ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಕವಿ ಜಿಎಸ್‌ಎಸ್‌ಗೆ ಕರಿಸಿದ್ದೇಶ್ವರ ಬೆಟ್ಟದ ನಂಟು !

ಹೊಳಲ್ಕೆರೆಯ ರಾಮಗಿರಿಯಲ್ಲಿ ಜಿಎಸ್‌ಎಸ್‌ ಪ್ರಾಥಮಿಕ ಶಿಕ್ಷಣ
Last Updated 24 ಡಿಸೆಂಬರ್ 2013, 6:03 IST
ಅಕ್ಷರ ಗಾತ್ರ

ಹೊಳಲ್ಕೆರೆ: ರಾಷ್ಟ್ರಕವಿ ಜಿಎಸ್‌.ಶಿವರುದ್ರಪ್ಪ ತಮ್ಮ ಬಾಲ್ಯದ ದಿನಗಳನ್ನು ತಾಲ್ಲೂಕಿನ ರಾಮಗಿರಿಯಲ್ಲಿ ಕಳೆದಿದ್ದರು. ಜಿಎಸ್‌ಎಸ್‌ ಅವರ ತಂದೆ ಇದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರಂತೆ. ಆಗ ಇಲ್ಲಿಯೇ ಬೆಳೆದ ಜಿಎಸ್‌ಎಸ್‌ 2 ಮತ್ತು 3ನೇ ತರಗತಿಗಳನ್ನು ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಓದಿದ್ದರು.

ರಾಮಗಿರಿಯ ಸಾಹಿತಿ ಎಸ್‌.ಕರಿಸಿದ್ದಪ್ಪ ಕುಂಬಾರ ಈ ಬಗ್ಗೆ ಜಿಎಸ್‌ಎಸ್‌ ಅವರನ್ನೇ ಸಂಪರ್ಕಿಸಿ ಮಾಹಿತಿ ಪಡೆದು, ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ರಾಮಗಿರಿಯಲ್ಲಿ ಇದ್ದ ನೆನಪುಗಳನ್ನು ಹಂಚಿಕೊಂಡಿರುವ ಜಿಎಸ್‌ಎಸ್‌ ಚಿಕ್ಕವರಾಗಿದ್ದಾಗ ಅಲ್ಲಿನ ಕರಿಸಿದ್ದೇಶ್ವರ ಸ್ವಾಮಿ ಬೆಟ್ಟವನ್ನು ಸಾಕಷ್ಟು ಬಾರಿ ಹತ್ತಿ ಇಳಿದ ನೆನಪು ಇನ್ನೂ ಮಾಸಿಲ್ಲ. ವಿಜಯದಶಮಿಯ ದಿನ ದೇವರ ಉತ್ಸವದಲ್ಲಿ ಬನ್ನಿ ಮುಡಿಯಲು ಹೋದದ್ದು, ಬೆಟ್ಟದ ಮೇಲಿನ ದೇವಕಣಗಿಲೆ ಮರ ನಸುಹಳದಿ, ಬಿಳಿಹೂಗಳಿಂದ ತುಂಬಿದ್ದು, ರಾಮಗಿರಿಯಿಂದ ಹೊಳಲ್ಕೆರೆಗೆ ಅಡ್ಡದಾರಿಯಲ್ಲಿ ನಡೆಯುವಾಗ ಸಿಗುತ್ತಿದ್ದ ರಂಗಾಪುರದ ಈಚಲ ಕಾಡನ್ನು ದಾಟುತ್ತಿದ್ದ ನೆನಪುಗಳನ್ನು 1999ರಲ್ಲಿ ಬಿಚ್ಚಿಟ್ಟಿದ್ದಾರೆ.

ಪಕ್ಕದ ತಾಳಿಕಟ್ಟೆ ಕಾವಲಿನಲ್ಲಿ ಹುಲಿಯೊಂದನ್ನು ಬೇಟೆಯಾಡಿ, ಅದನ್ನು ರಾಮಗಿರಿಗೆ ತಂದು ಮೆರವಣಿಗೆ ಮಾಡಿದ್ದು, ಯುಗಾದಿ ದಿನ ಗುಡ್ಡದ ಮೇಲೆ ಹಿರಿಯರೊಂದಿಗೆ ಕೂತು ಚಂದ್ರದರ್ಶನ ಪಡೆದಿದ್ದು, ಕುಂಬಾರ ಕೇರಿಯಲ್ಲಿ ಪ್ರತಿ ವರ್ಷ ಕೂರಿಸುತ್ತಿದ್ದ ಗೌರಿಗೆ ಅಮ್ಮನ ಜತೆ ಬಾಗಿನ ಹೊತ್ತುಕೊಂಡು ಹೋಗಿದ್ದು, ರಾಮಗಿರಿ ತೇರು, ಕರಡೆ ವಾದ್ಯದ ದನಿ, ಪಲ್ಲಕ್ಕಿ ಮತ್ತಿತರ ನೆನಪುಗಳನ್ನು ಜಿಎಸ್‌ಎಸ್‌ ಹಂಚಿಕೊಂಡಿದ್ದಾರೆ ಎನ್ನುತ್ತಾರೆ ಸಾಹಿತಿ ಕರಿಸಿದ್ದಪ್ಪ ಕುಂಬಾರ.

ಜಿಎಸ್‌ಎಸ್‌ ತಾವೇ ಬರೆದ ಅಸಮಗ್ರ ಆತ್ಮಕತೆ ‘ಚತುರಂಗ’ದಲ್ಲಿ ರಾಮಗಿರಿಯ ನೆನಪುಗಳನ್ನು ದಾಖಲಿಸಿದ್ದಾರೆ. ‘ರಾಮಗಿರಿಯಲ್ಲಿ ನೀರಿಗೆ ಬರ. ಉಪ್ಪು ನೀರಿನ ಬಾವಿಗಳಿದ್ದವು. ಸಿಹಿನೀರಿಗೆ ಒಂದೂವರೆ ಮೈಲು ದೂರದ ಬಾವಿಗಳಿಗೆ ಹೋಗಬೇಕಾಗಿತ್ತು. ನೀರು ಹೊತ್ತು ತರುವ ಕೆಲಸ ನನ್ನ ಪಾಲಿಗೆ ಬಂದಿತ್ತು. ರಾಮಗಿರಿಯಲ್ಲಿ ಇದ್ದಾಗ ನನಗೆ ಬಯಲಾಟದ ಹುಚ್ಚು. ಯಾವುದೇ ಊರಿನಲ್ಲಿ ಬಯಲಾಟ ನಡೆದರೂ ಗೋಣಿಚೀಲ ಸುತ್ತಿ ಬಗಲಲ್ಲಿ ಇಟ್ಟುಕೊಂಡು ನೋಡಲು ಹೋಗುತ್ತಿದ್ದೆ. ಇಡೀ ರಾತ್ರಿ ನಾಟಕ ನೋಡಿ ಬೆಳಗಾಗುವ ವೇಳೆಗೆ ವಾಪಸ್‌ ಬರುತ್ತಿದ್ದೆ' ಎಂದು ಆತ್ಮಕಥನದಲ್ಲಿ ಬರೆದಿದ್ದಾರೆ.

'ನಮ್ಮ ಮನೆಯ ಪಕ್ಕದಲ್ಲಿ ಸಾಹುಕಾರನ ಮನೆ ಇತ್ತು. ಅವರ ಮನೆಯಲ್ಲಿ ಗ್ರಾಮಾಫೋನ್‌ ಇತ್ತು. ಕೊಟ್ಟೂರಪ್ಪ ಪ್ರಮುಖ ಪಾತ್ರ ಮಾಡಿದ ದಾನಶೂರ ಕರ್ಣ, ಗಯಚರಿತ್ರೆ, ಭೀಷ್ಮವಿಜಯ ರೆಕಾರ್ಡ್‌ಗಳಿದ್ದವು. ಅಪ್ಪ ಮಲಗಿದ ತಕ್ಷಣ ಮೆಲ್ಲಗೆ ಎದ್ದು ಹೋಗಿ ನಾಟಕ ಕೇಳುತ್ತಿದ್ದೆ. ನಮ್ಮ ಅಪ್ಪ ರಾಮಗಿರಿಯಲ್ಲಿ ಮಿಡ್ಲ್‌ಸ್ಕೂಲ್‌ ಹೆಡ್‌ಮಾಸ್ಟರ್‌ ಆಗಿದ್ದಾಗ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಸಭೆಯೊಂದಕ್ಕೆ ಶಾಲೆಯ ನಾಲ್ಕು ಕುರ್ಚಿ ಕೊಟ್ಟಿದ್ದರಂತೆ. ಇಷ್ಟೇ ಕಾರಣಕ್ಕೆ ಮೇಲಧಿಕಾರಿ ನೋಟಿಸ್‌ ನೀಡಿದ್ದರಂತೆ’ ಎಂದು ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT