ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ್‌ದೇವ್ ಬಂಧನಕ್ಕೆ ರಾಜ್ಯಾದ್ಯಂತ ಆಕ್ರೋಶ; ವಿವಿಧೆಡೆ ಸಾರ್ವಜನಿಕರ ಪ್ರತಿಭಟನೆ

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನವದೆಹಲಿಯಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಟ ಆರಂಭಿಸಿದ ಬಾಬಾ ರಾಮ್‌ದೇವ್ ಅವರ ಬಂಧನಕ್ಕೆ ರಾಜ್ಯದಲ್ಲಿ ಭಾನುವಾರ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ಪ್ರತಿಕೃತಿ ದಹನ, ಕಾಂಗ್ರೆಸ್ ಧ್ವಜಕ್ಕೆ ಬೆಂಕಿ, ರಸ್ತೆ ತಡೆ, ರೈಲು ತಡೆ, ಬೈಕ್ ರ‌್ಯಾಲಿ, ಧರಣಿ ಇತ್ಯಾದಿಗಳ ಮೂಲಕ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಶಿವಮೊಗ್ಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (ಪ್ರವೀಣ್ ಶೆಟ್ಟಿ ಬಣ) ರೈಲು ತಡೆದು ಪ್ರತಿಭಟನೆ ನಡೆಸಿದರು. ಬೆಂಗಳೂರಿಗೆ ತೆರಳಬೇಕಾಗಿದ್ದ ಪ್ರಯಾಣಿಕರ ರೈಲನ್ನು ಕೆಲವು ಕ್ಷಣಗಳ ಕಾಲ ತಡೆದರು.

ಪತಂಜಲಿ ಯೋಗ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರದಿಂದ ಆರಂಭಿಸಿದ್ದ ಸತ್ಯಾಗ್ರಹದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಸತ್ಯಾಗ್ರಹದಲ್ಲಿ ಪಾಲ್ಗೊಂಡವರೆಲ್ಲರೂ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಬಿಜೆಪಿ ಮುಖಂಡರು ಸತ್ಯಾಗ್ರಹಕ್ಕೆ ಸಾಥ್ ನೀಡಿದರು.

ಪ್ರಧಾನಿ ಪ್ರತಿಕೃತಿ ದಹನ: ಚಿತ್ರದುರ್ಗ ನಗರದಲ್ಲಿ ಎಬಿವಿಪಿ, ಬಿಜೆಪಿ ಮತ್ತು ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಜರಂಗದಳದ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮುಂದೆ ಧರಣಿ ನಡೆಸಿದರು. ಬಿಜೆಪಿ ಕಾರ್ಯಕರ್ತರು ಒನಕೆ ಓಬವ್ವ ವೃತ್ತದಲ್ಲಿ ಧರಣಿ ನಡೆಸಿದರು. ಎಬಿವಿಪಿ ಕಾರ್ಯಕರ್ತರು ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಪ್ರಧಾನಿ ಮನಮೋಹನ್‌ಸಿಂಗ್ ಅವರ ಪ್ರತಿಕೃತಿ ದಹನ ಮಾಡಿದರು.

ಕಾಂಗ್ರೆಸ್ ಧ್ವಜಕ್ಕೆ ಬೆಂಕಿ: ದಾವಣಗೆರೆ ನಗರದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ಸೇರಿ ಕಾಂಗ್ರೆಸ್ ಧ್ವಜವನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಾಹ್ನ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಕಾರ್ಯಕರ್ತರು ಮೆರವಣಿಗೆ ನಡೆಸಿ 20 ನಿಮಿಷ ರಸ್ತೆ ತಡೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಕೂಡಾ ಗಾಂಧಿ ವೃತ್ತದಲ್ಲಿ ಸೇರಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಪ್ರತಿಕೃತಿ ದಹನ ಮಾಡಿದರು.

ರ‌್ಯಾಲಿ: ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಪ್ರಮುಖ ನಗರಗಳಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಯಿತು.

ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಬಾಬಾ ರಾಮದೇವ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ವಿಜಾಪುರ, ಬಾಗಲಕೋಟೆ, ಗದಗ, ಕಾರವಾರದಲ್ಲಿ ನಡೆದಿರುವ ಅನ್ನಸತ್ಯಾಗ್ರಹ ಭಾನುವಾರವೂ ಮುಂದುವರಿದಿದೆ. ಸತ್ಯಾಗ್ರಹ ಎಲ್ಲೆಡೆ ಶಾಂತಿಯುತವಾಗಿದೆ.

ಮಾನವ ಸರಪಳಿ: ಬಾಬಾ ಹೋರಾಟಕ್ಕೆ ಬೆಂಬಲ ಸೂಚಿಸಿ ಗುಲ್ಬರ್ಗ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಶನಿವಾರ ಸತ್ಯಾಗ್ರಹ ಜಿಲ್ಲಾ ಪತಂಜಲಿ ಯೋಗ ಸಮಿತಿ ಕಾರ್ಯಕರ್ತರು ರಾಮ್‌ದೇವ್ ಬಂಧನದ ಸುದ್ದಿ ತಿಳಿದು ಭಾನುವಾರ ಬೆಳಿಗ್ಗೆ ಮಾನವ ಸರಪಳಿ ರಚಿಸಿದರು.

ಬಿಜೆಪಿ ಮುಖಂಡರು, ಕಾರ್ಯಕರ್ತರೂ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ರಸ್ತೆ ತಡೆ ಚಳವಳಿ ನಡೆಸಿದ ಪರಿಣಾಮ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತವು.

ರಸ್ತೆ ತಡೆ: ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಕೆಲ ಸಮಯ ರಸ್ತೆ ತಡೆ ಚಳವಳಿ ನಡೆಸಿದರು.  ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕರಡಿ ಸಂಗಣ್ಣ, ಪಕ್ಷದ ಮುಖಂಡರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಯಾದಗಿರಿಯ ಗಾಂಧಿ ವೃತ್ತದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್‌ಗಳ ನೇತೃತ್ವದಲ್ಲಿ ಭಾನುವಾರ ಮಧ್ಯಾಹ್ನ ಕೆಲ ಕಾಲ ರಸ್ತೆ ತಡೆ ನಡೆಸಲಾಯಿತು.ಇದಕ್ಕೂ ಮೊದಲು ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಬೈಕ್ ರ‌್ಯಾಲಿ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಿಸಿರುವ ಸತ್ಯಾಗ್ರಹ ಭಾನುವಾರವು ಮುಂದುವರಿದಿದೆ.

ಧರಣಿ: ರಾಯಚೂರಿನ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ಪದಾಧಿಕಾರಿಗಳು ರಾಮ್‌ದೇವ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಭಾನುವಾರವೂ ಧರಣಿ ಮುಂದುವರಿಸಿದರು.

ಬೀದರ್‌ನಲ್ಲಿ ಭಾನುವಾರ ಬಿಜೆಪಿ ಪ್ರತಿಭಟನಾ ರ‌್ಯಾಲಿ ನಡೆಸಿತು. ಪತಂಜಲಿ ಯೋಗಾಶ್ರಮದ ಕಾರ್ಯಕರ್ತರು ಯಜ್ಞ ನಡೆಸಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.

ವಿನೂತನ ಪ್ರತಿಭಟನೆ: ಚಿಕ್ಕಮಗಳೂರಿನಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಹನುಮಂತಪ್ಪ ವೃತ್ತದಲ್ಲಿ ಯೋಗ ನಡೆಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು. ಶಾಸಕ ಸಿ.ಟಿ.ರವಿ ನೇತೃತ್ವ ವಹಿಸಿದ್ದರು.

ಮಂಗಳೂರಿನ ಪುರಭವನದ ಎದುರು ಬಜರಂಗದಳ ಮತ್ತು ಬಿಜೆಪಿ ವತಿಯಿಂದ ಪ್ರತ್ಯೇಕ ಸಮಯದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆದಿವೆ. ಉಡುಪಿಯಲ್ಲಿ ಬಿಜೆಪಿ ಮತ್ತು ಭಾರತ್ ಸ್ವಾಭಿಮಾನ್ ಟ್ರಸ್ಟ್ ವತಿಯಿಂದ ಕ್ಲಾಕ್ ಟವರ್ ಬಳಿ ಪ್ರತ್ಯೇಕ ಪ್ರತಿಭಟನೆ ನಡೆಯಿತು.

ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಕೋಟೆ ಆಂಜನೇಯ ಗುಡಿ ಮುಂದೆ ಪ್ರತಿಭಟನೆ ನಡೆಸಿದರು. ಮಡಿಕೇರಿಯಲ್ಲಿ ರಾಷ್ಟ್ರ ಗೌರವ ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಟೋಲ್‌ಗೇಟ್ ಬಳಿ ಸಭೆ ಸೇರಿ, ಪ್ರತಿಭಟನೆ ನಡೆಸಿದರು. ಕುಶಾಲನಗರದಲ್ಲಿ ಹಿಂದೂಪರ ಸಂಘಟನೆಗಳು ಹಾಗೂ ಪ್ರಗತಿಪರ  ಸಂಘಟನೆಗಳು ಸಹ ಪ್ರತಿಭಟಿಸಿದವು.

ಮಂಡ್ಯದಲ್ಲಿ ಶಾಸಕ ಅಶ್ವತ್ಥನಾರಾಯಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಪಿ.ಮಹೇಶ್, ಮಾಜಿ ಅಧ್ಯಕ್ಷ ಹೊನ್ನಪ್ಪ, ಕಾಡಾ ಅಧ್ಯಕ್ಷ ಡಿ.ರಾಮಲಿಂಗಯ್ಯ, ಸುಜಾತಾ ಕೃಷ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಶ್ರೀರಂಗಪಟ್ಟಣದಲ್ಲಿ ರೈತ ಸಂಘದ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.

ಹಾಸನದಲ್ಲಿ ಹೇಮಾವತಿ ಪ್ರತಿಮೆ ಬಳಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣೇಗೌಡ, ನಗರಸಭೆ ಸದಸ್ಯ ಪ್ರಸನ್ನಕುಮಾರ್ ನೇತೃತ್ವದಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್  ಸಂಘಟನೆಗಳು ಪ್ರತಿಭಟನೆಗಳು ನಡೆದವು.

ಚಾಮರಾಜನಗರದಲ್ಲಿ ಬಿಜೆಪಿ ಕಾರ್ಯಕರ್ತರು ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಕೇಂದ್ರ ಸರ್ಕಾರದ  ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ತುಮಕೂರು ನಗರ ಹಾಗೂ ಜಿಲ್ಲೆಯ ಎಲ್ಲೆಡೆ ವಿವಿಧ ಸಂಘಟನೆಗಳು ಧರಣಿ ಸತ್ಯಾಗ್ರಹ ನಡೆಸಿದವು.

ಆಟೊ ಚಾಲಕರ ಸಂಘ, ಪತಂಜಲಿ ಯೋಗ ಸಮಿತಿ ಹಾಗೂ ಭಾರತ್ ಸ್ವಾಭಿಮಾನ್ ಟ್ರಸ್ಟ್ ಹಾಗೂ ಭಗತ್‌ಸೇನೆ ಕಾರ್ಯಕರ್ತರು ಟೌನ್‌ಹಾಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲೂ ರಾಮ್‌ದೇವ್ ಬಂಧನ ವಿರೋಧಿಸಿ ಪ್ರತಿಭಟನೆಗಳು ನಡೆದವು.

ಸಂಚಾರ ವ್ಯತ್ಯಯ: ರಾಮನಗರದಲ್ಲಿ ಎ.ಬಿ.ವಿ.ಪಿ. ರಸ್ತೆ ತಡೆ ನಡೆಸಿದ್ದರಿಂದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಹೆಚ್ಚು ವ್ಯತ್ಯಯ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT