ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿಯಾಗಿ ಪ್ರಣವ್ ಆಯ್ಕೆ: ಸಂಗ್ಮಾ ಅರ್ಜಿ ವಜಾ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

 ನವದೆಹಲಿ (ಐಎಎನ್‌ಎಸ್/ಪಿಟಿಐ): ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಆಯ್ಕೆ ಪ್ರಶ್ನಿಸಿ ಎನ್‌ಡಿಎ ಬೆಂಬಲಿತ ಪರಾಜಿತ ಅಭ್ಯರ್ಥಿ ಪಿ.ಎ. ಸಂಗ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಶೇಷ ನ್ಯಾಯಪೀಠ ಬುಧವಾರ ತಳ್ಳಿಹಾಕಿದೆ.

ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಲಾಭದಾಯಕ ಹುದ್ದೆ ಹೊಂದಿದ್ದ ಪ್ರಣವ್ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಬಹುಮತದ ನಿರ್ಣಯದಿಂದ ಅರ್ಜಿಯನ್ನು ತಳ್ಳಿಹಾಕಿತು.

ಕಬೀರ್ ಅವರ ಈ ತೀರ್ಪಗೆ ನ್ಯಾಯಮೂರ್ತಿಗಳಾದ ಪಿ.ಸದಾಶಿವಂ ಮತ್ತು ಎಸ್.ಎಸ್. ನಿಜ್ಜಾರ್ ಅವರು ಸಹಮತ ವ್ಯಕ್ತಪಡಿಸಿದರು. ಆದರೆ, ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ವ್ಯಕ್ತಪಡಿಸಿದ ಜೆ.ಚಲಮೇಶ್ವರ್ ಮತ್ತು ರಂಜನ್ ಗೊಗೋಯಿ, ಸಂಗ್ಮಾ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸುವ ಅಗತ್ಯವಿದೆ ಎಂದರು.

ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಪ್ರಣವ್ ಮುಖರ್ಜಿ ಅವರು ಕೋಲ್ಕತ್ತದ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ (ಐಎಸ್‌ಐ) ಅಧ್ಯಕ್ಷ ಪದವಿಯಂತಹ ಲಾಭದಾಯಕ ಹುದ್ದೆಯನ್ನು ಹೊಂದಿದ್ದರು. ಜನ ಪ್ರಾತಿನಿಧ್ಯ ಕಾಯ್ದೆ ಅಡಿ  ಈ ಆಯ್ಕೆಯನ್ನು ಅನರ್ಹಗೊಳಿಸಲು ಅವಕಾಶವಿದೆ ಎಂದು ನ್ಯಾಯಮೂರ್ತಿ ಗೊಗೋಯಿ ಅಭಿಪ್ರಾಯಪಟ್ಟಿದ್ದಾರೆ.

ಇದು ಚುನಾವಣೆಗೆ ಸಂಬಂಧಿಸಿದ ಅರ್ಜಿಯಾದ ಕಾರಣ ಬೇಗ ಇತ್ಯರ್ಥಗೊಳಿಸುವ ಅಗತ್ಯವಿದೆ. ವಿಚಾರಣೆಗೆ ಸ್ವೀಕರಿಸುವ ಅಗತ್ಯವಿಲ್ಲ ಎಂದು ಕಬೀರ್ ಹೇಳಿದರು. ಮುಖ್ಯ ನ್ಯಾಯಮೂರ್ತಿಗಳ ತೀರ್ಪನ್ನು ಒಪ್ಪದ ನ್ಯಾಯಮೂರ್ತಿ ಚಲಮೇಶ್ವರ್ ಮುಂದಿನ ವಾರ ಇದಕ್ಕೆ ಸೂಕ್ತ ಕಾರಣ ನೀಡುವುದಾಗಿ ಹೇಳಿದರು. ಕೊನೆಗೆ ಬಹುಮತದ ಆಧಾರದ ಮೇಲೆ ಸಂಗ್ಮಾ ಅರ್ಜಿಯನ್ನು ತಿರಸ್ಕರಿಸಲಾಯಿತು. ಇದಕ್ಕೂ ಮೊದಲು ಪ್ರಣವ್ ಮುಖರ್ಜಿ ಅವರು ಸಲ್ಲಿಸಿದ ಪ್ರಮಾಣಪತ್ರವನ್ನು ನ್ಯಾಯಾಲಯ ಸ್ವೀಕರಿಸಿತು.

ಈ ಮೊದಲು ಸಂಗ್ಮಾ ವಾದವನ್ನು ತಳ್ಳಿ ಹಾಕಿದ್ದ ಅಟಾರ್ನಿ ಜನರಲ್ ವಹನ್ವತಿ, ಆರ್ಥಿಕವಾಗಿ ಲಾಭ ತರುವ ಮತ್ತು ನೇಮಕ ಅಧಿಕಾರವನ್ನು ಹೊಂದಿರುವ ಸರ್ಕಾರಿ ಹುದ್ದೆಗಳನ್ನು ಮಾತ್ರ ಲಾಭದಾಯಕ ಹುದ್ದೆಯ ವ್ಯಾಪ್ತಿಗೆ ಬರುತ್ತವೆಯೇ ಹೊರತು ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಅಧ್ಯಕ್ಷ ಹುದ್ದೆಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT