ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಮಟ್ಟದಲ್ಲಿ ಮಿಂಚಿದ ಮುಧೋಳ ಪೈಲ್ವಾನರು

Last Updated 25 ಡಿಸೆಂಬರ್ 2012, 5:59 IST
ಅಕ್ಷರ ಗಾತ್ರ

ಮುಧೋಳ: ಇಲ್ಲಿನ ಧೂಳಿನ ಕಣ ಕಣಗಳಲ್ಲಿಯೂ ಸಾಹಿತ್ಯದ ಕಂಪು ಇದೆ. ಕುಸ್ತಿಯ ಕಸರತ್ತು ಅಡಗಿದೆ. ಇದೀಗ ಇಲ್ಲಿನ ಸಂದೀಪ ಕಾಟೆ, ಸಂಜು ಮಾನೆ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ.

ಮಹಾರಾಷ್ಟ್ರದ ಅಮರಾವತಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಅಂತರವಿಶ್ವವಿದ್ಯಾಲಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 74 ಕೆ.ಜಿ. ತೂಕದ ಕುಸ್ತಿಯಲ್ಲಿ ಸಂದೀಪ ಕಾಟೆ ಗೆದ್ದರೆ, ಸಂಜು ಮಾನೆ 96 ಕೆಜಿ ತೂಕದ ವಿಭಾಗದಲ್ಲಿ ಗೆಲುವು ಪಡೆದು ಮುಧೋಳದ ವೈಭವಕ್ಕೆ ಮತ್ತೊಂದು ಗರಿ ಮುಡಿಸಿದ್ದಾರೆ.

ಹೊಳೆಆಲೂರಿನ ಎಸ್.ಕೆ.ವಿ.ಪಿ ಕಾಲೇಜಿನಲ್ಲಿ ಬಿಎ ಪ್ರಥಮ ವರ್ಷದಲ್ಲಿ ಓದುತ್ತಿರುವ ಸಂದೀಪ ಕಾಟೆ, ಮುಂಬೈನ ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ಕುಸ್ತಿ ತರಬೇತಿ ಪಡೆಯುತ್ತಿದ್ದಾರೆ. 20 ವರ್ಷ ವಯಸ್ಸಿನ ಕಾಟೆ ಈ ಹಿಂದೆಯೂ ಎರಡು ಬಾರಿ ರಾಷ್ಟ್ರ ಮಟ್ಟದ ಕುಸ್ತಿಯಲ್ಲಿ ಗೆದ್ದಿದ್ದರು. ಒಮ್ಮೆ ಮೈಸೂರಿನಲ್ಲಿ ದಸರಾ ಕೇಸರಿಯಾಗಿ ಹೊರಹೊಮ್ಮಿದರೆ, 3 ಬಾರಿ ಕರ್ನಾಟಕ ಕೇಸರಿ ಪ್ರಶಸ್ತಿ ಗಳಿಸಿದ್ದರು.

`ನಮ್ಮ ತಂದೆ ಬಸವಂತ ಕಾಟೆ ಅವರಿಗೆ ಕುಸ್ತಿ ಬಗ್ಗೆ ಅಪಾರ ಪ್ರೀತಿ. ಅವರೂ ಕುಸ್ತಿ ಆಡುತ್ತಿದ್ದರು. ಮನೆಯಲ್ಲಿ ಒಬ್ಬರಾದರೂ ಕುಸ್ತಿಪಟು ಇರಬೇಕು ಎಂಬ ಆಶಯದಿಂದ ಗರಡಿ ಮನೆಗೆ ಕಳಿಸಿದ್ದರು. ಜೊತೆಗೆ ದಾದಾಸಾಹೇಬ ಮಾನೆ ಅವರ ಕುಟುಂಬವೂ  ನಾನು ಕುಸ್ತಿ ಕಲಿಯಲು ಪ್ರೇರಣೆ ನೀಡಿದೆ' ಎನ್ನುವ ಸಂದೀಪ, ಅಂತರ ರಾಷ್ಟ್ರ ಮಟ್ಟದಲ್ಲಿ ಗೆಲ್ಲಬೇಕು ಎನ್ನುವುದು ತಮ್ಮ ಗುರಿ ಎಂದು ಹೇಳುವರು.

ಸಂಜು ಮಾನೆ ಅವರ ಇಡೀ ಮನೆತನದಲ್ಲಿಯೇ ಕುಸ್ತಿ ವಾತಾವರಣವಿದೆ. ರಾಷ್ಟ್ರಮಟ್ಟದಲ್ಲಿ 2 ಬಾರಿ 3ನೇ ಸ್ಥಾನ ಗಳಿಸಿದರೆ, ಒಮ್ಮೆ ದ್ವಿತೀಯ ಸ್ಥಾನ ಪಡೆದಿದ್ದರು.

ಎರಡು ಬಾರಿ ದಸರಾ ಕಂಠೀರವ ಪ್ರಶಸ್ತಿ, ಮೂರು ಬಾರಿ ಕರ್ನಾಟಕ ಕೇಸರಿ ಪ್ರಶಸ್ತಿ ಗಳಿಸಿದ್ದಾರೆ. ರಾಜ್ಯದಲ್ಲಿ ನಡೆದ ಹಲವಾರು ಕುಸ್ತಿ ಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಮುಧೋಳದ ಎಸ್.ಆರ್. ಕಂಠಿ ಕಾಲೇಜಿನಲ್ಲಿ ಬಿ.ಎ ಎರಡನೇ ವರ್ಷದಲ್ಲಿ ಓದುತ್ತಿದ್ದು, ಸದ್ಯ ಕೊಲ್ಲಾಪುರದ ಕ್ರೀಡಾ ಪ್ರಭೋದಿನಿಯಲ್ಲಿ ಕುಸ್ತಿ ತರಬೇತಿ ಪಡೆಯುತ್ತಿದ್ದಾರೆ.

ಹಿಂದೆ ಮುಧೋಳದ ಘೋರ್ಪಡೆ ರಾಜರು ಕುಸ್ತಿ ಕಲೆಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದರು. ನಗರದಲ್ಲಿ ಅಂದಿನ ಕಾಲದಲ್ಲಿ ಸುತ್ತ ಗ್ಯಾಲರಿಯಲ್ಲಿ ಕುಳಿತು ನೋಡು ವಂಥ ದೊಡ್ಡದಾದ ಗರಡಿ ಮನೆ ಇತ್ತು.

ಆದರೆ ಕಾಲಾನಂತರ ಮರೆಯಾದರೂ ಇದೀಗ ನಗರದ ಶಿವಾಜಿ ವೃತ್ತ, ಕುಂಬಾರ ಗಲ್ಲಿಯಲ್ಲಿ ದೊಡ್ಡ ಗರಡಿ ಮನೆಗಳಿವೆ. ಸಚಿವ ಗೋವಿಂದ ಕಾರಜೋಳ ಕುಸ್ತಿ ಪರಂಪರೆಗೆ ಹೊಸ ರೂಪ ನೀಡಿ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅಣಿಗೊಳಿಸುವ ಉದ್ದೇಶದಿಂದ ಮ್ಯಾಟ್ ಹಾಕಿಸಿದ್ದಾರೆ.

ಸಾಂಪ್ರದಾಯಿಕ ಮಣ್ಣಿನಲ್ಲಿ ಆಡುವ ಕುಸ್ತಿಯನ್ನೂ ಉಳಿಸಲು ಗರಡಿ ಮನೆ ನಿರ್ಮಿಸಿ, ಅಗತ್ಯ ಸೌಲಭ್ಯ ಒದಗಿಸಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಕುಸ್ತಿ ಗತ ವೈಭವವನ್ನು ಮೆರೆಸುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT