ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಜಿಲ್ಲೆ: 90 ಪಿಡಿಒಗಳ ರಾಜೀನಾಮೆ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ಗುಲ್ಬರ್ಗ ಜಿಲ್ಲೆ ಸಣ್ಣೂರು ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಂದಾಕಿನಿ ಪಂಚಾಯಿತಿ ಸದಸ್ಯರ ಮಾನಸಿಕ ಕಿರುಕುಳ ಮತ್ತು ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಸುಮಾರು 90 ಪಿಡಿಒಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.

ಎಲ್ಲ ಪಿಡಿಒಗಳು ಒಂದೇ ಪತ್ರದಲ್ಲಿ ವಿಷಯ ಪ್ರಸ್ತಾಪಿಸಿ ಜಿಲ್ಲಾ ಪಂಚಾಯಿತಿ ಸಿಇಒ ವೆಂಕಟೇಶಪ್ಪ ಅವರಿಗೆ ಮಂಗಳವಾರ ಸಾಮೂಹಿಕ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.`ವಿಕೇಂದ್ರೀಕರಣ ವ್ಯವಸ್ಥೆಯ ಮೂಲಕ ತಳಮಟ್ಟದ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅಧಿಕಾರ ನೀಡಿ, ಗ್ರಾಮೀಣ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 1993ರಲ್ಲಿ ರಾಜ್ಯ ಪಂಚಾಯತ್ ರಾಜ್ ವ್ಯವಸ್ಥೆ ರೂಪಿಸಲಾಯಿತು.

ಆದರೆ ಸೇವಾ ಮನೋಭಾವನೆಯಿಂದ ಜನತೆಯಿಂದ ಆಯ್ಕೆಯಾಗುವ ಚುನಾಯಿತ ಪ್ರತಿನಿಧಿಗಳು ವಿಕೇಂದ್ರೀಕರಣದ ನೀತಿ- ನಿಯಮ ಮತ್ತು ಉದ್ದೇಶಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ~ ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

`ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಗ್ರಾಮಗಳ ಅಭಿವೃದ್ಧಿಗಾಗಿ ನೀಡುವ ಎಲ್ಲ ಯೋಜನೆಗಳ ಅನುದಾನಗಳಲ್ಲಿ ಪಾಲು ಪಡೆಯುವುದಕ್ಕೋಸ್ಕರ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಶಾಸನಬದ್ಧ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಾ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ~ ಎಂದು ಪಿಡಿಒಗಳು ದೂರಿದ್ದಾರೆ.

`ಪಿಡಿಒಗಳ ಮೇಲೆ ಹಲ್ಲೆ, ಜಗಳ, ಮಾನಸಿಕ ಕಿರುಕುಗಳ ನೀಡುತ್ತಾ ಪಂಚಾಯಿತಿಯಲ್ಲಿ ಭಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವ ಸ್ಥಿತಿ ತಂದಿಟ್ಟಿದ್ದಾರೆ. ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ಕಾನೂನಿನ ನಿಯಮಗಳನ್ನು ಪಾಲಿಸದೆ, ಹಲವು ಚುನಾಯಿತ ಪ್ರತಿನಿಧಿಗಳು ಕೇವಲ ಹಣದ ಆಸೆಗಾಗಿ, ನಿಯಮಬಾಹಿರ ಕೆಲಸಗಳನ್ನು ಮಾಡಲು ಒತ್ತಡ ಹೇರುವುದು ಅಭ್ಯಾಸವಾಗಿದೆ~ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

`ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಲು ಮುಂದಾಗುತ್ತಿರುವ ಪಿಡಿಒಗಳಿಗೆ ಸರಿಯಾಗಿ ಕೆಲಸ ನಿರ್ವಹಿಸಲು ಹಲವಾರು ಸಮಯಗಳಲ್ಲಿ ಅವಕಾಶ ನೀಡುತ್ತಿಲ್ಲ. ಈ ರೀತಿಯ ಮಾನಸಿಕ ಹಿಂಸೆ ಮತ್ತು ಒತ್ತಡಗಳಿಂದ ಪಿಡಿಒಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲು ಕ್ಲಿಷ್ಟಕರವಾದ ಸನ್ನಿವೇಶಗಳು ಉಂಟಾಗುತ್ತವೆ.

ಅಂತಹ ಸನ್ನಿವೇಶದಲ್ಲಿ ಹಲವಾರು ಪಿಡಿಒಗಳು ಸಮಸ್ಯೆಗಳ ಒತ್ತಡಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಇಂದಿನ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಾರ್ವಜನಿಕರ ಅನುಕೂಲ ಹಾಗೂ ಅವರ ಏಳಿಗೆಗೆ ಶ್ರಮಿಸಬೇಕಾಗಿರುವ ಗ್ರಾಮ ಪಂಚಾಯಿತಿಗಳನ್ನು ಬೇರಾವುದೋ ದಾರಿಗೆ ಎಳೆದೊಯ್ದು, ಪ್ರಾಮಾಣಿಕ ಪ್ರಯತ್ನಕ್ಕೆ ಅಡ್ಡಗಾಲು ಹಾಕಿ ತಮ್ಮ ವೈಯಕ್ತಿಕ ಇಚ್ಛಾಶಕ್ತಿಗಳನ್ನು ಚುನಾಯಿತಿ ಪ್ರತಿನಿಧಿಗಳು ಈಡೇರಿಸಿಕೊಳ್ಳುತ್ತಿದ್ದಾರೆ.

ಇವರ ಇಂತಹ ವರ್ತನೆಗಳು ಇಡೀ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ~ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.`ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲ ಯೋಜನೆಗಳಿಗೂ ಚುನಾಯಿತ ಪ್ರತಿನಿಧಿಗಳ ಸಂಬಂಧಿಕರೇ ಫಲಾನುಭವಿಗಳಾಗಿದ್ದಾರೆ. ಅಲ್ಲದೆ ಇವರ ಸಂಬಂಧಿಕರೇ ಗುತ್ತಿಗೆದಾರರಾಗಿದ್ದಾರೆ.

ಇವರಿಗೆ ನಿಯಮದನ್ವಯ ಕೆಲಸ ಕೊಡಲು ಪಿಡಿಒ ಅವಕಾಶ ಇಲ್ಲವೆಂದು ತಿಳಿಸಿದರೂ ಒತ್ತಡ ಹಾಕಿ ಹೊಂದಾಣಿಕೆ ಮಾಡಿಕೊಳ್ಳಿ ಎಂದು ಹೇಳಿ ದೌರ್ಜನ್ಯ ಎಸಗುತ್ತಿದ್ದಾರೆ~ ಎಂದು ದೂರಿದ್ದಾರೆ.

`ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಪಂಚಾಯತ್ ರಾಜ್ ಇಲಾಖಾ ನೌಕರರು ಮತ್ತು ಅಧಿಕಾರಿಗಳ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಸ್ವಯಂ ಇಚ್ಛೆಯಿಂದ ನಾವೆಲ್ಲರೂ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದು, ಸಾಮಾಜಿಕ ಮತ್ತು ಸೂಕ್ತ ನ್ಯಾಯ ಒದಗಿಸುವಂತೆ~ ಅವರು ಮನವಿ ಮಾಡಿದ್ದಾರೆ.

ಜನಪ್ರತಿನಿಧಿಗಳ ದೌರ್ಜನ್ಯ: ಬೇಸತ್ತು ರಾಜೀನಾಮೆ
`ಗ್ರಾಮೀಣ ಜನರ ಬದುಕಿನ ಆಶೋತ್ತರಗಳಿಗೆ ಸ್ಪಂದಿಸಲು ನಾವು ಸಮರ್ಥರಿದ್ದೇವೆ. ಆದರೆ ಗ್ರಾಮ ಪಂಚಾಯಿತಿಗಳಲ್ಲಿ ಪ್ರಾಣಭಯದ ವಾತಾವರಣ ಇದ್ದು, ಸರ್ಕಾರದಿಂದ ನಮಗೆ ಕಾನೂನಿನ ರಕ್ಷಣೆ ಇಲ್ಲವಾಗಿದೆ.

ಒಂದು ವರ್ಷದಲ್ಲಿ ರಾಜ್ಯದಾದ್ಯಂತ ಹಲವೆಡೆ ಚುನಾಯಿತಿ ಪ್ರತಿನಿಧಿಗಳ ದೌರ್ಜನ್ಯಗಳಿಂದ ಬೇಸತ್ತು ನಾವು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದೇವೆ~ ಎಂದು ಜಿಲ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೌಕರರ ಸಂಘದ ಪತ್ರದಲ್ಲಿ ಜಿಲ್ಲೆಯ ಪಿಡಿಒಗಳು ರಾಜೀನಾಮೆ ಸಲ್ಲಿಸಿದ್ದಾರೆ.

54 ಪಿಡಿಒಗಳ ರಾಜೀನಾಮೆ
ಗುಲ್ಬರ್ಗ:
ಸಣ್ಣೂರು ಗ್ರಾಮ ಪಂಚಾಯಿತಿ ಪಿಡಿಒ ಮಂದಾಕಿನಿ ಆತ್ಮಹತ್ಯೆ ಖಂಡಿಸಿ ಕೊಪ್ಪಳ ಜಿಲ್ಲೆಯ 7 ಜನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ 54 ಜನ ಪಿಡಿಒಗಳು ಸೇರಿದಂತೆ ಒಟ್ಟು 61 ಜನರು ಮಂಗಳವಾರ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.

61 ಜನರ ಸಹಿ ಇರುವ ರಾಜೀನಾಮೆ ಪತ್ರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಚ್.ಕಾಕನೂರು ಅವರಿಗೆ ಸಲ್ಲಿಸಲಾಯಿತು.
ಪಿಡಿಒಗಳ ಮೇಲಿನ ಕಿರುಕುಳ ಖಂಡಿಸಿ ಜಿಲ್ಲಾ ಕೇಂದ್ರವಾದ ಯಾದಗಿರಿ ಸೇರಿದಂತೆ ಹೈದರಾಬಾದ್ ಕರ್ನಾಟಕದ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT