ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರಕ್ಕೂ ಬಂತು `ಅಪಾರ್ಟ್‌ಮೆಂಟ್'

Last Updated 19 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ರೇಷ್ಮೆ, ಕೃಷಿ ಮತ್ತು ತೋಟಗಾರಿಕೆಯೇ ಪ್ರಧಾನವಾಗಿರುವ ರಾಮನಗರದಲ್ಲಿ ಇಲ್ಲಿಯವರೆಗೆ `ಅಪಾರ್ಟ್‌ಮೆಂಟ್'ಗಳು ಕಾಲಿಟ್ಟಿಲ್ಲ. ಆದರೆ ಅವು ಕಾಲಿಡುವ ದಿನವೂ ದೂರ ಇಲ್ಲ. ಈಗಾಗಲೇ ಬಿಡದಿ, ರಾಮನಗರ, ಚನ್ನಪಟ್ಟಣದಲ್ಲಿ ಸಾಕಷ್ಟು ಬಡಾವಣೆಗಳು ನಿರ್ಮಾಣವಾಗಿವೆ. ಇನ್ನೂ ಅಷ್ಟು ಬಡಾವಣೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಇವುಗಳಲ್ಲಿ ಕೆಲವೆಡೆ `ಅಪಾರ್ಟ್‌ಮೆಂಟ್'ಗಳು ತಲೆಯೆತ್ತಲಿವೆ.

ಪ್ರಮುಖವಾಗಿ ಬಿಡದಿಯಲ್ಲಿ ಉದ್ದೇಶಿತ `ಟೌನ್‌ಶಿಪ್' ಜಾರಿಯಾದರೆ ಇಲ್ಲಿ ಒಮ್ಮೆಗೇ ಹತ್ತಾರು ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಲಿವೆ. ಈ ಸಂಬಂಧ ಈಗಾಗಲೇ ಬೃಹತ್ ಖಾಸಗಿ ಕಂಪೆನಿಯೊಂದಕ್ಕೆ ಟೆಂಡರ್ ಆಗಿತ್ತು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಈ ಟೆಂಡರ್ ರದ್ದಾಗಿದೆ ಎಂದು ಗೊತ್ತಾಗಿದೆ. ಇದಕ್ಕೆ ಮತ್ತೊಮ್ಮೆ ಚಾಲನೆ ದೊರೆಯುವ ಸಾಧ್ಯತೆಗಳು ಕಂಡು ಬರುತ್ತಿದ್ದು, ಮನೆ ಮತ್ತು ನಿವೇಶನಗಳು ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎಂದು ಖಾಸಗಿ ಬಿಲ್ಡರ್‌ಗಳು ಹೇಳುತ್ತಾರೆ.

ಉದ್ದೇಶಿತ ಬಿಡದಿ ಟೌನ್‌ಶಿಪ್‌ನಲ್ಲಿ ವಸತಿ, ವ್ಯಾಪಾರ, ವಾಣಿಜ್ಯ, ಕ್ರೀಡೆ, ಶಿಕ್ಷಣ, ಮನರಂಜನೆ ಸೇರಿದಂತೆ ಪ್ರತಿಯೊಂದೂ ಸೌಲಭ್ಯಗಳೂ ಇರುವ ಕಾರಣ ಬಿಡದಿಯು ಬೆಂಗಳೂರಿನ ಒಂದು ಭಾಗವೇ ಎಂಬಂತೆ ಅಭಿವೃದ್ಧಿ ಹೊಂದುತ್ತದೆ ಎಂಬ ನಿರೀಕ್ಷೆಗಳಿವೆ. ಅಲ್ಲದೆ ಸರ್ಕಾರದ ಉದ್ದೇಶಿತ `ನಾಲೆಡ್ಜ್ ಸಿಟಿ'(ಜ್ಞಾನ ನಗರ), `ಫಿಲ್ಮಂ ಸಿಟಿ' ಯೋಜನೆಗಳಿಗೆ ಮರುಜೀವ ಬಂದರೆ ಬಿಡದಿಯಲ್ಲಿ ನಿವೇಶನ ಮತ್ತು ಮನೆ ಖರೀದಿ ಕಷ್ಟವಾಗಬಹುದು ಎಂಬುದು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಕಂಪೆನಿಗಳ ಅಭಿಪ್ರಾಯ.

ಪ್ರಾಧಿಕಾರದಿಂದಲೇ `ಅಪಾರ್ಟ್‌ಮೆಂಟ್'
ರಾಮನಗರ, ಚನ್ನಪಟ್ಟಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವೇ `ಅಪಾರ್ಟ್‌ಮೆಂಟ್' ನಿರ್ಮಾಣದ ಯೋಜನೆ ಸಿದ್ಧಪಡಿಸಿದೆ.

ಚನ್ನಪಟ್ಟಣದ ಸಾತನೂರು ರಸ್ತೆಯಲ್ಲಿ `ಚನ್ನಪಟ್ಟಣ ಗ್ರ್ಯಾಂಡ್' ಹೆಸರಿನಲ್ಲಿ ಮೂರು-ನಾಲ್ಕು ಮಹಡಿಗಳ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವ ಪ್ರಸ್ತಾವ ಪ್ರಾಧಿಕಾರದ ಮುಂದಿದೆ. ಈ ಯೋಜನೆ ಜಾರಿಯಾದರೆ ರಾಮನಗರ ಜಿಲ್ಲೆಯಲ್ಲಿ ತಲೆ ಎತ್ತಿದ ಮೊಟ್ಟ ಮೊದಲ ಅಪಾರ್ಟ್‌ಮೆಂಟ್ ಎಂಬ ಖ್ಯಾತಿಗೂ ಪಾತ್ರವಾಗಲಿದೆ.

ಅಂದಹಾಗೆ, ಪ್ರಾಧಿಕಾರ ರೂಪಿಸಿರುವ ನೀಲನಕ್ಷೆ ಪ್ರಕಾರ ಇಲ್ಲಿ ಸೆಲ್ಲಾರ್ ಮತ್ತು ಮೇಲೆ ಮೂರು ಮಹಡಿಗಳು ನಿರ್ಮಾಣವಾಗಲಿವೆ. ಸೆಲ್ಲಾರ್‌ನಲ್ಲಿ 70 ಕಾರುಗಳನ್ನು ನಿಲುಗಡೆ ಮಾಡುವಷ್ಟು ವಿಸ್ತಾರ ಜಾಗವೂ ಇರುತ್ತದೆ. ಪ್ರತಿ ಮಹಡಿಯಲ್ಲೂ 19 ಮನೆಗಳಂತೆ ಮೂರು ಮಹಡಿಗಳಲ್ಲಿ ಒಟ್ಟು 57 ಮನೆಗಳ ನಿರ್ಮಾಣವಾಗಲಿವೆ.

ಪ್ರತಿ ಮಹಡಿಯಲ್ಲೂ ಎರಡು ಬೆಡ್‌ರೂಮ್‌ನ 10 (ಒಟ್ಟು 30) ಹಾಗೂ ಒಂದು ಬೆಡ್‌ರೂಮ್‌ನ 9 (ಒಟ್ಟು 27) ಮನೆಗಳು ಬರಲಿವೆ. ಅಗತ್ಯ ಮೂಲ ಸೌಕರ್ಯಗಳನ್ನು ಈ ಅಪಾರ್ಟ್‌ಮೆಂಟ್ ಒಳಗೊಂಡಿರುತ್ತದೆ ಎಂದು ಪ್ರಾಧಿಕಾರದ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸುತ್ತಾರೆ.

ಆರೋಗ್ಯ ವಿ.ವಿ.
ರಾಮನಗರದ ಅರ್ಚಕರ ಹಳ್ಳಿಯಲ್ಲಿ ಉದ್ದೇಶಿತ `ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ' ಸ್ಥಾಪನೆಯಾದರೆ ಇಲ್ಲಿನ ರಿಯಲ್ ಎಸ್ಟೆಟ್ ವ್ಯವಹಾರದ ಚಟುವಟಿಕೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂಬುದು ಇಲ್ಲಿನ ನಿರೀಕ್ಷೆ.

ಇಲ್ಲಿ ಆರೋಗ್ಯ ವಿ.ವಿ ಸ್ಥಾಪನೆಯಾದರೆ ದೊಡ್ಡ ಪ್ರಮಾಣದಲ್ಲಿ `ಅಪಾರ್ಟ್‌ಮೆಂಟ್'ಗಳು, `ವಿಲ್ಲಾ'ಗಳು ನಿರ್ಮಾಣವಾಗಲಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ವಿ.ವಿ ಸ್ಥಾಪನೆಯಾಗುತ್ತದೆ ದೂರದೃಷ್ಟಿಯಿಂದಲೇ ಈ ಭಾಗದಲ್ಲಿ ಕೆಲ ಖಾಸಗಿ ಬಿಲ್ಡರ್‌ಗಳು ಬಡಾವಣೆಗಳನ್ನು ನಿರ್ಮಿಸಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.


ಅರ್ಚಕರ ಹಳ್ಳಿ ಬಳಿ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್ ಕಂಪೆನಿಯೊಂದು 26 ಎಕರೆ ಜಾಗದಲ್ಲಿ ಭೂ ಮಾಲೀಕರ ಸಹಯೋಗದೊಂದಿಗೆ ಬಡಾವಣೆ ನಿರ್ಮಿಸಿದೆ. ಅಲ್ಲಿ 8ರಿಂದ 10 `ಡ್ಯುಪ್ಲೆಕ್ಸ್' ಮನೆಗಳನ್ನು ನಿರ್ಮಿಸಿ ಮಾರುವ ಯೋಜನೆಯನ್ನೂ ಸಿದ್ಧಪಡಿಸಿಟ್ಟುಕೊಂಡಿದೆ.

30/40 ಅಡಿ ಉದ್ದ-ಅಗಲದ ನಿವೇಶನದಲ್ಲಿ ವಿಶಾಲವಾದ ಎರಡು ಅಥವಾ ನಾಲ್ಕು ಬೆಡ್‌ರೂಮ್‌ಗಳ `ಡ್ಯುಪ್ಲೆಕ್ಸ್' ಮನೆ ಕಟ್ಟುವ ಕಾರ್ಯ ಈಗಾಗಲೇ ಆರಂಭವಾಗಿದೆ. ಒಂದು ಮಾದರಿ ಮನೆಯನ್ನು ಇಲ್ಲಿ ನಿರ್ಮಿಸಲಾಗಿದ್ದು, ಗ್ರಾಹಕರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ.

ಗೃಹ ಮಂಡಳಿಯೂ ಹಿಂದೆ ಬಿದ್ದಿಲ್ಲ
ಇನ್ನೂ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಕೂಡ ಗೃಹ ನಿರ್ಮಾಣದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಬಿಡದಿ ಬಳಿಯ ಎಂ.ಕರೇನಹಳ್ಳಿ ಬಳಿ ಅಂದಾಜು 499.21 ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಬಡಾವಣೆಯಲ್ಲಿ 16 ಸ್ವತಂತ್ರ ಮನೆಗಳನ್ನು ಕಟ್ಟಿ ಹಂಚಿಕೆ ಮಾಡಲು ಮಂಡಳಿ ಮುಂದಾಗಿದೆ. ಅಲ್ಲದೆ ಕನಕಪುರದ ರಾಯಸಂದ್ರ ಬಳಿ 249.33 ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಬಡಾವಣೆಯಲ್ಲಿ ವಿವಿಧ ಅಳತೆಯ 90 ಮನೆಗಳನ್ನು ನಿರ್ಮಿಸಿ ಆಕಾಂಕ್ಷಿಗಳಿಗೆ ಹಂಚಿಕೆ ಮಾಡಲು ನಿರ್ಧರಿಸಿದೆ. ಈಗಾಗಲೇ ಈ ಎರಡೂ ಯೋಜನೆಗಳಿಗೆ `ಕೆಎಚ್‌ಬಿ' ಶಂಕುಸ್ಥಾಪನೆ ನೆರವೇರಿಸಿದ್ದು, ಕಾಮಗಾರಿ ಚಾಲ್ತಿಯಲ್ಲಿದೆ.

ರಾಮನಗರ ಜಿಲ್ಲೆಯ ಸ್ಥಳೀಯರು ಕಟ್ಟಿದ ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳ ಖರೀದಿ ಬಗ್ಗೆ ಅಷ್ಟಾಗಿ ಆಸಕ್ತಿ ಹೊಂದಿಲ್ಲ. ನಿವೇಶನದಲ್ಲಿ ತಾವೇ ಮನೆ ಕಟ್ಟಿ `ಸ್ವಂತ ಮನೆ' ಕನಸನ್ನು ಸಾಕಾರ ಮಾಡಿಕೊಳ್ಳಲು ಬಯಸುವವರೇ ಇಲ್ಲಿ ಹೆಚ್ಚಿದ್ದಾರೆ. ಆದರೆ ಬೆಂಗಳೂರು ಬೆಳೆದಂತೆ ಅದರ ಅಭಿವೃದ್ಧಿಯ ನೆರಳು ಬಿಡದಿ, ರಾಮನಗರ, ಚನ್ನಪಟ್ಟಣಕ್ಕೂ ತಾಗುತ್ತಿದೆ. ಇದರಿಂದ ಈ ಪ್ರದೇಶಗಳು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ.

ಹೀಗಾಗಿ ಬೆಂಗಳೂರಿನ ಅಪಾರ್ಟ್‌ಮೆಂಟ್, ಫ್ಲಾಟ್, ವಿಲ್ಲಾ, ಮನೆ ಕಟ್ಟಿ ಮಾರುವ ವ್ಯವಸ್ಥೆ ಮಂದಗತಿಯಲ್ಲಿ ಆರಂಭವಾಗುತ್ತಿದೆ. ಅಂದಹಾಗೆ, ಇವುಗಳನ್ನು ಖರೀದಿಸಲು ಆಸಕ್ತಿ ತೋರುತ್ತಿರುವವರು ಬೆಂಗಳೂರಿಗರೇ ಎಂಬುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT