ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಂಜನೇಯ ವಿರುದ್ಧ ತನಿಖೆಗೆ ಒತ್ತಾಯ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸುತ್ತಮುತ್ತಲಿನ 1,042 ಎಕರೆ ಸರ್ಕಾರಿ ಜಮೀನು ಒತ್ತುವರಿ ಕುರಿತ 428 ಪ್ರಕರಣಗಳನ್ನು ಅಂದಿನ (2009-10) ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ ಎಚ್. ರಾಮಾಂಜನೇಯ ಅವರು ಭೂ ಮಾಫಿಯಾ ಜೊತೆ ಶಾಮೀಲಾಗಿ ವಿಚಾರಣೆಯಿಂದ ಕೈಬಿಟ್ಟಿದ್ದಾರೆ, ಈ ಕುರಿತು ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಭೂಕಬಳಿಕೆ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಎ.ಟಿ. ರಾಮಸ್ವಾಮಿ ಅವರು ಸರ್ಕಾರವನ್ನು ಒತ್ತಾಯಿಸಿದರು.

ಶಾಸಕರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, `ರಾಮಾಂಜನೇಯ ಅವರು ಸರ್ಕಾರಿ ಭೂಮಿ ಕಬಳಿಸಿದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ 428 ಪ್ರಕರಣಗಳ ವಿಚಾರಣೆಯನ್ನು ಕೈಬಿಟ್ಟಿದ್ದಾರೆ. ಈ ಕುರಿತು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು~ ಎಂದು ಒತ್ತಾಯಿಸಿದರು.

ಬೆಂಗಳೂರು ಉತ್ತರ, ಬೆಂಗಳೂರು ಉತ್ತರ (ಹೆಚ್ಚುವರಿ), ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ತಾಲ್ಲೂಕಿನ ಸರ್ಕಾರಿ ಭೂಮಿ ಒತ್ತುವರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ರಾಮಾಂಜನೇಯ ಅವರು ಮನಸೋ ಇಚ್ಛೆ ಕೈಬಿಟ್ಟಿದ್ದಾರೆ. ಇದು ಸರ್ಕಾರ ಮತ್ತು ಭೂಮಾಫಿಯಾ ಬೆಂಬಲ ಇಲ್ಲದೆ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಕರ್ನಾಟಕ ಭೂಕಬಳಿಕೆ ನಿಷೇಧ ಮಸೂದೆಯನ್ನು ಜಾರಿಗೊಳಿಸಬೇಕು ಎಂದು ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ರಾಮಾಂಜನೇಯ ಅವರ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆದೇಶಿಸುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗುವುದು.

15 ದಿನಗಳಲ್ಲಿ ಸರ್ಕಾರ ಈ ಕುರಿತು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸಮಿತಿಯ ಸದಸ್ಯರು ಚರ್ಚೆ ನಡೆಸಿ ಹೋರಾಟದ ರೂಪುರೇಷೆ ನಿರ್ಧರಿಸುತ್ತಾರೆ ಎಂದು ರಾಮಸ್ವಾಮಿ ಸ್ಪಷ್ಟಪಡಿಸಿದರು.

ಮಾಜಿ ಸ್ಪೀಕರ್ ಕೃಷ್ಣ, ಪರಿಸರವಾದಿ ಅ.ನ.ಯಲ್ಲಪ್ಪ ರೆಡ್ಡಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕಾರ್ಮಿಕ ಮುಖಂಡ ಎಚ್.ವಿ.ಅನಂತಸುಬ್ಬರಾವ್ ಮತ್ತು ಇತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT