ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಯ್ಯ ಆಸ್ಪತ್ರೆಗೆ 6.50 ಲಕ್ಷ ದಂಡ

Last Updated 23 ಅಕ್ಟೋಬರ್ 2011, 19:05 IST
ಅಕ್ಷರ ಗಾತ್ರ

ಬೆಂಗಳೂರು: ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಉಪಕರಣವೊಂದನ್ನು ರೋಗಿಯ ಶರೀರದಲ್ಲಿಯೇ ಬಿಟ್ಟು ಅವರು ಸುಮಾರು ಒಂಬತ್ತು ತಿಂಗಳ ಕಾಲ ತೀವ್ರ ಯಾತನೆ ಅನುಭವಿಸುವಂತೆ ಮಾಡಿದ ಎಂ.ಎಸ್.ರಾಮಯ್ಯ ಸ್ಮಾರಕ ಆಸ್ಪತ್ರೆಗೆ 6.50 ಲಕ್ಷ ರೂಪಾಯಿಗಳ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಈ ದಂಡದ ಹಣವನ್ನು 10 ಸಾವಿರ ರೂಪಾಯಿಗಳ ನ್ಯಾಯಾಲಯದ ವೆಚ್ಚದ ಜೊತೆಗೆ, ದೂರುದಾರ ಎಫ್.ಪ್ರಕಾಶ್ ಅವರಿಗೆ ಪರಿಹಾರದ ರೂಪದಲ್ಲಿ ನೀಡುವಂತೆ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ.

ಆರೋಪಿಯಾಗಿರುವ ಆಸ್ಪತ್ರೆಯ ವೈದ್ಯ ಡಾ.ರಂಗನಾಥ್ ಮತ್ತು ಆಸ್ಪತ್ರೆ ಒಟ್ಟಾಗಿ ದಂಡದ ವೊತ್ತ ಕಟ್ಟಬೇಕೆಂದು ಪೀಠ ನಿರ್ದೇಶಿಸಿದೆ.

ಬೆನ್ನು ನೋವು ಹಾಗೂ ಮೊಣಕಾಲು ನೋವಿನಿಂದ ಬಳಲುತ್ತಿದ್ದ ಪ್ರಕಾಶ್, ಈ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದಾಗ ಚಿಮ್ಮಟಿಗೆಯೊಂದು ಶರೀರದ ಒಳಗೆ ಉಳಿದುಕೊಂಡಿತು. ಆದರೆ ಇದರಿಂದ ಸಮಸ್ಯೆಯಿಲ್ಲ ಎಂದು ವೈದ್ಯರು ತಿಳಿಸಿದರು. ಆದರೆ, ಇದರಿಂದ ಪ್ರಕಾಶ್ ಅವರ ನೋವು ಉಲ್ಭಣಿಸಿತು. ಈ ಕುರಿತು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಲು ಯತ್ನಿಸಿ ವಿಫಲರಾದರು.

ನಂತರ ಬೇರೆ ಬೇರೆ ಆಸ್ಪತ್ರೆಗಳಿಗೆ ಭೇಟಿ ನೀಡಬೇಕಾಯಿತು. ಇದರಿಂದ ಸುಮಾರು ಒಂಬತ್ತು ತಿಂಗಳು ಕೆಲಸಕ್ಕೂ ಹೋಗಲು ಆಗದೆ ಸಂಬಳವೂ ಇಲ್ಲದೇ ಪರದಾಡಿದರು. ವೈದ್ಯಕೀಯ ವೆಚ್ಚಕ್ಕಾಗಿ ಲಕ್ಷಗಟ್ಟಲೆ ಹಣ ಸಾಲ ಮಾಡಬೇಕಾಗಿ ಬಂತು ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ಆಸ್ಪತ್ರೆ ಕರ್ತವ್ಯಲೋಪ ಎಸಗಿದೆ ಎಂದು ಅಭಿಪ್ರಾಯ ಪಟ್ಟ ವೇದಿಕೆ ಪರಿಹಾರ ನೀಡುವಂತೆ ಆದೇಶಿಸಿದೆ.

ಹಣ ನೀಡಲು ಹಿಂಸೆ: ಬ್ಯಾಂಕ್‌ಗೆ ದಂಡ

ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆದುಕೊಳ್ಳದಿದ್ದರೂ, ಈ ಕಾರ್ಡ್‌ನಿಂದ ಬಾಕಿ ಉಳಿಸಿಕೊಂಡಿರುವ ಹಣವನ್ನು ನೀಡುವಂತೆ ಬೆದರಿಕೆ ಒಡ್ಡುವ ಮೂಲಕ ಗ್ರಾಹಕರೊಬ್ಬರಿಗೆ ಮಾನಸಿಕ ಯಾತನೆ ನೀಡಿದ ಐಸಿಐಸಿಐ ಬ್ಯಾಂಕ್‌ನ ಬೊಮ್ಮನಹಳ್ಳಿ ಶಾಖೆಗೆ 30 ಸಾವಿರ ರೂಪಾಯಿಗಳ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ. ಈ ದಂಡದ ಹಣವನ್ನು 10 ಸಾವಿರ ರೂಪಾಯಿಗಳ ನ್ಯಾಯಾಲಯದ ವೆಚ್ಚದ ಜೊತೆಗೆ, ದೂರುದಾರ ರಾಜೇಶ್ ಕುಮಾರ್ ಅವರಿಗೆ ನೀಡುವಂತೆ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ.

`ಕ್ರೆಡಿಟ್ ಕಾರ್ಡ್ ಬಳಸಿರುವ ನೀವು 1.84 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಿದೆ~ ಎಂದು ಈ ಬ್ಯಾಂಕ್‌ನಿಂದ ರಾಜೇಶ್ ಅವರ ಇ-ಮೇಲ್ ಹಾಗೂ ಮೊಬೈಲ್ ದೂರವಾಣಿಗೆ ಸಂದೇಶ ಬಂತು. ಆದರೆ ಕ್ರೆಡಿಟ್ ಕಾರ್ಡ್ ಅನ್ನು ಅವರು ಪಡೆದುಕೊಂಡಿರಲಿಲ್ಲ. ಈ ಬಗ್ಗೆ ಬ್ಯಾಂಕ್‌ಗೆ ಅವರು ಮಾಹಿತಿ ನೀಡಿದರು. ಬ್ಯಾಂಕ್‌ನಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡ ಸಿಬ್ಬಂದಿ, ಇನ್ನು ಮುಂದೆ ಆ ರೀತಿಯ ಸಂದೇಶಗಳು ಬರುವುದಿಲ್ಲ ಎಂದು ಭರವಸೆ ನೀಡಿದರು.

ಇದಾದ ಕೆಲವೇ ದಿನಗಳಲ್ಲಿ ರಾಜೇಶ್ ಅವರ ಬ್ಯಾಂಕ್‌ನ ಉಳಿತಾಯ ಖಾತೆಯ ಅಕೌಂಟ್ ಅನ್ನು ಮುಚ್ಚಲಾಯಿತು. ಇದರಿಂದ ಅವರು ತಮ್ಮ ಖಾತೆಯಿಂದ ಹಣ ಪಡೆಯುವುದು ಅಸಾಧ್ಯವಾಯಿತು. ಈ ಕುರಿತು ಬ್ಯಾಂಕ್ ಗಮನ ಸೆಳೆದಾಗ, ಪುನಃ ಬ್ಯಾಂಕ್‌ನಿಂದ ಕ್ಷಮೆಯಾಚನೆ ಪತ್ರ ಬಂದಿತು.  ಆದರೆ ಬ್ಯಾಂಕ್‌ನಿಂದ ಇದೇ ರೀತಿಯ ವರ್ತನೆ ಮುಂದುವರಿಯಿತು. ಬ್ಯಾಂಕ್‌ನ ಏಜೆಂಟ್‌ಗಳು ಅರ್ಜಿದಾರರಿಗೆ ಮೇಲಿಂದ ಮೇಲೆ ದೂರವಾಣಿ ಕರೆ ಮಾಡಿ, `ಬಾಕಿ ಉಳಿಸಿಕೊಂಡ~ ಹಣ ನೀಡುವಂತೆ ಬೆದರಿಕೆ ಒಡ್ಡಲು ಆರಂಭಿಸಿದರು.

ಈ ಹಿನ್ನೆಲೆಯಲ್ಲಿ ಅವರು ವೇದಿಕೆ ಮೊರೆ ಹೋದರು. ಬ್ಯಾಂಕ್ ಗಂಭೀರ ಸ್ವರೂಪದ ಕರ್ತವ್ಯಲೋಪ ಎಸಗಿದೆ ಎಂದು ವೇದಿಕೆ ಅಭಿಪ್ರಾಯಪಟ್ಟು, ಪರಿಹಾರ ನೀಡುವಂತೆ ಆದೇಶಿಸಿದೆ.

ಅದೇ ರೀತಿ, ಇನ್ನೊಂದು ಪ್ರಕರಣದಲ್ಲಿ ಮಾಗಡಿ ಜಯದೇವ ವಾಣಿ ಎಂಬುವವರಿಗೆ 20 ಸಾವಿರ ರೂಪಾಯಿಗಳ ಪರಿಹಾರ ನೀಡುವಂತೆ ಇದೇ ಬ್ಯಾಂಕ್‌ನ ಮುಂಬೈನ ಮುಖ್ಯ ಕೇಂದ್ರ ಹಾಗೂ ಬೆಂಗಳೂರಿನ ಶಾಖೆಗೆ ವೇದಿಕೆ ಆದೇಶಿಸಿದೆ. ಷೇರು ಪತ್ರ ವ್ಯವಹಾರಕ್ಕೆ ಸಂಬಂಧಿಸಿದಂತೆ ವಾಣಿ ಅವರಿಗೆ ಮಾನಸಿಕ ಯಾತನೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ.

ಹಣ ಹಿಂದಿರುಗಿಸಲು ಆದೇಶ
ಹೆಚ್ಚು ಬಡ್ಡಿ ಹಣ ನೀಡುವುದಾಗಿ ಆಮಿಷ ಒಡ್ಡಿ ಹಿರಿಯ ನಾಗರಿಕರೊಬ್ಬರಿಗೆ ವಂಚನೆ ಮಾಡಿದ ಲ್ಯಾವ್ಲ್ಲೆಲೆ ರಸ್ತೆ ಬಳಿ ಇರುವ ಯುನಿಟೆಕ್ ಲಿಮಿಟೆಡ್ ಹಾಗೂ ಎಂ.ಜಿ.ರಸ್ತೆಯ ಬಜಾಜ್ ಕ್ಯಾಪಿಟಲ್ ಲಿಮಿಟೆಡ್‌ಗೆ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಐದು ಸಾವಿರ ರೂಪಾಯಿಗಳ ದಂಡದ ಹಣವನ್ನು  ಪರಿಹಾರದ ರೂಪದಲ್ಲಿ ದೂರುದಾರರಾದ ಕುಮಾರಕೃಪ ರಸ್ತೆ ನಿವಾಸಿ ಸಿ.ಎಸ್.ಶ್ರೀನಿವಾಸನ್ ಅವರಿಗೆ ನೀಡುವಂತೆ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ.

ತಮ್ಮಲ್ಲಿ ಭದ್ರತಾ ಠೇವಣಿ ಇಡುವ ಹಿರಿಯ ನಾಗರಿಕರಿಗೆ ವಾರ್ಷಿಕ ಶೇ 11.5ರ ಬಡ್ಡಿ ದರದಲ್ಲಿ ಹಣ ವಾಪಸು ನೀಡಲಾಗುವುದು ಎಂದು ಜಾಹೀರಾತು ನೀಡಲಾಗಿತ್ತು. ಇದರ ಆಧಾರದ ಮೇಲೆ  ಅರ್ಜಿದಾರರು 25 ಸಾವಿರ ರೂಪಾಯಿ ಠೇವಣಿ ಇಟ್ಟಿದ್ದರು. ಆದರೆ ಅವರು ಹಲವು ಬಾರಿ ಕೋರಿಕೊಂಡರೂ ಹಣ ವಾಪಸು ನೀಡಲಾಗಿಲ್ಲ. ಇದರಿಂದ ಅವರು ವೇದಿಕೆ ಮೊರೆ ಹೋಗಿದ್ದರು. ಅರ್ಜಿದಾರರು ನೀಡಿರುವ 25ಸಾವಿರ ರೂಪಾಯಿಗಳನ್ನು ವಾಪಸು ಮಾಡುವಂತೆಯೂ ವೇದಿಕೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT