ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಗೀತೆಯ ಬೆನ್ನುಹತ್ತಿ...

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಜನಗಣಮನ-ನೂರಾ ಇಪ್ಪತ್ತು ಕೋಟಿಗೂ ಹೆಚ್ಚು ಜನಸಂಖ್ಯೆಯುಳ್ಳ ಭಾರತದ ರಾಷ್ಟ್ರಗೀತೆ. ವಿಶ್ವಮಾನ್ಯ ಕವಿ ರವೀಂದ್ರನಾಥ್ ಟ್ಯಾಗೋರ್ ಅವರು ರಚಿಸಿದ `ಜನಗಣಮನ~ ಗೀತೆಗೆ ಈಗ ನೂರು ವರ್ಷ.

ಪರಕೀಯರ ದಾಸ್ಯದಲ್ಲಿದ್ದ ಭಾರತವನ್ನು ಸ್ವತಂತ್ರಗೊಳಿಸಲು ಹುಟ್ಟಿಕೊಂಡ ಸಂಸ್ಥೆಗಳಲ್ಲಿ ಕಾಂಗ್ರೆಸ್ ಸಂಸ್ಥೆಯೂ ಒಂದು. ವರ್ಷಕ್ಕೊಮ್ಮೆ ಮಹಾ ಅಧಿವೇಶನ ನಡೆಸುವುದು ಕಾಂಗ್ರೆಸ್‌ನ ಪರಿಪಾಠ. 1911ನೇ ಡಿಸೆಂಬರ್‌ನಲ್ಲಿ ಅಖಿಲ ಭಾರತ ಕಾಂಗ್ರೆಸ್‌ನ ಮಹಾಧಿವೇಶನ ಕೊಲ್ಕತ್ತದಲ್ಲಿ ಸಮಾವೇಶಗೊಂಡಿತ್ತು.

ಮೂರು ದಿನಗಳ ಈ ಅಧಿವೇಶನದ ಎರಡನೇ ದಿನ ಹಾಡಿದ `ಜನಗಣಮನ~ ಬಂಗಾಲಿ ಭಾಷೆಯಲ್ಲಿ ರಚನೆಗೊಂಡಿದ್ದ ಗೀತೆ. ಇದು 1912ರ ಜನವರಿಯಲ್ಲಿ ಆದಿಬ್ರಹ್ಮೊ ಸಮಾಜದ ಪ್ರಕಟಣೆಯಾದ ತತ್ವಬೋಧಿನಿ ಪತ್ರಿಕೆಯಲ್ಲಿ `ಭಾರತ ಭಾಗ್ಯ ವಿಧಾತ~ ಎಂಬ ಹೆಸರಿನಲ್ಲಿ ಪ್ರಥಮವಾಗಿ ಅಚ್ಚಾಯಿತು. ಆಗ ಈ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದವರು ಸ್ವತಃ ರವೀಂದ್ರನಾಥ್ ಟ್ಯಾಗೋರ್ ಅವರೆ.

ಭಾರತೀಯ ತತ್ವಾದರ್ಶಗಳನ್ನು ಒಳಗೊಂಡು ಭಾರತದ ಭೌಗೋಳಿಕ- ನೈಸರ್ಗಿಕ ಅಂಶಗಳೊಂದಿಗೆ ಮೂಡಿಬಂದ `ಜನಗಣಮನ~ ದೈವವನ್ನು ಕೊಂಡಾಡುವ ರಾಷ್ಟ್ರಭಕ್ತಿಯ ಆಶಯ ಗೀತೆ ಎಂಬುದು ಸಾಮಾನ್ಯ ಅಭಿಮತ.

ಆದರೆ ಆಗ ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷ್ ಚಕ್ರವರ್ತಿ ಐದನೆಯ ಜಾರ್ಜ್‌ರನ್ನು ಭಾರತಕ್ಕೆ ಆಹ್ವಾನಿಸುವ ಸ್ವಾಗತ ಗೀತೆ ಎಂಬ ವಿವಾದ ಆರಂಭಗೊಂಡು ಅದನ್ನು ಕವಿ ಟ್ಯಾಗೋರರೇ ಅಲ್ಲಗೆಳೆದರೂ ಆ ಬಗೆಗಿನ ಪಿಸು ಮಾತುಗಳು ಇನ್ನೂ ನಿಂತಿಲ್ಲ.

ಇವೆಲ್ಲದರ ನಡುವೆ ಕವಿ ರವೀಂದ್ರನಾಥ ಟ್ಯಾಗೋರರ `ಗೀತಾಂಜಲಿ~ ಮೂಲಕ ಭಾರತಕ್ಕೆ ಸಾಹಿತ್ಯಕ್ಕಾಗಿ ಮೊದಲ ನೊಬೆಲ್ ಪ್ರಶಸ್ತಿ ಬಂದಿದ್ದು, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, 1950ರ ರಾಜ್ಯಾಂಗ ಸಭೆಯಲ್ಲಿ ಟ್ಯಾಗೋರರ `ಜನಗಣಮನ~ ಗೀತೆಯನ್ನು ಸ್ವತಂತ್ರ ಭಾರತದ ರಾಷ್ಟ್ರಗೀತೆಯನ್ನಾಗಿ ಅಂಗೀಕರಿಸಿದ್ದು ಎಲ್ಲವೂ ಈಗ ಇತಿಹಾಸ.

ಭಾರತದ ಹೆಮ್ಮೆಯ ಕವಿ ರವೀಂದ್ರನಾಥ ಟ್ಯಾಗೋರ್ ಅವರ 150ನೇ ಜನ್ಮ ವರ್ಷಾಚರಣೆ ನಡೆದಿರುವ (2011) ಈ ವರ್ಷವೇ ಅವರ `ಜನಗಣಮನ~ ಗೀತರಚನೆಗೆ ಒಂದು ಶತಮಾನ.

ಮೊನ್ನೆ ಸ್ವಾತಂತ್ರ್ಯ ದಿನೋತ್ಸವ ಸಂದರ್ಭದಲ್ಲಿ `ಜನಗಣಮನ~ ಗೀತೆ ಕುರಿತ ಇನ್ನಷ್ಟು ಸ್ವಾರಸ್ಯಕರ ಸಂಗತಿಗಳು ರೇಡಿಯೋ ಒಂದರಲ್ಲಿ ಬಿತ್ತರಿಸಿದಾಗ ಕಿವಿಗೆ ಬಿತ್ತು. ಅದರಲ್ಲಿ ಮುಖ್ಯವಾದುದೆಂದರೆ ಟ್ಯಾಗೋರ್ ಅವರೇ `ಜನಗಣಮನ~ ಗೀತೆಯನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದು. ಅದೂ ಬೆಂಗಳೂರಿಗೆ ಬಂದುಹೋದ ಒಂದೇ ವಾರದಲ್ಲಿ, ಬೆಂಗಳೂರಿಗೆ ಸಮೀಪವಿರುವ ಮದನಪಲ್ಲಿಯಲ್ಲಿ.

ಈ ಮಾಹಿತಿಯನ್ನು ದೃಢಪಡಿಸಿಕೊಳ್ಳಲು ಗೆಳೆಯ ಕೈವಾರ ಲಕ್ಷ್ಮೀನಾರಾಯಣ್ ಮೂಲಕ ಮದನಪಲ್ಲಿ ಗೆಳೆಯರನ್ನು ಸಂಪರ್ಕಿಸಿದಾಗ ರವೀಂದ್ರರ ಮದನಪಲ್ಲಿ ಭೇಟಿಗೆ ಇನ್ನಷ್ಟು ಆಯಾಮಗಳಿರುವುದು ಗೊತ್ತಾಯಿತು.

ಆಂಧ್ರಪ್ರದೇಶದ ರಾಯಲುಸೀಮೆಯ ಸರಹದ್ದಿನಲ್ಲಿರುವ ಮದನಪಲ್ಲಿ ಕೋಲಾರ ಜಿಲ್ಲೆಗೆ ಹೊಂದಿಕೊಂಡಿರುವ ಚಿತ್ತೂರು ಜಿಲ್ಲೆಯ ಪುಟ್ಟ ಪಟ್ಟಣ. ಬೆಂಗಳೂರಿನಿಂದ ಅಲ್ಲಿಗೆ 125 ಕಿ.ಮೀ. ಹಾದಿ ಕ್ರಮಿಸುವಾಗ ಕಂಡಿದ್ದು ಆಗಷ್ಟೇ ಬಂದು ನಿಂತಿದ್ದ ಮಳೆ ಕುರುಹುಗಳು. ಕುರುಚಲು ಗಿಡಗಳನ್ನು ಹೊದ್ದುಕೊಂಡ ಪುಟ್ಟಪುಟ್ಟ ಬೆಟ್ಟ ಗುಡ್ಡಗಳು. ಬುಟ್ಟಿಗಳಲ್ಲಿ ಸೀತಾಫಲ ಮಾರಲು ರಸ್ತೆ ಬದಿಯಲ್ಲಿ ಕುಳಿತ ಗಂಡಸರು-ಹೆಂಗಸರು.

ರಾಯಲುಸೀಮೆಯ ಮದನಪಲ್ಲಿಗೆ ಅತ್ಯಂತ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಇಂದು ನಿನ್ನೆಯದಲ್ಲ. 150-200 ವರ್ಷಗಳ ಹಿಂದೆಯೇ ಇಲ್ಲಿಯ ಶೋಚನೀಯ ಪರಿಸ್ಥಿತಿಗೆ ಮರುಗಿದ `ಥಿಯೋಸಾಫಿಕಲ್ ಸಂಘ~ ಶೈಕ್ಷಣಿಕ ಕೇಂದ್ರವೊಂದರ ಅಭಿವೃದ್ಧಿಗೆ ನೆರವು ನೀಡಿತು.

ಸಮಾಜ ಸೇವಾಕರ್ತೆ ಡಾ.ಆನಿಬೆಸೆಂಟ್ ಇಲ್ಲಿಗೆ ಭೇಟಿ ಕೊಟ್ಟು ಇನ್ನಷ್ಟು ಪ್ರೋತ್ಸಾಹವಿತ್ತರು. ಹೀಗಾಗಿ ನೂರು ಎಕರೆಗಳಿಗೂ ಮಿಗಿಲಾದ ಪ್ರದೇಶದಲ್ಲಿ ಶೈಕ್ಷಣಿಕ ವಲಯವೊಂದು ಎದ್ದು ನಿಲ್ಲಲ್ಲು ಕಾರಣವಾಯಿತು. ಈಗಲ್ಲಿ ಸ್ನಾತಕೋತ್ತರ ಪದವಿವರೆಗಿನ ಶಿಕ್ಷಣ ಸಂಸ್ಥೆಗಳಿವೆ.

ಆನಿಬೆಸೆಂಟ್‌ರ ಹಾರೈಕೆಗಳಿಂದ ಬೆಳೆದು ನಿಂತಿರುವ ಶಿಕ್ಷಣ ಕೇಂದ್ರದ ಪದವಿ ಕಾಲೇಜಿಗೆ `ಬೆಸೆಂಟ್ ಥಿಯೋಸಾಫಿಕಲ್ ಕಾಲೇಜ್~ ಎಂದು ನಾಮಕರಣ ಮಾಡಲಾಗಿದೆ. ಅದೀಗ ಬಿ.ಟಿ.ಕಾಲೇಜ್ ಎಂದೇ ಪ್ರಸಿದ್ಧ. ಈ ಕಾಲೇಜಿನ ಆವರಣ ರಾಷ್ಟ್ರಗೀತೆಯ ಇತಿಹಾಸದೊಂದಿಗೆ ಬೆಸೆದುಕೊಂಡಿರುವುದೇ ವಿಶೇಷ.

ಬೆಂಗಳೂರಿನಿಂದ ಬಂದ ನಮ್ಮ ಕುತೂಹಲ ತಣಿಸಲು ಬಿ.ಟಿ.ಕಾಲೇಜಿನ ಪ್ರಿನ್ಸಿಪಾಲ್ ಆರ್. ತುಳಸಿರಾಂ ನಾಯ್ಡು ಹಾಗೂ ತಂಡ ರವೀಂದ್ರನಾಥ್ ಟ್ಯಾಗೋರ್ ಮತ್ತು ಈ ಶೈಕ್ಷಣಿಕ ಕೇಂದ್ರದ ನಡುವಿನ ಬಾಂಧವ್ಯವನ್ನು ಸರಳವಾಗಿ ವಿವರಿಸಿದರು.

ಸರ್ವ ಧರ್ಮ ಸಮನ್ವಯ ಬದುಕಿನ ಆಶಯವನ್ನು ಹೊಂದಿದ ಥಿಯೋಸಾಫಿಕಲ್ ಸಂಸ್ಥೆಯ ಎಲ್ಲಾ ಶೈಕ್ಷಣಿಕ ಕೇಂದ್ರಗಳು ಆರಂಭಗೊಳ್ಳುವುದೇ ಮುಂಜಾನೆಯ ಪ್ರಾರ್ಥನೆಯ ಮೂಲಕ.
 
ಮೊದಮೊದಲಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಾಗ ಪ್ರಾರ್ಥನೆ ನಡೆಯುತ್ತಿದ್ದ ಸ್ಥಳ ಬೆಸೆಂಟ್ ಹಾಲ್. ಈಗ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪ್ರಾರ್ಥನೆ ನಡೆಯುವುದು ಬೆಸೆಂಟ್ ಬ್ಲಾಕ್ ಮೈದಾನದಲ್ಲಿ.

ಬಿ.ಟಿ.ಕಾಲೇಜಿಗೆ ಅನೇಕ ಮೇಧಾವಿಗಳು ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಲ್ಲಿ ವಿದೇಶೀಯರೂ ಇದ್ದರು. ಅವರಲ್ಲೊಬ್ಬರು ಡಾ.ಜೆ.ಎಚ್.ಕಸಿನ್ಸ್. ಕನ್ನಡ ಸಾಹಿತ್ಯಲೋಕದ ಮೇರು ಪರ್ವತ ಕುವೆಂಪು ಅವರ ಸಾಹಿತ್ಯ ಬದುಕನ್ನು ಬಲ್ಲವರಿಗೆ ಕಸಿನ್ಸ್ ಪರಿಚಯ ಇರಲೇಬೇಕು.
 
ಕೆ.ವಿ.ಪುಟ್ಟಪ್ಪನವರು ಮೊದಲಿಗೆ ಬರೆಯಲು ಆರಂಭಿಸಿದ್ದು ಇಂಗ್ಲಿಷ್‌ನಲ್ಲಿ. `ಬಿಗಿನರ್ಸ್‌ ಮ್ಯೂಸ್~ ಪುಟ್ಟಪ್ಪನವರ ಇಂಗ್ಲಿಷ್ ಕವನಗಳ ಸಂಕಲನ. 1922ರಲ್ಲಿ ಇಂಗ್ಲಿಷ್ ಪದ್ಯಗಳ ಸಂಕಲನ ಪ್ರಕಟವಾಯಿತು.

ಐರಿಷ್ ಕವಿಗಳಲ್ಲಿ ಪ್ರಸಿದ್ಧರಾದ ಜೇಮ್ಸ ಕಸಿನ್ಸ್ (ಡಾ.ಜೆ.ಎಚ್.ಕಸಿನ್ಸ್) ಆಗ ಮೈಸೂರು ಪ್ರವಾಸದಲ್ಲಿದ್ದರು. ಕಸಿನ್ಸ್ ಕವಿಯನ್ನು ಭೇಟಿಯಾದ ಪುಟ್ಟಪ್ಪ ತಮ್ಮ ಪದ್ಯಗಳನ್ನು ತೋರಿಸಿದರು. ಅದಕ್ಕೆ ಕಸಿನ್ಸ್ ಮಹಾಶಯರ ಪ್ರತಿಕ್ರಿಯೆ ಹೀಗಿತ್ತು:
 
`ರವೀಂದ್ರನಾಥರು ತಮ್ಮ ತಾಯ್ನುಡಿ ಬಂಗಾಲಿಯಲ್ಲಿ ಬರೆದಂತೆ ನೀನು ನಿನ್ನ ತಾಯ್ನುಡಿ ಕನ್ನಡದಲ್ಲಿ ಬರೆದರೆ ಉತ್ತಮ ಭವಿಷ್ಯವಿದೆ~. ಪುಟ್ಟಪ್ಪನವರು ಮುಂದೆ ಕನ್ನಡದಲ್ಲಿ ಬರೆಯಲಾರಂಭಿಸಿದ್ದು, ಕನ್ನಡ ಸಾರಸ್ವತ ಲೋಕದಲ್ಲಿ ಪ್ರಸಿದ್ಧರಾಗಿದ್ದು ಈಗ ಚರಿತ್ರೆಯ ಭಾಗ.

ಸ್ವತಃ ಕವಿಯಾಗಿ ಖ್ಯಾತರಾಗಿದ್ದ ಡಾ. ಜೆ.ಎಚ್. ಕಸಿನ್ಸ್ ಹಾಗೂ ಟ್ಯಾಗೋರ್ ಆತ್ಮೀಯ ಸ್ನೇಹಿತರಾಗಿದ್ದರು. ಪ್ರವಾಸಪ್ರಿಯ ರವೀಂದ್ರರು ಆಗ ದಕ್ಷಿಣ ಭಾರತ ಪ್ರವಾಸದಲ್ಲಿದ್ದರು.

ಬೆಂಗಳೂರಿನಲ್ಲಿ ಉಳಿದಿದ್ದರು. ಇದನ್ನು ತಿಳಿದ ಕಸಿನ್ಸ್, ರವೀಂದ್ರರನ್ನು ಮದನಪಲ್ಲಿಗೆ ಆಹ್ವಾನಿಸಿದರು. ಅವರ ಆಮಂತ್ರಣಕ್ಕೆ ಒಪ್ಪಿದ ಟ್ಯಾಗೋರ್ 1919ರ ಫೆಬ್ರುವರಿಯಲ್ಲಿ ಮದನಪಲ್ಲಿಗೆ ಬಂದಿಳಿದರು.

ಡಾ.ಕಸಿನ್ಸ್ ರವೀಂದ್ರರ ವಾಸ್ತವ್ಯದ ಬಗ್ಗೆ ಹೀಗೆ ಬರೆಯುತ್ತಾರೆ:
“ಒಂದು ವಾರ ಮದನಪಲ್ಲಿಯಲ್ಲಿ (ಫೆಬ್ರುವರಿ 25ರಿಂದ ಮಾರ್ಚ್ 3ರವರೆಗೆ) ತಂಗುವುದಾಗಿ ಹೇಳಿದ್ದ ಗುರುದೇವರು ಸುತ್ತಾಟದಿಂದ ದಣಿದಿದ್ದರು.

ಇಲ್ಲಿಗೆ ಬಂದ ಮೇಲೆ ಮುಂಜಾನೆ, ಸಂಜೆ ಆಟದ ಮೈದಾನಕ್ಕೆ ತೆರಳಿ ಆರಾಮಾಗಿ ನಡೆದಾಡಿಕೊಂಡಿದ್ದ ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣಿಸಿಕೊಂಡಿತು. ಆಮೇಲೆ ಇಲ್ಲಿ ನಡೆದ ಎಲ್ಲಾ ಚಟುವಟಿಕೆಗಳಲ್ಲಿ ಟ್ಯಾಗೋರರು ಲವಲವಿಕೆಯಿಂದ ಪಾಲ್ಗೊಂಡರು.

ನಿಗದಿತ ಕಾರ್ಯಕ್ರಮಗಳಿಲ್ಲದಿದ್ದರೂ ರವೀಂದ್ರರು ಪ್ರಾರ್ಥನೆ ನಡೆಯುತ್ತಿದ್ದ ಬೆಸೆಂಟ್ ಹಾಲ್‌ಗೆ ಆಗಮಿಸುತ್ತಿದ್ದರು. ಅಲ್ಲಿ ತಾವೇ ತಮ್ಮ ಕೆಲವು ಗೀತೆಗಳನ್ನು ಹಾಡುತ್ತಿದ್ದರಲ್ಲದೆ ಕೆಲವು ಕೋರಸ್‌ಗಳನ್ನು ವಿದ್ಯಾರ್ಥಿಗಳಿಂದಲೇ ಹಾಡಿಸಿದರು.

ಒಮ್ಮೆ ಜನಗಣಮನ ಗೀತೆಯ ಕೊನೆಯ ಸಾಲಾದ `ಜಯಹೇ ಜಯಹೇ~ ಎಂಬುದನ್ನು ಎತ್ತರದ ಧ್ವನಿಯಲ್ಲಿ ಹಾಡಿದರು. ವಿದ್ಯಾರ್ಥಿಗಳು ಇದರ ಪುನರಾವರ್ತನೆ ಮಾಡಿದರು. ಎತ್ತರದ ನೀಳಕಾಯ, ಗಡ್ಡಧಾರಿ ರವೀಂದ್ರರ ಕಂಠಸಿರಿಗೆ ಎಲ್ಲರೂ ಮಾರು ಹೋಗಿದ್ದರು. ಇವರು ಯಾಕೆ ಜಯಹೇ ಎಂಬುದನ್ನು ನಾಲ್ಕಾರು ಬಾರಿ ಹಾಡಿದ್ದರು ಎಂಬುದು ನಮಗೆ ಗೊತ್ತಾಗಲಿಲ್ಲ.

ಮರುದಿನ ಪಾಶ್ಚಿಮಾತ್ಯ ಸಂಗೀತ ಪರಿಣತೆಯೂ ಆಗಿದ್ದ ನನ್ನ ಪತ್ನಿ ಮಾರ್ಗರೇಟ್ ಕಸಿನ್ಸ್‌ಗೆ `ಜನಗಣಮನ~ದ ಸ್ವರಗಳನ್ನು ನೀಡಿದರು. ಇಬ್ಬರೂ ಸಂಗೀತಪ್ರೇಮಿಗಳಿಗೆ ಇದೊಂದು ಐತಿಹಾಸಿಕ ಘಟನೆಗೆ ಕಾರಣವಾಗುತ್ತದೆ ಎಂಬ ಕಲ್ಪನೆ ಇರಲಿಲ್ಲ ಎಂಬುದು ನನ್ನ ಭಾವನೆ.

ಮುಂಜಾನೆ ಯಾವುದೇ ಮುನ್ಸೂಚನೆ ಇಲ್ಲದೆ ರವೀಂದ್ರರು ತಾವು ಬಂಗಾಲಿ ಭಾಷೆಯಲ್ಲಿ ಬರೆದಿದ್ದ  `ಜನಗಣಮನ~ ಗೀತೆಯನ್ನು ತಾವೇ ಇಂಗ್ಲೀಷ್‌ಗೆ ಅನುವಾದ ಮಾಡಿ ತಂದಿದ್ದರು. ನಮ್ಮ ಮನೆ ನೇರಳೆ ಮರದ ಹಿನ್ನೆಲೆಯಲ್ಲಿತ್ತು.

ತಂಪಾದ ನೇರಳೆ ಮರದ ನೆರಳಿನಲ್ಲಿ ಕುಳಿತ ರವೀಂದ್ರರು `ಜನಗಣಮನ~ ಹಾಡುತ್ತ ಅದಕ್ಕೆ ಹೊಂದಿಕೊಳ್ಳುವ ಇಂಗ್ಲಿಷ್ ಪದಗಳು ನಿಖರವಾಗಿವೆ ಎಂಬುದನ್ನು ದೃಢಪಡಿಸಿಕೊಂಡು ಅತ್ಯಂತ ವಿಶ್ವಾಸದಿಂದ ತರ್ಜುಮೆಪೂರ್ಣಗೊಳಿಸಿದ ತೃಪ್ತಿ ವ್ಯಕ್ತಪಡಿಸಿದರು.

ರವೀಂದ್ರರ `ಜನಗಣಮನ~ ಗೀತೆಯ ಇಂಗ್ಲಿಷ್ ತರ್ಜುಮೆಗೆ ಮಾರ್ಗರೇಟ್ ಸ್ವರ ಪ್ರಸ್ತಾವನೆ ಹಾಕಿಕೊಟ್ಟರು. ಟ್ಯಾಗೋರರು ಜನಗಣಮನ ಗೀತೆಯನ್ನು ಇಂಗ್ಲಿಷ್‌ನಲ್ಲಿ `ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ~ ಎಂದು ಕರೆದರು. ಬೆಸೆಂಟ್ ಸಭಾಂಗಣದಲ್ಲಿಯೇ ಆಂಗ್ಲಗೀತೆಯ ಸ್ವರ ಪ್ರಸ್ತಾವನೆಯನ್ನು ಮಾರ್ಗರೇಟ್ ಮಾಡಿ ತೋರಿಸಿದರು.
 
ವಿದ್ಯಾರ್ಥಿಗಳು, ಸಂದರ್ಶಕರ  ಒತ್ತಾಯಕ್ಕೆ ರವೀಂದ್ರರು ಬಂಗಾಲಿಯಲ್ಲಿ `ಜನಗಣಮನ~ ಹಾಡಿದರು. ಸಭಿಕರು ದನಿಗೂಡಿಸಿದರು. ಎಂದಿನಂತೆ ಅಂತ್ಯ `ಜಯ ಜಯಹೇ...~  ಎತ್ತರದ ಧ್ವನಿಯಲ್ಲಿ ಮುಕ್ತಾಯವಾಯಿತು”.

ರವೀಂದ್ರನಾಥ ಟ್ಯಾಗೋರರು ರಚಿಸಿದ ಎರಡು ಗೀತೆಗಳು ಎರಡು ದೇಶಗಳ ರಾಷ್ಟ್ರಗೀತೆಯಾಗಿ ಅನುರಣಿಸುತ್ತಿವೆ (ಭಾರತ ಹಾಗೂ ಬಾಂಗ್ಲಾ). `ಜನಗಣಮನ~ ಗೀತೆ ಬಂಗಾಲಿ ಹಾಗೂ ಆಂಗ್ಲ ಎರಡೂ ಭಾಷೆಗಳಲ್ಲಿ ಹಾಡಲಾದ ಬೆಸೆಂಟ್ ಸಭಾಂಗಣ ಆ ಚರಿತ್ರಾರ್ಹ ಘಟನೆಗೆ ಇಂದೂ ಸಾಕ್ಷಿಯಾಗಿದೆ. ಆ ಸಭಾಂಗಣ ಸುಸ್ಥಿತಿಯಲ್ಲಿದೆ ಎನ್ನಲಾಗದಿದ್ದರೂ ಉಪಯೋಗಿಸುವ ಸ್ಥಿತಿಯಲ್ಲಿದೆ. ಅಲ್ಲಿ ಗುರುದೇವ ರವೀಂದ್ರನಾಥರ ಪುಟ್ಟ ಪ್ರತಿಮೆ ಇದೆ.

ಬೆಸೆಂಟ್ ಬ್ಲಾಕ್ ಪಕ್ಕದಲ್ಲೇ ಇರುವ ಡಾ.ಕಸಿನ್ಸ್ ಲೈಬ್ರರಿ ಬ್ಲಾಕ್ ಒಂದೂವರೆ ಲಕ್ಷಕ್ಕೂ ಹೆಚ್ಚು ಗ್ರಂಥಗಳನ್ನು ತನ್ನಲ್ಲಿಟ್ಟುಕೊಂಡಿದೆ. ಇದೇ ಗ್ರಂಥಾಲಯದಲ್ಲಿ ಕವಿ ರವೀಂದ್ರನಾಥರು ಸ್ವಂತ ಕೈಬರಹದಿಂದ ಇಂಗ್ಲಿಷ್‌ಗೆ ತರ್ಜುಮೆ ಮಾಡಿದ `ಜನಗಣಮನ~ ಗೀತೆಯ ಪ್ರತಿಯನ್ನು ಕಟ್ಟು ಹಾಕಿಸಿ ನೇತುಹಾಕಲಾಗಿದೆ. ಇದರಲ್ಲಿ ಗುರುದೇವರು ಅನುವಾದ ಮಾಡಿದ ಸ್ಥಳ (ಮದನಪಲ್ಲಿ) ಹಾಗೂ ದಿನಾಂಕ ನಮೂದಿಸಿ ತಮ್ಮ ಸಹಿಯನ್ನು ಹಾಕಿದ್ದಾರೆ.

ಮದನಪಲ್ಲಿಯಲ್ಲಿ ರವೀಂದ್ರರು ತಂಗಿದ್ದ ಸಮಯದಲ್ಲಿ ಒಂದು ಮಾನವೀಯ ಕಾರ್ಯದಲ್ಲೂ ಅವರು ಕೈಜೋಡಿಸಿದ್ದರೆಂಬುದು ಉಲ್ಲೇಖನಾರ್ಹ.

ಒಂದು ಸಂಜೆ ರವೀಂದ್ರರ `ಸ್ಯಾಕ್ರಿಫೈಜ್~ ನಾಟಕ ಪ್ರದರ್ಶನದ ವ್ಯವಸ್ಥೆಯಾಗಿತ್ತು. ಅದೇ ಸಮಯಕ್ಕೆ ಮದನಪಲ್ಲಿ ಸಮೀಪದ ಚೀಪಲ್ಲಿ ಎಂಬಲ್ಲಿ ಅಗ್ನಿ ಆಕಸ್ಮಿಕ ನಡೆದ ಸುದ್ದಿ ಬಂತು.
ಶಾಲಾ-ಕಾಲೇಜಿನಲ್ಲಿ ಇದ್ದ ಸ್ಕೌಟ್ ಹಾಗೂ ಅಗ್ನಿಶಾಮಕ ಕಾರ‌್ಯಗಳಲ್ಲಿ ತರಬೇತಿ ಪಡೆದ ಸ್ವಯಂ ಸೇವಕರು ಹಳ್ಳಿಗೆ ಧಾವಿಸಿ ಪರಿಹಾರ ಕಾರ‌್ಯದಲ್ಲಿ ತೊಡಗಿದರು. ರವೀಂದ್ರರು ನಾಟಕ ಪ್ರದರ್ಶನ ರದ್ದುಗೊಳಿಸಿ, ಪ್ರೇಕ್ಷಕರನ್ನು ನಿರಾಶೆಗೊಳಿಸದೇ ಇರಲು ತಮ್ಮದೇ ನಾಟಕಗಳ ಕೆಲವು ದೃಶ್ಯ ಅಭಿನಯಿಸಿದರು.
 
ಕಾರ‌್ಯಕ್ರಮದ ನಂತರ ಬೆಂಕಿ ಅವಘಡಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಳ್ಳಿಗರನ್ನು ಕಂಡರು. ಜಪಾನಿ ಪತ್ರಿಕೆಯೊಂದು ರವೀಂದ್ರರ ಪದ್ಯ ಪ್ರಕಟಿಸಿ ಕಳುಹಿಸಿದ್ದ ಗೌರವಧನದ ಚೆಕ್ಕನ್ನು ಅಗ್ನಿ ಪರಿಹಾರ ನಿಧಿಗೆ ನೀಡಿದರು.
ಬೇರೆ ಆಸ್ಪತ್ರೆಗಳ
ಲ್ಲಿದ್ದ ರೋಗಿಗಳನ್ನು ಮಾರ್ಗರೇಟ್ ಕಸಿನ್ಸ್ ಅವರೊಂದಿಗೆ ಕಂಡು ಅವರಿಗೆ ಸಾಂತ್ವನ ಹೇಳಿದರು. ಅವರ ತೃಪ್ತಿಗಾಗಿ ಕೆಲವು ಗೀತೆಗಳನ್ನು ಹಾಡಿದರು. ಅಲ್ಲಿ ನೀಡಿದ ಕಾಣಿಕೆಯನ್ನು ಚೀಪಲ್ಲಿ ಬೆಂಕಿ ಪರಿಹಾರ ನಿಧಿಗೆ ತಲುಪಿಸಲು ಮಾರ್ಗರೇಟ್ ಕಸಿನ್ಸ್ ಕೈಯಲ್ಲಿಟ್ಟರು. ಗುರುದೇವ ಚೀಪಲ್ಲಿ ಅಗ್ನಿ ಆಕಸ್ಮಿಕದಿಂದ ನಿರ್ವಸಿತರಾದವರ ಬದುಕನ್ನು ಮತ್ತೆ ಕಟ್ಟಿಕೊಡಲು ನೆರವಾದರು.

ತಾವು ಸ್ವಲ್ಪ ಕಾಲ ವಾಸ್ತವ್ಯವಿದ್ದ ಮದನಪಲ್ಲಿಯನ್ನು ತಮಗರಿವಿಲ್ಲದೆ `ಜನಗಣಮನ~ ಇಂಗ್ಲಿಷ್ ತರ್ಜುಮೆ ಮೂಲಕ ಚರಿತ್ರಾರ್ಹವಾಗಿಸಿದ ಕವಿ ಟ್ಯಾಗೋರರನ್ನು ಅವರ `ಜನಗಣಮನ~ ಗೀತೆಯನ್ನು ಸ್ಮರಣೀಯವಾಗಿಸಲು ನೂರು ದೇಶಿ- ವಿದೇಶಿ ಭಾಷೆಗಳಲ್ಲಿ ಅನುವಾದಿಸಿದ `ಜನಗಣಮನ~ ಕೃತಿಯೊಂದನ್ನು ಈಗ ಹೊರತರಲಾಗಿದೆ.

ಐದು ಪಂಕ್ತಿಗಳಿರುವ `ಜನಗಣಮನ~ ಗೀತೆಯಲ್ಲಿ ನಾವೀಗ ರಾಷ್ಟ್ರಗೀತೆಯಾಗಿ ಹಾಡುತ್ತಿರುವುದು ಕೇವಲ ಒಂದೇ ಪಂಕ್ತಿಯನ್ನು. ಆದರೆ ಟ್ಯಾಗೋರರು ಆಂಗ್ಲಭಾಷೆಯಲ್ಲಿ ಬಂಗಾಲಿಯಲ್ಲಿದ್ದಂತೆ ಐದು ಪಂಕ್ತಿಗಳನ್ನು ಅನುವಾದ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT