ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಪತ್ರೆ

Last Updated 2 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಸಹಜವಾಗಿ ಬೆಳೆಯುವ ಮರ ರಾಮಪತ್ರೆ. ರಾಮಪತ್ರೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಮತ್ತು ಬೆಲೆ ಎರಡೂ ಇದೆ. ಇವನ್ನು ಕೃಷಿ ಭೂಮಿಯಲ್ಲೂ ಬೆಳೆಯಬಹುದು. ಆದರೆ ಬೆಳೆಯುವ ಪ್ರಯತ್ನ ಮಾಡಿಲ್ಲ. ರಾಮಪತ್ರೆಗೆ ಕರಾವಳಿಯಲ್ಲಿ ‘ಕಾನಕಜೆ’ ಎಂಬ ಹೆಸರಿದೆ.  ರಾಮಪತ್ರೆ ಮರಗಳು ಎತ್ತರಕ್ಕೆ ಬೆಳೆಯುತ್ತವೆ.

ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಕಾಚೇಲು ಪುರುಷೋತ್ತಮ ಎಂಬ ರೈತರು ಮನೆಯ ಮುಂದಿನ ಜಾಗದಲ್ಲಿ ಐದು ರಾಮ ಪತ್ರೆ ಮರಗಳನ್ನು ಬೆಳೆದಿದ್ದಾರೆ. ಒಂದು ಮರ ಅವರ ತಂದೆಯವರ ಕಾಲದ್ದು. ಅದು  ಬಹಳ ದೊಡ್ಡದಾಗಿದೆ. ಉಳಿದವು ಸಣ್ಣ ಮರಗಳು. ರಾಮಪತ್ರೆ ಗಿಡ ನೆಟ್ಟ ಹತ್ತು ವರ್ಷಗಳ ನಂತರ ಕಾಯಿ ಬಿಡುತ್ತದೆ. ಆರಂಭದ ವರ್ಷಗಳಲ್ಲಿ ಫಸಲು ಕಡಿಮೆ. ಮರ ಬೆಳೆದಂತೆ ಫಸಲಿನ ಪ್ರಮಾಣ ಹೆಚ್ಚುತ್ತದೆ.

 ಜನವರಿ ತಿಂಗಳಲ್ಲಿ ರಾಮಪತ್ರೆ ಮರದಲ್ಲಿ ಹೂ ಬಿಡಲು ಆರಂಭವಾಗುತ್ತದೆ. ಡಿಸೆಂಬರ್ ವೇಳೆಗೆ ಕಾಯಿಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಎರಡು ವರ್ಷಕ್ಕೊಮ್ಮೆ ಒಂದು ಉತ್ತಮ ಫಸಲು ಪಡೆಯಬಹುದು. ಬಲಿತ ಕಾಯಿಗಳು ಕಂದು ಬಣ್ಣದಲ್ಲಿರುತ್ತವೆ. ಚೆನ್ನಾಗಿ ಬೆಳೆದ ಒಂದು ಮರದಿಂದ ಸುಮಾರು 35ಕೆ.ಜಿ ಪತ್ರೆ ಸಿಗುತ್ತದೆ. ಮರ ಸುಮಾರು ನೂರು ವರ್ಷ ಬದುಕಿದ್ದು ಫಸಲು ಕೊಡುತ್ತದೆ.   ಪತ್ರೆ ಸಂಗ್ರಹ: ಒಂದು ಕೆ.ಜಿ. ರಾಮಪತ್ರೆ ಪಡೆಯಲು 130 ಕಾಯಿಗಳು ಬೇಕಾಗುತ್ತವೆ. ಮರಗಳಿಂದ ಬಲಿತ ಕಾಯಿಗಳನ್ನು ಸಂಗ್ರಹಿಸುವುದು ಕಷ್ಟದ ಕೆಲಸ. ಕಾಯಿಗಳನ್ನು ಒಂದೊಂದಾಗಿ ಕೊಕ್ಕೆಹಾಕಿ ಎಳೆದು ಕೊಯ್ಲು ಮಾಡಬೇಕು.
 
ಕಾಯಿಗಳಿಂದ ಪತ್ರೆ ತೆಗೆಯುವುದು ಇನ್ನೂ ಕಷ್ಟ. ಕಾಯಿ ತುಂಬಾ ಗಟ್ಟಿ. ಮರದಿಂದ ಕೊಯ್ದ ದಿನವೇ  ಕಾಯಿಂದ ಪತ್ರೆ ಬೇರ್ಪಡಿಸಬೇಕು. ಒಂದು ದಿನ ಕಳೆದರೆ ಪತ್ರೆ ಬೀಜಕ್ಕೆ ಅಂಟಿಕೊಳ್ಳುತ್ತದೆ. ನಂತರ ಬಿಡಿಸುವುದು ಕಷ್ಟ. ಕಾಯಿಯನ್ನು ತೊಟ್ಟು ಮೇಲೆ ಇರುವಂತೆ ಚಪ್ಪಟೆಯಾದ ಕಲ್ಲಿನ ಮೇಲೆ ಇಟ್ಟು ಒಂದು ಮರದ ಕೋಲಿನಿಂದ ಅಥವಾ ಕಲ್ಲಿನಿಂದ ಒಡೆಯಬೇಕು. ಒಡೆದ ಕಾಯಿಯೊಳಗೆ ಬೀಜ ಸಿಗುತ್ತದೆ. ಬೀಜದ ಮೇಲೆ ಅಂಟಿಕೊಂಡ  ಪತ್ರೆಯನ್ನು ಕೈಯಿಂದ ಬಿಡಿಸಬೇಕು. ಹಸಿ ಪತ್ರೆ ಹಳದಿ ಬಣ್ಣದಿಂದ ಕೂಡಿರುತ್ತದೆ. ಎರಡು ದಿನ ಬಿಸಿಲಿಗೆ ಒಣಗಿಸಿದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ನಂತರ ಅದನ್ನು ಮಾರಾಟ ಮಾಡಬಹುದು.

ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಪತ್ರೆಗೆ 325ರೂ ಬೆಲೆ ಇದೆ. ಬೀಜಕ್ಕೆ ಕೆ.ಜಿ.ಗೆ ಐದಾರು ರೂ ಬೆಲೆ ಇದೆ. ಒಂದು ದೊಡ್ಡ ಮರದಿಂದ ಸುಮಾರು ಹತ್ತನ್ನೆರಡು ಸಾವಿರ ರೂ ಆದಾಯ ಪಡೆಯಬಹುದು. ರಾಮಪತ್ರೆಯನ್ನು ಬಟ್ಟೆಗೆ ಹಾಕುವ ಬಣ್ಣದ ತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಎಣ್ಣೆ, ಅಂಟುಗಳನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ.
ಪುರುಷೋತ್ತಮ ಅವರ ಮೊಬೈಲ್ ನಂಬರ್. 97414 18333 .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT