ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ: ಸಂಸದರ ಬೆಂಬಲಕ್ಕೆ ವಿಎಚ್‌ಪಿ ಯತ್ನ

Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

ನಾಗ್ಪುರ (ಪಿಟಿಐ): ರಾಮಮಂದಿರ ನಿರ್ಮಾಣ ಮಂತ್ರವನ್ನು ಪುನಃ ಜಪಿಸಲು ಆರಂಭಿಸಿರುವ ವಿಶ್ವ ಹಿಂದೂ ಪರಿಷತ್, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲಾ ಸಂಸದರ ಬೆಂಬಲ ಪಡೆಯುವ ಕಾರ್ಯಕ್ಕೆ ಶೀಘ್ರ ಚಾಲನೆ ನೀಡುವುದಾಗಿ ಹೇಳಿದೆ.

ಜುಲೈ 28ರಂದು ಸಂಸದರ ಪ್ರಥಮ ಸಭೆಯನ್ನು ದೆಹಲಿಯಲ್ಲಿ ನಡೆಸಲಾಗುವುದು ಎಂದು ವಿಎಚ್‌ಪಿ ಮುಖಂಡ ಪ್ರವೀಣ್ ತೊಗಾಡಿಯಾ ತಿಳಿಸಿದರು.

ಅಮರಾವತಿಯಲ್ಲಿ ನಡೆದ ಆರ್‌ಎಸ್‌ಎಸ್‌ನ ಚಿಂತನ ಬೈಠಕ್‌ನಲ್ಲಿ ಭಾಗವಹಿಸಿ ಹಿಂತಿರುಗಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, `ಈಗ ಚೆಂಡು ಸರ್ಕಾರದ ಅಂಗಳದಲ್ಲಿ ಇದೆ, ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಸತ್ತು ಕಾನೂನು ರಚಿಸಬೇಕಿದೆ' ಎಂದು ಹೇಳಿದರು.

ಪ್ರಾಚ್ಯವಸ್ತು ಇಲಾಖೆ ನಡೆಸಿದ ಉತ್ಕನನ ಸಂದರ್ಭದಲ್ಲಿ ರಾಮಮಂದಿರ ಇದ್ದುದರ ಬಗ್ಗೆ ಪುರಾವೆಗಳು ದೊರತಿವೆ, ಬಾಬರಿ ಮಸೀದಿ ಇದ್ದ ಜಾಗದಲ್ಲಿ ಮೊದಲಿನಿಂದಲೂ ರಾಮಮಂದಿರವಿತ್ತು ಎಂದು ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಿಳಿಸಿದೆ ಎಂದು ತೊಗಾಡಿಯಾ ಹೇಳಿದರು.

ಗುಜರಾತ್‌ನ ಮಾಜಿ ಸಚಿವ ಷಾ ಅವರು ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯ ಬಗ್ಗೆ, `ಅದು ನಿರೀಕ್ಷಿತ. ಯಾವುದೇ ಕಟ್ಟಾ ಹಿಂದೂ ಮುಖಂಡ ಅಯೋಧ್ಯೆಗೆ ಭೇಟಿ ನೀಡಿದರೆ ಮಂದಿರ ನಿರ್ಮಾಣವಾಗಲೇಬೇಕು ಎಂಬ ಹೇಳಿಕೆ ನೀಡುವ ಮನಸ್ಸಾಗುತ್ತದೆ' ಎಂದರು.

ಆರ್‌ಎಸ್‌ಎಸ್ ಚಿಂತನ ಬೈಠಕ್‌ನಲ್ಲಿ ಏನು ನಡೆಯಿತು ಎಂಬುದನ್ನು ಬಹಿರಂಗಪಡಿಸದ ತೊಗಾಡಿಯಾ, `ಮುಲಾಯಂ ಸಿಂಗ್ ಅಥವಾ ರಾಹುಲ್ ಗಾಂಧಿ ಯಾರೇ ಇರಲಿ ಕೋಟ್ಯಂತರ ಹಿಂದೂಗಳ ಭಾವನೆಗಳನ್ನು ಗೌರವಿಸಿ ಗೋಹತ್ಯೆ ತಡೆಯುವ ಮತ್ತು ಉದ್ಯೋಗ ನೀಡುವ ಭರವಸೆ ನೀಡಿದರೆ ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡಲಾಗುತ್ತದೆ' ಎಂದು ಹೇಳಿದರು. `21 ಕೋಟಿ ಇರುವ ಕ್ರೈಸ್ತ, ಮುಸ್ಲಿಂ ಮತ್ತು ಇತರರಿಗಿಂತ ನೂರು ಕೋಟಿ ಹಿಂದೂಗಳ ಹಿತಾಸಕ್ತಿ ನಮಗೆ ಮುಖ್ಯ' ಎಂದು ತೊಗಾಡಿಯ ಹೇಳಿದರು.

ರಾಮಮಂದಿರ ನಿರ್ಮಾಣ, ಗೋಹತ್ಯೆ ನಿಷೇಧ, ಸಮಾನ ನಾಗರಿಕ ಸಂಹಿತೆ, ಹಿಂದೂಗಳಿಗೆ ಉದ್ಯೋಗ ನೀಡುವುದು ಮತ್ತು ಹಿಂದೂಗಳ ಹಕ್ಕುಗಳನ್ನು ರಕ್ಷಿಸುವುದು ವಿಶ್ವಹಿಂದೂ ಪರಿಷತ್ತಿನ ಸ್ಪಷ್ಟ ಕಾರ್ಯಸೂಚಿಗಳು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT