ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರಕ್ಕೆ ಭೂ ಹೋರಾಟ ಜಾಥಾ ಆಗಮನ

Last Updated 3 ಮೇ 2012, 5:35 IST
ಅಕ್ಷರ ಗಾತ್ರ

ರಾಮನಗರ: ಬಗರ್ ಹುಕುಂ, ಅರಣ್ಯ ಭೂಮಿಯ ಸಕ್ರಮ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿರುವ ಭೂ ಹೋರಾಟ ಜಾಥಾದ ವಾಹನ ಬುಧವಾರ ರಾಮನಗರಕ್ಕೆ ಆಗಮಿಸಿತು.

ನಗರದ ಐಜೂರು ವೃತ್ತದಲ್ಲಿ ಸಂಘದ ಪದಾಧಿಕಾರಿಗಳು ವಾಹನವನ್ನು ಬರಮಾಡಿಕೊಂಡರು.
 ಜಾಥಾವನ್ನು ಉದ್ದೇಶಿಸಿ ಪ್ರಾಂತ ರೈತಸಂಘದ ಜಿಲ್ಲಾ ಸಂಚಾಲಕ ಎಂ.ಶ್ರೀನಿವಾಸ್ ಮಾತನಾಡಿ, 1992-93ರ ಅವಧಿಯಲ್ಲಿ ರೈತರ ಒತ್ತುವರಿ ಭೂಮಿಯನ್ನು ಸಕ್ರಮ ಮಾಡಲು ಸರ್ಕಾರ ಫಾರಂ 50 ಹಾಗೂ 53ರ ಅಡಿಯಲ್ಲಿ ಅವಕಾಶ ನೀಡಿತ್ತು.
 
24 ಲಕ್ಷ ಎಕರೆಯಷ್ಟು ಭೂಮಿಯ ಸಕ್ರಮಕ್ಕೆ 14.50 ಲಕ್ಷ ಬಡ ರೈತರು ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರದ 2010ರ ಅಂಕಿ ಅಂಶದ ಪ್ರಕಾರ 10 ಲಕ್ಷ ಎಕರೆಯ ಅರ್ಜಿಗಳನ್ನು ತಿರಸ್ಕೃರಿಸಲಾಗಿದೆ. ಈ ಭೂಮಿಯಲ್ಲಿ 7 ಲಕ್ಷ ಎಕರೆ ದಲಿತರು ಮತ್ತು ಬಡ ರೈತರಿಗೆ ಸೇರಿದ್ದಾಗಿದೆ. ಬೆಳೆ ಬೆಳೆಯುತ್ತಿರುವ ಬಡ ರೈತರಿಗೆ ಭೂಮಿ ಕೊಡಲು ಸರ್ಕಾರಕ್ಕೆ ಮನಸ್ಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

1992ರ ನಂತರ ಒತ್ತುವರಿ ಮಾಡಿಕೊಂಡಿರುವ ಸುಮಾರು 10 ಲಕ್ಷ ಎಕರೆ ಭೂಮಿಯನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ ಅಹ್ವಾನಿಸಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗಡಿ ನಂತರದ 18 ಕಿ.ಮೀ. ಹೊರಗಡೆ, ರಾಮನಗರ ಜಿಲ್ಲಾ ಕೇಂದ್ರದ ಗಡಿ ನಂತರದ 5 ಕಿ.ಮೀ. ಹೊರಗಡೆ, ತಾಲ್ಲೂಕು ಕೇಂದ್ರದ ಗಡಿಯ ನಂತರದ 5 ಕಿ.ಮೀ. ಹೊರಗಡೆಯ ಭೂಮಿಯನ್ನು  ಸಕ್ರಮ ಮಾಡುವುದಿಲ್ಲವೆಂದು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಶೇ.90ರಷ್ಟು ರೈತರಿಗೆ ಭೂಮಿ ಸಿಗುವುದಿಲ್ಲ. ಇದರಿಂದ ಭೂ ಸಂಬಂಧಗಳು ತಿರುವು ಮುರುವಾಗುತ್ತವೆ ಎಂದು ತಿಳಿಸಿದರು.

ಜಾಥಾ ಜಿಲ್ಲೆಯಾದ್ಯಂತ ಸಂಚರಿಸಲಿದ್ದು ಮೇ 4ರಂದು ರಾಮನಗರದ ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಳ್ಳಲಿದೆ. ಸಮಾವೇಶದ ಉದ್ಘಾಟನೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯೊರೆಡ್ಡಿ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯ ಉಪಾಧ್ಯಕ್ಷ ಎನ್.ವೆಂಕಟಾಚಲಯ್ಯ, ರಾಜ್ಯ ಸಮಿತಿ ಸದಸ್ಯೆ ವನಜಾ ಭಾಗವಹಿಸಿಲಿದ್ದಾರೆ ಎಂದು ತಿಳಿಸಿದರು.

ಜಾಥಾದಲ್ಲಿ ತಾಲ್ಲೂಕು ಅಧ್ಯಕ್ಷ ಬಾಲನಾಯಕ್, ಕಾರ್ಯದರ್ಶಿ ಸಂಜೀವಯ್ಯ, ಉಪಾಧ್ಯಕ್ಷ ಎಸ್.ಎಂ.ಮಹದೇವಯ್ಯ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಸುಜಾತಾ, ಪದಾಧಿಕಾರಿಗಳಾದ ಕೃಷ್ಣಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT