ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ಕಟ್ಟುವ ಪರಿ; ಜಪಾನ್ ಮಾದರಿ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಒಬ್ಬ ಕಟ್ಟಾ ಆಶಾವಾದಿ ಕೂಡ, ನಮ್ಮ ದೇಶ ಮಹತ್ತರವಾದುದನ್ನು ಸಾಧಿಸುತ್ತದೆ ಎಂಬ ನಂಬಿಕೆಯನ್ನೇ ಕಳೆದುಕೊಳ್ಳುವಷ್ಟರ ಮಟ್ಟಿಗಿನ ನಕಾರಾತ್ಮಕ ಸಂಗತಿಗಳು ನಮ್ಮಲ್ಲಿ ಘಟಿಸುತ್ತಿವೆ. ಕಳೆದ 100 ವರ್ಷಗಳಿಂದ ಅತ್ಯಂತ ಸವಾಲಿನ ಪರಿಸ್ಥಿತಿಯನ್ನು ದೇಶ ಎದುರಿಸುತ್ತಿದೆ. ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯ ಗಳಿಕೆ, ನಮಗಾಗಿ ಸಂವಿಧಾನ ರಚಿಸಿಕೊಂಡಿದ್ದು, ಗಣರಾಜ್ಯ ರೂಪಿಸಿಕೊಂಡಿದ್ದು ಎಲ್ಲವೂ ದೇಶದ ಇತಿಹಾಸದಲ್ಲಿನ ಪ್ರಮುಖ ಸಂಗತಿಗಳೇ ಆಗಿವೆ.

ಸದ್ಯದ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ, ರಾಜಕೀಯ ಧ್ರುವೀಕರಣ, ಸಾಂಸ್ಕೃತಿಕ ಗೊಂದಲ, ಎಲ್ಲ ಹಂತಗಳಲ್ಲೂ ನಾಯಕತ್ವದ ಕೊರತೆ, ಕ್ಷಿಪ್ರ ಜಾಗತೀಕರಣ, ಖಾಸಗೀಕರಣ, ಹೆಚ್ಚುತ್ತಿರುವ ಬಡತನದಂತಹ ಸವಾಲುಗಳಿಂದ ದೇಶ ಈಗ ಸುತ್ತುವರಿದಿದೆ. ಇಂತಹ ಕತ್ತಲ ಕೂಪದಲ್ಲಿ ಎಲ್ಲಿಂದಾದರೂ ನಮಗೆ ಬೆಳಕು ಗೋಚರಿಸುತ್ತಿದೆಯೇ?

ಯಾವುದಾದರೂ ದೇಶ ಇಂತಹ ಎಲ್ಲ ಸಮಸ್ಯೆಗಳನ್ನು ಎದುರಿಸುತ್ತಲೇ ಅಭಿವೃದ್ಧಿ, ಯಶಸ್ಸಿನ ದಾರಿಯಲ್ಲಿ ಸಾಗಿ, ತನಗೆ ಮತ್ತು ತನ್ನ ನಾಗರಿಕರಿಗೆ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಫಲವಾಗಿದೆಯೇ? ಇಂತಹ ಪ್ರಶ್ನೆಗಳನ್ನು ನಾವು ಎದುರಿಸುತ್ತಿರುವ ಇಂದಿನ ಸ್ಥಿತಿಯಲ್ಲಿ, ನಮ್ಮ ಸಾಮಾಜಿಕ ಸಮಸ್ಯೆಗಳನ್ನು ಸ್ವಾಮಿ ವಿವೇಕಾನಂದರು ಹೇಗೆ ಅರ್ಥೈಸಿದ್ದರು ಮತ್ತು ಅವುಗಳಿಗೆ ಯಾವ ರೀತಿಯ ಪರಿಹಾರಗಳನ್ನು ಗ್ರಹಿಸಿದ್ದರು ಎಂಬುದನ್ನು ಅವಲೋಕಿಸಿದರೆ ಅಚ್ಚರಿಯಾಗುತ್ತದೆ.

ಹೊಸ ಸಾಮಾಜಿಕ ವ್ಯವಸ್ಥೆಯಲ್ಲಿ ಧರ್ಮ ಹೇಗೆ ಪಾತ್ರ ವಹಿಸುತ್ತದೆ ಎಂಬುದನ್ನು ಒಂದು ಸಂದರ್ಭದಲ್ಲಿ ಅವರು ಹೀಗೆ ಹೇಳಿದ್ದರು `ಸಾಮಾಜಿಕ, ರಾಜಕೀಯ ಸೇರಿದಂತೆ ಯಾವುದೇ ವ್ಯವಸ್ಥೆಯ ಅಡಿಪಾಯವು ಮನುಷ್ಯನ ಸದ್ಗುಣಗಳನ್ನು ಆಧರಿಸಿರುತ್ತದೆ. ಯಾವ ರಾಷ್ಟ್ರ ಸಹ, ಸಂಸತ್ತು ಜಾರಿಗೆ ತರುವ ಕಾನೂನು- ಕಟ್ಟಳೆಗಳ ಕಾರಣದಿಂದ ಮಹಾನ್ ಅಥವಾ ಉತ್ತಮ ಎನಿಸಿಕೊಳ್ಳುವುದಿಲ್ಲ.

ಬದಲಿಗೆ, ಅಲ್ಲಿನ ಮಹನೀಯರು ಮತ್ತು ಸದ್ಗುಣಿಗಳ ಕಾರಣದಿಂದ ಅಂತಹ ಹೆಸರು ಪಡೆಯುತ್ತದೆ. ಒಂದು ರಾಷ್ಟ್ರದ ತಳಹದಿಯು ನೈತಿಕತೆ ಮತ್ತು ಪಾವಿತ್ರ್ಯದ ಬಲವೇ ಹೊರತು ಯಾವುದೇ ಕಾನೂನಲ್ಲ ಎಂದು ಕ್ರಿಸ್ತ ಹೇಳಿದ್ದಾನೆ. ಹೊಸ ಸಾಮಾಜಿಕ ವ್ಯವಸ್ಥೆಗೆ ನಿಮ್ಮ ಆಧ್ಯಾತ್ಮಿಕತೆಯು ಮೂಲ ಆಧಾರವಾಗಿರುತ್ತದೆ' ಎಂದು ಹೇಳಿದ್ದರು.


ರಾಷ್ಟ್ರ ಪುನರ್ ನಿರ್ಮಾಣಕ್ಕೆ ಸದ್ಗುಣವೇ ತಳಹದಿ ಎಂದು ವಿವೇಕಾನಂದರು ನಂಬಿದ್ದರು. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಲೋಕಪಾಲ ಮಸೂದೆ ಇರಬಹುದು ಅಥವಾ ಬಳಕೆದಾರರ ಹಿತರಕ್ಷಣೆಯ ಬಗೆಗಿನ ಜಾಗೃತಿಯೇ ಆಗಿರಬಹುದು, ಅಂತಹ ಅಪಾಯಗಳಿಂದ ಹೊರಬರಲು ಆಧ್ಯಾತ್ಮಿಕ ತಳಹದಿಯ ಮೇಲೆ ರೂಪುಗೊಂಡ ಮೌಲ್ಯಾಧಾರಿತ ನಾಯಕತ್ವವೇ ತಕ್ಕ ಪರಿಹಾರ ಎಂದು ಅವರು ತಿಳಿದಿದ್ದರು. `ನಮ್ಮ ದೇಶದಲ್ಲಿ ಹಲವಾರು ಅಪಾಯಗಳು ನಮಗೆ ಕಾಣುತ್ತವೆ. ಇವುಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಭೌತಿಕತೆ ಮತ್ತು ಮೂಢನಂಬಿಕೆಯನ್ನು ಕಡ್ಡಾಯವಾಗಿ ದೂರ ಮಾಡಬೇಕಾಗಿದೆ' ಎಂದಿದ್ದರು.


`ಈ ಬಗೆಯ ನಾಯಕತ್ವದಿಂದ ಮಹಾನ್ ದೇಶವಾಗಿ ರೂಪುಗೊಂಡ ಜಪಾನನ್ನು ಸ್ವಾಮೀಜಿ ಆಗಾಗ ಉದಾಹರಣೆಯಾಗಿ ನೀಡುತ್ತಿದ್ದರು. ತಮ್ಮ ಬಗ್ಗೆ ತಮಗಿರುವ ನಂಬಿಕೆ, ಪ್ರಾಮಾಣಿಕತೆ, ದೃಢಸಂಕಲ್ಪ ಮತ್ತು ದೇಶಪ್ರೇಮ ಜಪಾನೀಯರನ್ನು ಉನ್ನತ ಮಟ್ಟಕ್ಕೆ ತಂದು ನಿಲ್ಲಿಸಿದೆ. ಹೀಗೆ ದೇಶಕ್ಕಾಗಿ ತಮ್ಮದೆಲ್ಲವನ್ನೂ ತ್ಯಜಿಸುವಂತಹ ವ್ಯಕ್ತಿಗಳು ಉದಯಿಸಿದಾಗ ಭಾರತ ಸಹ ಎಲ್ಲ ವಿಷಯಗಳಲ್ಲೂ ಮಹಾನ್ ಆಗುತ್ತದೆ.

ದೇಶವನ್ನು ರೂಪಿಸುವವರು ಅಂತಹ ಜನರು! ಜಪಾನೀಯರ ಸಾಮಾಜಿಕ ಮತ್ತು ರಾಜಕೀಯ ನೈತಿಕತೆಯನ್ನು ನೀವು ಸಹ ಹೊಂದಲು ಸಾಧ್ಯವಾಗಿದ್ದೇ ಆದರೆ, ನೀವೂ ಅವರಂತೆಯೇ ಮಹಾನ್ ಆಗುತ್ತೀರಿ... ಜಪಾನೀಯರು ಮಾತನಾಡುವುದಿಲ್ಲ, ಮಾಡಿ ತೋರಿಸುತ್ತಾರೆ, ದೇಶಕ್ಕಾಗಿ ಎಲ್ಲವನ್ನೂ ತ್ಯಜಿಸುತ್ತಾರೆ. ಅಖಂಡ ಸಾಮ್ರಾಜ್ಯ ಕಟ್ಟುವ ಸಲುವಾಗಿ ಒಂದು ಮಾತನ್ನೂ ಆಡದೆ, ತಮ್ಮ ಅಂತಸ್ತು- ಅಧಿಕಾರ ಎಲ್ಲವನ್ನೂ ಬದಿಗೊತ್ತಿ ರೈತರಾಗಿರುವ ಉದಾತ್ತ ವ್ಯಕ್ತಿಗಳು ಜಪಾನ್‌ನಲ್ಲಿ ಇದ್ದಾರೆ.

ನಮ್ಮಲ್ಲಿ ಆಗಿರುವಂತೆ ಜ್ಞಾನದ ಅಜೀರ್ಣ ಅಲ್ಲಿ ಆಗಿಲ್ಲ, ಬದಲಿಗೆ ಜ್ಞಾನದ ಸಮೀಕರಣವನ್ನು ನಾವು ಅಲ್ಲಿ ಕಾಣುತ್ತೇವೆ. ಜಪಾನೀಯರು ಎಲ್ಲವನ್ನೂ ಯೂರೋಪಿಯನ್ನರಿಂದ ಪಡೆದುಕೊಂಡಿದ್ದಾರೆ. ಆದರೆ ಅವರು ಯೂರೋಪಿಯನ್ನರಾಗಿ ಪರಿವರ್ತಿತರಾಗಿಲ್ಲ, ಜಪಾನೀಯರಾಗಿಯೇ ಉಳಿದುಕೊಂಡಿದ್ದಾರೆ. ಆದರೆ ಪಾಶ್ಚಿಮಾತ್ಯರ ಅನುಕರಣೆಯ ಗೀಳು, ಸಾಂಕ್ರಾಮಿಕ ಪಿಡುಗಿನಂತೆ ನಮ್ಮನ್ನು ಆವರಿಸಿಕೊಂಡಿದೆ. ನಮ್ಮ ಎಲ್ಲ ಯುವಜನರೂ ಜೀವಿತಾವಧಿಯಲ್ಲಿ ಕನಿಷ್ಠ ಒಮ್ಮೆಯಾದರೂ ಜಪಾನ್‌ಗೆ ಭೇಟಿ ನೀಡಬೇಕೆಂದು ನಾನು ಆಶಿಸುತ್ತೇನೆ' ಎಂದು ಹೇಳಿದ್ದರು.


ಸ್ವಾಮೀಜಿಯ ಕಾಲಾನಂತರ ಜಪಾನ್, ಭಾರತ ಎರಡರಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ. ಆದರೂ, ತನ್ನಲ್ಲಿ ನೆಲೆಸಿರುವ ಜನರಿಂದಷ್ಟೇ ಮಹತ್ವದ ರಾಷ್ಟ್ರ ಉದಯಿಸುತ್ತದೆ ಎಂಬುದು ಮಾತ್ರ ಸತ್ಯ ಸಂಗತಿಯಾಗೇ ಉಳಿದಿದೆ. ಬರೀ ಉದಾತ್ತ ಕಾರ್ಯಗಳನ್ನು ಮಾಡಿದ ಮಾತ್ರಕ್ಕೇ ಮಹಾನ್ ಎನಿಸಿಕೊಳ್ಳುವುದಿಲ್ಲ. ನೈತಿಕತೆ, ಸ್ವಯಂ ನಂಬಿಕೆ ಹೊಂದಿದ ಮೌಲ್ಯಾಧಾರಿತ ಬದುಕು, ರಾಷ್ಟ್ರ ಹಿತಾಸಕ್ತಿಗಾಗಿ ವೈಯಕ್ತಿಕ ಹಿತಾಸಕ್ತಿಯನ್ನು ತ್ಯಜಿಸಬಲ್ಲ ಉನ್ನತ ವ್ಯಕ್ತಿತ್ವ ಹೊಂದಿದವರಿಗೆ ಮಾತ್ರ ಅದು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT