ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಭವನದಲ್ಲಿ ಹೊಸಬೆಳಕು

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ನಿರೀಕ್ಷೆಯಂತೆಯೇ ಪ್ರಣವ್ ಮುಖರ್ಜಿ ಅವರು ರಾಷ್ಟ್ರದ 13 ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ದಶಕಗಳ ಕಾಲದ ರಾಜಕೀಯ ಪಯಣ  ಕೊನೆಗೆ ಅವರನ್ನು ರಾಷ್ಟ್ರಪತಿ ಭವನಕ್ಕೆ ಮುಟ್ಟಿಸಿದೆ. ರಾಷ್ಟ್ರದ ಅತ್ಯುನ್ನತ ಸ್ಥಾನಕ್ಕೆ ಸಮರ್ಥ ವ್ಯಕ್ತಿಯ ಆಯ್ಕೆಯಾಗಿದೆ.

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ  ಪ್ರತಿಪಕ್ಷಗಳ ಗೊಂದಲ ಅನವಶ್ಯಕವಾಗಿತ್ತು. ಈ ಗೊಂದಲ ಎಲ್ಲಿಯವರೆಗೆ ಮುಂದುವರಿಯಿತು ಎಂದರೆ ಪಿ.ಎ.ಸಂಗ್ಮಾ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ  ಮಾಡಿದ್ದು ಕೇವಲ ಸಾಂಕೇತಿಕ ಎನ್ನುವಂತಾಯಿತು.
 
ಉನ್ನತ ಸ್ಥಾನದ ಆಯ್ಕೆ ಸರ್ವಸಮ್ಮತವಾದರೆ ಅದರ ಘನತೆಯೂ ಹೆಚ್ಚುತ್ತದೆ. ಎಲ್ಲ ಪಕ್ಷಗಳೂ ಗೌರವಿಸುವ ಪಕ್ಷದೊಳಗೂ ಅಜಾತಶತ್ರು ಎಂದೇ ಹೆಸರಾದ ಪ್ರಣವ್‌ಗೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತು ಒಪ್ಪುತ್ತದೆ.

ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಗುಮಾಸ್ತನಾಗಿ ಸೇವೆ ಆರಂಭಿಸಿ, ಕಾಲೇಜೊಂದರಲ್ಲಿ ಶಿಕ್ಷಕನಾಗಿ ನಂತರ ಪತ್ರಕರ್ತನಾಗಿಯೂ ಸೇವೆಸಲ್ಲಿಸಿರುವ ಪ್ರಣವ್ 1969 ರಲ್ಲಿ  ರಾಜ್ಯಸಭೆಗೆ ಆಯ್ಕೆಯಾಗಿ, ಇಂದಿರಾಗಾಂಧಿ ಅವರ ಆಪ್ತರಾದರು. ವಿದೇಶಾಂಗ ಸಚಿವರಾಗಿ, ರಕ್ಷಣಾ ಸಚಿವರಾಗಿ ಎರಡು ಬಾರಿ ಹಣಕಾಸು ಸಚಿವರಾಗಿ ಸರ್ಕಾರದ ಎಲ್ಲ ಭಾರವನ್ನೂ ಹೊತ್ತು ನಿಭಾಯಿಸಿದರು.

ಯುಪಿಎ ಸರ್ಕಾರಕ್ಕೆ ಅನಿವಾರ್ಯವಾಗಿದ್ದ ಪ್ರಣವ್ ಅವರನ್ನು ಚಾಣಾಕ್ಷತನದಲ್ಲಿ  ಮೀರಿಸುವವರು ಯಾರೂ ಇರಲಿಲ್ಲ.  ಪಕ್ಷದಲ್ಲಿ, ಯುಪಿಎ ಒಕ್ಕೂಟದಲ್ಲಿ ಎಂತಹ ಬಿಕ್ಕಟ್ಟುಗಳು ಬಂದೊದಗಿದರೂ ಅದಕ್ಕೆ ಪ್ರಣವ್ ಮುಖರ್ಜಿ ಅವರ ಬಳಿ ಮದ್ದು ಇದ್ದೇ ಇರುತ್ತಿತ್ತು.
 
ವಿದೇಶಾಂಗ ಸಚಿವರಾಗಿದ್ದಾಗ ಅಣ್ವಸ್ತ್ರಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ನಿಲುವು ಬಿಂಬಿಸುವಲ್ಲಿ, ವಿಶ್ವದ ಪ್ರಮುಖ ರಾಷ್ಟ್ರಗಳ ಒಪ್ಪಿಗೆ ದೊರಕಿಸಿಕೊಳ್ಳುವಲ್ಲಿ ಪ್ರಣವ್ ಮಹತ್ವದ ಪಾತ್ರ ವಹಿಸಿದ್ದನ್ನು ಮರೆಯುವಂತಿಲ್ಲ.

 ರಾಷ್ಟ್ರಪತಿಯಾಗಿ ಈಗ ಪ್ರಣವ್ ಮುಖರ್ಜಿ ಅವರ ಎದುರು ಹಲವಾರು ಸವಾಲುಗಳಿವೆ. ಮುಂದಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಭವಿಷ್ಯ ಏನಾಗುತ್ತದೋ ಊಹಿಸುವುದೇ ಕಷ್ಟ. ಅಂತಹ ಸಮಯದಲ್ಲಿ ರಾಷ್ಟ್ರಪತಿಗಳ ನಡೆಯ ಬಗ್ಗೆಯೇ ಎಲ್ಲರ ಗಮನವಿರುತ್ತದೆ.
 
ಮರಣದಂಡನೆ ಎದುರಿಸುತ್ತಿರುವ ಹತ್ತು ಮಂದಿಯ ಕ್ಷಮಾದಾನ ಅರ್ಜಿಗಳು ರಾಷ್ಟ್ರಪತಿ ಮುಂದಿವೆ. ಅದರಲ್ಲೂ ರಾಜಕೀಯ ಸೂಕ್ಷ್ಮಗಳು ಅಡಗಿರುವ ವ್ಯಕ್ತಿಗಳ ಅರ್ಜಿಗಳ ಬಗ್ಗೆ ಯಾವ ರೀತಿಯ ತೀರ್ಮಾನ ಬರುತ್ತದೆ ಎನ್ನುವುದೂ ಕೂಡ ನಿರೀಕ್ಷೆಗೆ ಕಾರಣವಾಗಿದೆ. ರಾಷ್ಟ್ರದ ಆರ್ಥಿಕ ದುಃಸ್ಥಿತಿ ತಡೆಗೆ ಸುಧಾರಣೆಗಳನ್ನು ತರಲು ಪ್ರಣವ್ ವಿಫಲರಾದರು ಎನ್ನುವ ಗೊಣಗಾಟವೂ ಇದೆ.
 
ಎಂಬತ್ತರ ದಶಕದಲ್ಲಿ ಸಮರ್ಥ ಅರ್ಥಸಚಿವರಾಗಿದ್ದ ಪ್ರಣವ್, ಬದಲಾಗುತ್ತಿರುವ ಸಮಾಜದ ಪರಿಸ್ಥಿತಿಯನ್ನು ಗ್ರಹಿಸುವುದರಲ್ಲಿ ಸೋತರು. ಹೀಗಾಗಿ ವಿಶ್ವ ಬಂಡವಾಳ ಹೂಡಿಕೆದಾರರಲ್ಲಿ ಹೂಡಿಕೆಗೆ ಸಂಬಂಧಪಟ್ಟಂತೆ ಗೊಂದಲ ಮೂಡಿತು ಎನ್ನುವ ಆಕ್ಷೇಪವೂ ಇದೆ.
 
ಯಾವುದನ್ನೂ ಲೆಕ್ಕಿಸದೆ ದೇಶದ ಹಣಕಾಸು ವ್ಯವಸ್ಥೆಗೆ ಶಿಸ್ತು ತರಲು ಅವರು ನಿರಂತರ ಯತ್ನ ನಡೆಸಿದ್ದರು ಎನ್ನುವುದನ್ನು ಅಲ್ಲಗಳೆಯಲಾಗದು. ಈ ಕಾರಣದಿಂದಲೇ ವಿಶ್ವದ ಅತ್ಯುತ್ತಮ ಹಣಕಾಸು ಸಚಿವ ಎನ್ನುವ ಬಿರುದಿಗೆ ಪ್ರಣವ್ ಪಾತ್ರರಾಗ್ದ್ದಿದರು. ಸಾಮಾನ್ಯವಾಗಿ  ರಾಷ್ಟ್ರಪತಿ ಎಂದರೆ ರಬ್ಬರ್‌ಸ್ಟಾಂಪ್ ಎನ್ನುವ ಕುಹಕ ಇದೆ. 

ಆದರೆ ನಮ್ಮ ರಾಷ್ಟ್ರಪತಿಗಳ ಪರಂಪರೆ ನೋಡಿದರೆ, ಕೆಲವು ರಾಷ್ಟ್ರಪತಿಗಳಾದರೂ ಅಪಾರ ಪಾಂಡಿತ್ಯ, ಪ್ರಬುದ್ಧತೆ, ಮುತ್ಸದ್ದಿತನ ಮೆರೆದ ಇತಿಹಾಸ ಕಂಡುಬರುತ್ತದೆ. ಅಂತಹ ಪರಂಪರೆಯನ್ನು ಮುಂದುವರೆಸುವ ದಕ್ಷತೆ ಪ್ರಣವ್ ಮುಖರ್ಜಿ ಅವರಲ್ಲಿ ಇದೆ ಎನ್ನುವುದು ಹೆಮ್ಮೆಯ ವಿಷಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT