ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು; ಸಂಪನ್ಮೂಲ ಇದ್ದರೂ ಬೃಹತ್ ಕೈಗಾರಿಕೆಗಳಿಲ್ಲ :ಜವಳಿ ಪಾರ್ಕ್ ಬಂದೀತೆ?

Last Updated 3 ಜೂನ್ 2012, 19:30 IST
ಅಕ್ಷರ ಗಾತ್ರ

ರಾಯಚೂರು: ಹಟ್ಟಿ ಚಿನ್ನದ ಗಣಿ, ಶಕ್ತಿ ನಗರದ ಶಾಖೋತ್ಪನ್ನ ವಿದ್ಯುತ್ ಸ್ಥಾವರ, ವಿದೇಶಕ್ಕೆ ರಫ್ತಾಗುವ ಮುದಗಲ್ ಗ್ರಾನೈಟ್, ಏಷ್ಯಾದಲ್ಲಿಯೇ ದೊಡ್ಡದಾದ ರಾಯಚೂರಿನ ಹತ್ತಿ ಮಾರುಕಟ್ಟೆ, ಅಪಾರ ಮಾನವ ಸಂಪನ್ಮೂಲ, ನೀರು, ದೇಶದ ವಿವಿಧೆಡೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ, ಕೃಷಿ ವಿಶ್ವವಿದ್ಯಾಲಯ, 200 ಕಿ.ಮೀ. ದೂರದಲ್ಲಿ ಹೈದರಾಬಾದ್ ವಿಮಾನ ನಿಲ್ದಾಣ...

ರಾಯಚೂರು ಜಿಲ್ಲೆಯಲ್ಲಿ ಇಷ್ಟೆಲ್ಲ ಅನುಕೂಲ ಇದ್ದರೂ ಆಳುವ ವರ್ಗ ಮತ್ತು ಉದ್ಯಮ ಕ್ಷೇತ್ರಕ್ಕೆ ಏನೂ ಇಲ್ಲ ಎಂಬಂತೆ ಗೋಚರಿಸಿದೆ. ಅಪಾರ ಸಂಪನ್ಮೂಲ ಹೊಂದಿರುವ ಈ ಜಿಲ್ಲೆಗೆ ಬೃಹತ್ ಕೈಗಾರಿಕೆಗಳು ಮಾತ್ರ ಕಾಲಿಟ್ಟಿಲ್ಲ. ಹೀಗಾಗಿ ಸಾವಿರಾರು ಜನ ಪುಣೆ, ಬೆಂಗಳೂರು, ಹೈದರಾಬಾದ್, ಗೋವಾ, ಚೆನ್ನೈಗೆ ವರ್ಷದುದ್ದಕ್ಕೂ ಗುಳೇ ಹೋಗುವುದು ಸಾಮಾನ್ಯ ಆಗಿದೆ.

ಮೂರು ದಶಕಗಳ ಹಿಂದೆ ರಾಯಚೂರು ಸಮೀಪ 2,000 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶವೆಂದು ಘೋಷಿಸಲಾಯಿತು. ಹೈದರಾಬಾದ್ ಮೂಲದ ಕೆಲ ಉದ್ದಿಮೆದಾರರು ಉದ್ದಿಮೆ ಸ್ಥಾಪನೆಗೆ ಭೂಮಿ ಪಡೆದರು. ಕರ್ನಾಟಕ ವಿದ್ಯುತ್ ನಿಗಮವೂ ಇದೇ ಭೂಮಿಯಲ್ಲಿ `ವೈಟಿಪಿಎಸ್~ ಎರಡು ವಿದ್ಯುತ್ ಘಟಕಗಳಿಗೆ ಭೂಮಿ ಪಡೆದಿದೆ. ಒಂದೂವರೆ ದಶಕದವರೆಗೆ ನೂರಾರು ಎಕರೆ ಭೂಮಿ ಹಾಗೆಯೇ ಇತ್ತು.
 
ಕಳೆದ ಒಂದು ದಶಕದಲ್ಲಿ ಕೈಗಾರಿಕೆಗಳಿಗೆ ಭೂಮಿ ಹಂಚಿಕೆ ಮಾಡಲಾಗಿದೆ. ಕೇವಲ ಅಕ್ಕಿ ಗಿರಣಿ, ಹತ್ತಿ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಘಟಕಗಳೇ ಹೆಚ್ಚು. ಆದರೆ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವ ಘಟಕಗಳು ಇಲ್ಲ. ಕೈಗಾರಿಕೆ ಸ್ಥಾಪನೆಗೆ ಭೂಮಿ ಪಡೆದು ಕೈಗಾರಿಕೆ ಸ್ಥಾಪನೆ ಮಾಡದೇ ಇರುವವರೂ ಇದ್ದಾರೆ.

ಈ ಭಾಗದ ಉದ್ದಿಮೆದಾರರು ಈಗ ಸಣ್ಣಪುಟ್ಟ ಕೈಗಾರಿಕೆ ಸ್ಥಾಪನೆಗೆ ಆಸಕ್ತಿ ವಹಿಸುತ್ತಿದ್ದರೂ ಕೈಗಾರಿಕೆ ಪ್ರದೇಶದಲ್ಲಿ ಭೂಮಿಯೇ ದೊರಕುತ್ತಿಲ್ಲ. ಬೃಹತ್ ಉದ್ದಿಮೆಗಳೂ ಜಿಲ್ಲೆಗೆ ಧಾವಿಸುತ್ತಿಲ್ಲ. ಶಕ್ತಿನಗರ ಸಮೀಪದ ಐದಾರು ವರ್ಷಗಳ ಹಿಂದೆ ಸುರಾನಾ ಉಕ್ಕಿನ ಕಾರ್ಖಾನೆ ಆರಂಭಗೊಂಡಿತಷ್ಟೇ. ಸ್ಥಳೀಯರಿಗೆ ನಿರೀಕ್ಷಿತ ಉದ್ಯೋಗ ದೊರಕಲಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಗಣಿ ಚಟುವಟಿಕೆಗಳೂ ಸ್ಥಗಿತಗೊಂಡಿದ್ದು, ಈಗ ಈ ಕಾರ್ಖಾನೆಯೂ ಬಂದ್ ಭೀತಿ ಎದುರಿಸುತ್ತಿದೆ.

ಈ ಭಾಗದಲ್ಲಿ ಹತ್ತಿ ಹೆಚ್ಚು ಬೆಳೆಯುವ ಕಾರಣ, 1972ರಲ್ಲಿ ತಾಲ್ಲೂಕಿನ ಯರಮರಸ್ ಹತ್ತಿರ `ಯರಮರಸ್ ನೂಲಿನ ಗಿರಣಿ~ ಆರಂಭಿಸಲಾಗಿತ್ತು. ಸುತ್ತಲಿನ 15-20 ಗ್ರಾಮದ 4 ಸಾವಿರಕ್ಕೂ ಹೆಚ್ಚು ಜನರಿಗೆ ಕೆಲಸವೂ ದೊರಕಿತ್ತು. ಸಮಸ್ಯೆಗಳ ಸುಳಿಗೆ ಸಿಲುಕಿ 1997ರಲ್ಲಿ ಬಂದ್ ಆದ ಈ ನೂಲಿನ ಗಿರಣಿ ಮತ್ತೆ ಬಾಗಿಲು ತೆರೆಯಲಿಲ್ಲ. ಅದೇ ರೀತಿ ಸಾವಿರಾರು ಜನ ಕೆಲಸ ಮಾಡುತ್ತಿದ್ದ   `ವಿಶಾಲ್ ಕಾಟನ್ ಸ್ಪಿನ್~ ಎಂಬ ಕೈಗಾರಿಕೆಯೂ ಕೆಲ ವರ್ಷಗಳಿಂದ ಬಂದ್ ಆಗಿದೆ. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದ ಈ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿದಾಗ ಸರ್ಕಾರಗಳು ಸ್ಪಂದಿಸಿ ಪುನಶ್ಚೇತನಗೊಳಿಸುವ ಬಗ್ಗೆ ಆಸಕ್ತಿ ವಹಿಸಲಿಲ್ಲ ಎಂಬ ನೋವು ಈ ಭಾಗದ ಜನತೆಯದ್ದು.

ಹಟ್ಟಿ ಚಿನ್ನದ ಗಣಿಯಲ್ಲಿ ಸದ್ಯ 3,900 ಕಾರ್ಮಿಕರು ಕೆಲಸ ಮಾಡುತ್ತಿದ್ದು. ಇದರಲ್ಲಿ ಸ್ಥಳೀಯರು       ಶೇ 60ರಷ್ಟು ಇದ್ದಾರೆ. ಉಳಿದಂತೆ ಶಕ್ತಿ ನಗರ `ಆರ್‌ಟಿಪಿಎಸ್~ನಲ್ಲಿ ಸ್ಥಳೀಯರಿಗೆ ಉನ್ನತ ಹುದ್ದೆ ಸಿಕ್ಕಿದ್ದು ಕಡಿಮೆ. ಗುತ್ತಿಗೆ ಆಧಾರದ ಮೇಲೆ 500ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ.

ಸಂಪನ್ಮೂಲ, ಮೂಲಸೌಕರ್ಯ, ಭೂಮಿ, ನೀರು, ಶೈಕ್ಷಣಿಕವಾಗಿಯೂ ಉತ್ತಮ ಶಿಕ್ಷಣ ಸಂಸ್ಥೆ ಇವೆ. ಹೀಗಾಗಿ ಈ ಭಾಗದಲ್ಲಿ ಹೆಚ್ಚು ಉದ್ದಿಮೆಗಳು ಬರಬೇಕು ಎಂದು ವಾಣಿಜ್ಯೋದ್ಯಮ ಸಂಘದ ಮಾಜಿ ಅಧ್ಯಕ್ಷ ಮೈಲಾಪುರ ಎನ್.ಮೂರ್ತಿ ಹೇಳುತ್ತಾರೆ. 

 ಏಷ್ಯಾದಲ್ಲಿಯೇ ಬೃಹತ್ ಹತ್ತಿ ಮಾರುಕಟ್ಟೆ ಹೊಂದಿರುವ ರಾಯಚೂರು  `ಟೆಕ್ಸ್‌ಟೈಲ್ ಪಾರ್ಕ್~ ಸ್ಥಾಪನೆಗೆ ಸೂಕ್ತ ಸ್ಥಳ. ಕೃಷಿ ಆಧಾರಿತ ಸಂಸ್ಕರಣೆ, ಪ್ಯಾಕಿಂಗ್ ಘಟಕಗಳೂ ಸ್ಥಾಪನೆ ಆಗಬೇಕು. ಸರ್ಕಾರ ಈ ಬಗ್ಗೆ ಗಮನಹರಿಸಿ ಹೂಡಿಕೆದಾರರ ಮನ ಒಲಿಸಬೇಕು ಎಂದು `ಜನಸಂಗ್ರಾಮ ಪರಿಷತ್~ ಸಂಚಾಲಕ ಮತ್ತು ಕಾರ್ಮಿಕ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT