ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಸ್ಥಾನ ; ತೆರೆ ಮರೆಯಲ್ಲಿ ನಡೆದ ರಾಜಕಾರಣ

Last Updated 5 ಮೇ 2012, 19:30 IST
ಅಕ್ಷರ ಗಾತ್ರ

ಬರುವ ಜುಲೈ 25ರಂದು ನೂತನ ರಾಷ್ಟ್ರಪತಿಗಳ ಆಯ್ಕೆ ನಡೆಯಲಿದೆ. ಅದಕ್ಕಾಗಿ ರಾಜಕೀಯ ಪಕ್ಷಗಳ ನಡುವೆ ಚರ್ಚೆ-ಚಿಂತನೆ- ಸಮಾಲೋಚನೆಗಳು ಆರಂಭವಾಗಿವೆ.

ರಾಷ್ಟ್ರಪತಿ ಸ್ಥಾನ ಆಲಂಕಾರಿಕ ಎಂಬ ಮಾತಿದೆ. ರಾಷ್ಟ್ರಪತಿ ತಮ್ಮ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಕೇಂದ್ರ ಮಂತ್ರಿಮಂಡಲದ ಸಲಹೆಯನ್ನು ಮೀರದಂತೆ ನಿರ್ವಹಿಸಬೇಕೆಂಬ ನಿಯಮವಿದೆ.

ರಾಷ್ಟ್ರಪತಿ ಸರ್ಕಾರದ ಯಾವುದೇ ನೀತಿ,ಧೋರಣೆಯಲ್ಲಾಗಲಿ ಅಥವಾ ನಿರ್ಣಯದಲ್ಲಾಗಲಿ ನೇರವಾಗಿ ಕೈ ಹಾಕುವಂತಿಲ್ಲ. ಅವರು ಸಮಯೋಜಿತವಾಗಿ ಸರ್ಕಾರಕ್ಕೆ ಗೌಪ್ಯವಾಗಿ, ಅನುಭವೀಯ ಬುದ್ಧಿವಾದ ಹೇಳಬಹುದಲ್ಲದೇ ಸಲಹೆಗಳನ್ನೂ ನೀಡಬಹುದು.

ಸರ್ಕಾರ, ರಾಷ್ಟ್ರಪತಿಗಳ ಸಮ್ಮತಿ ಪಡೆಯಲು ಕಳುಹಿಸಿದ ನಿರ್ಣಯಗಳನ್ನು ಪರಿಶೀಲಿಸಿ ಹೆಚ್ಚಿನ ಮಾಹಿತಿಯನ್ನು ಕೇಳಬಹುದು. ನಿರ್ಣಯವನ್ನು ಪುನರ್ ಪರಿಶೀಲನೆಗಾಗಿ ಹಿಂದಿರುಗಿಸಬಹುದು. ಸರ್ಕಾರ ಎರಡನೇ ಬಾರಿಗೆ ತನ್ನ ನಿರ್ಣಯವನ್ನು ಬದಲಾಯಿಸದೆ ರಾಷ್ಟ್ರಪತಿಯವರಿಗೆ ಒಪ್ಪಿಸಿದರೆ, ಆ ನಿರ್ಣಯವನ್ನು ಅವರು ವಿರೋಧಿಸುವ ಅವಕಾಶ ಇಲ್ಲ.

 ಭಾರತ ಪ್ರಥಮ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದರು ಸ್ವಾತಂತ್ರ್ಯ ಹೋರಾಟಗಾರರು. ಗಾಂಧೀಜಿ ಅನುಯಾಯಿ ಮತ್ತು ಪ್ರಧಾನಿ ನೆಹರು ಅವರಿಗೆ ಸರಿಸಮಾನರಾದ ರಾಜಕಾರಣಿ. ಡಾ.ಪ್ರಸಾದರ ಆಯ್ಕೆಯ ಬಗೆಗೆ ಕಾಂಗ್ರೆಸ್ ನಾಯಕರು ಮತ್ತು ಪ್ರಧಾನಿ ನಡುವೆ ಭಿನ್ನಾಭಿಪ್ರಾಯಗಳಿದ್ದವು. ನೆಹರೂ ಅವರ ಆಯ್ಕೆ ರಾಜಾಜಿ ಅವರಾಗಿದ್ದರು. ಆದರೆ ಕಾಂಗ್ರೆಸ್ ಪಕ್ಷ ರಾಜೇಂದ್ರ ಪ್ರಸಾದರನ್ನು ರಾಷ್ಟ್ರಪತಿಭವನಕ್ಕೆ ಕಳುಹಿಸಿದ್ದು ಒಂದು ಐತಿಹಾಸಿಕ ಸಂಗತಿ.

 ಪ್ರಧಾನಿ ನೆಹರೂ ಹಿಂದೂ ಕೋಡ್ ಮಸೂದೆಯನ್ನು ಜಾರಿಗೆ ತರಲು ಪಣತೊಟ್ಟು ನಿಂತಾಗ  ರಾಜೇಂದ್ರಪ್ರಸಾದರು ಪ್ರಧಾನಿಗೆ ತಮ್ಮ ವಿರೋಧವನ್ನು ಪತ್ರಮುಖೇನ ತಿಳಿಸಿದ್ದರು. ಆದರೂ ನೆಹರೂ ತಮ್ಮ ನಿಲುವು ಬದಲಾಯಿಸದೇ ಮಸೂದೆಯನ್ನು ಜಾರಿಗೆ ತಂದರು. ನಂತರ ಪ್ರಧಾನಿ-ರಾಷ್ಟ್ರಪತಿ ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿದವು.
 
ಗುಜರಾತ್‌ನಲ್ಲಿರುವ ಸೋಮನಾಥ ದೇವಸ್ಥಾನ ಅನೇಕ ಬಾರಿ ವಿದೇಶಿಯರ ದಾಳಿಗೆ ತುತ್ತಾದದ್ದು ಐತಿಹಾಸಿಕ ಘಟನೆ ಮಾತ್ರವಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ. ಈ ದೇವಸ್ಥಾನ ಪುನರ್ ನಿರ್ಮಾಣದ ನಂತರ  ಪೂಜಾ ವಿಧಿಗಳನ್ನು ಮತ್ತೆ ಆರಂಭಿಸುವ ಸಮಾರಂಭದಲ್ಲಿ ರಾಜೇಂದ್ರ ಪ್ರಸಾದರು ಉಪಸ್ಥಿತರಿದ್ದರು.

ರಾಷ್ಟ್ರಪತಿಯವರು ಅಂತಹ ಸಮಾರಂಭದಲ್ಲಿ ಭಾಗವಹಿಸುವುದು ವಿಹಿತವಲ್ಲ ಎಂದು ನೆಹರು ಸಲಹೆ ನೀಡಿದ್ದರಂತೆ. ಆದರೆ ಪ್ರಸಾದರು ಆ ಸಲಹೆಯನ್ನು ತಳ್ಳಿಹಾಕಿದ ವಿಷಯ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು.

 ಡಾ.ಪ್ರಸಾದರು ತಮ್ಮ ಪದವಿಯನ್ನು ತ್ಯಜಿಸುವ ಮೊದಲು ಮಾಡಿದ ಸಾರ್ವಜನಿಕ ಭಾಷಣ ಚರ್ಚೆಗೆ ಒಳಗಾಯಿತು. ಈ ಭಾಷಣದಲ್ಲಿ ಅವರು ರಾಷ್ಟ್ರಪತಿಗಳ ಅಧಿಕಾರ ವ್ಯಾಪ್ತಿ ಬಗ್ಗೆ ಪುನರಾಲೋಚನೆ ಅಗತ್ಯವಿದೆ ಎಂದು ಹೇಳಿದ್ದರು.

ಪ್ರಧಾನಿ ನೆಹರೂ ತಡಮಾಡದೆ ಸಂವಿಧಾನ ತಜ್ಞರ ಅಭಿಪ್ರಾಯಗಳನ್ನು ಮುಂದಿಟ್ಟುಕೊಂಡು ರಾಷ್ಟ್ರಪತಿ, ಮಂತ್ರಿಮಂಡಲದ ನಿರ್ಣಯ, ಸಲಹೆಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕೆಂಬ ವಾದವನ್ನು ಮಂಡಿಸಿದ್ದರು. ಬಹುಶಃ ಈ ವಾದ-ವಿವಾದಗಳಿಂದ ಪಾಠ ಕಲಿತ ರಾಜಕೀಯ ಪಕ್ಷಗಳು ಮುಂದೆ ಯಾವುದೇ ರಾಷ್ಟ್ರಪತಿಯನ್ನು ಎರಡನೇ ಅವಧಿಗೆ ಮತ್ತೆ ಆಯ್ಕೆ ಮಾಡಲಿಲ್ಲ.

ಭಾರತದ ಎರಡನೆಯ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ವಿಶ್ವ ವಿಖ್ಯಾತ ತತ್ವಶಾಸ್ತ್ರಜ್ಞರು ಮತ್ತು ಶ್ರೇಷ್ಠ ವಾಗ್ಮಿ. ಅವರು ತಮ್ಮ  ಅಭಿಪ್ರಾಯವನ್ನು  ಖಡಾಖಂಡಿತವಾಗಿ ಹೇಳಲು ಹಿಂಜರಿಯುತ್ತಿರಲಿಲ್ಲ. 1962ರ ಅಕ್ಟೋಬರ್‌ನಲ್ಲಿ ಚೀನಾ, ಭಾರತದ ಮೇಲೆ ದಾಳಿ ಮಾಡಿದ ಸಂದರ್ಭ. ಆಧುನಿಕ ಶಸ್ತ್ರಾಸ್ತ್ರಗಳಿಲ್ಲದೇ ಸೇನೆ ಪರಾಭವ ಕಂಡ ದುರ್ಗತಿಯ ಸಮಯ.
 
ರಾಧಾಕೃಷ್ಣನ್ ಅವರು ರೇಡಿಯೋ ಮೂಲಕ ನೇರ ಪ್ರಸಾರದಲ್ಲಿ ನೆಹರೂ ಸರ್ಕಾರವನ್ನು ಕಟುವಾಗಿ ಟೀಕಿಸಿ ಜನಮನದ ತಳಮಳಕ್ಕೆ ಧ್ವನಿಗೂಡಿಸಿದರು. ಈ ಭಾಷಣದಿಂದ ನೆಹರೂ ಬಹಳ ಅಸಂತುಷ್ಟರಾದರಂತೆ.

1967ರಲ್ಲಿ ಅಧಿಕಾರ ಬಿಡುವ ಸಮಯದಲ್ಲಿ ಮಾಡಿದ ಭಾಷಣದಲ್ಲಿ ರಾಜಕೀಯ ಮತ್ತು ಸರ್ಕಾರದ ಆಡಳಿತ ವೈಖರಿ ಕೆಳಮಟ್ಟಕ್ಕೆ ಹೋಗುತ್ತಿದೆಯೆಂದು ಅವರು ತಮ್ಮ ಖೇದವನ್ನು ವ್ಯಕ್ತಪಡಿಸಿದ್ದರು. ಅದರಿಂದ ಪ್ರಧಾನಿ ಇಂದಿರಾ ಗಾಂಧಿ ಕುಪಿತರಾದರೆಂಬ ಸುದ್ದಿ ದಟ್ಟವಾಗಿ ಹರಡಿತ್ತು.

1967ರಲ್ಲಿ ರಾಷ್ಟಪತಿ ಭವನ ಪ್ರವೇಶಿಸಿದ ಡಾ.ಜಾಕೀರ್‌ಹುಸೇನ್ 1969ರಲ್ಲಿ ಅನಿರೀಕ್ಷಿತವಾಗಿ ನಿಧನರಾದರು. ಅವರು ತೆರವು ಮಾಡಿದ ಸ್ಥಾನ ಮುಂದೆ ಜರುಗಿದ ರಾಜಕೀಯ ಭೂಕಂಪದ ಕೇಂದ್ರ ಬಿಂದುವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಆ ವರ್ಷ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಕ್ಷದ ಹಿರಿಯ ನಾಯಕರಲ್ಲಿ ಬೆಳೆಯುತ್ತಿದ್ದ ಒಡಕು ಬಹಿರಂಗವಾಯಿತು.
 
ಆ ಮುಂದೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಇಂದಿರಾ ಗಾಂಧಿ ಪಕ್ಷದ ಅಭ್ಯರ್ಥಿ ನೀಲಂ ಸಂಜೀವರೆಡ್ಡಿಯವರ ವಿರುದ್ಧ ವಿ.ವಿ.ಗಿರಿಯವರನ್ನು ನಿಲ್ಲಿಸಿ ಅವರ ಗೆಲುವಿಗೆ ಸಹಾಯಕರಾದರು.

ರಾಷ್ಟ್ರದ ಏಕತೆಯ ಬಿಂದುವಾಗಬೇಕಿದ್ದ ರಾಷ್ಟ್ರಪತಿ ಸ್ಥಾನ ರಾಜಕೀಯ ಪಗಡೆಯಾಟದ ಕಾಯಾಗಿ ಕಾಂಗ್ರೆಸ್ ಪಕ್ಷ ಇಬ್ಭಾಗವಾಗಲು ದಾರಿ ಮಾಡಿಕೊಟ್ಟಿತು. ಸುದ್ದಿ ಮಾಧ್ಯಮಗಳು ರಾಷ್ಟ್ರಪತಿಗಳಿಗೆ ಸಂಬಂಧಿಸಿದ ವರದಿ,ವಿಮರ್ಶೆಗಳಲ್ಲಿ `ರಬ್ಬರಿನ ಮೊಹರು~ ಎಂಬ ಶಬ್ದವನ್ನು ಬಳಸಲು ಆರಂಭಿಸಿದ್ದು ಆಗಲೇ.

 ಫಕ್ರುದ್ದೀನ್ ಅಲಿ ಅಹಮದ್ ದೇಶದ ಈಶಾನ್ಯ ಭಾಗದಿಂದ ಬಂದ ಮೊದಲ (1974) ರಾಷ್ಟ್ರಪತಿ. ಅವರ ಕಾಲದಲ್ಲಿ ಇಂದಿರಾ ಗಾಂಧಿ ತಮ್ಮ ಪ್ರಧಾನಿ ಪಟ್ಟ ಉಳಿಸಿಕೊಳ್ಳಲು `ಆಂತರಿಕ ತುರ್ತು ಪರಿಸ್ಥಿತಿ~ ಜಾರಿಗೆ ತಂದರು.
 
1975ರ ಜೂನ್ 25ರ ಮಧ್ಯರಾತ್ರಿಯಲ್ಲಿ  ತುರ್ತು ಪರಿಸ್ಥಿತಿ ಜಾರಿಗೆ ರಾಷ್ಟ್ರಪತಿ ಸಹಿ ಮಾಡಿದ ಬಗ್ಗೆ ಸಾಕಷ್ಟು ವಿವಾದಗಳೆದ್ದವು. ತುರ್ತು ಪರಿಸ್ಥಿತಿ ಘೋಷಣೆ ಜಾರಿಯಾದ ಕೆಲ ಗಂಟೆಗಳ ನಂತರ ರಾಷ್ಟ್ರಪತಿ ಅವರ ಸಹಿಯನ್ನು ಪಡೆಯಲಾಯಿತು ಎಂಬ ಮಾತು ಕೇಳಿಬಂತು.

 ನೀಲಂ ಸಂಜೀವರೆಡ್ಡಿ (1977) ಅವರು ಜನತಾಪಕ್ಷದ ಸರ್ಕಾರದ ಆಯ್ಕೆ. ಅವರ ಅವಧಿಯಲ್ಲಿ ಎರಡು ಸರ್ಕಾರಗಳು ಉರುಳಿ ಹೋಗಿ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದ ರಾಜಕೀಯ ನಾಟಕ ನಡೆಯಿತು. ಪರಿಸ್ಥಿತಿಯ ವಿಡಂಬನೆ ಎಂದರೆ ಹಿಂದೆ ರಾಷ್ಟ್ರಪತಿ ಆಗಲು ತಮಗೆ ಅಡ್ಡಿ ಮಾಡಿದ್ದ ಇಂದಿರಾಗಾಂಧಿ ಅವರನ್ನು ರೆಡ್ಡಿಯವರು ಸರ್ಕಾರ ರಚಿಸುವಂತೆ ಆಹ್ವಾನಿಸಬೇಕಾಯಿತು.

ಸಿಖ್ ಧರ್ಮೀಯರಾದ ಗ್ಯಾನಿ ಜೇಲ್‌ಸಿಂಗ್ ಅವರು 1982ರಲ್ಲಿ ಚುನಾಯಿತರಾದರು. ಅವರು ಇಂದಿರಾ ಗಾಂಧಿ ಮತ್ತು ಸಂಜಯಗಾಂಧಿ ಆಪ್ತರು. ಅವರ ಅವಧಿಯಲ್ಲಿ ರಾಷ್ಟ್ರಪತಿ ಭವನ ಹಲವಾರು ವಿವಾದಗಳಿಗೆ ಆಸ್ಪದವಾಗಿ ಅದು ಮಾಧ್ಯಮಗಳಲ್ಲಿ ಗುಲ್ಲಾಯಿತು. ಕೆಲವು ಸಂದರ್ಭಗಳಲ್ಲಿ ಜೈಲ್‌ಸಿಂಗರು ನಡೆದುಕೊಂಡ ರೀತಿ ಪ್ರಶಂಸೆಗೆ ಪಾತ್ರವಾಯಿತು.

 1984ರ ಅಕ್ಟೋಬರ್‌ನಲ್ಲಿ ಅಮೃತಸರದ ಸ್ವರ್ಣ ದೇವಾಲಯ ಘಟನೆ ಸಂದರ್ಭದಲ್ಲಿ ಸರ್ಕಾರ ಪರಿಸ್ಥಿತಿ ಹತೋಟಿಗೆ ಸೂಕ್ತ  ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಜೈಲ್‌ಸಿಂಗರು ಬಹಳ ನೊಂದರು. ಅವರು ಬಹಿರಂಗವಾಗಿ ಸರ್ಕಾರವನ್ನು ಟೀಕಿಸಿದ್ದರೆ ಅಪರಾಧವೇನೂ ಆಗುತ್ತಿರಲಿಲ್ಲ. ಆದರೆ ಅವರು ತಮ್ಮ ನೋವು  ನುಂಗಿಕೊಂಡು ರಾಷ್ಟ್ರಪತಿ ಸ್ಥಾನದ ಗೌರವವನ್ನು ಕಾಪಾಡಿದರು.

ಬೋಫೋರ್ಸ್‌ ಪ್ರಕರಣದಲ್ಲಿ ವಿರೋಧ ಪಕ್ಷದವರು ರಾಷ್ಟ್ರಪತಿಗಳಿಗೆ ಪುರಾವೆಸಹಿತ ದೂರು ಕೊಟ್ಟು, ರಾಜೀವ್‌ಗಾಂಧಿ ಅವರ ಮೇಲೆ ಮೊಕದ್ದಮೆಯನ್ನು ಹೂಡಲು ಸಮ್ಮತಿಯನ್ನು ಕೋರಿ ಪತ್ರವನ್ನು ಅರ್ಪಿಸಿದ್ದರು. ಸಾಂಪ್ರದಾಯಿಕವಾಗಿ ಅಂತಹ ಪತ್ರಗಳನ್ನು ರಾಷ್ಟ್ರಪತಿ ಭವನ ಸರ್ಕಾರಕ್ಕೆ ಸಲಹೆಗಾಗಿ ಕಳುಹಿಸುವುದು ವಾಡಿಕೆ.

 ಇದಕ್ಕೆ ವ್ಯತಿರಿಕ್ತವಾಗಿ ಜೇಲ್‌ಸಿಂಗ್ ವಿರೋಧ ಪಕ್ಷಗಳ ಪತ್ರವನ್ನು ಬಹುಕಾಲ ತಮ್ಮಲ್ಲಿಯೇ ಇಟ್ಟುಕೊಂಡು ಕಾನೂನು ತಜ್ಞರ ಅಭಿಪ್ರಾಯ ಪಡೆದು ಸರ್ಕಾರದ ಚಿಂತೆಯನ್ನು ಹೆಚ್ಚಿಸಿದರು. ರಾಷ್ಟ್ರಪತಿ ಭವನವನ್ನು ರಾಜಕೀಯ ದಡಕ್ಕೆ ತಂದ ಮೊದಲ ಪ್ರಕರಣ ಅದು.
 
ಆಗ ರಾಷ್ಟ್ರಪತಿಗಳ ಕಾರ್ಯದರ್ಶಿಯಾಗಿದ್ದ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಸಕಾಲಿಕ ಸಲಹೆಯಿಂದ ರಾಷ್ಟ್ರಪತಿಯವರು ಪ್ರಧಾನಿ ಮೇಲೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡಲಿಲ್ಲ ಎಂಬ ವದಂತಿ ಇತ್ತು.

ನಂತರ ಬಂದ ವೆಂಕಟರಾಮನ್ ಅವರು ಸಂವಿಧಾನದ ಚೌಕಟ್ಟು ಮೀರದೆ `ಕಾಪಿ ಬುಕ್~ನಂತೆ ನಡೆಯುವುದಾಗಿ ಹೇಳಿಕೆ ಕೊಟ್ಟರು. ಅವರ ಅವಧಿಯಲ್ಲಿ ದೇಶ ಅರಾಜಕತೆ, ಹಿಂಸೆ ಹೆಚ್ಚಾಯಿತು.
 
ಒಂದೆಡೆ ಮಂಡಲ್ ಆಯೋಗದ ವರದಿ ವಿರುದ್ಧದ ಪ್ರತಿಭಟನೆಯಿಂದ ಹಿಂಸಾಚಾರಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ರಾಮಮಂದಿರದ ನಿರ್ಮಾಣದ ಬೆಂಬಲವಾಗಿ ಅಶಾಂತಿ ಹರಡಿತ್ತು. ಅವರ ಅವಧಿಯಲ್ಲಿ ಎರಡು ಸಲ ಮಧ್ಯಂತರ ಚುನಾವಣೆಗಳು ನಡೆದವು.

ಚುನಾವಣಾ ಪ್ರಚಾರದ ಸಮಯದಲ್ಲೇ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾಯಿತು. ಎಲೆಮರೆಯ ಕಾಯಂತೆ ಅವರು ಬಿದ್ದೇಳುತ್ತಿದ್ದ ಸರ್ಕಾರಗಳಿಗೆ ಸಮಯಕ್ಕನುಸಾರವಾಗಿ ಮಾರ್ಗದರ್ಶನ ಮಾಡಿದ್ದರು.

1992ರಲ್ಲಿ ರಾಷ್ಟ್ರಪತಿಗಳ ಆಯ್ಕೆ ಸಂದರ್ಭದಲ್ಲಿ ಸರ್ಕಾರ ಸಂಕಷ್ಟದಲ್ಲಿತ್ತು. ಆಡಳಿತ ಪಕ್ಷವಾದ ಕಾಂಗ್ರೆಸ್ಸಿಗೆ ಸಂಸತ್ತಿನಲ್ಲಾಗಲಿ, ರಾಜ್ಯಗಳ ವಿಧಾನಸಭೆಗಳಲ್ಲಿ ಬಹುಮತವಿರಲಿಲ್ಲ. ಪ್ರಧಾನಿ ನರಸಿಂಹರಾಯರು ವಿರೋಧ ಪಕ್ಷಗಳ ನಡುವೆ ಒಪ್ಪಂದವನ್ನು ಮಾಡಿಕೊಂಡು ರಾಷ್ಟ್ರಪತಿ ಸ್ಥಾನಕ್ಕೆ ಹಿರಿಯ ಕಾಂಗ್ರೆಸಿಗ ಶಂಕರ್‌ದಯಾಳ್ ಶರ್ಮ ಅವರನ್ನು, ಉಪರಾಷ್ಟ್ರಪತಿಯ ಸ್ಥಾನಕ್ಕೆಕೆ.ಆರ್.ನಾರಾಯಣನ್ ಅವರನ್ನು ಸ್ಪರ್ಧಿಗಳಾಗಿ ನಿಲ್ಲಿಸಿದರು. 

 ಶಂಕರದಯಾಳ್ ಶರ್ಮ ಮತ್ತು ಪ್ರಧಾನಿಗಳ ನಡುವೆ ಸೌಹಾರ್ದ ಸಂಬಂಧವಿದ್ದರೂ ಭಿನ್ನಾಭಿಪ್ರಾಯಗಳಿಲ್ಲದೆ ಇರಲಿಲ್ಲ. ವಿಜಿಲೆನ್ಸ್ ಕಮೀಷನರ ನೇಮಕದಲ್ಲಿ ಪ್ರಧಾನಿ ಶಿಫಾರಸು ಮಾಡಿದವರಿಗೆ ರಾಷ್ಟ್ರಪತಿ ಸಮ್ಮತಿ ನೀಡಲಿಲ್ಲ. 1996ರ ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡಿತು.
 
ಬಿಜೆಪಿ ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳಿಸಿದ ಪಕ್ಷವಾಗಿ ಹೊರಹೊಮ್ಮಿತ್ತು. ಆಗ ರಾಷ್ಟ್ರಪತಿಗಳು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟರು. ಲೋಕಸಭೆಯಲ್ಲಿ ಬಹುಮತ ಸಾಧಿಸಲಾಗದೆ, 13ದಿನಗಳಲ್ಲಿ ಬಿಜೆಪಿ ಅಧಿಕಾರ ತ್ಯಜಿಸಬೇಕಾಯಿತು.

ಕೆ.ಆರ್.ನಾರಾಯಣನ್ ಸಂವಿಧಾನಕ್ಕೆ ಅಪಚಾರವಾಗದಂತೆ ನಡೆದುಕೊಂಡರು. ದಲಿತ ವರ್ಗದಿಂದ ಬಂದ  ಮೊದಲ ರಾಷ್ಟ್ರಪತಿ. ಅವರ ಬಗ್ಗೆ ಬರೆಯುವಾಗ ಒಂದು ಪ್ರಸಂಗವನ್ನು ನೆನಪಿಸಿಕೊಂಡರೆ ನಾರಾಯಣನ್‌ರ ಘನತೆ ವಿದಿತವಾಗುತ್ತದೆ.

ಉತ್ತರಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಸರ್ಕಾರ ನಡೆಸುತ್ತಿದ್ದರು. ಅವರ ಕಡು ವಿರೋಧಿ ಸಮಾಜವಾದಿ ಪಕ್ಷದ ಮುಲಾಯಂಸಿಂಗ್ ಅವರು ಕೇಂದ್ರದ ರಕ್ಷಣಾ ಮಂತ್ರಿಯಾಗಿದ್ದರು.

ಅವರ ಒತ್ತಡದಿಂದ ಪ್ರಧಾನಿ ಗುಜ್ರಾಲ್ ಮಾಯಾವತಿ ಸರ್ಕಾರವನ್ನು ಪದಚ್ಯುತಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವ ಶಿಫಾರಸನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟರು.
 
ಆದರೆ ಈ ಶಿಫಾರಸಿಗೆ ಉತ್ತರಪ್ರದೇಶದ ರಾಜ್ಯಪಾಲರ ಪೂರ್ಣ ಬೆಂಬಲ ಇರಲಿಲ್ಲ. ಸಂವಿಧಾನದ ಪ್ರಕಾರ ರಾಜ್ಯದಲ್ಲಿ ಆಡಳಿತ ನಡೆಯುತ್ತಿಲ್ಲ ಎಂದು ಅವರು ಸ್ಪಷ್ಟವಾಗಿ ವರದಿಯಲ್ಲಿ ತಿಳಿಸಬೇಕಿತ್ತು. ಆದರೆ ರಾಜ್ಯಪಾಲರ ವರದಿಯಲ್ಲಿ ಆ ಅಂಶ ಸರಿಯಾಗಿರಲಿಲ್ಲ. ನಾರಾಯಣನ್ ಮರುದಿನವೇ ಮಂತ್ರಿ ಮಂಡಲದ ಶಿಫಾರಸನ್ನು ಪುನರ್‌ವಿಮರ್ಶೆಗೆ ಹಿಂದಿರುಗಿಸಿದರು.

ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಅವಧಿ ಸ್ಮರಣೀಯವಾಗಿರಲು ಎರಡು ವಿಶೇಷ ಸಂಗತಿಗಳಿವೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರಪತಿಭವನದ ಬಾಗಿಲು ಜನಸಾಮಾನ್ಯರಿಗೆ, ಅದರಲ್ಲೂ ಶಾಲಾ ಮಕ್ಕಳಿಗೆ ತೆರೆದ ಕೀರ್ತಿ ಡಾ.ಕಲಾಂ ಅವರದು.

ಅಧಿಕಾರ ಮೋಹದ ಸೋಂಕಿಲ್ಲದೆ ಅವರು ಜನರೊಂದಿಗೆ ಬೆರೆತರು. ದೇಶದ ಜನರು ನೇರವಾಗಿ ಇಲ್ಲವೇ ಇಂಟರ್‌ನೆಟ್ ಮೂಲಕ ರಾಷ್ಟ್ರಪತಿ ಸಂಪರ್ಕ ಬೆಳೆಸಿದ್ದು ಇದೇ ಮೊದಲು. ಅವರ ಜನಪ್ರಿಯತೆ  ಸರ್ಕಾರಗಳಿಗೆ ಕಹಿಯಾದುದ್ದು ಆಶ್ಚರ್ಯವೇನಲ್ಲ.

ಡಾ.ಕಲಾಂ ಅವರ ಅವಧಿಯಲ್ಲಿ ಅಚಾತುರ್ಯವೊಂದು ನಡೆಯಿತು. ರಾಷ್ಟ್ರಪತಿಯವರು ರಷ್ಯಾ ಪ್ರವಾಸದಲ್ಲಿದ್ದಾಗ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರವೊಂದನ್ನು ಪದಚ್ಯುತಗೊಳಿಸುವ ಶಿಫಾರಸನ್ನು ಡಾ.ಕಲಾಂ ಅವರ ಸಮ್ಮತಿಗೆ ಕಳುಹಿಸಿ ಅವರ ಸಹಿ ಪಡೆಯಿತು.

ಈ ಬೆಳವಣಿಗೆ  ಸುಪ್ರಿಂಕೋರ್ಟಿನ ಮೆಟ್ಟಿಲೇರಿತು. ಕೋರ್ಟ್ ಕೇಂದ್ರದ ನಿರ್ಣಯವನ್ನು ನಿರಾಧಾರವೆಂದು ಹೇಳಿ ರಾಷ್ಟ್ರಪತಿ ಆಡಳಿತವನ್ನು ರದ್ದುಗೊಳಿಸಿತು. ಕೋರ್ಟಿನ ಟೀಕೆಯ ಬಿಸಿ ರಾಷ್ಟ್ರಪತಿ ಭವನಕ್ಕೂ ತಟ್ಟಿತು.

ಪ್ರತಿಭಾ ಪಾಟೀಲರು ದೇಶದ ಮೊದಲ ಮಹಿಳಾ ರಾಷ್ಟ್ರಪತಿ. ಅವರು ಈ ಸ್ಥಾನಕ್ಕೆ ಬಂದ ದಾರಿ ಸೋಜಿಗವಾಗಿದೆ. ಡಾ.ಕಲಾಂ ಅವರ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕಾಶ್ಮೀರದ ಮಾಜಿ ರಾಜ ಮನೆತನದ ಡಾ.ಕರಣ್ ಸಿಂಹರ ಹೆಸರು ಮುಂದಿತ್ತು. ದೇಶದ ಗಣತಂತ್ರದ 60ನೇ ವರ್ಷದ ಸಮಯದಲ್ಲಿ ಮಾಜಿ ರಾಜರನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕೂರಿಸುವುದು ವಾಮಪಕ್ಷದವರಿಗೆ ರುಚಿಸಲಿಲ್ಲವಂತೆ.
 
ಕಾಂಗ್ರೆಸ್ ಪಕ್ಷ ಲೋಕಸಭಾಧ್ಯಕ್ಷರಾದ ಸೋಮನಾಥ ಚಟರ್ಜಿ ಅವರ ಹೆಸರನ್ನು ಸೂಚಿಸಿತು. ಚಟರ್ಜಿಯವರ ಪಕ್ಷ ಅದಕ್ಕೆ ವಿರೋಧ ವ್ಯಕ್ತಪಡಿಸಿತು ಎಂಬ ಮಾತು ಕೇಳಿ ಬಂತು.
 
ವಾಮಪಕ್ಷದವರ ಒಲವು ಕಾಂಗ್ರೆಸ್‌ನ ರಾಜಕೀಯ ಅಖಾಡದ ಪಳಗಿದ ಪೈಲ್ವಾನರಾದ ಪ್ರಣಬ್ ಮುಖರ್ಜಿಯವರತ್ತ ತಿರುಗಿದಾಗ ಕಾಂಗ್ರೆಸ್ ಪಕ್ಷ ಮುಖರ್ಜಿಯವರ `ಚತುರತೆ~ಯನ್ನು ರಾಷ್ಟ್ರಪತಿ ಭವನಕ್ಕೆ ರವಾನಿಸಲು ಒಪ್ಪಲಿಲ್ಲ. ಹೀಗಾಗಿ ಪ್ರತಿಭಾ ಪಾಟೀಲರು ಸರ್ವಾನುಮತದ ಆಯ್ಕೆಯಾದರು.

2012ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಏನಾಗಬಹುದೆಂಬ ಊಹಾಪೋಹಗಳು ಇದೀಗ ಹುಟ್ಟಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT