಚಿಸಲಾಗಿದೆ’ ಎಂದು ಆಯುಕ್ತರು ಹೇಳಿದರು.‘ಮೈಸೂರು ರಸ್ತೆಯಿಂದ ವರ್ತುಲ ರಸ್ತೆ ನಡುವಿನ ಸುಮಾರು 5 ಕಿ.ಮೀ. ಉದ್ದದ ರಸ್ತೆಯು 7.5 ಮೀಟರ್‌ನಿಂದ 15 ಮೀಟರ್‌ನಷ್ಟು ಅಗಲವಿದೆ. ಇದನ್ನು ಏಕಪ್ರಕಾರವಾಗಿ 18 ಮೀಟರ್‌ಗೆ ವಿಸ್ತರಿಸಲಾಗುವುದು. ಹಾಗೆಯೇ ವಿ.ವಿ ಆಡಳಿತದ ಮನವಿಯಂತೆ ಸೈಕಲ್ ಪಥ ನಿರ್ಮಿಸಲಾಗುವುದು. ಸಾಧ್ಯವಾದ ಮಟ್ಟಿಗೆ ಮರಗಳನ್ನು ಕಡಿಯದಂತೆ ಎಚ್ಚರ ವಹಿಸಲಾಗುವುದು’ ಎಂದರು. ಪರಿಶೀಲನಾ ಕಾರ್ಯ ನಸುಕಿನ 3 ಗಂಟೆವರೆಗೆ ನಡೆಯಿತು.


ಮೂರು ತಿಂಗಳಲ್ಲಿ ಪೂರ್ಣ: ನಗರದ ಮೈಸೂರು ರಸ್ತೆಯನ್ನು ಪರಿಶೀಲಿಸಿದ ಆಯುಕ್ತರು ರಸ್ತೆ ಸಂಪೂರ್ಣ ಹದಗೆಟ್ಟಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಬಳಿಕ ಮಾತನಾಡಿ, ‘ಶಿರ್ಸಿ ವೃತ್ತದಲ್ಲಿನ ಮೇಲು ಸೇತುವೆಯಿಂದ ದೀಪಾಂಜಲಿನಗರ ಜಂಕ್ಷನ್ ಹಾಗೂ ಪಂತರಪಾಳ್ಯದಿಂದ ರಾಜರಾಜೇಶ್ವರಿನಗರ ಕಮಾನಿನ ನಡುವಿನ ರಸ್ತೆ ವಿಸ್ತರಣೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ತಕ್ಷಣವೇ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ’ ಎಂದರು.

ಪ್ರಹಾರಿ ಗಸ್ತು ಸೇವೆ
:‘ನಗರದಲ್ಲಿ ಅನಧಿಕೃತವಾಗಿ ರಸ್ತೆ ಅಗೆದು ಹಾಳು ಮಾಡುವುದು ನಡೆದೇ ಇದೆ. ಹಾಗಾಗಿ ಇದನ್ನು ನಿಯಂತ್ರಿಸಲು ಪ್ರಹಾರಿ ಸಿಬ್ಬಂದಿಯನ್ನು ರಾತ್ರಿ ವೇಳೆ ಗಸ್ತು ತಿರುಗಲು ನಿಯೋಜಿಸಲಾಗುವುದು. ಹಾಗೆಯೇ ನಿಯಂತ್ರಣ ಕೊಠಡಿಯನ್ನು ಇನ್ನಷ್ಟು ಬಲಗೊಳಿಸಲಾಗುವುದು’ ಎಂದು ಆಯುಕ್ತ ಸಿದ್ದಯ್ಯ ಹೇಳಿದರು.‘ಈ ಹಿಂದೆ ಜಾರಿಯಲ್ಲಿದ್ದ ಡಕ್ಟ್ ಘಟಕ ಸೇವೆ ಮತ್ತೆ ಆರಂಭಿಸಲು ಚಿಂತಿಸಲಾಗುವುದು. ಎಲ್ಲ ವಲಯಗಳಿಂದ ತಲಾ ಒಬ್ಬರು ಕಾರ್ಯಪಾಲಕ ಎಂಜಿನಿಯರ್‌ಗಳನ್ನು ಈ ಘಟಕಕ್ಕೆ ನಿಯೋಜಿಸಲಾಗುವುದು. ಆ ನಂತರವೂ ಅಕ್ರಮವಾಗಿ ರಸ್ತೆ ಅಗೆಯುವುದು ಕಂಡುಬಂದರೆ ಅದಕ್ಕೆ ಸಂಬಂಧಪಟ್ಟ ಕಾರ್ಯಪಾಲಕ ಎಂಜಿನಿಯರ್ ಅವರನ್ನೇ ಹೊಣೆ ಮಾಡಿ ಕ್ರಮ ಜರುಗಿಸಲಾಗುವುದು. ಹಾಗೆಯೇ ಗುತ್ತಿಗೆದಾರರಿಗೆ ಬದಲಾಗಿ ಸಂಬಂಧಪಟ್ಟ ಕಂಪೆನಿಗಳ ವಿರುದ್ಧ ಕ್ರಮ ಕೈಗೊಂಡು, ದುಬಾರಿ ದಂಡ ವಸೂಲು ಮಾಡಲಾಗುವುದು’ ಎಂದು ಹೇಳಿದರು.
 

ಉದ್ಯಾನ ಪ್ರವೇಶಕ್ಕೆ ಶುಲ್ಕ ತಂದ ಅಚ್ಚರ  

ಬೆಂಗಳೂರು: ‘ಬಿಬಿಎಂಪಿ ಉದ್ಯಾನಕ್ಕೆ ಪ್ರವೇಶ ಶುಲ್ಕವೇ...?’ ಸ್ಯಾಂಕಿ ಕೆರೆ ಬಳಿಯ ಬಿಬಿಎಂಪಿ ಉದ್ಯಾನಕ್ಕೆ ಸದಾಶಿವನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಪ್ರವೇಶ ಶುಲ್ಕ ಸಂಗ್ರಹಿಸುವ ಬಗ್ಗೆ ಆಯುಕ್ತ ಸಿದ್ದಯ್ಯ ಅಚ್ಚರಿ ವ್ಯಕ್ತಪಡಿಸಿದ್ದು ಹೀಗೆ...ಸ್ಯಾಂಕಿ ಕೆರೆ ಸಮೀಪದ ಸದಾಶಿವನಗರ ಉದ್ಯಾನ ಪ್ರವೇಶಕ್ಕೆ ಅಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಶುಲ್ಕ ಸಂಗ್ರಹಿಸುವ ಬಗ್ಗೆ ಆಯುಕ್ತರು ತೀವ್ರ ಸಮಾಧಾನ ವ್ಯಕ್ತಪಡಿಸಿದರು.

‘ನಗರದಲ್ಲಿ 700ಕ್ಕೂ ಹೆಚ್ಚು ಉದ್ಯಾನಗಳಿವೆ. ಅಲ್ಲದೇ ಇದಕ್ಕಿಂತಲೂ ಉತ್ತಮ ಸೌಲಭ್ಯವುಳ್ಳ ಹಾಗೂ ಸುಂದರವಾದ ಉದ್ಯಾನಗಳಿವೆ. ಆ ಯಾವ ಉದ್ಯಾನಗಳಲ್ಲೂ ಪ್ರವೇಶ ಶುಲ್ಕ ಸಂಗ್ರಹಿಸುತ್ತಿಲ್ಲ. ಆದರೆ ಈ ಉದ್ಯಾನದಲ್ಲಿ ಶುಲ್ಕ ಸಂಗ್ರಹಿಸಲಾಗುತ್ತಿದೆ. ಕೂಡಲೇ ಇದರ ಬಗ್ಗೆ ಪರಿಶೀಲಿಸಲಾಗುವುದು. ಒಂದೊಮ್ಮೆ ಶುಲ್ಕ ಸಂಗ್ರಹಿಸುವಂತೆ ಸಂಘದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರೆ ಕೂಡಲೇ ಅದನ್ನು ರದ್ದುಪಡಿಸುವಂತೆ ತೋಟಗಾರಿಕೆ ಸ್ಥಾಯಿ ಸಮಿತಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT