ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಭವನಕ್ಕೆ ಲಗ್ಗೆ ಯತ್ನ

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ
Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಳೆದ ಭಾನುವಾರ ರಾತ್ರಿ ಬಸ್‌ನಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಧಾನಿಯಲ್ಲಿ ಶುಕ್ರವಾರವೂ ಆಕ್ರೋಶಭರಿತ ಮಹಿಳೆಯರು, ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿ, ಆರೋಪಿಗಳಿಗೆ ಶೀಘ್ರ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿದರು. ಈ ನಡುವೆ ಪ್ರಕರಣದ ಐದನೆಯ ಆರೋಪಿಯನ್ನು ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ. ಆರನೇ ಆರೋಪಿ ಅಕ್ಷಯ ಠಾಕೂರ್ ಎಂಬಾತನನ್ನು ಬಿಹಾರದಲ್ಲಿ  ಬಂಧಿಸಲಾಗಿದೆ.

ಇಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಚಿಕಿತ್ಸೆಗೆ ಮಿಶ್ರ ಪ್ರತಿಕ್ರಿಯೆ ತೋರಿಸುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಯುವತಿಗೆ ಅಳವಡಿಸಲಾಗಿದ್ದ ಜೀವರಕ್ಷಕವನ್ನು ಇದೀಗ ತೆಗೆಯಲಾಗಿದೆ. ಆಕೆ ಈಗ ಸಹಜವಾಗಿ ಉಸಿರಾಡುತ್ತಿದ್ದಾಳೆ. ಚಿಕಿತ್ಸೆಗೆ  ಕೆಲವು ಬಾರಿ ಪೂರಕವಾಗಿ ಸ್ಪಂದಿಸುತ್ತಿದ್ದರೆ ಇನ್ನು ಕೆಲವು ಸಲ ಹಿನ್ನಡೆ ಎನಿಸುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಬಿ.ಡಿ. ಅಥಣಿ ತಿಳಿಸಿದರು.

ಯುವತಿಗೆ ಅಗತ್ಯ ಇರುವ ಉಚಿತ ವೈದ್ಯಕೀಯ ನೆರವು ನೀಡಲು ಗಂಗಾರಾಮ್ ಆಸ್ಪತ್ರೆ ಮುಂದಾಗಿದೆ.
ಬಂಧಿತ 5ನೇ ಆರೋಪಿಯ ವಯಸ್ಸನ್ನು ಪರಿಶೀಲಿಸಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ತಿಳಿಸಿದ್ದಾರೆ. ಆರೋಪಿಗಳಿಗೆ ಗರಿಷ್ಠ ಪ್ರಮಾಣದ ಜೀವಾವಧಿ ಶಿಕ್ಷೆ ವಿಧಿಸುವಂತಾಗಲು ಆದಷ್ಟು ಬೇಗ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಈಗಾಗಲೇ ಬಂಧಿತ ನಾಲ್ವರ ವಿರುದ್ಧ ಕೊಲೆಗೆ ಯತ್ನ, ಸಾಕ್ಷ್ಯ ನಾಶದಂತಹ ಗಂಭೀರ ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬೃಹತ್ ಪ್ರತಿಭಟನೆ: ವಿವಿಧ ಸಂಘಟನೆಗಳ ಆಶ್ರಯದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ರಾಷ್ಟ್ರಪತಿ ಭವನ, ಪ್ರಧಾನಿ ಕಚೇರಿ ಇರುವ ರೈಸಿನಾ ಹಿಲ್ಸ್ ಹಾಗೂ ಇಂಡಿಯಾ ಗೇಟ್‌ತನಕ ಇಡೀ ದಿನ ರ‌್ಯಾಲಿ ಹಾಗೂ ರಸ್ತೆ ತಡೆ ನಡೆಸಿದರು. ಮತ್ತೊಂದು ಗುಂಪು ಸಫ್ದರ್‌ಜಂಗ್ ಆಸ್ಪತ್ರೆ ಬಳಿ ರಸ್ತೆ ತಡೆ ನಡೆಸಿತು.

ಪ್ರತಿಭಟನಾನಿರತ ಕೆಲ ವಿದ್ಯಾರ್ಥಿನಿಯರು ರಾಷ್ಟ್ರಪತಿ ಭವನದೊಳಗಡೆ ನುಗ್ಗಲು ಯತ್ನಿಸಿದಾಗ ಅವರನ್ನು ಪೊಲೀಸರು ತಡೆದರು. ಮಾನವ ಸರಪಳಿ ಮೂಲಕ ಪೊಲಿಸರು ಮಹಿಳಾ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದರಾದರೂ ಅದನ್ನು ಭೇದಿಸಿ ರಾಷ್ಟ್ರಪತಿ ಭವನದತ್ತ ನುಗ್ಗುವ ಯತ್ನ ನಡೆಯಿತು.

ಇಂಡಿಯಾ ಗೇಟ್ ಬಳಿ ನಡೆದ ಸಭೆಯಲ್ಲಿ ಸಿಪಿಐ ಮುಖಂಡರಾದ ಎ.ಬಿ. ಬರ್ಧನ್ ಹಾಗೂ ಡಿ. ರಾಜಾ ಮಾತನಾಡಿ, ಇಂತಹ ಅಮಾನುಷ ಘಟನೆಯನ್ನು ಸಹಿಸಿಕೊಳ್ಳಲು ಆಗದು ಎಂದರು. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಪಾಲ್ಗೊಂಡಿದ್ದರು.

ಹೈಕೋರ್ಟ್ ತರಾಟೆ: ಪ್ರಕರಣದ ಕುರಿತು ತನಿಖೆ ಕೈಗೊಂಡಿರುವ ದೆಹಲಿ ಪೊಲೀಸರಲ್ಲಿ `ನುಣುಚಿಕೊಳ್ಳುವ' ಪ್ರವೃತ್ತಿ ಕಾಣುತ್ತಿದ್ದು ಸುಮಾರು 40 ನಿಮಿಷಗಳ ಕಾಲ ಈ ಘಟನೆ ನಡೆದರೂ ಸುರಕ್ಷತೆ ಒದಗಿಸುವಲ್ಲಿ ವಿಫಲರಾಗಿರುವುದಕ್ಕೆ ದೆಹಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಗೆಳೆಯನ ಭೇಟಿ: ಈ ನಡುವೆ ಅತ್ಯಾಚಾರಕ್ಕೆ ಒಳಗಾದ ಯುವತಿಯ ಸ್ನೇಹಿತ ಗುರುವಾರ ರಾತ್ರಿ ಆಸ್ಪತ್ರೆಗೆ ತೆರಳಿ ಗೆಳತಿಯ ಆರೋಗ್ಯ ವಿಚಾರಿಸಿದ. ಘಟನೆಯಲ್ಲಿ ದುಷ್ಕರ್ಮಿಗಳು ಈತನ ಮೇಲೂ ಗಂಭೀರವಾಗಿ ಹಲ್ಲೆ ನಡೆಸಿದ್ದರು.

ಮರಣದಂಡನೆ ಪರಿಹಾರವಲ್ಲ:`ಅತ್ಯಾಚಾರಿಗಳಿಗೆ ಮರಣದಂಡನೆ ನೀಡಿದರೆ ಸಮಸ್ಯೆಗೆ ಅಂತಿಮ ಪರಿಹಾರವಾಗುವುದಿಲ್ಲ ಇದರ ಬದಲಿಗೆ ಅತ್ಯಾಚಾರ, ಹಿಂಸೆಯಂತಹ ಪ್ರಕರಣಗಳ ವಿರುದ್ಧ ಜನಜಾಗೃತಿ ಮೂಡಿಸುವುದೇ ಪರಿಹಾರ' ಎಂದು ಬಾಂಬೆ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ ಧರ್ಮಾಧಿಕಾರಿ ಅಭಿಪ್ರಾಯಪಟ್ಟರು.

ವಿ.ಕೆ. ಸಿಂಗ್ ಕಟು ಟೀಕೆ: ಈ ನಡುವೆ ಘಟನೆಯ ಕುರಿತು ತೀವ್ರ ಕಳವಳವ್ಯಕ್ತಪಡಿಸಿರುವ ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್, `ಜನರಿಗೆ ಭದ್ರತೆ ನೀಡಬೇಕಾದ ಪೊಲೀಸರು ರಾಜಧಾನಿಯಲ್ಲಿ ಅತಿಗಣ್ಯರಿಗೆ ಭದ್ರತೆ ನೀಡುವ ಭದ್ರತಾ ಸಂಸ್ಥೆಗಳಂತೆ ಕೆಲಸ ನಿರ್ವಹಿಸುತ್ತಿದ್ದು, ಆಡಳಿತ ವ್ಯವಸ್ಥೆ ಕುಸಿದು ಹೋಗಿರುವುದಕ್ಕೆ ಇದು ನಿದರ್ಶನ' ಎಂದು ಟೀಕಿಸಿದ್ದಾರೆ.

ಅಭಿಪ್ರಾಯ :
ದೆಹಲಿಯಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ವಿರುದ್ಧ ದೇಶದಾದ್ಯಂತ ಆಕ್ರೋಶ ಎದ್ದ ಬೆನ್ನಲ್ಲೆ ನಗರದ್ಲ್ಲಲಿಯೂ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಅತ್ಯಾಚಾರದಂತಹ ಪೈಶಾಚಿಕ ಕೃತ್ಯಗಳು ಹೆಚ್ಚುತ್ತಿರುವ ಬಗ್ಗೆ ವಿವಿಧ ವಲಯದಿಂದ ಕಳವಳ ವ್ಯಕ್ತವಾಗಿದ್ದು, ಹಲವರ ಅಭಿಪ್ರಾಯ ಇಂತಿದೆ.

ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ
`ಸಮಾಜದಲ್ಲಿ ಮಹಿಳೆಯರೆಡೆಗಿರುವ ಸಂವೇದನೆ ಕಳೆದುಹೋಗುತ್ತಿರುವುದಕ್ಕೆ ಈ ಅತ್ಯಾಚಾರ ಪ್ರಕರಣಗಳೇ ಸಾಕ್ಷಿ. ದಿಲ್ಲಿಯಲ್ಲಿ ನಡೆದ ಪ್ರಕರಣವನ್ನು ಪೊಲೀಸ್ ವೈಫಲ್ಯವೆಂದು ದೂರಲು ಸಾಧ್ಯವಿಲ್ಲ. ವಿಕೃತ ಮನೋಭಾವ ಹೆಚ್ಚುತ್ತಿರುವುದರಿಂದ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಾನೂನಿನ ಹಿಡಿತಕ್ಕೆ ಸಿಗದೇ ಇರುವ ಅತ್ಯಾಚಾರದಂತಹ ಸಮಸ್ಯೆಗೆ ಮಾನವೀಯತೆ ಮತ್ತು
ಸಂವೇದನಾಶೀಲತೆಯೇ ಮದ್ದು'
-ವಸುಂಧರಾಭೂಪತಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ

ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರೇ ಬಲಿಪಶು
`ಗಂಡಸರಲ್ಲಿ ಹೆಚ್ಚುತ್ತಿರುವ  ಕಾಮತೃಷೆಗೆ ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ಬಲಿಪಶುಗಳಾಗುತ್ತಿದ್ದಾರೆ. ಬಯಲಿಗೆ ಬರದೇ ಇರುವ ಅದೆಷ್ಟು ಪ್ರಕರಣಗಳಲ್ಲಿ ರಾಜಕಾರಣಿ, ಪೊಲೀಸ್ ಹಾಗೂ ಅಧಿಕಾರಿ ವರ್ಗದವರಿಂದಲೂ ನೊಂದ ಹೆಣ್ಣುಮಕ್ಕಳ ಸಂಖ್ಯೆ ಬಹಳ ದೊಡ್ಡದಿದೆ. ಇವರಿಗೆಲ್ಲ ನೈತಿಕ ಪಾಠ ಹೇಳುವವರಾರು?. ತಪ್ಪು ಯಾರೇ ಮಾಡಿದ್ದರೂ ಕಠಿಣ ಶಿಕ್ಷೆ ನೀಡುವ ಮೂಲಕ ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಬೇಕು'.
ಅಕ್ಕೈ ಪದ್ಮಶಾಲಿ, `ಸಂಗಮ' ಸಂಘಟನೆ

ಕುಸಿಯುತ್ತಿರುವ ಮೌಲ್ಯದ ಸಂಕೇತ

`ಈ ಘಟನೆ ಕೇಳಿ ನನಗೆ ಎದೆ ಒಡೆದು ಹೋಗುವ ಹಾಗೇ ಆಗಿದೆ. ಇದು ಕುಸಿಯುತ್ತಿರುವ ಮೌಲ್ಯದ ಸಂಕೇತವಷ್ಟೆ ಅಲ್ಲ, ಹೆಣ್ಣುಮಕ್ಕಳು ಸರಕು ಸಂಸ್ಕೃತಿಯ ಭಾಗವಾಗುತ್ತಿರುವುದರ ಅಪಾಯವನ್ನು ಸೂಚಿಸುತ್ತದೆ. ಅತ್ಯಾಚಾರಿಗಳು ನಾಗರಿಕ ಸಮಾಜದಲ್ಲಿ ಇರಲಿಕ್ಕೆ ನಾಲಾಯಕ್ಕು. ಯಾವುದೇ ಭಯವಿಲ್ಲದೇ ಇಂತಹದ್ದೊಂದು ಪೈಶಾಚಿಕ ಕೃತ್ಯ ನಡೆಸುವವರನ್ನು ಜೀವಮಾನವಿಡಿ ಜೈಲಿನಲ್ಲಿ ಕೊಳೆಸಬೇಕು. ಆ ಮೂಲಕ ವಿಕೃತಕಾಮಿಗಳಿಗೆ ಪಾಠಕಲಿಸಬೇಕು'
- ವೈದೇಹಿ, ಸಾಹಿತಿ

ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೆಲಸ

`ಆಂತರ್ಯದಲ್ಲಿ ಪಾಪಪ್ರಜ್ಞೆ ಕಡಿಮೆಯಾಗುತ್ತಿರುವುದರಿಂದ ಇಂತಹ ಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೆಲಸ.  ಸರ್ಕಾರ ಹಾಗೂ ಮಹಿಳಾಪರ ಸಂಘಟನೆಗಳು ಕೂಡಲೇ ಎಚ್ಚೆತ್ತುಕೊಂಡು ನೊಂದ ಹೆಣ್ಣುಮಗುವಿನ ಪರ ನಿಲ್ಲಬೇಕು'
ಮಲ್ಲಿಕಾಘಂಟಿ, ಸಾಹಿತಿ

ಹೆಚ್ಚುತ್ತಿರುವ ಮೃಗೀಯ ವರ್ತನೆ

`ಮನುಷ್ಯನಲ್ಲಿನ ಮೃಗೀಯ ವರ್ತನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಘಟನೆಗಳು ಸಮಾಜದ ಅವನತಿಯನ್ನು ತೋರಿಸುತ್ತಿವೆ. ಈ ರೀತಿಯ ಸಾಮೂಹಿಕ ಅತ್ಯಾಚಾರವನ್ನು ಮಾಡುವವರನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಯನ್ನು ನೀಡಬೇಕು. ಇಂತಹ ಅಮಾನುಷ ಕೃತ್ಯಗಳನ್ನು ಎಲ್ಲರೂ ಖಂಡಿಸಬೇಕಾಗುತ್ತದೆ'
-ಪ್ರಮೀಳಾ ನೇಸರ್ಗಿ, ಹಿರಿಯ ವಕೀಲೆ

ಅಸಮಾನತೆಯೇ ಕಾರಣ

`ದೇಶದಲ್ಲಿ ಹೆಚ್ಚಾಗುತ್ತಿರುವ ಅಸಮಾನತೆಯಿಂದ ಇಂತಹ ವಿಕೃತಿಯು ಬೆಳೆಯುತ್ತಿದೆ. ಹೆಣ್ಣು-ಗಂಡು, ಬಡವ-ಶ್ರೀಮಂತ ಎಂಬ ಅಸಮಾನತೆಗಳನ್ನು ದೂರಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅಸಮಾನತೆಯನ್ನು ತೊಡೆದು ಹಾಕಬೇಕು. ಕೆಲವೊಂದು ವಿಕೃತ ಮನಸ್ಸುಗಳು ಇಂತಹ ಕೃತ್ಯಗಳನ್ನು ಎಸಗುತ್ತಿವೆ. ಆ ವಿಕೃತಿಗಳಿಗೆ ಕಾರಣವೇನೆಂದು ಅರಿತು ಪರಿಹಾರವನ್ನು ಕಂಡುಹಿಡಿಯಬೇಕು'
-ಬಿ.ಟಿ.ಲಲಿತಾನಾಯಕ್,ಸಾಹಿತಿ

ಆಧುನಿಕತೆಯ ಪ್ರಭಾವ

`ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆದ ಈ ಕೃತ್ಯಗಳು ಖಂಡನೀಯ. ಇಂದಿನ ಸಿನಿಮಾ ಮತ್ತು ಅಂತರ್ಜಾಲದ ಪ್ರಭಾವದಿಂದ ಇಂತಹ ಕೃತ್ಯಗಳು ಹೆಚ್ಚಾಗುತ್ತಿವೆ. ಸಮಾಜದ ವೇಗದಿಂದ ಬದಲಾವಣೆ ಹೊಂದುತ್ತಿದೆ. ಇಂತಹ ಕೃತ್ಯಗಳನ್ನು ನಡೆಸಿದವರಿಗೆ ಘೋರ ಶಿಕ್ಷೆ ಆಗಬೇಕು'
-ವಿ.ಜ್ಞಾನಮೂರ್ತಿ, ಸಂಚಾಲಕ, ಸೇವ್ ಬೆಂಗಳೂರು ಸ್ವಯಂಸೇವಾ ಸಂಸ್ಥೆ

ಅಭಿವೃದ್ಧಿಯ ಹೆಸರಿನಲ್ಲಿ ಹಿಂಸೆಯ ಹೆಚ್ಚಳ

`ಅಭಿವೃದ್ಧಿಯ ಹೆಸರಿನಲ್ಲಿ ಸಮಾಜದಲ್ಲಿ ಹಿಂಸೆ ನಡೆಯುತ್ತಿದೆ. ಅಪರಾಧ ಪ್ರಕರಣಗಳು ಸಾಂಕ್ರಾಮಿಕ ಕಾಯಿಲೆಗಳಂತೆ ಹರಡುತ್ತಿವೆ. ಸಾಮೂಹಿಕ ಅತ್ಯಾಚಾರ ಮಾಡಿದವರಿಗೆ ಘನಘೋರ ಶಿಕ್ಷೆ ವಿಧಿಸಬೇಕು'.
-ನಂದನಾ ರೆಡ್ಡಿ, ಸಾಮಾಜಿಕ ಕಾರ್ಯಕರ್ತೆ

ಭದ್ರತೆ ನೀಡಬೇಕು

`ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳನ್ನು ಪ್ರತಿಭಟಿಸಬೇಕು. ಯಾವುದೇ ವ್ಯಕ್ತಿಗೆ ಭದ್ರತೆ ಮತ್ತು ರಕ್ಷಣೆಯೇ ಮುಖ್ಯವಾಗಿದೆ. ಎಲ್ಲರೂ ಕೂಡಿ ಒಟ್ಟಾಗಿ ಪ್ರತಿಭಟಿಸಬೇಕು. ಆಗಲೇ ಇಂತಹ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತವೆ'
-ವೈಜಯಂತಿ ಕಾಶಿ, ಅಧ್ಯಕ್ಷರು, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ

ಶೀಘ್ರವಾಗಿ ವಿಚಾರಣೆ ನಡೆಯಬೇಕು
`ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಪ್ರಕರಣಗಳು ಸಾಮಾಜಿಕ ದುರಂತಗಳು. ಇದು ಮನುಕುಲದ ನಾಶವನ್ನು ತೋರಿಸುತ್ತದೆ. ಇಂತಹ ಪ್ರಕರಣಗಳಲ್ಲಿ ತ್ವರಿತಗತಿಯಲ್ಲಿ ಕ್ರಮ ಕೈಗೊಂಡು ಶಿಕ್ಷೆ ನೀಡಬೇಕು. ಇಂತಹ ಕೃತ್ಯಗಳಲ್ಲಿ ನ್ಯಾಯಾಲಯಗಳು ಶೀಘ್ರವಾಗಿ ಪ್ರಕರಣಗಳ ವಿಚಾರಣೆ ನಡೆಸಿ, ಕಠಿಣ ಶಿಕ್ಷೆಯನ್ನು ವಿಧಿಸಬೇಕು'
- `ಮುಖ್ಯಮಂತ್ರಿ' ಚಂದ್ರು, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಕಠಿಣವಾದ ಶಿಕ್ಷೆಯಾಗಲಿ

`ದೆಹಲಿಯಲ್ಲಿ ನಡೆದ ಘಟನೆ ದಿಗ್ಭ್ರಾಂತಿಯನ್ನುಂಟು ಮಾಡಿದೆ.  ಈ ದಿನಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಂಬೈಯಲ್ಲಿ 38 ವರ್ಷಗಳ ಹಿಂದೆ ನಡೆದ ನರ್ಸ್ ಅರುಣಾ ಶಾನಬಾಗ್ ಅವರ ಕರಾಳ ಘಟನೆಯನ್ನು ನೆನಪಿಸುತ್ತಿದೆ ಈ ಘಟನೆ. ಇಂತಹ ಕೃತ್ಯಗಳನ್ನು ಎಸಗಿದವರಿಗೆ ಕಠಿಣವಾದ ಶಿಕ್ಷೆಯಾಗಬೇಕು. ಆರೋಗ್ಯ ಮತ್ತಿತರ ಸಾರ್ವಜನಿಕ ಕಾರ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸಬೇಕು. ದೆಹಲಿಯಲ್ಲಿ ನಡೆದ ಘಟನೆಯಲ್ಲಿ ಘಾಸಿಗೊಂಡ ಹುಡುಗಿ ಇನ್ನೂ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ. ಅಂತಹ ಪೈಶಾಚಿಕ ಕೃತ್ಯವನ್ನು ಮಾಡಿದವರಿಗೆ ಕೋರ್ಟ್ ತ್ವರಿಗತಿಯಲ್ಲಿ ಶಿಕ್ಷೆಯನ್ನು ವಿಧಿಸಲಿ'
- ಡಾ.ವಸುಧೇಂದ್ರ, ಕಾರ್ಯದರ್ಶಿ, ವೈದ್ಯಕೀಯ ಸೇವಾ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT