ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಕವಿ ಜಿಎಸ್‌ಎಸ್‌ಗೆ ನಮನ

Last Updated 24 ಡಿಸೆಂಬರ್ 2013, 7:04 IST
ಅಕ್ಷರ ಗಾತ್ರ

ಮಂಡ್ಯ: ರಾಷ್ಟ್ರಕವಿ ಜಿ.ಎಸ್‌್. ಶಿವರುದ್ರಪ್ಪ ಅವರ ನಿಧನಕ್ಕೆ ಗಣ್ಯರು, ಸಾಹಿತಿಗಳು ಕಂಬನಿ ಮಿಡಿಸಿದ್ದಾರೆ.

ನಗರದ ಗಾಂಧಿ ಭವನದಲ್ಲಿ ಶ್ರದ್ಧಾಂಜಲಿ ಸಭೆ ಸೇರಿದ್ದ ಸಾಹಿತ್ಯಾಸಕ್ತರು, ಜಿಎಸ್‌್ಎಸ್‌ ಅವರ ನಿಧನದಿಂದ ಸಾರಸ್ವತ ಲೋಕಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಲಿಂಗಣ್ಣ ಬಂಧುಕಾರ್‌, ಡೇವಿಡ್‌, ಕೊ.ಪು. ಗುಣಶೇಖರ್‌ ಮತ್ತಿತರರು ಪಾಲ್ಗೊಂಡಿದ್ದರು.

ಜಿಎಸ್‌ಎಸ್‌ ಅವರ ಅಗಲಿಕೆಯಿಂದ ಕನ್ನಡ ಭಾಷೆ, ಸಾಹಿತ್ಯಕ್ಕೆ ಅಪಾರ ನಷ್ಟವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿವೃತ್ತ ನಿರ್ದೇಶಕ ಕೆ.ಟಿ. ವೀರಪ್ಪ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಜಿ.ಟಿ. ವೀರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಜಿಎಸ್‌ಎಸ್‌ ಅವರ ನಿಧನದಿಂದ ಸಾರಸ್ವತ ಲೋಕ ಬಡವಾಗಿದೆ. ಕುಟುಂಬ ಸದಸ್ಯರಿಗೆ ಆ ದೇವರು ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಶಾಸಕ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಜಿಎಸ್‌ಎಸ್‌ ಅವರು ಪುತಿನ ಬಯಲು ರಂಗಮಂದಿರ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಮೇಲುಕೋಟೆಗೆ ಆಗಮಿಸಿದ್ದರು ಎಂದು ಸ್ಮರಿಸಿಕೊಂಡಿರುವ ಮಾಜಿ ಶಾಸಕ ಸಿ.ಎಸ್‌. ಪುಟ್ಟರಾಜು ಅವರು, ಜಿಎಸ್‌ಎಸ್‌ ಅವರ ಗೀತೆಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ ಎಂದಿದ್ದಾರೆ. ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲೂ ಜಿಎಸ್‌ಎಸ್‌ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ಜಿ.ಪಂ. ಅಧ್ಯಕ್ಷೆ ಭಾರತಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಕೆ.ಎಸ್‌. ಪ್ರಭಾಕರ್‌, ತಾ.ಪಂ. ಅಧ್ಯಕ್ಷೆ ಹೇಮಲತಾ, ನಗರಸಭೆ ಅಧ್ಯಕ್ಷ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆಯನ್ನು ಘೋಷಿಸಲಾಗಿದ್ದರೂ, ಅತಿಥಿಗಳು ವೇದಿಕೆಯಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ಚಲನಚಿತ್ರ ಗೀತೆಗಳು ಮೊಳಗತೊಡಗಿದವು.

ಪಾಂಡವಪುರ ವರದಿ: ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರಾದ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ತಾಲೂಕಿನ ಸಾಹಿತ್ಯಾಸಕ್ತರು ಪಟ್ಟಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಹಿರಿಯ ಕವಿಗೆ ಅಂತಿಮ ನಮನ ಸಲ್ಲಿಸಿದರು.

ಪಟ್ಟಣದ ಕೆಆರ್ಎಸ್ಆರ್‌ಟಿಸಿ ಬಸ್‌ ನಿಲ್ದಾಣದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮನ  ಸಲ್ಲಿಸಿದರು.

ಸಾಹಿತಿ ಹಾಗೂ ವಿಜಯ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ನಾರಾಯಣಗೌಡ, ತಾಲ್ಲೂಕು ಕಸಾಪ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್, ಗೌ.ಕಾರ್ಯದರ್ಶಿ ಚಂದ್ರಶೇಖರಯ್ಯ, ಕಾರ್ಯದರ್ಶಿ ಕೆ. ಈಶ್ವರ್, ಜಿಲ್ಲಾ ಉಪಾಧ್ಯಕ್ಷ ಎಂ. ರಮೇಶ್ ಹಿರೀಮರಳಿ, ಚಿಕ್ಕ ಸಿದ್ದೇಗೌಡ, ಜೆ.ಬಿ. ಮಂಜುನಾಥ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ   ಎಸ್. ಮಲ್ಲಿಕಾರ್ಜುನಗೌಡ,    ಮಹದೇವಪ್ಪ,    ಮಂಜುನಾಥ್,   ಸಿ. ಕೃಷ್ಣೇಗೌಡ ಸೇರಿದಂತೆ ಇತರರು ಇದ್ದರು.

ಜಿಎಸ್‌ಎಸ್‌ಗೆ ಶ್ರದ್ಧಾಂಜಲಿ ಇಂದು
ಶ್ರೀರಂಗಪಟ್ಟಣ: ರಾಷ್ಟ್ರಕವಿ ಡಾ.ಜಿ.ಎಸ್‌. ಶಿವರುದ್ರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ನಗರದಲ್ಲಿ ಡಿ24ರಂದು ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷ ಎ.ಸೋಮಶೇಖರ್‌ ತಿಳಿಸಿದ್ದಾರೆ.

  ಪಟ್ಟಣದ ತಾಲ್ಲೂಕು ಯುವಜನ ಕೇಂದ್ರದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ತಾಲ್ಲೂಕಿನ ಕವಿಗಳು, ಸಾಹಿತ್ಯಾಸಕ್ತರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

  ಸಂತಾಪ: ಡಾ.ಜಿಎಸ್‌ಎಸ್‌ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಗೌರವ ಕಾರ್ಯದರ್ಶಿ ಸಿ. ಪುಟ್ಟಸ್ವಾಮಿ, ಶಿಕ್ಷಕ– ಶಿಕ್ಷಕೇತರರ ಸಂಘದ ಅಧ್ಯಕ್ಷ ಎನ್‌.ಕೆ. ನಂಜಪ್ಪಗೌಡ, ಲೇಖರಾದ ಸಾ.ವೆ.ರ. ಸ್ವಾಮಿ, ಅನಾರ್ಕಲಿ ಸಲೀಂ, ಎಸ್‌.ಎಂ.ಶಿವಕುಮಾರ್‌ಸಂತಾಪ ಸೂಚಿಸಿದ್ದಾರೆ.

ಕೆಆರ್‌ಎಸ್‌ ಉದ್ಯಾನ ಬಂದ್ ಇಂದು
ಮಂಡ್ಯ:
ರಾಷ್ಟ್ರಕವಿ ಜಿಎಸ್‌ ಶಿವರುದ್ರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಶೋಕಾಚರಣೆ ಇರುವುದರಿಂದ ಡಿ. 24ರಂದು ಜಿಲ್ಲೆಯ ಕೆಆರ್‌ಎಸ್‌ನ ಬೃಂದಾವನ ಉದ್ಯಾನದ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಎನ್‌್್. ಕೃಷ್ಣಯ್ಯ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT