ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಆಡಳಿತಕ್ಕೆ ಷಡ್ಯಂತ್ರ: ಸಿಎಂ ಶಂಕೆ

Last Updated 13 ಜನವರಿ 2011, 6:50 IST
ಅಕ್ಷರ ಗಾತ್ರ

ಬೆಂಗಳೂರು:  ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪದೇ ಪದೇ ರಾಜಭವನಕ್ಕೆ ಎಡತಾಕುತ್ತಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ವಿಧಾನ ಪರಿಷತ್‌ನಲ್ಲಿ ಆಪಾದಿಸಿದರು.

ಬಿಜೆಪಿ ಸರ್ಕಾರದ ಭೂ ಹಗರಣ ಮತ್ತು ಭ್ರಷ್ಟಾಚಾರದ ಕುರಿತು ನಿಲುವಳಿ ಸೂಚನೆ ಮಂಡನೆಗೆ ಆದ್ಯತೆ ಮೇಲೆ ಅವಕಾಶ ನೀಡುವಂತೆ ಕೋರಿ ವಿರೋಧ ಪಕ್ಷಗಳು ಧರಣಿ ನಡೆಸುತ್ತಿರುವಾಗಲೇ ಮಾತನಾಡಿದ ಮುಖ್ಯಮಂತ್ರಿ, ‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಮಕ್ಕಳು ನಾಲ್ಕಾರು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರೂ ಪದೇ ಪದೇ ರಾಜಭವನಕ್ಕೆ ಹೋಗುತ್ತಿದ್ದಾರೆ. ಇದನ್ನು ನೋಡಿದರೆ ಮತ್ತೆ ರಾಷ್ಟ್ರಪತಿ ಆಡಳಿತ ಹೇರುವ ಸಂಚು ನಡೆಯುತ್ತಿದೆ ಎಂಬ ಅನುಮಾನ ಮೂಡುತ್ತಿದೆ’ ಎಂದರು.

ಮಧ್ಯಾಹ್ನದ ವಿರಾಮದ ಬಳಿಕ ಕಲಾಪ ಆರಂಭವಾದಾಗ ತಮ್ಮ ಬೇಡಿಕೆಯನ್ನು ಮಾನ್ಯ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್‌ನ ವಿ.ಆರ್.ಸುದರ್ಶನ್ ಮಾತು ಆರಂಭಿಸಿದರು. ಸರ್ಕಾರದ ವಿರುದ್ಧ ಅವರು ವಾಗ್ದಾಳಿ ಆರಂಭಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಯಡಿಯೂರಪ್ಪ, ತಮಗೆ ಪ್ರತಿಕ್ರಿಯೆ ನೀಡಲು ಅವಕಾಶ ನೀಡುವಂತೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಲ್ಲಿ ಮನವಿ ಮಾಡಿದರು. ಅವರು ಒಪ್ಪಿದರು.

ಆವೇಶದಲ್ಲೇ ಮಾತು ಆರಂಭಿಸಿದ ಮುಖ್ಯಮಂತ್ರಿ, ‘ಮೂರು ದಿನಗಳಿಂದ ಕಲಾಪ ನಡೆಯುತ್ತಿಲ್ಲ. ಪ್ರಶ್ನೋತ್ತರದ ಬಳಿಕ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವುದಾಗಿ ಸಭಾಪತಿ ಭರವಸೆ ನೀಡಿದ್ದಾರೆ.

ಆದರೆ ವಿರೋಧ ಪಕ್ಷಗಳು ತಾವು ಹೇಳಿದಂತೆಯೇ ಸದನ ನಡೆಯಬೇಕು ಎಂದು ಹಠ ಹಿಡಿದಿರುವುದು ಸರಿಯಲ್ಲ. ಸರ್ಕಾರದ ವಿರುದ್ಧ ಜನರ ಮನಸ್ಸಿನಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುವ ದುರುದ್ದೇಶದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಹೀಗೆ ವರ್ತಿಸುತ್ತಿವೆ’ ಎಂದು ದೂರಿದರು.

ಕಳೆದ ಅಕ್ಟೋಬರ್ 10ರಂದು ರಾಜ್ಯಪಾಲರ ನಿರ್ದೇಶನದಂತೆ ಸರ್ಕಾರದ ಬಹುಮತ ಸಾಬೀತುಪಡಿಸಲು ವಿಶ್ವಾಸಮತ ಯಾಚನೆ ನಡೆಯಿತು. ಆಗ ಶಾಸಕಾಂಗವೇ ತಲೆ ತಗ್ಗಿಸುವಂತಹ ಘಟನೆ ನಡೆಯಿತು.

ಆಗ ಸರ್ಕಾರಕ್ಕೆ ವಿಶ್ವಾಸಮತ ಲಭ್ಯವಾಗಿತ್ತು. ಆದರೆ ಪ್ರಕ್ರಿಯೆ ನಡೆದ ರೀತಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ರಾಜ್ಯಪಾಲರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸು ಮಾಡಿದ್ದರು. ಆದರೆ ಬಹುಮತ ಸಾಬೀತು ಮಾಡಲು ಅವರೇ ಮತ್ತೊಂದು ಅವಕಾಶ ನೀಡಿದ್ದರು. ಆಗ ಎಲ್ಲವೂ ಸರಿಯಾಗಿ ನಡೆಯಿತು. ಈಗ ಮತ್ತೆ ರಾಷ್ಟ್ರಪತಿ ಆಡಳಿತ ತರುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

‘ನಿಗದಿಗಿಂತ ನಾಲ್ಕು ದಿನ ಹೆಚ್ಚು ಅವಧಿ ಅಧಿವೇಶನ ನಡೆಸಲು ನಾನು ಸಿದ್ಧನಿದ್ದೇನೆ. ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ ಎಲ್ಲರ ಅವಧಿಯಲ್ಲಿ ನಡೆದಿರುವ ಹಗರಣಗಳ ದಾಖಲೆ ನನ್ನ ಬಳಿ ಇವೆ.

ನನ್ನ ಅವಧಿಯೂ ಸೇರಿದಂತೆ ಭೂ ಹಗರಣಗಳ ಕುರಿತ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದೇನೆ.  ಯಾರ ಬಾಯನ್ನೂ ಮುಚ್ಚಿಸಿಲ್ಲ, ಕೈಗಳನ್ನು ಕಟ್ಟಿ ಹಾಕಿಲ್ಲ. ಮುಕ್ತವಾಗಿ ಚರ್ಚೆಗೆ ಸಿದ್ಧನಾಗಿದ್ದೇನೆ’ ಎಂದು ಯಡಿಯೂರಪ್ಪ ಏರಿದ ದನಿಯಲ್ಲಿ ಹೇಳಿದರು.

‘ಅಕ್ರಮ ಗಣಿಗಾರಿಕೆ ಕುರಿತ ತನಿಖೆಯ ವಿಷಯದಲ್ಲಿ ಲೋಕಾಯುಕ್ತರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಲೋಕಾಯುಕ್ತರ ಪ್ರಾಮಾಣಿಕ ಪ್ರಯತ್ನದಿಂದ ಗಣಿ ಹಗರಣ ಹೊರಬಂದಿದೆ. ರಾಜ್ಯದ ಎಲ್ಲ ಜನರ ಪರವಾಗಿ ನಾನು ಅವರನ್ನು ಸದನದಲ್ಲಿ ಅಭಿನಂದಿಸುತ್ತೇನೆ. ಗಣಿ ಗುತ್ತಿಗೆ ಕೊಟ್ಟವರು, ಅಕ್ರಮಕ್ಕೆ ಕಾರಣವಾದವರು ಎಲ್ಲರ ಬಗ್ಗೆಯೂ ದಾಖಲೆಗಳಿವೆ. ಕಲಾಪಕ್ಕೆ ಅವಕಾಶ ನೀಡದೇ ಧರಣಿ ನಡೆಸುತ್ತಿರುವುದು ಸರಿಯಲ್ಲ’ ಎಂದರು.

ರಾಜೀನಾಮೆಗೆ ಆಗ್ರಹ: ‘ನಿಲುವಳಿ ಸೂಚನೆ ಮಂಡನೆಯೇ ಆಗಿಲ್ಲ. ಆದರೆ ಮುಖ್ಯಮಂತ್ರಿಗೆ ಪ್ರತಿಕ್ರಿಯೆ ನೀಡಲು ಅವಕಾಶ ನೀಡಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷಗಳ ಸದಸ್ಯರು, ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಘೋಷಣೆ ಕೂಗಿದರು. ಆಗ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

‘ನಿಮ್ಮ ಅವಧಿಯಲ್ಲಿ ನಡೆದಿರುವ ಭೂ ಹಗರಣಗಳ ದಾಖಲೆ ನಮ್ಮ ಬಳಿ ಇದೆ. ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಆದೇಶಗಳಿಗೆ ಮುಖ್ಯಮಂತ್ರಿಯಾಗಿ ನೀವು ಸಹಿ ಮಾಡಿದ್ದೀರಿ. ಮೊದಲು ನೀವು ರಾಜೀನಾಮೆ ನೀಡಿ. ನಂತರ ಹಗರಣಗಳ ಬಗ್ಗೆ ಚರ್ಚೆ ನಡೆಸೋಣ’ ಎಂದು ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಆಗ್ರಹಿಸಿದರು.

ಪ್ರತಿಭಟನೆಗೆ ಆಕ್ಷೇಪ: ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳುಳ್ಳ ಫಲಕಗಳನ್ನು ಹಿಡಿದು ಸಭಾಪತಿಯವರ ಪೀಠದ ಎದುರು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. ಪ್ರತಿಭಟನೆಯ ಶೈಲಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ ಶಂಕರಮೂರ್ತಿ, ಗಂಭೀರ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.

ಮಧ್ಯಾಹ್ನ ಸದನಕ್ಕೆ ಬರುವಾಗಲೇ ಪ್ರತಿಪಕ್ಷ ಸದಸ್ಯರು ಪ್ಲಕಾರ್ಡ್‌ಗಳನ್ನು ಒಳಕ್ಕೆ ತಂದಿದ್ದರು. ಅದನ್ನು ಗಮನಿಸಿದ ಆಡಳಿತ ಪಕ್ಷದ ಸದಸ್ಯರು, ವಿಷಯವನ್ನು ಸಭಾಪತಿಯವರಿಗೆ ತಿಳಿಸಿದರು. ಈ ರೀತಿಯ ಪ್ರತಿಭಟನೆಗೆ ಅವಕಾಶ ನೀಡದಂತೆ ಮನವಿ ಮಾಡಿದರು. ಆಗ ‘ಈ ಸದನದ ಘನತೆಯನ್ನು ಕುಗ್ಗಿಸುವ ರೀತಿಯಲ್ಲಿ ಯಾರೇ ವರ್ತಿಸಿದರೂ ಈ ಪೀಠ ಕಠಿಣ ನಿಲುವು ತಾಳುತ್ತದೆ’ ಎಂದು ಎಚ್ಚರಿಸಿದರು.

ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡುತ್ತಿದ್ದಾಗ ಗದ್ದಲ ಆರಂಭವಾದ ಬಳಿಕ ಪ್ರತಿಪಕ್ಷ ಸದಸ್ಯರು, ‘ಅಕ್ರಮ ಗಣಿ ಹಣ ಆಪರೇಷನ್ ಕಮಲಕ್ಕಲ್ಲದೇ ಜನತಂತ್ರಕ್ಕೆ ಸಲ್ಲುವುದೇ?’, ‘ಭೂ ಹಗರಣ, ಬಿಡಿಎ ಹಗರಣ, ಜನರ ಬದುಕಿನ ಹರಣ’ ಮತ್ತಿತರ ಘೋಷಣೆಗಳುಳ್ಳ ಫಲಕಗಳನ್ನು ಪ್ರದರ್ಶಿಸಿದರು.

ಎಚ್ಚರಿಕೆಯ ನಡುವೆಯೂ ಘೋಷಣಾ ಫಲಕಗಳನ್ನು ಪ್ರದರ್ಶಿಸಿದ ಪ್ರತಿಪಕ್ಷ ಸದಸ್ಯರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ, ಅವುಗಳನ್ನು ವಶಕ್ಕೆ ಪಡೆಯುವಂತೆ ಮಾರ್ಷಲ್‌ಗಳಿಗೆ ಸೂಚಿಸಿದರು. ಅಷ್ಟರಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT