ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿಯಿಡೀ ಕಗ್ಗತ್ತಲಲ್ಲಿ ಐತಿಹಾಸಿಕ ಪುಷ್ಕರಣಿ

Last Updated 10 ಫೆಬ್ರುವರಿ 2012, 9:25 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಇಲ್ಲಿನ ಐತಿಹಾಸಿಕ ಪುಷ್ಕರಣಿ ವಿದ್ಯುದ್ದೀಪಗಳಿಲ್ಲದೆ ಹಲವಾರು ವರ್ಷಗಳಿಂದ ಕಗ್ಗತ್ತಲಲ್ಲಿ ಕಳೆಗುಂದುತ್ತದೆ.

ಸುಮಾರು ಹತ್ತು ಎಕರೆ ವಿಸ್ತೀರ್ಣದಲ್ಲಿ ಪುಷ್ಕರಣಿ, ವಿಶಾಲ ಮುಸಾಫಿರ್ ಖಾನ ಹಾಗೂ ಇತರ ಕಟ್ಟಡಗಳು ವ್ಯಾಪಿಸಿವೆ. ಸುತ್ತ ಕಬ್ಬಿಣದ ಜಾಲರಿಯ ತಡೆಗೋಡೆ ನಿರ್ಮಿಸಲಾಗಿದೆ. ವಿದ್ಯುದ್ದೀಪದ ಬೆಳಕಿಲ್ಲದೆ ರಕ್ಷಣೆಯ ಸಮಸ್ಯೆ ಎದುರಿಸುತ್ತಿದೆ.

ಸಂತೇಬೆನ್ನೂರು ನಾಯಕ ವಂಶದ ಪ್ರಥಮ ಅರಸ ಕೆಂಗ ಹನುಮಪ್ಪ ನಾಯಕ ಕ್ರಿ.ಶ. 1558ರಲ್ಲಿ ಪುಷ್ಕರಣಿ ಹಾಗೂ ಇದರ ದಕ್ಷಿಣ ಭಾಗಕ್ಕೆ ತನ್ನ ಮನೆ ದೇವರಾದ ಶ್ರೀ ರಾಮಚಂದ್ರನ 64 ಅಂಕಣ ದೇವಸ್ಥಾನ ನಿರ್ಮಿಸಿದ್ದನು ಎಂದು ಕೈಫಿಯತ್ತಿನಲ್ಲಿ ದಾಖಲಾಗಿದೆ. ಬಿಜಾಪುರದ ಸುಲ್ತಾನರ ದಾಳಿಗೆ ಸಿಲುಕಿದ ನಂತರ ಪಶ್ಚಿಮ ದಿಕ್ಕಿನಲ್ಲಿ ಬಿಜಾಪುರದ ಮಸೀದಿ ಹೋಲುವ ಒಂದು ಕಟ್ಟಡವಿದೆ. ದೇವಸ್ಥಾನದ ಕುರುಹುಗಳಿಲ್ಲ.

ದಕ್ಷಿಣ ಭಾರತದಲ್ಲಿಯೇ ಸುಂದರ ಪುಷ್ಕರಣಿ 235 ಅಡಿ ಉದ್ದ, 245 ಅಗಲ ಧ್ವಜಾಯದಲ್ಲಿ ನಿರ್ಮಿಸಲಾಗಿದೆ. ಇದರ ಮಧ್ಯದಲ್ಲಿ ನೀರಿನಿಂದ ಆವೃತವಾಗಿರುವ 31 ಅಡಿ ಉದ್ದ, 31 ಅಗಲದ 5 ಅಂತಸ್ತಿನ ವಸಂತ ಮಂಟಪ ಅತ್ಯಾಕರ್ಷಕವಾಗಿದೆ.

ನಾಲ್ಕು ದಿಕ್ಕಿನಿಂದ ಒಂದೇ ರೀತಿ ಗೋಚರಿಸುವುದರ ವಿಶೇಷತೆ. ಇತ್ತೀಚೆಗೆ ಪುಷ್ಕರಣಿಯ ಮುಂಭಾಗದಲ್ಲಿ ಸ್ವಲ್ಪ ಭಾಗದಲ್ಲಿ ಕೈದೋಟ ಹಾಗೂ ಹುಲ್ಲು ಹಾಸು ಬೆಳೆಸಿ ಪೋಷಿಸುತ್ತಿರುವುದು ಆಕರ್ಷಣೆ ಹೆಚ್ಚಿಸಿದೆ.

ಪ್ರಾಚ್ಯವಸ್ತು ಇಲಾಖೆ ಈ ತಾಣ ಅಭಿವೃದ್ಧಿಗೊಳಿಸಲು ಆಮೆನಡಿಗೆ ಅನುಸರಿಸುತ್ತಿದೆ. ಜಿಲ್ಲಾಡಳಿತವೂ ಇದನ್ನು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾಗಿ ಬಿಂಬಿಸಿದೆ. ಇಂತಹ ಸುಂದರ ಪುಷ್ಕರಣಿಗೆ ಇಂದಿಗೂ ವಿದ್ಯುದ್ದೀಪ ಸಂಪರ್ಕ ಕಲ್ಪಿಸದಿರುವುದು ಪ್ರವಾಸಿ ತಾಣಗಳ ರಕ್ಷಣೆಯ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯವಲ್ಲವೇ? ಎನ್ನುತ್ತಾರೆ ಇತಿಹಾಸ ಸಂಶೋಧಕ ಸುಮತೀಂದ್ರ ನಾಡಿಗ್.

ರಾತ್ರಿ ಬೆಳಕಿಲ್ಲದೇ ಕಾವಲು ಕಾಯುವುದು ದುಸ್ತರ ಎನ್ನುತ್ತಾರೆ ಇಲ್ಲಿನ ಪ್ರಾಚ್ಯವಸ್ತು ಇಲಾಖೆಯ ಸಿಬ್ಬಂದಿ. ದಾವಣಗೆರೆ ಉತ್ಸವದ ಹೊಸ್ತಿಲಿನಲ್ಲಿ ಅದರ ಲಾಂಛನದ ಮುಖ್ಯಚಿತ್ರದಲ್ಲಿ ರಾರಾಜಿಸುವ ಆಕರ್ಷಕ ಕಟ್ಟಡಕ್ಕೆ ವಿದ್ಯುದ್ದೀಪ ವ್ಯವಸ್ಥೆ ಕಲ್ಪಿಸಿ ರಕ್ಷಿಸಬೇಕು ಎಂದು ಗ್ರಾಮಸ್ಥ ಓಬಳೇಶ್, ನಿವೃತ್ತ ಶಿಕ್ಷಕ ಅಬ್ದುಲ್ ವಾಹೀದ್, ಫೈಜ್ನಟ್ರಾಜ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT