ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಭವನಕ್ಕೆ ಪ್ರಣವ್: ಬುಧವಾರ ಪ್ರಮಾಣ ವಚನ

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಹಿರಿಯ ನಾಯಕ ಪ್ರಣವ್ ಮುಖರ್ಜಿ ಅವರು,     ನಾರ್ಥ್ ಬ್ಲಾಕ್‌ನಿಂದ ರಾಷ್ಟ್ರಪತಿ ಭವನಕ್ಕೆ ಆರಂಭಿಸಿದ `ಹೊಸ ಯಾನ~ ಯಶಸ್ವಿಯಾಗಿ ಪೂರ್ಣಗೊಂಡಿತು. ಜುಲೈ 19ರಂದು ನಡೆದ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಭಾನುವಾರ ನಡೆದು ನಿರೀಕ್ಷೆಯಂತೆ ಯುಪಿಎ ಅಭ್ಯರ್ಥಿ ವಿಜಯಮಾಲೆ ಧರಿಸಿದರು.

 ದೇಶದ 13ನೇ ರಾಷ್ಟ್ರಪತಿ ಆಗಿ ಮುಖರ್ಜಿ ಇದೇ 25ರಂದು ಬುಧವಾರ ಬೆಳಿಗ್ಗೆ 11.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಿ.ಎ  ಸಂಗ್ಮಾ ಹೀನಾಯ ಸೋಲು ಅನುಭವಿಸಿದ್ದಾರೆ.

ಪ್ರಣವ್ ಮುಖರ್ಜಿ ಚಲಾವಣೆಯಾದ ಒಟ್ಟು 10,29,750ಮತಗಳಲ್ಲಿ 7,13,763 ಮತಗಳನ್ನು ಪಡೆದರು. ಸಂಗ್ಮಾ ಅವರಿಗೆ 3,15,987 ಮತಗಳು ಮಾತ್ರ ಬಿದ್ದವು. ಶೇ 69.3ರಷ್ಟು ಮತಗಳು ಆಡಳಿತ ಮೈತ್ರಿಕೂಟದ ಪಾಲಾಯಿತು. ಮತ ಎಣಿಕೆ ಬಳಿಕ ಪ್ರಣವ್ ಮುಖರ್ಜಿ ಹೊಸ ರಾಷ್ಟ್ರಪತಿ ಆಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ಮತ್ತು ರಾಜ್ಯಸಭೆ ಮಹಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಅಗ್ನಿಹೋತ್ರಿ ಪ್ರಕಟಿಸಿದರು.

ಮತ ಎಣಿಕೆ ಆರಂಭದಿಂದಲೂ ಪ್ರಣವ್ ಮುಖರ್ಜಿ ಮುನ್ನಡೆ ಕಾಯ್ದುಕೊಂಡರು. ಚಲಾವಣೆಯಾದ 748 ಸಂಸದರ ಮತಗಳಲ್ಲಿ (ಒಟ್ಟು ಮೌಲ್ಯ 5,29,584) ಪ್ರಣವ್ 527ಮತಗಳನ್ನು ಪಡೆದರು. ಇವುಗಳ ಒಟ್ಟು ಮೌಲ್ಯ 3,73,116. ಸಂಗ್ಮಾ ಅವರಿಗೆ 206 ಮತಗಳು ಬಂದವು. ಒಟ್ಟು ಮೌಲ್ಯ 1,45,848 ಮತಗಳು.

ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಮತವೂ ಸೇರಿದಂತೆ 15 ಮತಗಳು ಅಸಿಂಧುಗೊಂಡವು. ಈ ಪೈಕಿ ಮುಖರ್ಜಿ ಪರವಾಗಿ 9 ಹಾಗೂ ಸಂಗ್ಮಾ ಪರವಾಗಿ 6 ಮತಗಳು ಚಲಾವಣೆಯಾಗಿದ್ದವು.

ಚಲಾವಣೆಯಾದ ವಿಧಾನಸಭೆ ಸದಸ್ಯರ ಒಟ್ಟು ಮತಗಳು 3911. ಇವುಗಳ ಒಟ್ಟು ಮೌಲ್ಯ 5,18,387. ಪ್ರಣವ್ ಅವರಿಗೆ ಬಂದಿದ್ದು 2568. ಒಟ್ಟು ಮೌಲ್ಯ 3,40,647. ಸಂಗ್ಮಾ ಅವರಿಗೆ ಬಿದ್ದ ಮತಗಳು 1277. ಒಟ್ಟು ಮೌಲ್ಯ 1,70,139. ಅಪಮೌಲ್ಯಗೊಂಡ ಮತಗಳು 66. ಇದರ ಮೌಲ್ಯ 7601 ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಸೇರಿದಂತೆ ಯುಪಿಎ ಮಿತ್ರ ಪಕ್ಷಗಳು ಪ್ರಣವ್ `ಕೈ~ ಹಿಡಿದು ಮೈತ್ರಿಕೂಟದ ಧರ್ಮ ಪಾಲನೆ ಮಾಡಿವೆ. ಆರಂಭದಿಂದ ಯಾವುದೇ ತೀರ್ಮಾನ ಮಾಡದೆ ಗೊಂದಲ ಸೃಷ್ಟಿಸಿದ್ದ ಟಿಎಂಸಿ ಕಡೆಗಳಿಗೆಯಲ್ಲಿ ಪಶ್ಚಿಮ ಬಂಗಾಳದ ಹಿರಿಯ ಮುಖಂಡರ ಬೆಂಬಲಕ್ಕೆ ಧಾವಿಸಿತು. ಮನಮೋಹನ್ ಸಿಂಗ್ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಎಸ್‌ಪಿ, ಬಿಎಸ್‌ಪಿ, ಎನ್‌ಡಿಎ ಮಿತ್ರ ಪಕ್ಷಗಳಾದ ಜೆಡಿಯು ಮತ್ತು ಶಿವಸೇನೆ ಕೂಡ ಪ್ರಣವ್ ಪರ ಗಟ್ಟಿಯಾಗಿ ನಿಂತವು.

ಅಚ್ಚರಿಯ ಮುನ್ನಡೆ:  ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಪ್ರಣವ್ ಅಚ್ಚರಿ ಮುನ್ನಡೆ ಪಡೆದರು. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಯುಪಿಎ ಅಭ್ಯರ್ಥಿಗೆ 117, ಸಂಗ್ಮಾ ಅವರಿಗೆ 103 ಮತಗಳು ಬಿದ್ದವು. ಮೂರು ಮತಗಳು ಅಪಮೌಲ್ಯಗೊಂಡಿವೆ.

ಒಬ್ಬರು ಮತ ಚಲಾಯಿಸಿಲ್ಲ. ಆಡಳಿತ ಪಕ್ಷದ 15 ಶಾಸಕರು ಅಡ್ಡ ಮತದಾನದ ಮೂಲಕ ಯುಪಿಎ ಮೈತ್ರಿಕೂಟದ ಅಭ್ಯರ್ಥಿ ಬೆಂಬಲಿಸಿದರು. ಬಿಜೆಪಿಯಲ್ಲಿ ಭಿನ್ನಮತ ಬೂದಿ ಮುಚ್ಚಿದ ಕೆಂಡ ಎಂಬುದಕ್ಕೆ ಈ `ಅಡ್ಡ ಮತದಾನ~ ಸಾಕ್ಷಿಯಾಯಿತು. ದೇವೇಗೌಡರ ಜೆಡಿಎಸ್ ಕೂಡ ಮುಖರ್ಜಿ ಅವರಿಗೆ ಮತ ಚಲಾಯಿಸಿತು.

ಕೇರಳದಲ್ಲಿ ಚಲಾವಣೆಯಾದ 124 ಮತಗಳಲ್ಲಿ ಎಲ್ಲವೂ ಪ್ರಣವ್ ಮುಖರ್ಜಿ ಅವರಿಗೆ ಬಿದ್ದಿವೆ. ಒಂದು ಮತ ಅಸಿಂಧುಗೊಂಡಿದೆ. ಸಿಪಿಐ ಮತ್ತು ಆರ್‌ಎಸ್‌ಪಿ ಮತದಾನದಿಂದ ದೂರ ಉಳಿದಿದ್ದರಿಂದ ಆ ರಾಜ್ಯದಲ್ಲಿ ಸಂಗ್ಮಾ ಸಂಪಾದನೆ ಶೂನ್ಯ.

ಕೇರಳ ವಿಧಾನಸಭೆ ಒಟ್ಟು ಸದಸ್ಯರ ಸಂಖ್ಯೆ 140. ಜೆಎಂಎಂ- ಬಿಜೆಪಿ ಸಮ್ಮಿಶ್ರ ಸರ್ಕಾರವಿರುವ ಜಾರ್ಖಂಡ್‌ನಲ್ಲಿ ಸಂಗ್ಮಾ ಅವರಿಗೆ ಬಿದ್ದ ಮತಗಳು 20 ಮಾತ್ರ. ಜೆಎಂಎಂ ಸದಸ್ಯರೂ ಮುಖರ್ಜಿ ಅವರಿಗೆ ಮತ ಹಾಕಿದ್ದಾರೆ. ಬಿಜೆಪಿ ಮಿತ್ರ ಪಕ್ಷಗಳಾದ ಎಐಎಡಿಎಂಕೆ, ಬಿಜೆಡಿ ಸಂಗ್ಮಾ ಅವರನ್ನು ಬೆಂಬಲಿಸಿ ಕೊಟ್ಟ ಮಾತು ಉಳಿಸಿಕೊಂಡಿವೆ.

ಪ್ರಣವ್ ಮುಖರ್ಜಿ ದೇಶದ 13ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಆದರೆ, ಇದು 14ನೇ ರಾಷ್ಟ್ರಪತಿ ಅವಧಿ. ದೇಶದ ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ 1952ರಿಂದ 1962ರವರೆಗೆ ಎರಡು ಅವಧಿಗೆ ರಾಷ್ಟ್ರಪತಿಯಾಗಿದ್ದರಿಂದ ಈ ವ್ಯತ್ಯಾಸ.

ಅಭಿನಂದನೆ: ದಣಿವರಿಯದ ನಾಲ್ಕು ದಶಕಗಳ ಸಕ್ರಿಯ ರಾಜಕಾರಣದಲ್ಲಿ ಪಕ್ಷ ಹಾಗೂ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದ 76ವರ್ಷದ ಅನುಭವಿ ರಾಜಕಾರಣಿ ಪ್ರಣವ್‌ಗೆ ಅತ್ಯುನ್ನತ ಸಂವಿಧಾನಾತ್ಮಕ ಹುದ್ದೆಗೇರುವ ಅದೃಷ್ಟ ಒಲಿಯುತ್ತಿದ್ದಂತೆ, ಪ್ರಧಾನಿ ಮನಮೋಹನ್‌ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಯುವರಾಜ ರಾಹುಲ್ ಗಾಂಧಿ ಮತ್ತಿತರರು ಭೇಟಿ ಮಾಡಿ ಅಭಿನಂದಿಸಿದರು.
 
ತಾಲ್‌ಕಟೋರಾ ರಸ್ತೆಯಲ್ಲಿರುವ ಪ್ರಣವ್ ಮುಖರ್ಜಿ ಮನೆಗೆ ಧಾವಿಸಿದ ಸಿಂಗ್, ಸೋನಿಯಾ, ರಾಹುಲ್ ಗಾಂಧಿ ಕೆಲಹೊತ್ತು ಅವರ ಕುಟುಂಬ ಸದಸ್ಯರ ಜತೆ ಕುಳಿತು ಸಂತಸ ಹಂಚಿಕೊಂಡರು. ಸಚಿವರಾದ ಎ.ಕೆ. ಆಂಟನಿ ಹಾಗೂ ಪಿ. ಚಿದಂಬರಂ ಸೇರಿದಂತೆ ಕೆಲವು ಸಚಿವರೂ  ಪ್ರಣವ್ ಅವರನ್ನು ಅಭಿನಂದಿಸಿದರು.

ಚುನಾವಣೆ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗುತ್ತಿದ್ದಂತೆ ಮನೆಯ ಹೊರಗೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪ್ರಣವ್ ಮುಖರ್ಜಿ, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವುದಾಗಿ ಘೋಷಿಸಿದರು. ನಿಷ್ಪಕ್ಷಪಾತವಾಗಿ ಕೆಲಸ ಮಾಡಿ ದೇಶದ ಜನರ ವಿಶ್ವಾಸ ಉಳಿಸಿಕೊಳ್ಳುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT