ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿ ಪಾತ್ರ

Last Updated 22 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಸುಸಂಸ್ಕೃತ ಜನಾಂಗ ನಿರ್ಮಾಣ ಮಾಡುವುದಕ್ಕೆ ರಾಷ್ಟ್ರ ನಿರ್ಮಾಣವೆಂದು ಹೇಳಬಹುದು. ಜನಾಂಗವೆಂದರೆ ಒಬ್ಬನಲ್ಲ. ಪರಸ್ಪರ ಸುಖ ಶಾಂತಿಯನ್ನು ಬಯಸುವುದರ ಮೂಲಕ ತನ್ನ ಏಳಿಗೆಯನ್ನು ಸಾಧಿಸಿಕೊಳ್ಳುವುದೇ ಮನುಷ್ಯತ್ವದ ಲಕ್ಷಣ. ತಾನು ಎಂಬ ಸಂಕುಚಿತ ಮನೋಭಾವನೆಯನ್ನು ಬಿಟ್ಟು ತನ್ನ ಸಮಾಜ, ತನ್ನ ದೇಶ ಎಂಬ ವಿಶಾಲ ಕ್ಷೇತ್ರವನ್ನು ಕಾಣುವ ದೃಷ್ಟಿಯುಳ್ಳ ವ್ಯಕ್ತಿಗಳ ಸಮೂಹವನ್ನು ನಾವು ಸುಸಂಸ್ಕ್ರತ ಜನಾಂಗವೆಂದು ಕರೆಯಬಹುದು.

ಮನೆಯ ಅಸ್ತಿತ್ವವು ಅದರ ಒಂದೊಂದು ದೂಳನ್ನು ಅವಲಂಬಿಸಿ ಕೊಂಡಿರುವಂತೆ ರಾಷ್ಟ್ರದ ಅಸ್ತಿತ್ವ ಅದರ ಪ್ರತಿಯೊಬ್ಬ ಪ್ರಜೆಯನ್ನು ಆಧರಿಸಿಕೊಂಡಿದೆ. ಬಡವನಾಗಲೀ ಬಲ್ಲಿದನಾಗಲೀ ಅವನು ತನ್ನ ಕರ್ತವ್ಯವನ್ನು ಮರೆತನೆಂದರೆ ದೇಶದ ಏಳಿಗೆಗೆ ಅಷ್ಟೊಂದು ಹಾನಿಯಾಯಿತೆಂದೇ ಅರ್ಥ.

ವಸ್ಥುಸ್ಥಿತಿ ಹೀಗಿರುವಾಗ ವಿದ್ಯಾರ್ಥಿಗಳ ಹೊಣೆಗಾರಿಕೆಯೂ ರಾಷ್ಟ್ರದ ಪಾಲಿಗೆ ಅಗತ್ಯ. ವಿದ್ಯಾರ್ಥಿಗಳು ಚಿಕ್ಕವರಾಗಿರಬಹುದು, ಅನನುಭವಿಗಳಾಗಿರಬಹುದು. ತೇರನ್ನೆಳೆಯಬೇಕಾದರೆ ನೂರಾರು ಜನ ಕೈಕೊಡಬೇಕಾಗುತ್ತದೆ. ಹಾಗೆಯೇ ವಿದ್ಯಾರ್ಥಿಗಳು ತಮ್ಮ ಅಳಿಲ ಸೇವೆಯನ್ನು ಸಲ್ಲಿಸಿದರೆ ರಾಷ್ಟ್ರ ನಿರ್ಮಾಣದ ಕಾರ್ಯ ಸುಗಮವಾಗಿಯೇ ತೀರುವುದು.

ಪ್ರತಿಯೊಬ್ಬ ವಿದ್ಯಾರ್ಥಿಯು ಮೊತ್ತ ಮೊದಲು ತನ್ನ ಸ್ಥಿತಿಯನ್ನು ತಿಳಿದುಕೊಂಡು ತನ್ನನ್ನು ಮೊದಲು ಸುಸಂಸ್ಕೃತ ಜನಾಂಗದ ಪಂಕ್ತಿಯಲ್ಲಿ ಸೇರಿಸಿಕೊಳ್ಳಬೇಕು. ಅನಂತರ ತನ್ನ ನಡೆ, ನುಡಿ, ಕಾರ್ಯ ತತ್ಪರತೆಗಳ ಕುರಿತು ಯೋಚಿಸಿ, ಅದನ್ನು ಸರಿಯಾದ ರೂಪಕ್ಕೆ ತರಬೇಕು. ಊರಿನ ಎಲ್ಲಾ ಮಕ್ಕಳೂ, ಇಂದಿನ ಮಕ್ಕಳೇ ಮುಂದಿನ ಜನಾಂಗದವರು ಎಂದು ತಿಳಿದುಕೊಂಡು ನಾಡಿನ ಹೊಣೆಗಾರಿಕೆಯನ್ನು ಅರಿತುಕೊಂಡು, ದೇಶ ತನ್ನ ಸೇವೆಗಾಗಿ ಹಾತೊರೆಯುತ್ತಿದೆ ಎಂಬುದನ್ನು ಗಮನಿಸಬೇಕು. ಮತ್ತು ತನ್ನ ಹಿರಿಮೆಯನ್ನು ಸಾಧಿಸಿ ಮುನ್ನಡೆಯಬೇಕು. ಇದೇ ಮೊದಲ ಕರ್ತವ್ಯ.

ಎರಡನೆಯದಾಗಿ ವಿದ್ಯಾರ್ಥಿ ತನ್ನ ಸುತ್ತ ಮುತ್ತಲಿನ ವಾತಾವರಣವನ್ನು ದೇಶದ ಅಭಿವೃದ್ದಿಗೆ ನೆರವಾಗುವಂತೆ ಹೊಂದಿಸಬೇಕು. ಆದರೆ ಹಿಂದುಳಿದ ತನ್ನ ಹಳ್ಳಿಯ ಜನರಿಗೆ ಸಮಾಜವೆಂದರೆ ಏನು, ಸಮಾಜದಿಂದಾಗುವ ಪ್ರಯೋಜನ ಇವುಗಳನ್ನು ತಿಳಿಸುವುದು. ಅನಕ್ಷರಸ್ಥರಾದ ತನ್ನ ನೆರೆಹೊರೆಯವರಿಗೆ ವಿದ್ಯೆಯಿಂದಾಗುವ ಪ್ರಯೋಜನವನ್ನು ಹೇಳಿ ಅಕ್ಷರಸ್ಥರನ್ನಾಗಿ ಮಾಡಲು ಪ್ರಯತ್ನಿಸುವುದು. ಹೀಗೆ ಪ್ರತಿಯೊಬ್ಬ ವಿದ್ಯಾರ್ಥಿಯು ‘ಕಾರ್ಯ ನನ್ನದು ಸಫಲತೆ ನಿನ್ನದು’ ಎಂಬ ಭಾವನೆಯಿಂದ ದುಡಿಯಬೇಕು. ಸಮಾಜದ ಎಲ್ಲಾ ಸಮಾಚಾರಗಳನ್ನು ತಿಳಿದು ತನ್ನವರಿಗೆ ಹೇಳುತ್ತಾ ಬಂದರೆ ದೇಶದ ಅಭಿವೃದ್ಧಿ ಯೋಜನೆಗಳ ತಿಳುವಳಿಕೆ ಎಲ್ಲರಲ್ಲಿಯೂ ಮೂಡುವಂತಾಗುವುದು. ಜನರ ಆಸಕ್ತಿ ಕೆರಳುವುದು. ಹೊರಗಿನ ಪ್ರಪಂಚವನ್ನೇ ಅರಿಯದ ಜನರಿಗೆ ಸಮಾಜದ ಪರಿಚಯ ಮಾಡಿಕೊಂಡು ಬಂದರೆ, ಅಂದರೆ ಸಮಾಜದಲ್ಲಿರುವ ವ್ಯಕ್ತಿಯಲ್ಲಿರಬೇಕಾದ ಗುಣಗಳನ್ನು ತಿಳಿಸುತ್ತಾ ಬಂದರೆ ಅವರೂ ಓಡುತ್ತಿರುವ ಜಗತ್ತಿನೊಡನೆ ಓಡಲು ಯತ್ನಿಸುವರು. ವಿದ್ಯಾರ್ಥಿಯು ತನ್ನ ಬಿಡುವಿನ ಸಮಯವನ್ನು ಹಾಳು ಮಾಡುವುದರ ಬದಲಾಗಿ ಊರಿನ ಜನರಿಗೆ ರಾಷ್ಟ್ರ ನಿರ್ಮಾಣ ಮಾಡುವುದರ ಉದ್ದೇಶಗಳನ್ನೋ ಅಥವಾ ಒಳ್ಳೆಯ ವಿಚಾರಗಳನ್ನು ತಿಳಿಸಿದರೆ ರಾಷ್ಟ್ರ ನಿರ್ಮಾಣವು ಸುಗಮವಾಗುವುದು.

‘ಒಂದು ಬೆಳಕಿನಿಂದ ಇನ್ನೊಂದು ಬೆಳಕು ಮೂಡುತ್ತದೆ, ಒಂದು ಹಣತೆಯಿಂದ ನೂರಾರು ಹಣತೆಗಳುರಿದು ಲೋಕವೇ ಕಾಂತಿಯುಕ್ತವಾಗುತ್ತದೆ. ಆ ಹೊಳೆಯುವ ಹೊಂಬೆಳಕಿನಿಂದ, ಸುಖದ-ಶಾಂತಿಯ ಸಂಕೇತದಿಂದ ಲೋಕವು ಸ್ವರ್ಗವಾಗಿ ಮೆರೆಯುತ್ತದೆ’.

ಹಾಗೆಯೇ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಬಿಡುವಿನ ಸಮಯದಲ್ಲಿ ದೇಶ ನಾಯಕರ ಘೋಷಣೆಗಳನ್ನು ತಿಳಿದು ಹಳ್ಳಿಯ ಮೂಲೆ ಮೂಲೆಗಳಿಗೂ ತಲುಪಿಸಿ ಅವರಿಗೆ ಅದರ ತಿರುಳನ್ನು ತಿಳಿಸಿದರೆ ಈ ಕಾರ್ಯವು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ರಾಷ್ಟ್ರದ ಕರೆಗಳನ್ನು ಹಳ್ಳಿ ಹಳ್ಳಿಗೂ ತಿಳಿಸುವ ಸಂದೇಶವಾಹಕನಾಗಬೇಕು ವಿದ್ಯಾರ್ಥಿ. ತನ್ನ ಹಳ್ಳಿಯ ಕುಂದು ಕೊರೆತೆಗಳನ್ನೂ ಸರ್ಕಾರದ ಗಮನಕ್ಕೆ ತರುವ ಕಾರ್ಯಕ್ಕೆ ವಿದ್ಯಾರ್ಥಿಯು ಮುಂದಾಗಬೇಕು.

ದೇಶವೆಂಬ ಮನೆಯ ತೊಲೆಗಂಬದಂತಿರುವ ವಿದ್ಯಾರ್ಥಿಗಳು ಮೊದಲು ತಾವು ಬಲಯುತವಾಗಿ ಅನಂತರ ತಮ್ಮವರನ್ನೂ ಬಲಯುತರನ್ನಾಗಿ ಮಾಡಲು ಹೊರಟರೆಂದರೆ ದೇಶದೇಳ್ಗೆಯಾಗುವುದು ಖಂಡಿತ. ವಿದ್ಯಾಭ್ಯಾಸದ ಬಳಿಕ ಕೆಲಸಕ್ಕಾಗಿ ಸರಕಾರದ ಕಡೆ ಕೈ ನೀಡಿ ತನ್ನ ಮನೆಯವರನ್ನು ಮರೆತಿರಬಾರದು.  ತಮಗೆ ಕೆಲಸ ಸಿಕ್ಕಿದಲ್ಲಿ ಸಂಸಾರ ಕಟ್ಟಿಕೊಂಡು ಮನೆಯವರನ್ನೂ, ತನ್ನ ದೇಶವನ್ನು ಮರೆತು ಆ ಊರಿನಲ್ಲೇ ನೆಲೆಸಿ ಇರಬಾರದು. ಬುದ್ದಿವಂತರಾದ ವಿದ್ಯಾವಂತರಾದವರು ತಮ್ಮ ದೇಶದ ಬಗ್ಗೆ ಅಭಿಮಾನವಿಟ್ಟು ದೇಶಕ್ಕೆ ಅಗತ್ಯವಾದ ಮುಖ್ಯವಾದ ಕೆಲಸಗಳನ್ನು ತಮ್ಮ ಕೈಯಿಂದ ಮಾಡಿದರೆ, ಇತರರು ಮಾಡುವುದಕ್ಕಿಂತ ಉತ್ತಮವಾಗಿರುವುದು. ದೇಶದ ಪ್ರತಿಯೊಂದು ಕಾರ್ಯವೂ ಪವಿತ್ರವಾದುದು, ಪುನೀತವಾದುದು ಎಂಬ ಭಾವನೆಯು ಮೂಡಿ ಸ್ವಾವಲಂಬನೆಯ ಕೆಚ್ಚು ವಿದ್ಯಾರ್ಥಿಯಲ್ಲಿ ಮೂಡಬೇಕು. ಆಗ ವಿದ್ಯಾರ್ಥಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತನ್ನ ಪಾತ್ರ ನಿರ್ವಹಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT