ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಲೀಲಾ ನಡುರಾತ್ರಿ ಕಾರ್ಯಾಚರಣೆ: ಪೊಲೀಸರು, ಸರ್ಕಾರಕ್ಕೆ ಸುಪ್ರೀಂ ಛೀಮಾರಿ

Last Updated 23 ಫೆಬ್ರುವರಿ 2012, 12:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ) ರಾಮಲೀಲಾ ಮೈದಾನದಲ್ಲಿ ಕಳೆದ ವರ್ಷ ಚಳವಳಿ ನಿರತ ಯೋಗಗುರು ರಾಮದೇವ್ ಬೆಂಬಲಿಗರ ಮೇಲೆ ನಡೆದ ~ನಡುರಾತ್ರಿಯ ಕಾರ್ಯಾಚರಣೆ- ಹಿಂಸಾಚಾರ ಘಟನೆಗಾಗಿ ಸರ್ಕಾರ ಹಾಗೂ  ದೆಹಲಿ ಪೊಲೀಸರಿಗೆ ಗುರುವಾರ ಛೀಮಾರಿ ಹಾಕಿದ ಸುಪ್ರೀಂಕೋರ್ಟ್ ~ಈ ಘಟನೆ ಜನತೆ ಮತ್ತು ಸರ್ಕಾರದ ನಡುವಣ ವಿಶ್ವಾಸದ ಕೊರತೆಯ ಕಣ್ಣು ಕುಕ್ಕುವ ಉದಾಹರಣೆ~ ಎಂದು ಬಣ್ಣಿಸಿತು.

ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಮತ್ತು ನ್ಯಾಯಮೂರ್ತಿ ಸ್ವತಂತರ್ ಕುಮಾರ್ ಅವರನ್ನು ಒಳಗೊಂಡ ಪೀಠವು ~ಈ ಘಟನೆಯು ಪ್ರಜಾಪ್ರಭುತ್ವದ ಅಡಿಪಾಯಕ್ಕೇ ಧಕ್ಕೆ ಉಂಟಾಗಿರುವ ರಾಷ್ಟ್ರದ ಪರಿಸ್ಥಿತಿಯನ್ನು ತೋರಿಸಿಕೊಟ್ಟಿದೆ~ ಎಂದು ಹೇಳಿತು.

ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡು ಹಲವರು ಗಾಯಗೊಳ್ಳಲು ಕಾರಣವಾದ ದಾರುಣ ಘಟನೆಯನ್ನು ಪೊಲೀಸ್ ಮತ್ತು ಸರ್ಕಾರ ತಪ್ಪಿಸಬಹುದಾಗಿತ್ತು  ಎಂದೂ ಪೀಠವು ಅಭಿಪ್ರಾಯಪಟ್ಟಿತು.

~ಇದು ಆಳಿಸಿಕೊಳ್ಳುತ್ತಿರುವ ಜನತೆ ಮತ್ತು ಆಳುತ್ತಿರುವ ಸರ್ಕಾರದ ನಡುವಣ ವಿಶ್ವಾಸದ ಕೊರತೆಯ ಕಣ್ಣ ಕುಕ್ಕುವ ಉದಾಹರಣೆ~ ಎಂದೂ ಪೀಠ ಹೇಳಿತು. ಪೊಲೀಸರ ಕಾರ್ಯಾಚರಣೆ ಶಾಂತಿ ಸ್ಥಾಪನೆಗಾಗಿ ಇರಬೇಕು, ಅದರೆ ಪೊಲೀಸರೇ ಸ್ವತಃ ಇದನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ಹೇಳಿತು.

ರಾಮಲೀಲಾ ಮೈದಾನದಲ್ಲಿ ಸಂಭವಿಸಿದ ಘಟನೆಗಾಗಿ ದೆಹಲಿ ಪೊಲೀಸರು ಮತ್ತು ರಾಮದೇವ್ ಇಬ್ಬರನ್ನೂ ನಿಂದಿಸಿದ ಸುಪ್ರೀಂಕೋರ್ಟ ಘಟನೆ ಸಂದರ್ಭದಲ್ಲಿ ಹಿಂಸಾತ್ಮಕವಾಗಿ ವರ್ತಿಸಿದ ಪೊಲೀಸ್ ಸಿಬ್ಬಂದಿ ಮತ್ತು ರಾಮ್ ದೇವ್ ಬೆಂಬಲಿಗರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ನಿರ್ದೇಶನ ನೀಡಿತು. ಏನಿದ್ದರೂ ಪೊಲೀಸರು ನಿದ್ರಿಸುತ್ತಿದ್ದವರ ಮೇಲೂ ದಾಳಿ ನಡೆಸಿದೆ, ಸರ್ಕಾರ ಈ ಹಿಂಸಾತ್ಮಕ ಘಟನೆಯನ್ನು ತಪ್ಪಿಸಬಹುದಾಗಿತ್ತು ಎಂದು ಹೇಳಿತು.

ದೆಹಲಿ ಪೊಲೀಸರಿಂದ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆ ಹಾಗೂ ಅಧಿಕಾರದ ದುರುಪಯೋಗ ಆಗಿದೆ ಎಂದು ಹೇಳಿದ ನ್ಯಾಯಾಲಯ ಘಟನೆಯಲ್ಲಿ ಸಾವನ್ನಪ್ಪಿದ ರಾಜ್ ಬಾಲಾ ಕುಟುಂಬ ಸದಸ್ಯರಿಗೆ 5 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಮತ್ತು ಅಲ್ಪಸ್ವಲ್ಪ ಗಾಯಗೊಂಡವರಿಗೆ ತಲಾ 25,000 ರೂಪಾಯಿಗಳ ಪರಿಹಾರವನ್ನೂ ನ್ಯಾಯಾಲಯ ಘೋಷಿಸಿತು.

ನಿದ್ದೆಯಲ್ಲಿದ್ದ ರಾಮದೇವ್ ಬೆಂಬಲಿಗರ ಮೇಲೆ ನಡುರಾತ್ರಿ ನಡೆದ ಪೊಲೀಸ್ ಕಾರ್ಯಾಚರಣೆ ಸಂಬಂಧ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಅನುಸರಿಸಿ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ನಡೆಸಿತ್ತು. ಕಳೆದ ಜೂನ್ 4 ಮತ್ತು 5ರ ನಡುವಣ ರಾತ್ರಿ ಸಂಭವಿಸಿದ ಈ ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಪೊಲೀಸ್ ಕಾರ್ಯಾಚರಣೆ ನಡೆದಿತ್ತು. ವಿದೇಶಗಳಲ್ಲಿನ ಕಪ್ಪುಹಣವನ್ನು ಸ್ವದೇಶಕ್ಕೆ ತರಬೇಕು ಎಂಬ ಆಗ್ರಹ ಮತ್ತು ಭ್ರಷ್ಟಾಚಾರದ ವಿರುದ್ಧ ರಾಮದೇವ್ ಈ ಹೋರಾಟವನ್ನು ಸಂಘಟಿಸಿದ್ದರು.

ವಿಚಾರಣೆಯ ಬಳಿಕ ಪೀಠವು ಜನವರಿ 20ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT